ಪ್ರಕಟನೆ 16 - ಕನ್ನಡ ಸತ್ಯವೇದವು C.L. Bible (BSI)ದೈವ ಕೋಪಾಗ್ನಿಯ ಸುರಿಮಳೆ 1 ಅನಂತರ ದೇವಾಲಯದೊಳಗಿಂದ ಬಂದ ಮಹಾಶಬ್ದವನ್ನು ಕೇಳಿದೆ. ಅದು ಆ ಏಳು ದೇವದೂತರಿಗೆ, “ನೀವು ಹೋಗಿ ಏಳು ಪಾತ್ರೆಗಳಲ್ಲಿ ತುಂಬಿರುವ ದೇವರ ರೋಷವನ್ನು ಭೂಮಿಯ ಮೇಲೆ ಸುರಿಯಿರಿ,” ಎಂದು ಆಜ್ಞಾಪಿಸಿತು. 2 ಅದರಂತೆಯೇ ಮೊದಲನೆಯ ದೇವದೂತನು ಹೋಗಿ ತನ್ನ ಪಾತ್ರೆಯಲ್ಲಿ ಇದ್ದುದನ್ನು ಭೂಮಿಯ ಮೇಲೆ ಸುರಿದನು. ಪರಿಣಾಮವಾಗಿ, ಮೊದಲನೆಯ ಮೃಗದ ಹಚ್ಚೆ ಚುಚ್ಚಿಸಿಕೊಂಡವರ ಮತ್ತು ಅದರ ವಿಗ್ರಹವನ್ನು ಪೂಜಿಸಿದವರ ಮೈಮೇಲೆಲ್ಲಾ ಭಯಂಕರವಾದ ಉರಿ ಹುಣ್ಣುಗಳು ಎದ್ದವು. 3 ಎರಡನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸಮುದ್ರದ ಮೇಲೆ ಸುರಿದನು. ಆಗ ಸಮುದ್ರದ ನೀರು ಸತ್ತವನ ರಕ್ತದಂತೆ ಆಯಿತು. ಸಮುದ್ರದಲ್ಲಿದ್ದ ಜಲಜಂತುಗಳೆಲ್ಲಾ ಸತ್ತುಹೋದವು. 4 ಮೂರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ನದಿಗಳ ಮೇಲೆಯೂ ನೀರಿನ ಒರತೆಗಳ ಮೇಲೆಯೂ ಸುರಿದನು. ನೀರೆಲ್ಲಾ ರಕ್ತಮಯವಾಯಿತು. 5 ಆಗ ಜಲಾಧಿಕಾರಿಯಾದ ದೂತನು : “ತ್ರಿಕಾಲಸ್ಥನು ಪರಿಶುದ್ಧನು ನೀನೇ ನೀನಿತ್ತ ತೀರ್ಪು ನ್ಯಾಯಬದ್ಧವಾದುದೇ. 6 ದೇವಜನರ, ಪೂಜ್ಯಪ್ರವಾದಿಗಳ ರಕ್ತಪಾತಕರಿಗೆ ಕುಡಿಯಲು ನೀನಿತ್ತೆ ಆ ರಕ್ತವ ನೇ ಅವರ ಕೃತ್ಯಕ್ಕದುವೇ ತಕ್ಕ ಸಂಭಾವನೆ,” ಎಂದು ಹಾಡುವುದನ್ನು ನಾನು ಕೇಳಿಸಿಕೊಂಡೆ. 7 ಅನಂತರ ಬಲಿಪೀಠದಿಂದ ಹೀಗೆ ಕೇಳಿ ಬಂತು : “ಹೌದು ಪ್ರಭುವೇ, ಸರ್ವಶಕ್ತನೇ, ನೀನಿತ್ತ ತೀರ್ಪು ಸತ್ಯ ಹಾಗೂ ನ್ಯಾಯಬದ್ಧವಾದುದೇ.” 8 ನಾಲ್ಕನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ, ಕಡುಬಿಸಿಲಿನಿಂದ ಮನುಷ್ಯರನ್ನು ಸುಡುವ ಶಕ್ತಿಯನ್ನು ಕೊಡಲಾಯಿತು. 9 ಮನುಷ್ಯರು ಆ ಕಡು ಕಾವಿನಲ್ಲಿ ಬೆಂದು ನರಳಿದರು. ಈ ಮಾರಕ ವ್ಯಾಧಿಗಳ ಮೇಲೆ ಅಧಿಕಾರ ಇದ್ದ ದೇವರನ್ನೂ ದೂಷಿಸಿದರು. ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾಗಲಿಲ್ಲ; ಅವರ ಮಹಿಮೆಯನ್ನು ಸ್ತುತಿಸಲಿಲ್ಲ. 10 ಐದನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಮೊದಲನೆಯ ಮೃಗದ ಸಿಂಹಾಸನದ ಮೇಲೆ ಸುರಿದನು. ಕೂಡಲೇ ಆ ಮೃಗ ರಾಜ್ಯದ ಮೇಲೆ ಅಂಧಕಾರ ಕವಿಯಿತು. ಜನರು ತಮಗೆ ಬಂದೆರಗಿದ ಬಾಧೆಯನ್ನು ತಾಳಲಾರದೆ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡರು. 