Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 14 - ಕನ್ನಡ ಸತ್ಯವೇದವು C.L. Bible (BSI)


ವಿಮೋಚನೆ ಹೊಂದಿದ ಪುನೀತರು

1 ಅನಂತರ ಸಿಯೋನ್ ಬೆಟ್ಟದ ಮೇಲೆ ಯಜ್ಞದ ಕುರಿಮರಿಯಾದಾತನು, ನಿಂತಿರುವುದನ್ನು ಕಂಡೆ. ಆತನ ಸಂಗಡ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. ಇವರು ತಮ್ಮ ಹಣೆಯ ಮೇಲೆ ಯಜ್ಞದ ಕುರಿಮರಿಯ ಮತ್ತು ಆತನ ಪಿತನ ನಾಮಾಂಕಿತವನ್ನು ಬರೆಸಿಕೊಂಡಿದ್ದರು.

2 ಇದಲ್ಲದೆ, ಸ್ವರ್ಗದಿಂದ ಮಹಾಧ್ವನಿಯೊಂದು ಕೇಳಿಸಿತು. ಅದು ಭೋರ್ಗರೆಯುವ ಜಲಪ್ರವಾಹದಂತೆಯೂ ದೊಡ್ಡ ಗುಡುಗಿನ ಗರ್ಜನೆಯಂತೆಯೂ ಇತ್ತು. ನಾವು ಕೇಳಿದಂಥ ಧ್ವನಿ ಕಿನ್ನರಿಯನ್ನು ನುಡಿಸುತ್ತಿರುವ ವಾದ್ಯಗಾರರ ಸ್ವರದಂತಿತ್ತು.

3 ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ಜನರು ಸಿಂಹಾಸನದ ಸಾನ್ನಿಧ್ಯದಲ್ಲಿಯೂ ನಾಲ್ಕು ಜೀವಿಗಳ ಮುಂದೆಯೂ ಸಭಾಪ್ರಮುಖರ ಎದುರಿನಲ್ಲಿಯೂ ನಿಂತು ಒಂದು ಹೊಸಗೀತೆಯನ್ನು ಹಾಡುತ್ತಿದ್ದರು. ಇಡೀ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರೇ. ಇವರನ್ನುಳಿದು ಬೇರೆ ಯಾರಿಂದಲೂ ಆ ಹಾಡನ್ನು ಕಲಿಯಲಾಗಲಿಲ್ಲ.

4 ಇವರು ಸ್ತ್ರೀಸಂಸರ್ಗದಿಂದ ಮಲಿನರಾಗದವರು; ಕನ್ಯೆಯರಂತೆ ಕಳಂಕರಹಿತರು; ಇವರು ಯಜ್ಞದ ಕುರಿಮರಿ ಹೋದೆಡೆಯಲ್ಲೆಲ್ಲಾ ಹಿಂಬಾಲಿಸುವವರು; ದೇವರಿಗೂ ಯಜ್ಞದ ಕುರಿಮರಿಗೂ ಅರ್ಪಿತವಾದ ಪ್ರಥಮ ಫಲದಂತೆ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರು.

5 ಸುಳ್ಳು ಮಾತು ಅವರ ಬಾಯಿಂದ ಬರುವುದಿಲ್ಲ; ಅವರು ನಿರ್ದೋಷಿಗಳು.


ಭಕ್ತರಾಗಿ ಸಾಯುವವರು ಭಾಗ್ಯವಂತರು

6 ಮತ್ತೊಬ್ಬ ದೇವದೂತನು ಆಕಾಶ ಮಧ್ಯದಲ್ಲಿ ಹಾರುತ್ತಿರುವುದನ್ನು ಕಂಡೆ. ಸಕಲ ದೇಶ, ಭಾಷೆ, ಕುಲ, ಗೋತ್ರದ ಜನರಿಗೂ ಸಾರಬೇಕಾದ ಅಮರ ಸಂದೇಶ ಆತನಲ್ಲಿತ್ತು.

7 ಆತನು ಮಹಾಶಬ್ದದಿಂದ, “ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ; ಅವರಿಗೆ ಸ್ತುತಿಸ್ತೋತ್ರ ಸಲ್ಲಿಸಿರಿ. ಏಕೆಂದರೆ, ಅವರು ತೀರ್ಪುಕೊಡುವ ಗಳಿಗೆಯು ಬಂದಿದೆ. ಆದ್ದರಿಂದ ಭೂಸ್ವರ್ಗಗಳನ್ನೂ ಕಡಲುಕಾರಂಜಿಗಳನ್ನೂ ಸೃಷ್ಟಿಸಿದ ದೇವರಿಗೆ ಆರಾಧನೆ ಸಲ್ಲಿಸಿರಿ,” ಎಂದು ಹೇಳಿದನು.

8 ಅನಂತರ ಎರಡನೆಯ ದೇವದೂತನು ಬಂದನು. ಆತನು, “ಪತನ ಹೊಂದಿದಳು, ಪತನ ಹೊಂದಿದಳು ಬಾಬಿಲೋನ್ ಮಹಾನಗರಿ; ಹಾದರವೆಂಬ ಕಾಮೋದ್ರೇಕದ ಮದ್ಯವನು ಸಕಲರಿಗೂ ಕುಡಿಸಿದ ನಗರಿ ಪತನವಾದಳು,” ಎಂದು ಹೇಳಿದನು.

9 ಇದಾದ ಮೇಲೆ ಮೂರನೆಯ ದೇವದೂತನು ಬಂದನು. ಈತನು ಗಟ್ಟಿಯಾದ ಧ್ವನಿಯಿಂದ ಹೀಗೆಂದನು: “ಯಾರಾದರೂ ಮೊದಲನೆಯ ಮೃಗವನ್ನೂ ಅದರ ವಿಗ್ರಹವನ್ನೂ ಪೂಜಿಸಿದರೆ ಅಥವಾ ತನ್ನ ಹಣೆಯ ಮೇಲಾಗಲೀ ಕೈಯ ಮೇಲಾಗಲೀ ಗುರುತಿನ ಹಚ್ಚೆಯನ್ನು ಚುಚ್ಚಿಸಿಕೊಂಡರೆ,

10 ಅಂಥವನು ದೇವರ ಕೋಪಾಗ್ನಿಯೆಂಬ ಪಾತ್ರೆಯಲ್ಲಿ ದೇವರ ಅಪ್ಪಟ ರೋಷವೆಂಬ ಮದ್ಯವನ್ನು ಕುಡಿಯಬೇಕಾಗುತ್ತದೆ. ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಮರಿಯ ಮುಂದೆಯೂ ಅಂಥವನು ಬೆಂಕಿಯಲ್ಲೂ ಗಂಧಕದಲ್ಲೂ ಬೆಂದು ನರಳುವನು.

11 ಅಂಥವರ ನರಳಾಟದ ಹೊಗೆ ಸತತ ಮೇಲೇರುತ್ತಿರುತ್ತದೆ. ಮೃಗಕ್ಕೂ ಅದರ ವಿಗ್ರಹಕ್ಕೂ ಪೂಜೆಸಲ್ಲಿಸುವವರು ಮತ್ತು ಅದರ ಹೆಸರನ್ನು ಸೂಚಿಸುವ ಹಚ್ಚೆಯನ್ನು ಚುಚ್ಚಿಸಿಕೊಂಡವರು ಹಗಲಿರುಳೂ ಬಿಡುವಿಲ್ಲದೆ ಸಂಕಟಪಡುವರು,” ಎಂದು ಹೇಳಿದನು.

12 ಆದ್ದರಿಂದ ದೇವರ ಆಜ್ಞೆಗಳನ್ನು ಕೈಗೊಂಡು ಯೇಸುಸ್ವಾಮಿಯಲ್ಲಿ ವಿಶ್ವಾಸವಿಟ್ಟು ನಡೆಯುವ ದೇವಜನರಲ್ಲಿ ಸಹನೆ, ಸಹಿಷ್ಣುತೆ ಇರಬೇಕು.

13 ಇದಾದ ಮೇಲೆ ಸ್ವರ್ಗದಿಂದ ಬಂದ ಧ್ವನಿಯೊಂದು ಕೇಳಿಸಿತು. ಅದು ನನಗೆ, “ನೀನಿದನ್ನು ಬರೆ: ಇಂದಿನಿಂದ ಪ್ರಭುವಿನ ಭಕ್ತರಾಗಿ ಸಾಯುವವರು ಭಾಗ್ಯವಂತರು,” ಎಂದು ತಿಳಿಸಿತು. ಆಗ ದೇವರ ಆತ್ಮ, “ಹೌದು, ಅವರೇ ಭಾಗ್ಯವಂತರು. ಇನ್ನು ಅವರ ಸಂಕಷ್ಟಗಳು ಮುಗಿದು ಅವರಿಗೆ ವಿಶ್ರಾಂತಿ ದೊರಕುವುದು; ಅವರ ಸುಕೃತ್ಯಗಳಿಗೆ ತಕ್ಕ ಪ್ರತಿಫಲ ದೊರಕುವುದು,” ಎಂದು ಹೇಳಿತು.


ಕೊಯ್ಲಿನ ಕಾಲ

14 ಅನಂತರ ನನ್ನ ಕಣ್ಣಿಗೆ ಒಂದು ಬಿಳಿಯ ಮೋಡ ಕಾಣಿಸಿತು. ಆ ಮೋಡದ ಮೇಲೆ ನರಪುತ್ರನಂಥ ವ್ಯಕ್ತಿಯೊಬ್ಬನು ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು; ಕೈಯಲ್ಲಿ ಹರಿತವಾದ ಕುಡುಗೋಲಿತ್ತು.

15 ಇನ್ನೊಬ್ಬ ದೇವದೂತನು ದೇವಮಂದಿರದಿಂದ ಹೊರಗೆ ಬಂದನು. ಈತನು ಮೋಡದ ಮೇಲೆ ಕುಳಿತಿದ್ದ ಅವನನ್ನು ಉದ್ದೇಶಿಸಿ, “ಭೂಮಿಯ ಫಸಲು ಮಾಗಿದೆ, ಕೊಯ್ಲಿನ ಕಾಲ ಬಂದಿದೆ. ನಿನ್ನ ಕುಡುಗೋಲನ್ನು ತೆಗೆದು ಕೊಯಿಲು ಮಾಡಲು ಆರಂಭಿಸು,” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.

16 ಆಗ ಮೋಡದ ಮೇಲೆ ಕುಳಿತಿದ್ದವನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿದನು. ಭೂಮಿಯ ಕೊಯಿಲು ಮುಗಿಯಿತು.

17 ಮಗದೊಬ್ಬ ದೇವದೂತನು ಸ್ವರ್ಗದ ದೇವಮಂದಿರದಿಂದ ಹೊರಗೆ ಬಂದನು. ಆತನ ಕೈಯಲ್ಲೂ ಹರಿತವಾದ ಕುಡುಗೋಲು ಇತ್ತು.

18 ಬೆಂಕಿಯ ಮೇಲೆ ಅಧಿಕಾರ ಪಡೆದಿದ್ದ ಒಬ್ಬ ದೇವದೂತನು, ಆಗ ಬಲಿಪೀಠದ ಬಳಿಯಿಂದ ಬಂದನು. ಈತ ಕೈಯಲ್ಲಿ ಹರಿತವಾದ ಕುಡುಗೋಲನ್ನು ಹಿಡಿದಿದ್ದ ದೇವದೂತನನ್ನು ಉದ್ದೇಶಿಸಿ, “ನಿನ್ನ ಹರಿತವಾದ ಕುಡುಗೋಲನ್ನು ಕಳುಹಿಸು, ಭೂಮಿಯ ದ್ರಾಕ್ಷಾಫಲಗಳು ಪೂರ್ಣವಾಗಿ ಮಾಗಿವೆ; ಆ ಗೊಂಚಲುಗಳನ್ನು ಕೊಯ್ಯಬೇಕಾಗಿದೆ,” ಎಂದು ಕೂಗಿ ಹೇಳಿದನು.

19 ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ದನು; ಅವುಗಳನ್ನು ದೇವರ ರೋಷವೆಂಬ ದ್ರಾಕ್ಷಿಯ ದೊಡ್ಡ ಆಲೆಗೆ ಎಸೆದನು.

20 ಪಟ್ಟಣದ ಹೊರಗಿನ ಆಲೆಯಲ್ಲಿ ದ್ರಾಕ್ಷಿಯ ಹಣ್ಣನ್ನು ಹಿಂಡಲಾಯಿತು. ಆ ಆಲೆಯಿಂದ ರಕ್ತವು ಹರಿಯಿತು. ಅದು ಮುನ್ನೂರು ಕಿಲೊಮೀಟರಿನಷ್ಟು ದೂರವಾಗಿಯೂ ಎರಡು ಮೀಟರಿನಷ್ಟು ಆಳವಾಗಿಯೂ ಹರಿಯಿತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು