ಪ್ರಕಟನೆ 17 - ಕನ್ನಡ ಸತ್ಯವೇದವು C.L. Bible (BSI)ಕುರಿಮರಿಯ ಕೀರ್ತಿ 1 ಏಳು ಪಾತ್ರೆಗಳನ್ನು ಹಿಡಿದಿದ್ದ ಏಳುಮಂದಿದೇವದೂತರುಗಳಲ್ಲಿ ಒಬ್ಬನು ಬಂದನು. ಆತ ನನಗೆ, “ಇಲ್ಲಿಗೆ ಬಾ, ಜಲರಾಶಿಗಳ ಮೇಲೆ ನಿಂತಿರುವ ಕುಖ್ಯಾತ ವೇಶ್ಯೆಗೆ ಬರುವ ದಂಡನೆಯನ್ನು ನಿನಗೆ ತೋರಿಸುತ್ತೇನೆ; 2 ಭೂರಾಜರು ಅವಳೊಂದಿಗೆ ಹಾದರ ಮಾಡಿದರು. ಭೂನಿವಾಸಿಗಳು ಅವಳ ಹಾದರವೆಂಬ ಮದ್ಯಸೇವಿಸಿ ಮತ್ತರಾದರು,” ಎಂದು ಹೇಳಿದನು. 3 ನಾನು ದೇವರಾತ್ಮ ವಶನಾದೆ. ಆಗ ದೇವದೂತನು ನನ್ನನ್ನು ಅಡವಿಗೆ ಕೊಂಡೊಯ್ದನು. ಅಲ್ಲಿ, ಒಂದು ಕಡುಗೆಂಪಾದ ಮೃಗದ ಮೇಲೆ ಕುಳಿತಿದ್ದ ಸ್ತ್ರೀಯೊಬ್ಬಳನ್ನು ಕಂಡೆ. ಆ ಮೃಗದ ಮೈಮೇಲೆಲ್ಲಾ ದೇವದೂಷಣೆಯ ಮಾತುಗಳೇ ತುಂಬಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. 4 ಆ ಸ್ತ್ರೀ ಕೆನ್ನೀಲಿಯ ಹಾಗೂ ಕಡುಗೆಂಪಾದ ಬಟ್ಟೆಯನ್ನು ಧರಿಸಿದ್ದಳು; ಚಿನ್ನ, ಮುತ್ತು, ರತ್ನಾಭರಣಗಳಿಂದ ಅಲಂಕೃತಳಾಗಿದ್ದಳು. ಕೈಯಲ್ಲಿ ಚಿನ್ನದ ಪಾತ್ರೆಯನ್ನೂ ಹಿಡಿದಿದ್ದಳು. ಅವಳ ಹಾದರದ ಅಸಹ್ಯಗಳಿಂದಲೂ ಕಳಂಕಗಳಿಂದಲೂ ಅದು ತುಂಬಿತ್ತು. 5 ಅವಳ ಹಣೆಯ ಮೇಲೆ : ಬಾಬಿಲೋನ್ ಮಹಾನಗರಿ ವೇಶ್ಯೆಯರ ಮಹಾತಾಯಿ ಜಗತ್ತಿನ ದುರ್ನಡತೆಗಳ ಜನನಿ,” ಎಂಬ ನಿಗೂಢವಾದ ಹೆಸರಿತ್ತು. 6 ದೇವಜನರ ರಕ್ತವನ್ನು ಮತ್ತು ಕ್ರಿಸ್ತೇಸುವಿಗೋಸ್ಕರ ಹುತಾತ್ಮರಾದವರ ರಕ್ತವನ್ನು ಹೀರಿ ಮತ್ತಳಾಗಿದ್ದಳು ಅವಳು. ಇದನ್ನು ಕಂಡು ನನಗೆ ದಿಗ್ಭ್ರಮೆಯಾಯಿತು. 7 ಆ ದೇವದೂತನು ನನಗೆ ಹೀಗೆ ಹೇಳಿದನು : “ನೀನು ದಿಗ್ಭ್ರಮೆಗೊಂಡಿರುವುದೇಕೆ? ಆ ಸ್ತ್ರೀಯ ಹಾಗೂ ಅವಳ ವಾಹನವಾಗಿರುವ ಏಳು ತಲೆ, ಹತ್ತು ಕೊಂಬುಗಳುಳ್ಳ ಮೃಗದ ನಿಗೂಢತೆಯನ್ನು ನಾನು ನಿನಗೆ ವಿವರಿಸುತ್ತೇನೆ. 8 ನೀನು ಕಂಡ ಈ ಮೃಗ ಒಮ್ಮೆ ಇತ್ತು. ಆದರೆ ಈಗ ಇಲ್ಲ. ಅದು ಪಾತಾಳಕೂಪದಿಂದ ಬಂದು ವಿನಾಶದತ್ತ ತೆರಳುತ್ತದೆ. ಭೂನಿವಾಸಿಗಳಲ್ಲಿ ಲೋಕಾದಿಯಿಂದ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಯಾರ ಹೆಸರುಗಳನ್ನು ಬರೆದಿಲ್ಲವೋ ಅಂಥವರು ಅದನ್ನು ಕಂಡು ದಿಗ್ಭ್ರಮೆಗೊಳ್ಳುವರು. ಏಕೆಂದರೆ, ಈ ಮೃಗ ಒಮ್ಮೆ ಇತ್ತು, ಆದರೆ ಈಗ ಇಲ್ಲ. ಆದರೆ ಅದು ಮತ್ತೊಮ್ಮೆ ಬರಲಿದೆ. 9 “ಇದನ್ನು ಗ್ರಹಿಸಿಕೊಳ್ಳಲು ಬುದ್ಧಿ ಸಾಮರ್ಥ್ಯವಿರಬೇಕು. ಏಳು ತಲೆಗಳು ಆ ಸ್ತ್ರೀ ಕುಳಿತಿರುವ ಏಳು ಬೆಟ್ಟಗಳನ್ನೂ ಏಳು ರಾಜರನ್ನೂ ಸೂಚಿಸುತ್ತವೆ. 10 ಈ ಏಳು ರಾಜರಲ್ಲಿ ಈಗಾಗಲೇ ಐದುಮಂದಿ ಪತನಹೊಂದಿದ್ದಾರೆ. ಒಬ್ಬ ರಾಜನು ಈಗ ಆಳುತ್ತಿದ್ದಾನೆ. ಮತ್ತೊಬ್ಬನು ಇನ್ನೂ ತಲೆದೋರಿಲ್ಲ. ಅವನು ಬಂದಾಗ ಕೊಂಚಕಾಲ ಮಾತ್ರ ರಾಜ್ಯವಾಳುತ್ತಾನೆ. 11 ಹಿಂದೊಮ್ಮೆ ಇದ್ದು ಈಗ ಇಲ್ಲದಿರುವ ಮೃಗವು ಎಂಟನೆಯ ರಾಜನನ್ನು ಸೂಚಿಸುತ್ತದೆ. ಅದು ಆ ಏಳುಮಂದಿಗೆ ಸೇರಿದುದು ಮತ್ತು ವಿನಾಶದತ್ತ ತೆರಳುವಂಥಾದ್ದು. 12 “ನೀನು ಕಂಡ ಹತ್ತು ಕೊಂಬುಗಳು ಹತ್ತು ರಾಜರುಗಳನ್ನು ಸೂಚಿಸುತ್ತವೆ. ಅವರು ಇನ್ನೂ ರಾಜ್ಯಭಾರವನ್ನು ವಹಿಸಿಕೊಂಡಿಲ್ಲ. ಆ ಮೃಗದ ಜೊತೆಯಲ್ಲಿ ರಾಜ್ಯವಾಳಲು ಒಂದು ಗಂಟೆಯವರೆಗೆ ಅವರಿಗೆ ಅಧಿಕಾರವನ್ನು ಕೊಡಲಾಗುವುದು. 13 ಅವರು ಒಮ್ಮನಸ್ಸಿನವರಾಗಿ ತಮ್ಮ ಶಕ್ತಿಸಾಮರ್ಥ್ಯವನ್ನೂ ಅಧಿಕಾರವನ್ನೂ ಆ ಮೃಗಕ್ಕೆ ಒಪ್ಪಿಸಿಬಿಡುತ್ತಾರೆ. 14 ಅವರು ಯಜ್ಞದ ಕುರಿಮರಿಯ ಮೇಲೆ ಯುದ್ಧಮಾಡುವರು. ಆದರೆ ಯಜ್ಞದ ಕುರಿಮರಿಗೆ ಜಯವಾಗುವುದು. ಆ ಕುರಿಮರಿಯು ಒಡೆಯರಿಗೆಲ್ಲಾ ಒಡೆಯನೂ ರಾಜಾಧಿರಾಜನೂ ಆಗಿರುವುದೇ ಇದಕ್ಕೆ ಕಾರಣ. ದೇವರ ಕರೆ ಹೊಂದಿದವರೂ ದೇವರು ಆಯ್ದುಕೊಂಡವರೂ ಆದ ಪ್ರಾಮಾಣಿಕ ಅನುಯಾಯಿಗಳು ಆ ಜಯದಲ್ಲಿ ಪಾಲುಗಾರರಾಗುವರು,” ಎಂದನು. 15 ಆ ದೇವದೂತನು ಮುಂದುವರೆದು ಹೀಗೆ ನುಡಿದನು : “ಜಲರಾಶಿಗಳ ಮೇಲೆ ನಿಂತಿದ್ದ ಆ ವೇಶ್ಯೆಯನ್ನು ನೋಡಿದೆಯಲ್ಲಾ ! ಆ ಜಲರಾಶಿಯು ಜನಾಂಗಗಳನ್ನೂ ಜನಸಮೂಹವನ್ನೂ ರಾಷ್ಟ್ರಗಳನ್ನೂ ಭಾಷೆಗಳನ್ನೂ ಸೂಚಿಸುತ್ತದೆ. 16 ನೀನು ಕಂಡ ಮೃಗವೂ ಅದರ ಹತ್ತು ಕೊಂಬುಗಳೂ ಆ ವೇಶ್ಯೆಯನ್ನು ದ್ವೇಷಿಸುವವರನ್ನು ಸೂಚಿಸುತ್ತದೆ. ಅವರು ಅವಳನ್ನು ನಿರ್ಗತಿಕಳನ್ನಾಗಿ ಮಾಡುವರು, ಬೆತ್ತಲೆಯಾಗಿಸುವರು; ಅವಳ ಮಾಂಸವನ್ನು ಕಿತ್ತು ತಿನ್ನುವರು; ಅವಳನ್ನೇ ಬೆಂಕಿಯಲ್ಲಿ ಸುಟ್ಟುಬಿಡುವರು. 17 ಹೀಗೆ ದೈವಸಂಕಲ್ಪವು ನೆರವೇರಬೇಕೆಂದು ದೇವರೇ ಆ ಜನರನ್ನು ಪ್ರೇರೇಪಿಸುವರು. ಇದೇ ಪ್ರೇರಣೆಯಿಂದಾಗಿ ದೇವರ ವಾಕ್ಯ ನೆರವೇರುವವರೆಗೆ ಅವರು ಒಮ್ಮನಸ್ಸಿನಿಂದ ರಾಜ್ಯಾಧಿಕಾರವನ್ನು ಆ ಮೃಗಕ್ಕೆ ಒಪ್ಪಿಸಿಬಿಡುವರು. 18 ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಅಧಿಕಾರವುಳ್ಳ ಮಹಾನಗರದ ಸೂಚನೆಯಾಗಿದ್ದಾಳೆ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India