11 ತಮ್ಮ ನೋವು ಬಾಧೆಗಳ ನಿಮಿತ್ತವೂ ತಮ್ಮ ಉರಿ ಹುಣ್ಣುಗಳ ನಿಮಿತ್ತವೂ ಸ್ವರ್ಗದ ದೇವರನ್ನು ದೂಷಿಸಿದರು. ತಮ್ಮ ದುಷ್ಕೃತ್ಯಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಲೇ ಇಲ್ಲ. 12 ಆರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಯೂಫ್ರೆಟಿಸ್ ಎಂಬ ಮಹಾನದಿಯ ಮೇಲೆ ಸುರಿದನು. ಕೂಡಲೇ ಅದರ ನೀರು ಬತ್ತಿಹೋಯಿತು. ಇದರ ಪರಿಣಾಮವಾಗಿ ಪೂರ್ವದೇಶದ ರಾಜರು ಬರುವುದಕ್ಕೆ ಮಾರ್ಗವಾಯಿತು. 13 ಇವುಗಳಾದ ಮೇಲೆ ಕಪ್ಪೆಗಳಂತಿದ್ದ ಮೂರು ದುಷ್ಟಾತ್ಮಗಳನ್ನು ನಾನು ಕಂಡೆ. ಅವು ಘಟಸರ್ಪದ ಬಾಯೊಳಗಿಂದಲೂ ಮೃಗದ ಬಾಯೊಳಗಿಂದಲೂ ಕಪಟ ಪ್ರವಾದಿಯ ಬಾಯೊಳಗಿಂದಲೂ ಹೊರಟುಬಂದವು. 14 ಇವು ಪವಾಡ ಕಾರ್ಯಗಳನ್ನು ಎಸಗುವ ದೆವ್ವಾತ್ಮಗಳು. ಸರ್ವಶಕ್ತ ದೇವರ ಮಹಾದಿನದಲ್ಲಿ ನಡೆಯುವ ಯುದ್ಧಕ್ಕಾಗಿ ಭೂಲೋಕದ ರಾಜರುಗಳನ್ನೆಲ್ಲಾ ಒಟ್ಟುಗೂಡಿಸಲು ಅವು ಹೊರಟವು. 15 “ಇಗೋ, ಕಳ್ಳನು ಬರುವಂತೆ ನಾನು ಬರುತ್ತೇನೆ. ಬೆತ್ತಲೆಯಾಗಿ ಎಲ್ಲರ ಮುಂದೆ ಕಾಣಿಸಿಕೊಂಡು ನಾಚಿಕೆಗೀಡಾಗದಂತೆ ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಧರಿಸಿಕೊಂಡಿರುವವನು ಭಾಗ್ಯವಂತನು!” 16 ಆ ದೆವ್ವಗಳು ಭೂರಾಜರೆಲ್ಲರನ್ನೂ ಒಂದು ಸ್ಥಳದಲ್ಲಿ ಸೇರಿಸಿದವು. ಆ ಸ್ಥಳಕ್ಕೆ ಹಿಬ್ರಿಯ ಭಾಷೆಯಲ್ಲಿ, ‘ಹರ್ಮಗೆದೋನ್’ ಎಂದು ಹೆಸರು. 17 ಏಳನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ವಾಯುಮಂಡಲದ ಮೇಲೆ ಸುರಿದನು. ಆಗ ದೇವಾಲಯದ ಸಿಂಹಾಸನದ ಕಡೆಯಿಂದ ಒಂದು ದೊಡ್ಡ ಧ್ವನಿ ಉಂಟಾಗಿ, “ಮುಗಿಸಿದ್ದಾಯಿತು,” ಎಂದು ಹೇಳಿತು. 18 ಆಗ ಮಿಂಚು, ಗುಡುಗು, ಗರ್ಜನೆಗಳುಂಟಾದವು. ಇದಲ್ಲದೆ, ಭಯಂಕರವಾದ ಭೂಕಂಪ ಉಂಟಾಯಿತು. ಮಾನವ ಇತಿಹಾಸದಲ್ಲೇ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ. 19 ಮಹಾನಗರವು ಮೂರು ಭಾಗವಾಗಿ ಸೀಳಿಹೋಯಿತು. ಎಲ್ಲಾ ದೇಶಗಳ ನಗರಗಳು ನಾಶವಾದವು. ಬಾಬಿಲೋನ್ ಎಂಬ ಮಹಾನಗರವನ್ನು ದೇವರು ಮರೆಯಲಿಲ್ಲ; ತಮ್ಮ ರೋಷವೆಂಬ ಮದ್ಯಪಾತ್ರೆಯಿಂದ ಅದಕ್ಕೆ ಕುಡಿಯಲು ಕೊಟ್ಟರು. 20 ದ್ವೀಪಗಳು ಕಣ್ಮರೆ ಆದವು; ಬೆಟ್ಟಗಳು ನೆಲಸಮವಾದವು. 21 ಆಕಾಶದಿಂದ ಮನುಷ್ಯರ ಮೇಲೆ ಆಲಿಕಲ್ಲಿನ ಮಳೆ ಸುರಿಯಿತು. ಒಂದೊಂದು ಆಲಿಕಲ್ಲಿನ ತೂಕ ಸುಮಾರು ಐವತ್ತು ಕಿಲೊಗ್ರಾಮಿನಷ್ಟು ಇತ್ತು. ಆ ಆಲಿಕಲ್ಲಿನ ವಿಪತ್ತು ಅಧಿಕವಾದುದರಿಂದಲೂ ಭಯಂಕರವಾದುದರಿಂದಲೂ ಜನರು ದೇವರನ್ನು ದೂಷಿಸಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India