Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 5 - ಕನ್ನಡ ಸತ್ಯವೇದವು C.L. Bible (BSI)


ಸುರುಳಿಯೂ ಕುರಿಮರಿಯೂ

1 ನಾನು ಈ ದೃಶ್ಯವನ್ನು ಸಹ ಕಂಡೆ : ಸಿಂಹಾಸನದಲ್ಲಿ ಆಸೀನರಾಗಿರುವವರ ಬಲಗೈಯಲ್ಲಿ ಒಂದು ಸುರುಳಿ ಇತ್ತು. ಅದರ ಒಳಭಾಗದಲ್ಲೂ ಹೊರಭಾಗದಲ್ಲೂ ಬರೆಯಲಾಗಿತ್ತು. ಅದನ್ನು ಏಳು ಮುದ್ರೆಗಳಿಂದ ಮುದ್ರಿಸಲಾಗಿತ್ತು.

2 ಬಲಿಷ್ಠ ದೇವದೂತನೊಬ್ಬನು ಮಹಾಶಬ್ದದಿಂದ, “ಈ ಮುದ್ರೆಗಳನ್ನು ಒಡೆದು ಸುರುಳಿಯನ್ನು ಬಿಚ್ಚಲು ಯೋಗ್ಯನು ಯಾರು?” ಎಂದು ಪ್ರಕಟಿಸಿದನು.

3 ಸ್ವರ್ಗದಲ್ಲಾಗಲಿ, ಭೂಮಿಯಲ್ಲಾಗಲಿ, ಪಾತಾಳದಲ್ಲಾಗಲಿ, ಆ ಸುರುಳಿಯನ್ನು ಬಿಚ್ಚುವುದಕ್ಕೂ ಇಲ್ಲವೆ ಅದನ್ನು ಬಿಚ್ಚಿನೋಡುವುದಕ್ಕೂ ಯಾರಿಂದಲೂ ಸಾಧ್ಯವಾಗಲಿಲ್ಲ.

4 ಆ ಸುರುಳಿಯನ್ನು ಬಿಚ್ಚಲೂ ನೋಡಲೂ ಯೋಗ್ಯನು ಒಬ್ಬನು ಇಲ್ಲವಲ್ಲ ಎಂದು ನಾನು ಬಹುವಾಗಿ ದುಃಖಿಸಿದೆ.

5 ಆಗ ಸಭಾಪ್ರಮುಖರಲ್ಲಿ ಒಬ್ಬರು ನನಗೆ, “ದುಃಖಿಸಬೇಡ, ಇಗೋ, ಯೂದಕುಲದ ಸಿಂಹವೂ ದಾವೀದನ ವಂಶಜರೂ ಆದ ಒಬ್ಬರು ಜಯಗಳಿಸಿದ್ದಾರೆ. ಅವರು ಆ ಏಳು ಮುದ್ರೆಗಳನ್ನು ಒಡೆದು ಈ ಸುರುಳಿಯನ್ನು ಬಿಚ್ಚಬಲ್ಲರು", ಎಂದು ಹೇಳಿದರು.

6 ಸಿಂಹಾಸನವೂ ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಸಭಾಪ್ರಮುಖರಿದ್ದ ಸ್ಥಳಕ್ಕೂ ನಡುವೆ ಒಂದು ಕುರಿಮರಿ ನಿಂತಿರುವುದನ್ನು ಕಂಡೆ. ಅದು ಈಗಾಗಲೇ ಬಲಿಗೋಸ್ಕರ ವಧೆಯಾಗಿದ್ದಂತೆ ಕಾಣುತ್ತಿತ್ತು. ಆ ಕುರಿಮರಿಗೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಇಡೀ ಜಗತ್ತಿಗೆ ಕಳುಹಿಸಲಾದ ದೇವರ ಸಪ್ತ ಆತ್ಮಗಳೇ ಅವು.

7 ಆ ಯಜ್ಞದ ಕುರಿಮರಿಯಾದವರು ಮುಂದೆ ಬಂದು ಸಿಂಹಾಸನದಲ್ಲಿ ಆಸೀನರಾಗಿದ್ದವರ ಬಲಗೈಯಲ್ಲಿದ್ದ ಸುರುಳಿಯನ್ನು ತೆಗೆದುಕೊಂಡರು.

8 ಸುರುಳಿಯನ್ನು ತೆಗೆದುಕೊಂಡಾಗ, ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಸಭಾಪ್ರಮುಖರೂ ಆ ಯಜ್ಞದ ಕುರಿಮರಿಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಸಭಾಪ್ರಮುಖರ ಕೈಗಳಲ್ಲಿ ಕಿನ್ನರಿಯೂ ಚಿನ್ನದ ಧೂಪಾರತಿಗಳೂ ಇದ್ದವು. ಆ ಧೂಪಾರತಿಗಳಲ್ಲಿ ದೇವಜನರ ಪ್ರಾರ್ಥನೆಯೆಂಬ ಧೂಪವು ತುಂಬಿತ್ತು.

9 ಅವರು ಈ ಹೊಸ ಗೀತೆಯನ್ನು ಹಾಡುತ್ತಿದ್ದರು: :ಸುರುಳಿಯನ್ನು ಸ್ವೀಕರಿಸಲು ನೀ ಯೋಗ್ಯನು ಅದರ ಮುದ್ರೆಗಳನ್ನು ಮುರಿಯಲು ನೀ ಶಕ್ತನು. ಸಮರ್ಪಿಸಿಕೊಂಡಿರುವೆ ನಿನ್ನನೇ ನೀ ಬಲಿಯರ್ಪಣೆಯಾಗಿ ಸಕಲ ದೇಶ, ಭಾಷೆ, ಕುಲಗೋತ್ರಗಳಿಂದ ಕೊಂಡುಕೊಂಡಿರುವೆ ಮಾನವರನು ನಿನ್ನ ರಕ್ತದಿಂದ.

10 ಏರ್ಪಡಿಸಿದೆ ನೀ ಅವರನು ನಮ್ಮ ದೇವರಿಗೋಸ್ಕರ ರಾಜವಂಶವಾಗಿ, ಯಾಜಕವರ್ಗವಾಗಿ. ಆಳುವರವರು ಸಮಸ್ತ ಭುವಿಯ ಮೇಲೆ.”

11 ಅನಂತರ ಅವರ ಸಿಂಹಾಸನದ, ನಾಲ್ಕು ಜೀವಿಗಳ ಹಾಗೂ ಸಭಾಪ್ರಮುಖರ ಸುತ್ತಲೂ ನಿಂತಿದ್ದ ಬಹುಮಂದಿ ದೇವದೂತರ ಸ್ವರವನ್ನು ಕೇಳಿಸಿಕೊಂಡೆ. ಅವರ ಸಂಖ್ಯೆ ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು.

12 ಅವರೆಲ್ಲರೂ ಉಚ್ಚಕಂಠದಿಂದ : “ವಧಿತ ಕುರಿಮರಿಯಾದಾತನು ಶಕ್ತಿಯನು, ಸಿರಿತನವನು ಗೌರವವನು, ಘನಮಾನವನು ಸ್ತುತಿಯನು, ಸುಜ್ಞಾನವನು ಹೊಂದಲು ಯೋಗ್ಯನು,” ಎಂದು ಹಾಡಿದರು.

13 ಇದಲ್ಲದೆ, ಸ್ವರ್ಗ, ಭೂಮಿ, ಪಾತಾಳಗಳಲ್ಲೂ ಸಮುದ್ರದಲ್ಲೂ ಇರುವ ಸಮಸ್ತ ಸೃಷ್ಟಿಗಳು ಹೀಗೆ ಹಾಡುವುದನ್ನು ಕೇಳಿಸಿಕೊಂಡೆ : “ಸಿಂಹಾಸನದಲ್ಲಿ ಕುಳಿತವನಿಗೆ, ಯಜ್ಞಕುರಿಮರಿಯಾದಾತನಿಗೆ ಸಲ್ಲಲಿ ಯುಗಯುಗಾಂತರಕ್ಕೆ ಘನಮಾನ, ಗೌರವ, ಪರಾಕ್ರಮ, ಮತ್ತು ಮಹಿಮೆ.”

14 ಇದಕ್ಕುತ್ತರವಾಗಿ ಆ ನಾಲ್ಕು ಜೀವಿಗಳು, ‘ಆಮೆನ್’ ಎಂದು ಹೇಳಿದವು. ಸಭಾಪ್ರಮುಖರು ಸಾಷ್ಟಾಂಗವೆರಗಿ ನಮಸ್ಕಾರಮಾಡಿ ಆರಾಧಿಸಿದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು