ಪ್ರಕಟನೆ 6 - ಕನ್ನಡ ಸತ್ಯವೇದವು C.L. Bible (BSI)ಏಳು ಮುದ್ರೆಗಳ ಭಂಗ 1 ಇದನ್ನೂ ನಾನು ಕಂಡೆ: ಯಜ್ಞದ ಕುರಿಮರಿಯಾದಾತನು ಏಳು ಮುದ್ರೆಗಳಲ್ಲಿ ಒಂದನ್ನು ಒಡೆದನು. ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಗುಡುಗಿನಂತಿದ್ದ ಸ್ವರದಿಂದ, “ಇಲ್ಲಿ ಬಾ,” ಎಂದು ಕರೆಯುವುದನ್ನು ನಾನು ಕೇಳಿಸಿಕೊಂಡೆ. 2 ಆಗ ಬಿಳಿಯ ಕುದುರೆಯೊಂದು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ಬಿಲ್ಲೊಂದು ಇತ್ತು. ಅವನಿಗೆ ಜಯಮಾಲೆಯನ್ನು ಹಾಕಲಾಗಿತ್ತು. ಅವನು ಜಯಪ್ರದನಾಗಿ, ಜಯದ ಮೇಲೆ ಜಯಗಳಿಸುವ ಸಲುವಾಗಿ ಹೊರಟುಹೋದನು. 3 ಅನಂತರ ಯಜ್ಞದ ಕುರಿಮರಿಯು ಎರಡನೆಯ ಮುದ್ರೆಯನ್ನು ಒಡೆದಾಗ, ಎರಡನೆಯ ಜೀವಿಯು, “ಇಲ್ಲಿ ಬಾ,” ಎಂದು ಕರೆಯುವುದನ್ನು ಕೇಳಿಸಿಕೊಂಡೆ. 4 ಆಗ ಕೆಂಪು ಕುದುರೆ ಒಂದು ಹೊರಟುಬಂದಿತು. ಅದರ ಮೇಲೆ ಒಬ್ಬನು ಕುಳಿತಿದ್ದನು. ವಿಶ್ವದಲ್ಲಿ ಶಾಂತಿಯನ್ನು ಅಳಿಸಿಹಾಕಿ ಲೋಕದ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡುವ ಅಧಿಕಾರವನ್ನು ಅವನಿಗೆ ಕೊಡಲಾಗಿತ್ತು. ಇದಲ್ಲದೆ, ಅವನಿಗೆ ದೊಡ್ಡ ಖಡ್ಗವನ್ನೂ ಸಹ ಕೊಡಲಾಗಿತ್ತು. 5 ಆ ಯಜ್ಞದ ಕುರಿಮರಿ ಮೂರನೆಯ ಮುದ್ರೆಯನ್ನು ಒಡೆದಾಗ, ಮೂರನೆಯ ಜೀವಿಯು, “ಇಲ್ಲಿ ಬಾ,” ಎಂದು ಕರೆಯುವುದನ್ನು ಕೇಳಿಸಿಕೊಂಡೆ. ಆಗ ಕಪ್ಪು ಕುದುರೆಯೊಂದು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ತಕ್ಕಡಿ ಇತ್ತು. 6 ನಾಲ್ಕು ಜೀವಿಗಳ ಮಧ್ಯದಿಂದ ಹೊರಟಿತೋ ಎಂಬಂತೆ ಒಂದು ಧ್ವನಿ ನನಗೆ ಕೇಳಿಸಿತು. ಅದು, “ದಿನದ ಕೂಲಿಗೆ ಒಂದು ಕಿಲೋಗ್ರಾಂ ಗೋದಿ; ದಿನದ ಕೂಲಿಗೆ ಮೂರು ಕಿಲೋಗ್ರಾಂ ಜವೆಗೋದಿ; ಆದರೆ ಎಣ್ಣೆಯನ್ನಾಗಲಿ, ದ್ರಾಕ್ಷಾರಸವನ್ನಾಗಲಿ ಕೆಡಿಸಬೇಡ,” ಎಂದು ಹೇಳಿತು. 7 ಆ ಯಜ್ಞದ ಕುರಿಮರಿ ನಾಲ್ಕನೆಯ ಮುದ್ರೆಯನ್ನು ಒಡೆದಾಗ, ನಾಲ್ಕನೆಯ ಜೀವಿ, “ಇಲ್ಲಿ ಬಾ,” ಎಂದು ಕರೆಯುವುದನ್ನು ನಾನು ಕೇಳಿಸಿಕೊಂಡೆ. 8 ಆಗ ಬೂದು ಕುದುರೆಯೊಂದು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು, ‘ಮೃತ್ಯು’ ಎಂದು. ಅವನನ್ನು ‘ಮೃತ್ಯುಲೋಕ’ ಎಂಬಾತನು ಹಿಂಬಾಲಿಸಿದನು. ಇವರಿಗೆ ಖಡ್ಗ, ಕ್ಷಾಮ, ಅಂಟುಜಾಡ್ಯ, ಕಾಡುಮೃಗ ಇವುಗಳಿಂದ ಭೂಲೋಕದ ಕಾಲುಭಾಗದ ಜನತೆಯನ್ನು ಕೊಂದುಹಾಕುವುದಕ್ಕೆ ಅಧಿಕಾರವನ್ನು ಕೊಡಲಾಗಿತ್ತು. 9 ಯಜ್ಞದ ಕುರಿಮರಿಯಾದಾತ ಐದನೆಯ ಮುದ್ರೆಯನ್ನು ಒಡೆದನು. ದೇವರ ಸಂದೇಶವನ್ನು ಸಾರಿದ ಪ್ರಯುಕ್ತ ಮತ್ತು ತಮ್ಮ ಪ್ರಾಮಾಣಿಕ ಸಾಕ್ಷ್ಯದ ಪ್ರಯುಕ್ತ ಹತರಾದವರ ಆತ್ಮಗಳು ಬಲಿಪೀಠದ ಕೆಳಗೆ ಇರುವುದನ್ನು ನಾನು ಕಂಡೆ. 10 ಅವರು ಆರ್ತಧ್ವನಿಯಿಂದ, ‘ಸರ್ವಶಕ್ತ ಪ್ರಭುವೇ, ಸತ್ಯವಂತರೇ, ಪರಿಶುದ್ಧರೇ, ನಮ್ಮನ್ನು ಕೊಲೆಮಾಡಿದ ಭೂನಿವಾಸಿಗಳಿಗೆ ಇನ್ನೆಷ್ಟುಕಾಲ ನ್ಯಾಯವಿಚಾರಣೆ ಮಾಡದೆ, ಸೇಡನ್ನು ತೀರಿಸಿಕೊಳ್ಳದೆ ಇರುತ್ತೀರಿ?” ಎಂದು ಕೇಳಿದರು. 11 ಅವರಲ್ಲಿ ಪ್ರತಿಯೊಬ್ಬನಿಗೂ ಬಿಳಿಯ ನಿಲುವಂಗಿಯನ್ನು ಕೊಡಲಾಗಿತ್ತು. ಅಲ್ಲದೆ ಅವರಿಗೆ, “ಇನ್ನು ತುಸುಕಾಲ ಕಾದುಕೊಂಡಿರಿ, ನಿಮ್ಮ ಹಾಗೆಯೇ ಹತರಾಗಬೇಕಾಗಿರುವ ನಿಮ್ಮ ಸಹೋದರರ ಮತ್ತು ಜೊತೆಸೇವಕರ ಪಟ್ಟಿಯು ಭರ್ತಿಯಾಗುವ ತನಕ ವಿಶ್ರಮಿಸಿ,” ಎಂದು ತಿಳಿಸಲಾಯಿತು. 12 ಆ ಯಜ್ಞದ ಕುರಿಮರಿ ಆರನೆಯ ಮುದ್ರೆಯನ್ನು ಒಡೆದಾಗ, ದೊಡ್ಡ ಭೂಕಂಪವಾಯಿತು. ಸೂರ್ಯನು ಕರಿಕಂಬಳಿಯಂತೆ ಕಪ್ಪಾದನು. ಪೂರ್ಣಚಂದ್ರನು ರಕ್ತದಂತೆ ಕೆಂಪಾದನು. 13 ಬಿರುಗಾಳಿಯಿಂದ ಅಂಜೂರ ಮರದ ಕಾಯಿಗಳು ಉದುರಿಬೀಳುವಂತೆ ನಕ್ಷತ್ರಗಳು ಆಕಾಶದಿಂದ ಭೂಮಿಗೆ ಬಿದ್ದವು. 14 ಆಕಾಶವು ಸುರುಳಿಯಂತೆ ಸುತ್ತಿಕೊಂಡು ಕಣ್ಮರೆಯಾಯಿತು. ಎಲ್ಲಾ ಪರ್ವತಗಳೂ ದ್ವೀಪಗಳೂ ತಮ್ಮ ತಮ್ಮ ಸ್ಥಳಗಳಿಂದ ಚಲಿಸಿದವು. 15 ಭೂರಾಜರು, ಅಧಿಪತಿಗಳು, ಸೇವಾನಾಯಕರು, ಸಿರಿವಂತರು, ಪರಾಕ್ರಮಿಗಳು, ದಾಸರು, ಸ್ವತಂತ್ರರು ಎಲ್ಲರೂ ಓಡಿಹೋಗಿ ಬೆಟ್ಟಗಳ ಗವಿಗಳಲ್ಲೂ ಮತ್ತು ಬಂಡೆಗಳ ಸಂದುಗಳಲ್ಲೂ ಅವಿತುಕೊಂಡರು. 16 ಅವರು ಆ ಬೆಟ್ಟಗಳನ್ನೂ ಬಂಡೆಗಳನ್ನೂ ಉದ್ದೇಶಿಸಿ, “ನಮ್ಮ ಮೇಲೆ ಬೀಳಿ; ಸಿಂಹಾಸನದಲ್ಲಿ ಆಸೀನರಾಗಿರುವವರ ಸಮ್ಮುಖದಿಂದಲೂ ಯಜ್ಞದ ಕುರಿಮರಿಯಾದಾತನ ಕೋಪಾಗ್ನಿಯಿಂದಲೂ ನಮ್ಮನ್ನು ಮರೆಮಾಡಿ; 17 ಏಕೆಂದರೆ, ಅವರ ಕೋಪಾಗ್ನಿಯ ಘೋರ ದಿನವು ಬಂದಿದೆ. ಅದರ ಮುಂದೆ ನಿಲ್ಲುವುದಕ್ಕೆ ಯಾರು ತಾನೇ ಶಕ್ತರು?” ಎಂದು ಹಲುಬಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India