ಪ್ರಕಟನೆ 22 - ಕನ್ನಡ ಸತ್ಯವೇದವು C.L. Bible (BSI)ದೇವರ ದಾಸರ ಸೌಭಾಗ್ಯ 1 ಬಳಿಕ ಆ ದೇವದೂತನು ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ಸ್ಫಟಿಕದಂತೆ ಮಿನುಗುತ್ತಿತ್ತು. ಅದು ದೇವರ ಹಾಗೂ ಯಜ್ಞದ ಕುರಿಮರಿಯ ಸಿಂಹಾಸನದಲ್ಲಿ ಉಗಮಿಸಿ, 2 ನಗರದ ಹೆದ್ದಾರಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲೂ ಜೀವವೃಕ್ಷವಿತ್ತು. ಅದು ವರ್ಷದಲ್ಲಿ ಹನ್ನೆರಡು ಸಾರಿ ಫಲಕೊಡುವಂಥದ್ದು; ಪ್ರತೀ ತಿಂಗಳೂ ಫಸಲನ್ನೀಯುವಂಥದ್ದು. ಆ ವೃಕ್ಷದ ಎಲೆಗಳನ್ನು ರಾಷ್ಟ್ರಗಳಿಗೆ ಸಿದ್ದೌಷಧಿಯನ್ನಾಗಿ ಉಪಯೋಗಿಸಲಾಗುವುದು. 3 ಶಾಪಗ್ರಸ್ತವಾದುದು ಯಾವುದೂ ಆ ನಗರದಲ್ಲಿ ಇರದು. ದೇವರ ಮತ್ತು ಯಜ್ಞದ ಕುರಿಮರಿಯ ಸಿಂಹಾಸನವು ಅಲ್ಲಿರುವುದು. ಸದಾ ಯಾಜಕ ಸೇವೆ ಸಲ್ಲಿಸುವ ಅವರ ದಾಸರಿಗೆ ಅದರ ಮುಖ ದರ್ಶನವಾಗುವುದು. 4 ಆ ಹೆಸರು ಆ ದಾಸರ ಹಣೆಗಳ ಮೇಲೆ ಲಿಖಿತವಾಗಿರುವುದು. 5 ರಾತ್ರಿ ಎಂಬುದೇ ಅಲ್ಲಿ ಇರದು; ದೀಪದ ಇಲ್ಲವೇ ಸೂರ್ಯನ ಬೆಳಕಿನ ಅವಶ್ಯಕತೆಯೂ ಇರದು; ದೇವರಾದ ಪ್ರಭುವೇ ಅವರಿಗೆ ಬೆಳಕಾಗಿರುವರು. ಯುಗಯುಗಾಂತರಕ್ಕೂ ಅವರು ರಾಜ್ಯವಾಳುವರು. ಯೇಸುವಿನ ಪುನರಾಗಮನ 6 ಅನಂತರ ಆ ದೇವದೂತನು ನನಗೆ, “ಈ ಮಾತುಗಳು ಸತ್ಯವಾದುವು, ನಂಬಲರ್ಹವಾದುವು. ಪ್ರವಾದಿಗಳಿಗೆ ಆತ್ಮಪ್ರೇರಣೆಯನ್ನೀಯುವ ದೇವರಾದ ಪ್ರಭುವೇ ಬೇಗನೆ ಸಂಭವಿಸಲಿರುವವುಗಳನ್ನು ತಮ್ಮ ದಾಸರಿಗೆ ತಿಳಿಸಲು ತಮ್ಮ ದೂತನನ್ನೇ ಕಳಿಸಿದ್ದಾರೆ. 7 “ಯೇಸುಸ್ವಾಮಿ ನುಡಿಯುವುದನ್ನು ಕೇಳು : ‘ಇಗೋ ನಾನು ಬೇಗನೆ ಬರುತ್ತೇನೆ. ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾವಾಕ್ಯಗಳನ್ನು ಕೈಗೊಂಡು ನಡೆಯುವವನು ಧನ್ಯನು!” ಎಂದು ಹೇಳಿದನು. 8 ಯೊವಾನ್ನನೆಂಬ ನಾನೇ ಇವುಗಳನ್ನೆಲ್ಲಾ ಕೇಳಿದವನು ಮತ್ತು ಕಂಡವನು. ಇವುಗಳನ್ನು ಕಂಡು ಕೇಳಿದಾಗ, ಇವುಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಆತನ ಪಾದಗಳಿಗೆ ಅಡ್ಡಬಿದ್ದೆ. 9 ಆದರೆ ಆತನು, “ನೀನು ನನಗೆ ಅಡ್ಡಬೀಳಬೇಡ, ಪ್ರವಾದಿಗಳಾದ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಗೊಂಡು ನಡೆಯುವವರಿಗೂ ನಿನಗೂ ನಾನು ಸಹಸೇವಕನು ಮಾತ್ರ. ಆದ್ದರಿಂದ ನೀನು ದೇವರನ್ನು ಆರಾಧಿಸು,” ಎಂದು ತಿಳಿಸಿದನು. 10 ಇದಲ್ಲದೆ ಆತನು ನನಗೆ, “ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾವಾಕ್ಯಗಳಿಗೆ ಮುದ್ರೆಹಾಕಿ ಮುಚ್ಚಿಡಬೇಡ; ಇವು ನೆರವೇರುವ ಕಾಲವು ಸಮೀಪಿಸಿತು. 11 ಅಕ್ರಮಿಯು ತನ್ನ ಅಕ್ರಮವನ್ನು ಮುಂದುವರೆಸಲಿ. ಅಶುದ್ಧನು ತನ್ನ ಅಶುದ್ಧತೆಯಲ್ಲಿ ಮುಂದುವರೆಯಲಿ. ಸಜ್ಜನನು ತನ್ನ ಸನ್ನಡತೆಯಲ್ಲಿಯೇ ನಿರತನಾಗಿರಲಿ. ಪವಿತ್ರನು ತನ್ನ ಪಾವಿತ್ರ್ಯತೆಯನ್ನು ಹೆಚ್ಚಿಸಿಕೊಳ್ಳಲಿ,” ಎಂದನು. 12 “ಯೇಸುಸ್ವಾಮಿ ನುಡಿಯುವುದನ್ನು ಕೇಳು: ‘ಇಗೋ, ನಾನು ಬೇಗನೆ ಬರುತ್ತೇನೆ. ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕಂತೆ ಕೊಡಲಾಗುವ ಪ್ರತಿಫಲವು ನನ್ನ ಕೈಯಲ್ಲೇ ಇದೆ. 13 ‘ಅ'ಕಾರವೂ ‘ಳ'ಕಾರವೂ ನಾನೇ ಆದಿಯೂ ಸಮಾಪ್ತಿಯೂ ನಾನೇ'. “ 14 “ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರವಾಗಿಟ್ಟುಕೊಂಡಿರುವವರು ಭಾಗ್ಯವಂತರು. ಜೀವವೃಕ್ಷದ ಫಲವನ್ನು ಸವಿಯುವ ಹಕ್ಕು ಅವರಿಗಿರುತ್ತದೆ. ಹೆಬ್ಬಾಗಿಲಿನ ಮೂಲಕ ಅವರು ಆ ನಗರವನ್ನು ಸೇರುವರು. 15 ಆದರೆ ಶುನಕ ಸಮಾನರೂ ಮಾಟಮಂತ್ರಗಾರರೂ ಕಾಮುಕರೂ ಕೊಲೆಗಾರರೂ ವಿಗ್ರಹಾರಾಧಕರೂ ಅಸತ್ಯವಾದಿಗಳೂ ನಗರದ ಹೊರಗೆ ಬಿದ್ದಿರುವರು. ಮುಕ್ತಾಯ 16 “ಯೇಸುವೆಂಬ ನಾನೇ ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ನಿಮಗೆ ಸಾಕ್ಷಿನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ನಾನು ದಾವೀದಕುಲಪುತ್ರ. ಅದೇ ವಂಶದ ಕುಡಿ; ಉದಯಕಾಲದ ಉಜ್ವಲ ನಕ್ಷತ್ರ! 17 ದೇವರಾತ್ಮ ಹಾಗು ಮದುವಣಗಿತ್ತಿ, ‘ಬಾ’ ಎಂದು ಆಹ್ವಾನಿಸುತ್ತಾರೆ. ಇದನ್ನು ಕೇಳಿಸಿಕೊಳ್ಳುವ ಪ್ರತಿಯೊಬ್ಬನೂ ‘ಬಾ’ ಎಂದು ಹೇಳಲಿ. ಬಾಯಾರಿದವನು ಬರಲಿ; ಇಷ್ಟವುಳ್ಳವನು ಜೀವಜಲವನ್ನು ಉಚಿತವಾಗಿ ಪಡೆಯಲಿ.” 18 ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೂ ನಾನು ಕೊಡುವ ಎಚ್ಚರಿಕೆ ಇದು: “ಯಾವನಾದರೂ ಇವುಗಳಿಗೆ ಏನನ್ನಾದರೂ ಕೂಡಿಸಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ವಿಪತ್ತುಗಳು ಬಂದೆರಗುವಂತೆ ಮಾಡುವರು. 19 ಯಾವನಾದರೂ ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳಲ್ಲಿ ಏನನ್ನಾದರೂ ತೆಗೆದುಹಾಕಿದರೆ, ಈ ಪುಸ್ತಕದಲ್ಲಿ ವಿವರಿಸಿರುವ ಜೀವವೃಕ್ಷದಲ್ಲಿಯೂ ಪವಿತ್ರನಗರದಲ್ಲಿಯೂ ಅವನಿಗೆ ಸಿಗುವ ಪಾಲನ್ನು ದೇವರು ತೆಗೆದುಬಿಡುವರು.” 20 ಇದಕ್ಕೆಲ್ಲಾ ಸಾಕ್ಷಿಯಾಗಿರುವಾತನು, “ಹೌದು, ನಾನು ಬೇಗನೆ ಬರುತ್ತೇನೆ,” ಎಂದು ಹೇಳುತ್ತಾನೆ. ಆಮೆನ್, ಪ್ರಭು ಯೇಸುವೇ, ಬನ್ನಿ. 21 ಪ್ರಭು ಯೇಸುವಿನ ಕೃಪಾಶೀರ್ವಾದಗಳು ಎಲ್ಲರಲ್ಲೂ ಇರಲಿ ! |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India