ಪ್ರಕಟನೆ 21 - ಕನ್ನಡ ಸತ್ಯವೇದವು C.L. Bible (BSI)ನೂತನ ಭೂಮ್ಯಾಕಾಶಗಳು 1 ತರುವಾಯ ನೂತನ ಆಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಕಂಡೆ. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಕಣ್ಮರೆಯಾಗಿ ಹೋದವು. ಸಮುದ್ರವು ಇನ್ನಿಲ್ಲವಾಯಿತು. 2 ಇದಲ್ಲದೆ, ಪವಿತ್ರ ನಗರವಾದ ನೂತನ ಜೆರುಸಲೇಮ್ ಸ್ವರ್ಗದಿಂದಲೂ ದೇವರ ಸನ್ನಿಧಿಯಿಂದಲೂ ಕೆಳಗಿಳಿದು ಬರುವುದನ್ನು ಕಂಡೆ. ಅದು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಅಲಂಕೃತಳಾದ ಮದುವಣಗಿತ್ತಿಯಂತೆ ಶೃಂಗಾರಮಯವಾಗಿತ್ತು. 3 ಆಗ ಸಿಂಹಾಸನದ ಕಡೆಯಿಂದ ಬಂದ ಮಹಾಧ್ವನಿ ಇಂತೆಂದಿತು : ಇಗೋ ಮಾನವರ ಮಧ್ಯೆಯೇ ಇದೆ ದೇವಾಲಯ, ಆತನವರೊಡನೆ ವಾಸಿಸುವನು; ಅವರಾತನಿಗೆ ಪ್ರಜೆಗಳಾಗುವರು; ದೇವರೇ ಅವರುಗಳ ಜೊತೆಗಾರ; ಆತನಲ್ಲದೆ ಅವರಿಗಿಲ್ಲ ಬೇರಾವ ದೇವ. 4 ಒರಸುವನಾತ ಅವರ ಕಂಬನಿಯನೆಲ್ಲಾ ಇರದಿನ್ನು ಸಾವುನೋವು ಅವರಿಗೆಲ್ಲಾ; ಇರವು ಶೋಕ ದುಃಖಗಳಾವುವು ಮರೆಯಾಗಿ ಹೋದವು ಹಿಂದಿನದೆಲ್ಲವು.” 5 ಸಿಂಹಾಸನಾರೂಢನಾಗಿದ್ದವನು ಆಗ, “ಇಗೋ, ನಾನೆಲ್ಲವನ್ನೂ ಹೊಸದಾಗಿಸುತ್ತೇನೆ,” ಎಂದನು. ಅಲ್ಲದೆ ಅವನು, “ಇದನ್ನು ನೀನು ಬರೆ, ಈ ಮಾತುಗಳು ಸತ್ಯವಾದುವು ಹಾಗೂ ವಿಶ್ವಾಸಾರ್ಹವಾದುವು,” ಎಂದು ಹೇಳಿದನು. 6 ಸಿಂಹಾಸನಾರೂಢನಾಗಿದ್ದವನು ನನಗೆ ಮತ್ತೂ ಹೇಳಿದ್ದೇನೆಂದರೆ : ಮುಗಿಸಿದ್ದಾಯಿತು, ‘ಅ'ಕಾರವೂ ‘ಳ'ಕಾರವೂ ನಾನೇ; ಆದಿಯೂ ಅಂತ್ಯವೂ ನಾನೇ; ಬಾಯಾರಿದವರಿಗೆ ಕೊಡುವೆ, ಜೀವಜಲವನು ಉಚಿತವಾಗಿಯೇ. 7 ಜಯಶಾಲಿಯಾದವನು ಆಗುವನು ಇದಕ್ಕೆಲ್ಲಾ ಬಾಧ್ಯನು ನಾನವನಿಗೆ ದೇವನಾಗಿರುವೆನು ಅವನೆನಗೆ ಪುತ್ರನಾಗಿರುವನು. 8 ಆದರೆ ಹೇಡಿಗಳಿಗೆ, ಹೇಯಕೃತ್ಯಗಾರರಿಗೆ ಅವಿಶ್ವಾಸಿಗಳಿಗೆ, ಹಲವು ಅಸತ್ಯಗಾರರಿಗೆ ಕಾಮುಕರಿಗೆ, ಕೊಲೆಗಾರರಿಗೆ ವಿಗ್ರಹಾರಾಧಕರಿಗೆ, ಮಾಟಮಂತ್ರಗಾರರಿಗೆ ಗಂಧಕದಿಂದುರಿಯುವ ಅಗ್ನಿಸರೋವರವೇ ಗತಿ ಇದುವೇ ಅವರೆಲ್ಲರ ಎರಡನೆಯ ಮೃತಿ.” ಎಂದು ಹೇಳಿದನು. ನೂತನ ಜೆರುಸಲೇಮ್ 9 ಏಳು ಅಂತಿಮ ವಿಪತ್ತುಗಳಿಂದ ತುಂಬಿದ್ದ ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ದೇವದೂತರುಗಳಲ್ಲಿ ಒಬ್ಬನು ಬಂದು, ನನ್ನೊಡನೆ ಮಾತನಾಡಿ ಇಂತೆಂದನು: “ಇಲ್ಲಿಗೆ ಬಾ, ಯಜ್ಞದ ಕುರಿಮರಿಗೆ ಸತಿಯಾಗಲಿರುವ ಮದುವಣಗಿತ್ತಿಯನ್ನು ನಿನಗೆ ತೋರಿಸುತ್ತೇನೆ,” ಎಂದನು. 10 ಆಗ ನಾನು ಪವಿತ್ರಾತ್ಮವಶನಾದೆ. ಆ ದೇವದೂತನು ನನ್ನನ್ನು ಎತ್ತರವಾದ ಬೆಟ್ಟದ ಮೇಲೆ ಕೊಂಡೊಯ್ದನು. ಅಲ್ಲಿ ನನಗೆ ಪವಿತ್ರನಗರವಾದ ಜೆರುಸಲೇಮನ್ನು ತೋರಿಸಿದನು. ಅದು ಸ್ವರ್ಗದಲ್ಲಿರುವ ದೇವರ ಬಳಿಯಿಂದ ಕೆಳಗಿಳಿದು ಬರುತ್ತಿತ್ತು; 11 ದೇವರ ತೇಜಸ್ಸಿನಿಂದ ಕೂಡಿತ್ತು; ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು; ಸ್ವಚ್ಛವಾದ ಸ್ಫಟಿಕದಂತೆ ಶುಭ್ರವಾಗಿತ್ತು. 12 ಆ ನಗರದ ಸುತ್ತಲೂ ಎತ್ತರವಾದ ಕೋಟೆಯಿತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳಿಗೆ ಹನ್ನೆರಡು ಮಂದಿ ದೇವದೂತರುಗಳು ಕಾವಲಿದ್ದರು. ಆ ಬಾಗಿಲುಗಳ ಮೇಲೆ ಇಸ್ರಯೇಲಿನ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದಿತ್ತು. 13 ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. 14 ಆ ನಗರದ ಕೋಟೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಹನ್ನೆರಡು ಹೆಸರುಗಳಿದ್ದವು. ಯಜ್ಞದ ಕುರಿಮರಿಯ ಹನ್ನೆರಡು ಪ್ರೇಷಿತರ ಹೆಸರುಗಳು ಅವು. 15 ನನ್ನೊಡನೆ ಮಾತನಾಡುತ್ತಿದ್ದ ದೇವದೂತನು ಆ ನಗರವನ್ನೂ ಅದರ ಹೆಬ್ಬಾಗಿಲುಗಳನ್ನೂ ಕೋಟೆಗಳನ್ನೂ ಅಳತೆಮಾಡುವುದಕ್ಕಾಗಿ ಒಂದು ಚಿನ್ನದ ಅಳತೆಗೋಲನ್ನು ಹಿಡಿದಿದ್ದನು. 16 ಆ ನಗರ ಚಚ್ಚೌಕವಾಗಿತ್ತು. ಅದರ ಚದರ ಅಳತೆ 2,400 ಕಿಲೊಮೀಟರುಗಳಷ್ಟಿತ್ತು. 17 ಅನಂತರ, ಆತನು ನಗರದ ಕೋಟೆಯನ್ನು ಅಳೆದನು. ಅದು ಆತನು ಅಳೆದ ಆಳತೆಯ ಪ್ರಮಾಣದಲ್ಲಿ ಅರವತ್ತು ಮೀಟರಿನಷ್ಟು ಎತ್ತರವಾಗಿತ್ತು. 18 ಆ ಕೋಟೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವು ಅಪ್ಪಟ ಬಂಗಾರದಂತೆ ಥಳಥಳಿಸುತ್ತಿತ್ತು. 19 ನಗರದ ಕೋಟೆಯ ಅಸ್ತಿವಾರಗಳು ಸಕಲ ವಿಧವಾದ ರತ್ನಗಳಿಂದ ಅಲಂಕೃತವಾಗಿತ್ತು. ಮೊದಲನೆಯ ಅಸ್ತಿವಾರವನ್ನು ಸೂರ್ಯಕಾಂತ ಶಿಲೆಯಿಂದಲೂ ಎರಡನೆಯ ಅಸ್ತಿವಾರವನ್ನು ವೈಢೂರ್ಯದಿಂದಲೂ ಮೂರನೆಯ ಅಸ್ತಿವಾರವನ್ನು ಪಚ್ಚೆಯಿಂದಲೂ ಮತ್ತು ನಾಲ್ಕನೆಯ ಅಸ್ತಿವಾರವನ್ನು ಪದ್ಮರಾಗದಿಂದಲೂ ಅಲಂಕೃತಗೊಳಿಸಲಾಗಿತ್ತು. 20 ಅಂತೆಯೇ, ಐದನೆಯ ಅಸ್ತಿವಾರವನ್ನು ಗೋಮೇಧಿಕದಿಂದಲೂ ಆರನೆಯದನ್ನು ಮಾಣಿಕ್ಯದಿಂದಲೂ ಏಳನೆಯದನ್ನು ಪೀತರತ್ನದಿಂದಲೂ ಎಂಟನೆಯದನ್ನು ಬೆರುಲ್ಲದಿಂದಲೂ ಒಂಬತ್ತನೆಯದನ್ನು ಪುಷ್ಯರಾಗದಿಂದಲೂ ಹತ್ತನೆಯದನ್ನು ಗರುಡ ಪಚ್ಚೆಯಿಂದಲೂ ಹನ್ನೊಂದನೆಯದನ್ನು ಇಂದ್ರನೀಲದಿಂದಲೂ ಹಾಗೂ ಹನ್ನೆರಡನೆಯದನ್ನು ನೀಲಸ್ಪಟಿಕದಿಂದಲೂ ಅಲಂಕೃತಗೊಳಿಸಲಾಗಿತ್ತು. 21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಹೆಬ್ಬಾಗಿಲನ್ನು ಒಂದೊಂದು ಮುತ್ತಿನಿಂದ ಮಾಡಲಾಗಿತ್ತು. ನಗರದ ಬೀದಿ ಸ್ವಚ್ಛವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು. 22 ಆ ನಗರದಲ್ಲಿ ನಾನು ದೇವಾಲಯವನ್ನು ಕಾಣಲಿಲ್ಲ; ಏಕೆಂದರೆ, ಸರ್ವಶಕ್ತ ದೇವರಾದ ಪ್ರಭುವೂ ಯಜ್ಞದ ಕುರಿಮರಿಯಾದಾತನೂ ಅದರ ದೇವಾಲಯವಾಗಿದ್ದಾರೆ. 23 ನಗರಕ್ಕೆ ಬೆಳಕನ್ನು ಕೊಡಲು ಸೂರ್ಯನ ಇಲ್ಲವೆ ಚಂದ್ರನ ಅವಶ್ಯಕತೆ ಇಲ್ಲ. ಏಕೆಂದರೆ, ದೇವರ ತೇಜಸ್ಸೇ ಅದಕ್ಕೆ ಬೆಳಕು; ಯಜ್ಞದ ಕುರಿಮರಿಯೇ ಅದಕ್ಕೆ ಜ್ಯೋತಿ. 24 ಅದರ ಬೆಳಕಿನಲ್ಲಿ ಸರ್ವಜನಾಂಗಗಳು ಸಂಚರಿಸುವರು. ಭೂರಾಜರು ತಮ್ಮ ಸಿರಿಸಂಪತ್ತನ್ನು ಅಲ್ಲಿಗೆ ತರುವರು. 25 ಹಗಲಿನಲ್ಲಿ ಅದರ ಹೆಬ್ಬಾಗಿಲುಗಳನ್ನು ಮುಚ್ಚುವಂತಿಲ್ಲ. ರಾತ್ರಿಯೆಂಬುದು ಅಲ್ಲಿ ಇಲ್ಲವೇ ಇಲ್ಲ. 26 ರಾಷ್ಟ್ರಗಳ ಸಿರಿಸಂಪತ್ತನ್ನೂ ಘನಮಾನವನ್ನೂ ಅಲ್ಲಿಗೆ ತರಲಾಗುವುದು. 27 ಆದರೆ ಅಶುದ್ಧವಾದುದು ಯಾವುದೂ ಅದನ್ನು ಸೇರಲಾರದು. ಅಂತೆಯೇ, ಹೇಯ ಕೃತ್ಯಗಳನ್ನೆಸಗುವವನೂ ಅಸತ್ಯವನ್ನು ಆಡುವವನೂ ಅದನ್ನು ಸೇರಲಾರನು. ಯಜ್ಞದ ಕುರಿಮರಿಯ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಯಾರ ಹೆಸರುಗಳು ಲಿಖಿತವಾಗಿವೆಯೋ ಅಂಥವರು ಮಾತ್ರ ಅದನ್ನು ಪ್ರವೇಶಿಸಬಲ್ಲರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India