Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 15 - ಕನ್ನಡ ಸತ್ಯವೇದವು C.L. Bible (BSI)


ಅಂತಿಮ ವ್ಯಾಧಿಗಳು

1 ಸ್ವರ್ಗದಲ್ಲಿ ಮತ್ತೊಂದು ಚಿಹ್ನೆಯನ್ನು ಕಂಡೆ. ಅದು ಅತ್ಯಾಶ್ಚರ್ಯಕರವಾಗಿ ಇತ್ತು. ಏಳು ದೇವದೂತರ ಕೈಯಲ್ಲಿ ಏಳು ವಿಪತ್ತುಗಳು ಇದ್ದವು. ಇವು ಅಂತಿಮವಾಗಿ ಬಂದೆರಗುವ ವಿಪತ್ತುಗಳು. ಏಕೆಂದರೆ, ಅವುಗಳೊಡನೆ ದೇವರ ಕೋಪಾಗ್ನಿ ಪೂರ್ತಿಯಾಗಿ ಬಂದೆರಗುವುದು.

2 ಇದಲ್ಲದೆ, ಗಾಜಿನ ಸಮುದ್ರದಂತಿದ್ದ ಒಂದು ವಸ್ತು ಕಾಣಿಸಿತು; ಅದು ಬೆಂಕಿಯಿಂದ ಕೂಡಿತ್ತು. ಮೃಗದ ವಿರುದ್ಧ, ಅದರ ವಿಗ್ರಹದ ವಿರುದ್ಧ ಹಾಗೂ ಅದರ ಹೆಸರನ್ನು ಸೂಚಿಸುವ ಸಂಖ್ಯೆಯ ವಿರುದ್ಧ ಜಯಗಳಿಸಿದವರನ್ನು ಸಹ ಕಂಡೆ. ಅವರು ಗಾಜಿನ ಸಮುದ್ರದ ಬಳಿ ನಿಂತಿದ್ದರು; ಕೈಗಳಲ್ಲಿ ದೇವರಿತ್ತ ಕಿನ್ನರಿಗಳಿದ್ದವು.

3 ಅವರು ದೇವರ ದಾಸನಾದ ಮೋಶೆಯ ಗೀತೆಯನ್ನೂ ಯಜ್ಞದ ಕುರಿಮರಿಯ ಗೀತೆಯನ್ನೂ ಹಾಡುತ್ತಿದ್ದರು. ಅದು ಯಾವುದೆಂದರೆ : ಹೇ ದೇವಾ, ಹೇ ಪ್ರಭೂ, ನೀ ಸರ್ವಶಕ್ತ ! ಏನು ಘನ, ಏನು ಅದ್ಭುತ, ನಿನ್ನ ಸತ್ಕಾರ್ಯ ! ರಾಷ್ಟ್ರಗಳಿಗೆಲ್ಲಾ ನೀ ರಾಜಾಧಿರಾಜ ನಿಜವಾದುದು, ಋಜುವಾದುದು ನಿನ್ನ ಸನ್ಮಾರ್ಗ.

4 ಹೇ ಪ್ರಭೂ, ನಿನಗಂಜದವರಾರು? ನಿನ್ನ ನಾಮಸ್ತುತಿ ಮಾಡದವರಾರು? ಪರಮಪವಿತ್ರ ನೀನಲ್ಲದಿನ್ಯಾರು ಪ್ರಕಟವಾಗಿವೆ ನಿನ್ನ ನೀತಿಯುತ ಕಾರ್ಯಗಳು ಬಂದೆರಗಲಿವೆ ನಿನಗೆ ಸಕಲ ಜನಾಂಗಗಳು.”

5 ಇವುಗಳಾದ ಮೇಲೆ ನಾನು ಮತ್ತೊಂದು ದಿವ್ಯದರ್ಶನವನ್ನು ಕಂಡೆ ಸ್ವರ್ಗದ ದೇವಾಲಯವು ತೆರೆದಿತ್ತು. ದೈವಪ್ರಸನ್ನತೆಯ ಗುಡಾರವು ಅದರೊಳಗಿತ್ತು.

6 ಏಳು ವಿಪತ್ತುಗಳನ್ನು ಹಿಡಿದಿದ್ದ ಏಳು ದೇವದೂತರು ಈ ದೇವಾಲಯದಿಂದ ಹೊರಗೆ ಬಂದರು. ಅವರು ಶುಭ್ರವಾದ ಮತ್ತು ಹೊಳೆಯುವ ಉಡುಪುಗಳನ್ನು ತೊಟ್ಟಿದ್ದರು; ಎದೆಗಳಿಗೆ ಚಿನ್ನದ ಪಟ್ಟಿಗಳನ್ನು ಕಟ್ಟಿಕೊಂಡು ಇದ್ದರು.

7 ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಈ ಏಳು ಮಂದಿ ದೇವದೂತರಿಗೆ ಏಳು ಚಿನ್ನದ ಪಾತ್ರೆಗಳನ್ನು ಕೊಟ್ಟಿತು. ಆ ಪಾತ್ರೆಗಳಲ್ಲಿ ಯುಗಯುಗಾಂತರಕ್ಕೂ ಜೀವಿಸುವ ದೇವರ ರೋಷವು ತುಂಬಿತುಳುಕುತ್ತಿತ್ತು.

8 ದೇವರ ಸಾನ್ನಿಧ್ಯದ ತೇಜಸ್ಸು ಮತ್ತು ಪ್ರಭಾವಗಳು ದೇವಾಲಯವನ್ನು ಧೂಮದಿಂದ ತುಂಬಿದವು. ಇದರಿಂದಾಗಿ, ಆ ಏಳು ದೇವದೂತರು ತಂದ ಏಳು ವಿಪತ್ತುಗಳು ಮುಗಿಯುವ ತನಕ ಆ ದೇವಾಲಯವನ್ನು ಪ್ರವೇಶಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು