Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 19 - ಕನ್ನಡ ಸತ್ಯವೇದವು C.L. Bible (BSI)


ಸ್ವರ್ಗದಲ್ಲಿ ಸಂಭ್ರಮ

1 ಇದಾದ ಬಳಿಕ ನಾನು ಮತ್ತೊಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದಿಂದ ಬಂದ ಒಂದು ಮಹಾಶಬ್ದವನ್ನು ಆಲಿಸಿದೆ. ಅದು ದೊಡ್ಡ ಜನಸಮೂಹದ ಆರ್ಭಟದಂತಿತ್ತು. “ಅಲ್ಲೆಲೂಯ ! ಜೀವೋದ್ಧಾರವೂ ಪ್ರಭಾವವೂ ಶಕ್ತಿಯೂ ನಮ್ಮ ದೇವರಲ್ಲುಂಟು.

2 ಆತನ ನ್ಯಾಯತೀರ್ಪು ಸತ್ಯವಾದುದು, ನೀತಿಬದ್ಧವಾದುದು. ಇತ್ತಿರುವನಾತ ತೀರ್ಪನು ಮಹಾ ವೇಶ್ಯೆಯ ವಿರುದ್ಧ ಪೃಥ್ವಿಯನೇ ಹೊಲಸೆಬ್ಬಿಸಿದ ವ್ಯಭಿಚಾರಿಯ ವಿರುದ್ಧ ತನ್ನ ದಾಸರ ರಕ್ತಪಾತದ ಸೇಡನು ತೀರಿಸಿಹನಾತ,” ಎಂದು ಜನಸಮೂಹವು ಘೋಷಿಸಿತು.

3 ಅವರು ಮತ್ತೊಮ್ಮೆ, “ಅಲ್ಲೆಲೂಯ ! ಅವಳ ದಹನದಿಂದ ಹೊಗೆ ಸತತ ಮೇಲೇರುತಿಹುದು ಒಂದೇಸಮನೆ,” ಎಂದು ಕೂಗಿದರು.

4 ಆಗ ಇಪ್ಪತ್ನಾಲ್ಕು ಮಂದಿ ಸಭಾಪ್ರಮುಖರೂ ನಾಲ್ಕು ಜೀವಿಗಳೂ ಸಿಂಹಾಸನಾರೂಢರಾದ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. “ಆಮೆನ್, ಅಲ್ಲೆಲೂಯ,” ಎಂದರು.


ಸ್ವರ್ಗೀಯ ಸಂಭ್ರಮಕ್ಕೆ ಆಮಂತ್ರಣ

5 ಬಳಿಕ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿ : “ದೇವರ ಎಲ್ಲಾ ದಾಸರೇ, ಅವರಲ್ಲಿ ಭಯಭಕ್ತಿಯುಳ್ಳ ಹಿರಿಯಕಿರಿಯರೇ, ನಮ್ಮ ದೇವರನ್ನು ಕೊಂಡಾಡಿ,” ಎಂದು ಹೇಳಿತು.

6 ತರುವಾಯ ನನಗೆ ಮತ್ತೊಂದು ಧ್ವನಿ ಕೇಳಿಸಿತು. ಅದು ದೊಡ್ಡ, ಜನಸಮೂಹದ ಆರ್ಭಟದಂತೆಯೂ ಭೋರ್ಗರೆಯುವ ಜಲಪ್ರವಾಹದ ಮೊರೆತದಂತೆಯೂ ಭಾರಿ ಗುಡುಗಿನ ಗರ್ಜನೆಯಂತೆಯೂ ಇತ್ತು. ಅದು ಇಂತೆಂದಿತು : “ಅಲ್ಲೆಲೂಯ ! ಸರ್ವಶಕ್ತ ನಮ್ಮ ಪ್ರಭು ದೇವ ರಾಜ್ಯವಾಳುತಿಹನಾತ.

7 ಬಂದಿದೆ ಯಜ್ಞದ ಕುರಿಮರಿಯ ಶುಭ ವಿವಾಹ ಸಿದ್ಧಳಿಹಳು ಮದುಮಗಳು ಶೃಂಗಾರ ಸಹಿತ ಸಂತೋಷಿಸೋಣ, ಸಂಭ್ರಮಿಸೋಣ ! ಆತನ ಮಹಿಮೆಯನು ಕೀರ್ತಿಸೋಣ;

8 ದಿವ್ಯವಾದುವು, ಭವ್ಯವಾದುವು, ಮೌಲ್ಯವಾದುವು, ಆಕೆಗಿತ್ತ ಉಡುಗೆತೊಡುಗೆಗಳು; ಸತ್ಕಾರ್ಯಗಳೇ ದೇವಜನರು ಧರಿಸುವ ಅಮೂಲ್ಯ ಉಡುಗೆತೊಡುಗೆಗಳು.”

9 ಅನಂತರ ದೇವದೂತನು, “ ‘ಯಜ್ಞದ ಕುರಿಮರಿಯ ವಿವಾಹದ ಔತಣಕ್ಕೆ ಆಹ್ವಾನಿತರು ಭಾಗ್ಯವಂತರು’ ಎಂದು ಬರೆ,” ಎಂದು ನನಗೆ ಆಜ್ಞಾಪಿಸಿದನು. “ಇವು ದೇವರ ಸತ್ಯವಾದ ವಾಕ್ಯಗಳು,” ಎಂದು ಸಹ ತಿಳಿಸಿದನು.

10 ಕೂಡಲೇ ಆರಾಧಿಸಲೆಂದು ಆತನ ಪಾದಗಳಿಗೆ ಅಡ್ಡಬಿದ್ದೆ. ಆಗ ಆತನು, “ನೀನು ನನಗೆ ಅಡ್ಡಬೀಳಬಾರದು, ನಾನು ನಿನ್ನ ಹಾಗೂ ಕ್ರಿಸ್ತೇಸು ಶ್ರುತಪಡಿಸಿದ ಸತ್ಯವನ್ನು ಅಂಗೀಕರಿಸಿದ ನಿನ್ನ ಸಹೋದರರ ಸಹ ಸೇವಕನಷ್ಟೆ. ನೀನು ದೇವರನ್ನು ಆರಾಧಿಸು,” ಎಂದನು. ಯೇಸು ಶ್ರುತಪಡಿಸಿದ ಸತ್ಯವೇ ಪ್ರವಾದಿಗಳ ಜೀವಾಳ.


ಕಪಟ ಪ್ರವಾದಿಯ ಅಧೋಗತಿ

11 ನಾನು ಈ ದೃಶ್ಯವನ್ನೂ ಕಂಡೆ: ಸ್ವರ್ಗವು ತೆರೆದಿತ್ತು. ಬಿಳಿಯ ಕುದುರೆಯೊಂದು ಕಾಣಿಸಿತು. ಅದರ ಮೇಲೆ ಒಬ್ಬನು ಕುಳಿತಿದ್ದನು. ನಂಬಿಕಸ್ಥನೆಂದೂ ಸತ್ಯವಂತನೆಂದೂ ಆತನ ಹೆಸರು; ಆತನು ನಿಷ್ಪಕ್ಷಪಾತದಿಂದ ನ್ಯಾಯತೀರ್ಪು ಕೊಡುವವನು; ನ್ಯಾಯಬದ್ಧವಾಗಿ ಯುದ್ಧಮಾಡುವವನು.

12 ಆತನ ಕಣ್ಣುಗಳು ಬೆಂಕಿಯ ಕೆಂಡಗಳಂತಿವೆ; ತಲೆಯ ಮೇಲೆ ಅನೇಕ ಕಿರೀಟಗಳಿವೆ.ಆತನ ಹೆಸರನ್ನು ಬರೆದಿಟ್ಟಿದೆ; ಅದು ಆತನಿಗೇ ಹೊರತು ಬೇರೆ ಯಾರಿಗೂ ತಿಳಿಯದು.

13 ಆತನು ಧರಿಸಿದ್ದ ಉಡುಪು ರಕ್ತಪ್ರೋಕ್ಷಿತವಾಗಿತ್ತು. ಆತನಿಗೆ ‘ದೇವರ ವಾಕ್ಯ’ ಎಂದು ಹೆಸರು.

14 ಸ್ವರ್ಗದ ಸೈನಿಕರು ಬಿಳಿಯ ಕುದುರೆಗಳನ್ನೇರಿ ಆತನನ್ನು ಹಿಂಬಾಲಿಸಿದರು. ಅವರು ಶುಭ್ರವಾದ ಬಿಳಿಯ ಸಮವಸ್ತ್ರಗಳನ್ನು ಧರಿಸಿದ್ದರು.

15 ರಾಷ್ಟ್ರಗಳನ್ನು ಹೊಡೆದುರುಳಿಸುವಂಥ ಹರಿತವಾದ ಖಡ್ಗವೊಂದು ಆತನ ಬಾಯಿಂದ ಹೊರಟಿತು. ಆತನು ಕಬ್ಬಿಣದ ದಂಡದಿಂದ ಅವುಗಳ ಆಳ್ವಿಕೆ ನಡೆಸುವನು. ಸರ್ವಶಕ್ತ ದೇವರ ರೋಷವೆಂಬ ದ್ರಾಕ್ಷಿಯ ಆಲೆಯಲ್ಲಿ ಇರುವವರನ್ನು ತುಳಿದುಹಾಕುವನು.

16 ಆತನ ಉಡುಪಿನ ಮೇಲೂ ತೊಡೆಯ ಮೇಲೂ ‘ರಾಜಾಧಿರಾಜ ಮತ್ತು ಪ್ರಭುಗಳ ಪ್ರಭು’ ಎಂಬ ಹೆಸರು ಲಿಖಿತವಾಗಿತ್ತು.

17 ಅನಂತರ ದೇವದೂತನೊಬ್ಬ ಸೂರ್ಯನ ಮೇಲೆ ನಿಂತಿರುವುದನ್ನು ಕಂಡೆ. ಆತನು ಗಟ್ಟಿಯಾದ ಧ್ವನಿಯಿಂದ ಮಧ್ಯಾಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಹೀಗೆ ಹೇಳಿದನು: “ದೇವರ ದೊಡ್ಡ ಔತಣಕ್ಕೆ ಕೂಡಿಬನ್ನಿ;

18 ರಾಜರುಗಳ ಮಾಂಸವನ್ನು, ಸೇನಾಧಿಪತಿಗಳ ಮಾಂಸವನ್ನು ಮತ್ತು ಪರಾಕ್ರಮಶಾಲಿಗಳ ಮಾಂಸವನ್ನು ತಿನ್ನ ಬನ್ನಿ; ಕುದುರೆಗಳ ಮಾಂಸವನ್ನೂ ರಾವುತರ ಮಾಂಸವನ್ನೂ ಉಣ ಬನ್ನಿ; ಯಜಮಾನರ, ಗುಲಾಮರ, ಚಿಕ್ಕವರ, ದೊಡ್ಡವರ ಈ ಎಲ್ಲಾ ನರಮಾನವರ ಮಾಂಸವನ್ನು ರುಚಿಸ ಬನ್ನಿ,” ಎಂದನು.

19 ಅನಂತರ ಆ ಮೃಗವನ್ನು ಕಂಡೆ. ಕುದುರೆಯ ಮೇಲೆ ಕುಳಿತಿದ್ದಾತನ ಮೇಲೂ ಅವನ ಸೈನ್ಯದ ಮೇಲೂ ಯುದ್ಧಮಾಡುವುದಕ್ಕಾಗಿ, ಆ ಮೃಗವೂ ಭೂಲೋಕದ ರಾಜರೂ ಅವರ ಸೈನ್ಯಗಳೊಡನೆ ಒಟ್ಟಾಗಿ ಸೇರಿಬಂದರು.

20 ಮೃಗವನ್ನು ಸೆರೆಹಿಡಿಯಲಾಯಿತು. ಅದರ ಜೊತೆಯಲ್ಲಿ ಕಪಟ ಪ್ರವಾದಿಯೂ ಸೆರೆಸಿಕ್ಕಿಬಿದ್ದನು. ಮೃಗದ ಮುಂದೆ ಪವಾಡ ಕಾರ್ಯಗಳನ್ನೆಸಗಿ ಅದರ ಮುದ್ರೆ ಒತ್ತಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ಪೂಜೆ ಮಾಡಿದವರನ್ನು ಮರುಳುಗೊಳಿಸಿದವನು ಇವನೇ. ಇವರಿಬ್ಬರನ್ನೂ ಜೀವಸಹಿತ ಹಿಡಿದು ಗಂಧಕದಿಂದ ಉರಿಯುವ ಅಗ್ನಿಸರೋವರಕ್ಕೆ ಎಸೆಯಲಾಯಿತು.

21 ಇನ್ನುಳಿದವರು ಕುದುರೆಯ ಮೇಲೆ ಕುಳಿತಿದ್ದಾತನ ಬಾಯಿಂದ ಹೊರಟ ಖಡ್ಗದಿಂದ ಹತರಾದರು; ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಆಹಾರವಾದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು