ಪ್ರಕಟನೆ 20 - ಕನ್ನಡ ಸತ್ಯವೇದವು C.L. Bible (BSI)ಪ್ರಥಮ ಪುನರುತ್ಥಾನ 1 ತರುವಾಯ ದೇವದೂತನೊಬ್ಬನು ಸ್ವರ್ಗದಿಂದ ಇಳಿದುಬಂದುದನ್ನು ಕಂಡೆ. ಆತನ ಕೈಯಲ್ಲಿ ಪಾತಾಳದ ಬೀಗದ ಕೈ ಮತ್ತು ದೊಡ್ಡ ಸರಪಣಿ ಇದ್ದವು. 2 ಪಿಶಾಚಿಯೂ ಸೈತಾನನೂ ಆಗಿರುವ ಘಟಸರ್ಪವನ್ನು, ಅಂದರೆ ಪುರಾತನ ಸರ್ಪವನ್ನು, ಆತನು ಹಿಡಿದು ಒಂದು ಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು. 3 ಆ ಒಂದು ಸಾವಿರ ವರ್ಷಗಳ ಕಾಲದವರೆಗೆ, ಅದು ಜನಾಂಗಗಳನ್ನು ಮರುಳುಗೊಳಿಸದಂತೆ ದೇವದೂತನು ಸೈತಾನನನ್ನು ಪಾತಾಳಕ್ಕೆ ದಬ್ಬಿ, ಬಾಗಿಲು ಮುಚ್ಚಿ, ಅದಕ್ಕೆ ಮುದ್ರೆ ಹಾಕಿದನು. ಆ ಸಾವಿರ ವರ್ಷಗಳ ಕಾಲ ಮುಗಿದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ದೊರೆಯುವುದು. 4 ಬಳಿಕ ಸಿಂಹಾಸನಗಳನ್ನು ಕಂಡೆ. ಅವುಗಳ ಮೇಲೆ ಕುಳಿತಿದ್ದವರಿಗೆ ತೀರ್ಪುಕೊಡುವ ಅಧಿಕಾರವನ್ನು ಕೊಡಲಾಗಿತ್ತು. ಇದಲ್ಲದೆ, ಕ್ರಿಸ್ತೇಸುವಿನ ಪರವಾಗಿ ಸಾಕ್ಷಿಕೊಟ್ಟು ದೇವರ ವಾಕ್ಯದ ಪ್ರಚಾರಕ್ಕಾಗಿ ತಲೆತೆತ್ತ ಜೀವಾತ್ಮಗಳನ್ನು ಕಂಡೆ. ಇವರು ಆ ಮೃಗವನ್ನಾಗಲಿ, ಅದರ ವಿಗ್ರಹವನ್ನಾಗಲಿ ಪೂಜಿಸಿದವರಲ್ಲ; ತಮ್ಮ ಹಣೆಗಳ ಮೇಲಾಗಲಿ, ಕೈಗಳ ಮೇಲಾಗಲಿ ಅದರ ಗುರುತಿನ ಹಚ್ಚೆಯನ್ನೂ ಚುಚ್ಚಿಸಿಕೊಂಡವರಲ್ಲ. ಇವರು ಜೀವಂತರಾಗಿ ಕ್ರಿಸ್ತೇಸುವಿನೊಡನೆ ಒಂದು ಸಾವಿರ ವರ್ಷಗಳು ಆಳುವರು. 5 ಇದೇ ಪ್ರಥಮ ಪುನರುತ್ಥಾನ, ಮರಣಹೊಂದಿದ್ದ ಇನ್ನುಳಿದವರು ಆ ಒಂದು ಸಾವಿರ ವರ್ಷಗಳು ಮುಗಿಯುವವರೆಗೆ ಜೀವಂತರಾಗಲಿಲ್ಲ. 6 ಆ ಪ್ರಥಮ ಪುನರುತ್ಥಾನದಲ್ಲಿ ಸೇರಿರುವ ದೇವಜನರು ಭಾಗ್ಯವಂತರು. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಅವರು ದೇವರಿಗೂ ಕ್ರಿಸ್ತೇಸುವಿಗೂ ಯಾಜಕರಾಗಿ ಸೇವೆಸಲ್ಲಿಸುವರು; ಮತ್ತು ಕ್ರಿಸ್ತೇಸುವಿನೊಡನೆ ಒಂದು ಸಾವಿರ ವರ್ಷಗಳ ಕಾಲ ಆಳುವರು. ಸೈತಾನನ ಸರ್ವನಾಶ 7 ಆ ಒಂದು ಸಾವಿರ ವರ್ಷಗಳು ಮುಗಿದ ನಂತರ ಸೈತಾನನನ್ನು ಬಂಧನದಿಂದ ಬಿಡುಗಡೆ ಮಾಡಲಾಗುವುದು. 8 ಅವನು ಬಂದು ಭೂಮಿಯ ಅಷ್ಟದಿಕ್ಕುಗಳಲ್ಲಿರುವ ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸುವನು. ಯುದ್ಧಮಾಡುವುದಕ್ಕಾಗಿ ಅವರನ್ನು ಒಟ್ಟುಗೂಡಿಸುವನು. ಅವರ ಸಂಖ್ಯೆ ಸಮುದ್ರತೀರದ ಮರಳಿನಷ್ಟಿರುವುದು. 9 ಅವರು ದೇಶದಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ದೇವರ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಸ್ವರ್ಗದಿಂದ ಬೆಂಕಿ ಇಳಿದುಬಂದು ಅವರನ್ನು ದಹಿಸಿಬಿಟ್ಟಿತು. 10 ಜನರನ್ನು ಮರುಳುಗೊಳಿಸುತ್ತಿದ್ದ ಪಿಶಾಚಿಯನ್ನು ಗಂಧಕದ ಅಗ್ನಿ ಸರೋವರಕ್ಕೆ ಎಸೆಯಲಾಯಿತು. ಆ ಮೃಗವನ್ನೂ ಕಪಟ ಪ್ರವಾದಿಯನ್ನೂ ಮೊದಲೇ ಅದಕ್ಕೆ ಎಸೆಯಲಾಗಿತ್ತು. ಇವರೆಲ್ಲರೂ ಯುಗಯುಗಾಂತರಗಳವರೆಗೆ ಹಗಲಿರುಳೆನ್ನದೆ ಅಲ್ಲಿಯೇ ಬೇನೆಬೇಗುದಿಗಳಿಂದ ನರಳುವರು. ಅಂತಿಮ ತೀರ್ಪು 11 ಅನಂತರ ಶ್ವೇತವರ್ಣದ ಒಂದು ಮಹಾಸಿಂಹಾಸನವನ್ನು ಕಂಡೆ. ಅದರಲ್ಲಿ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ತಮ್ಮ ಇರುವಿಕೆಯೇ ಇಲ್ಲದಂತೆ ಕಣ್ಮರೆಯಾಗಿ ಹೋದವು. 12 ಇದಲ್ಲದೆ, ಮೃತರಾಗಿದ್ದ ಹಿರಿಯಕಿರಿಯರೆಲ್ಲರೂ ಸಿಂಹಾಸನದ ಸಾನ್ನಿಧ್ಯದಲ್ಲಿ ನಿಂತಿರುವುದನ್ನು ಕಂಡೆ. ಆಗ ಪುಸ್ತಕಗಳನ್ನು ತೆರೆಯಲಾಯಿತು. ಅನಂತರ ಮತ್ತೊಂದು ಪುಸ್ತಕವನ್ನು ತೆರೆಯಲಾಯಿತು. ಅದು ಜೀವಬಾಧ್ಯರ ಪಟ್ಟಿಯುಳ್ಳ ಪುಸ್ತಕ. ಆ ಪುಸ್ತಕದಲ್ಲಿ ಬರೆದಿದ್ದ ಪ್ರಕಾರ ಅವರವರ ಕೃತ್ಯಗಳಿಗೆ ತಕ್ಕಂತೆ ಮೃತರಿಗೆ ನ್ಯಾಯತೀರ್ಪು ಕೊಡಲಾಯಿತು. 13 ಸಮುದ್ರವು ತನ್ನಲ್ಲಿದ್ದ ಮೃತರನ್ನು ಒಪ್ಪಿಸಿತು; ಮೃತ್ಯುವು ಪಾತಾಳವೂ ತಮ್ಮ ವಶದಲ್ಲಿದ್ದ ಮೃತರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ಆಯಿತು. 14 ಅನಂತರ ಮೃತ್ಯುವನ್ನೂ ಪಾತಾಳವನ್ನೂ ಅಗ್ನಿಸರೋವರಕ್ಕೆ ಎಸೆಯಲಾಯಿತು. ಆ ಅಗ್ನಿಸರೋವರವೇ ಎರಡನೆಯ ಮರಣ. 15 ಯಾರ ಯಾರ ಹೆಸರು ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿಲ್ಲವೋ ಅಂಥವರನ್ನು ಅಗ್ನಿಸರೋವರಕ್ಕೆ ಎಸೆಯಲಾಯಿತು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India