ಪ್ರಕಟನೆ 13 - ಕನ್ನಡ ಸತ್ಯವೇದವು C.L. Bible (BSI)ಆರುನೂರ ಅರವತ್ತಾರು 1 ನಾನು ಸಮುದ್ರದ ತೀರದಲ್ಲಿ ನಿಂತಿದ್ದೆ. ಆಗ ನನಗೆ ಈ ದೃಶ್ಯ ಕಾಣಿಸಿತು: ಒಂದು ಮೃಗ ಸಮುದ್ರದಿಂದ ಮೇಲೆ ಏರಿಬಂದಿತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಪ್ರತಿಯೊಂದು ಕೊಂಬಿನ ಮೇಲೂ ಒಂದೊಂದು ಮುಕುಟವಿತ್ತು, ತಲೆಗಳ ಮೇಲೆ ದೇವದೂಷಣೆ ಮಾಡುವ ಹೆಸರುಗಳು ಇದ್ದವು. 2 ನಾನು ಕಂಡ ಆ ಮೃಗವು ಚಿರತೆಯಂತಿತ್ತು. ಅದರ ಕಾಲುಗಳು ಕರಡಿಯ ಕಾಲುಗಳಂತಿದ್ದವು. ಬಾಯಿಯು, ಸಿಂಹದ ಬಾಯಂತೆ ಇತ್ತು. ಘಟಸರ್ಪವು ಆ ಮೃಗಕ್ಕೆ ತನ್ನ ಶಕ್ತಿಯನ್ನೂ ಸಿಂಹಾಸನವನ್ನೂ ಅಪಾರ ಅಧಿಕಾರವನ್ನೂ ಕೊಟ್ಟಿತು. 3 ಅದರ ತಲೆಗಳಲ್ಲಿ ಒಂದು ತಲೆ ಗಾಯಗೊಂಡು ಅದು ಸಾಯುವ ಸ್ಥಿತಿಯಲ್ಲಿತ್ತು. ಆದರೆ ಮಾರಕವಾದ ಆ ಗಾಯವು ಗುಣವಾಯಿತು. ಇದನ್ನು ಕಂಡ ಭೂಲೋಕದವರೆಲ್ಲರೂ ವಿಸ್ಮಯಗೊಂಡು ಆ ಮೃಗವನ್ನು ಹಿಂಬಾಲಿಸಿದರು. 4 ಜನರು ಆ ಮೃಗವನ್ನು ಮಾತ್ರವಲ್ಲ, ಅದಕ್ಕೆ ಅಧಿಕಾರವನ್ನು ಕೊಟ್ಟ ಘಟಸರ್ಪವನ್ನೂ ಆರಾಧಿಸಿದರು. ಮೃಗವನ್ನು ಕುರಿತು, “ಈ ಮೃಗಕ್ಕೆ ಸಮಾನರು ಯಾರು? ಇದರೊಡನೆ ಯುದ್ಧಮಾಡಬಲ್ಲವರು ಯಾರು?” ಎಂದು ಹೇಳುತ್ತಿದ್ದರು. 5 ಜಂಬದ ಹೇಳಿಕೆಗಳನ್ನೂ ದೇವದೂಷಣೆಯ ಮಾತುಗಳನ್ನೂ ಆಡುವುದಕ್ಕೆ ಆ ಮೃಗಕ್ಕೆ ಒಂದು ಬಾಯನ್ನು ಕೊಡಲಾಗಿತ್ತು. ನಲವತ್ತ ಎರಡು ತಿಂಗಳುಗಳವರೆಗೆ ತನ್ನ ಕಾರ್ಯ ಸಾಧಿಸಿಕೊಳ್ಳುವ ಅಧಿಕಾರವನ್ನೂ ಅದಕ್ಕೆ ನೀಡಲಾಗಿತ್ತು. 6 ಅದು ಬಾಯಿ ತೆರೆದು ದೇವರನ್ನು ದೂಷಿಸಿತು; ಅವರ ನಾಮವನ್ನು ಶಪಿಸಿತು. ಅವರ ಆಲಯವನ್ನು, ಅಂದರೆ ಸ್ವರ್ಗನಿವಾಸಿಗಳೆಲ್ಲರನ್ನೂ ತೆಗಳಿತು. 7 ಇದಲ್ಲದೆ, ದೇವಜನರ ವಿರುದ್ಧ ಯುದ್ಧಮಾಡಿ, ಜಯಗಳಿಸುವಂತೆ ಅದಕ್ಕೆ ಅವಕಾಶವನ್ನು ಕೊಡಲಾಯಿತು. ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಮೇಲೆ ಅದಕ್ಕೆ ಅಧಿಕಾರವನ್ನು ನೀಡಲಾಯಿತು. 8 ಭೂನಿವಾಸಿಗಳೆಲ್ಲರೂ ಅಂದರೆ, ಜಗತ್ತು ಸೃಷ್ಟಿ ಆಗುವ ಮೊದಲೇ ಯಾರಯಾರ ಹೆಸರುಗಳು ವಧೆಯಾದ ಯಜ್ಞದ ಕುರಿಮರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿಲ್ಲವೋ, ಅಂಥವರೆಲ್ಲರೂ ಆ ಮೃಗವನ್ನು ಆರಾಧಿಸುವರು. 9 ಕಿವಿಯುಳ್ಳವನು ಕೇಳಲಿ. 10 ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು; ಖಡ್ಗದಿಂದ ಹತಿಸುವವನು ಖಡ್ಗದಿಂದಲೇ ಹತನಾಗಬೇಕು. ಆದ್ದರಿಂದ ದೇವಜನರು ಸಹನೆಯಿಂದಲೂ ವಿಶ್ವಾಸದಿಂದಲೂ ನಡೆದುಕೊಳ್ಳಬೇಕು. 11 ಬಳಿಕ ನಾನು ಮತ್ತೊಂದು ಮೃಗವನ್ನು ಕಂಡೆ. ಅದು ಭೂಮಿಯಿಂದ ಮೇಲೇರಿ ಬಂದಿತು. ಅದಕ್ಕೆ ಟಗರಿಗಿರುವಂಥ ಎರಡು ಕೊಂಬುಗಳು ಇದ್ದವು. ಆದರೆ ಅದು ಘಟಸರ್ಪದಂತೆಯೇ ಮಾತನಾಡುತ್ತಿತ್ತು. 12 ಈ ಮೃಗವು, ಮೊದಲನೆಯ ಮೃಗಕ್ಕಿದ್ದ ಅಧಿಕಾರವನ್ನೆಲ್ಲಾ ಅದರ ಎದುರಿನಲ್ಲೇ ಚಲಾಯಿಸಿತು. ಮಾರಕವಾದ ಗಾಯದಿಂದ ಗುಣಹೊಂದಿದ ಆ ಮೊದಲನೆಯ ಮೃಗವನ್ನು ಭೂಲೋಕವು ಮತ್ತು ಅದರ ನಿವಾಸಿಗಳು ಆರಾಧಿಸುವಂತೆ ಮಾಡಿತು. 13 ಎರಡನೆಯ ಮೃಗವು ದೊಡ್ಡ ದೊಡ್ಡ ಪವಾಡಗಳನ್ನೆಸಗಿತು. ಜನರ ಮುಂದೆಯೇ ಬೆಂಕಿ ಆಕಾಶದಿಂದ ಹೊರಟು ಭೂಮಿಗೆ ಬೀಳುವಂತೆ ಮಾಡಿತು. 14 ಮೊದಲನೆಯ ಮೃಗದ ಎದುರಿನಲ್ಲಿ ಪವಾಡಗಳನ್ನೆಸಗುವ ಅನುಮತಿ ಇದ್ದುದರಿಂದ ಅದು ಭೂನಿವಾಸಿಗಳನ್ನು ಮರುಳುಗೊಳಿಸಿತು. ಖಡ್ಗದಿಂದ ಗಾಯಗೊಂಡಿದ್ದರೂ ಸಾಯದೆ ಬದುಕಿದ್ದ ಮೃಗದ ಗೌರವಾರ್ಥ ಒಂದು ವಿಗ್ರಹವನ್ನು ನಿರ್ಮಿಸಬೇಕೆಂದು ಭೂನಿವಾಸಿಗಳಿಗೆ ಅದು ವಿಧಿಸಿತು. 15 ಆ ಮೃಗದ ವಿಗ್ರಹಕ್ಕೆ ಜೀವಶ್ವಾಸವನ್ನೂದಿ ಮಾತಾಡುವಂತೆಯೂ ಆ ವಿಗ್ರಹವನ್ನು ಆರಾಧಿಸದವರನ್ನು ಕೊಲ್ಲುವಂತೆಯೂ ಎರಡನೆಯ ಮೃಗಕ್ಕೆ ಅನುಮತಿಯನ್ನು ಕೊಡಲಾಯಿತು. 16 ಹಿರಿಯ ಕಿರಿಯ, ಬಡವ ಬಲ್ಲಿದ, ದಾಸ ದಣಿ ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತಿನ ಹಚ್ಚೆ ಚುಚ್ಚಿಸಿಕೊಳ್ಳಬೇಕೆಂದು ಆ ಎರಡನೆಯ ಮೃಗ ಆಜ್ಞಾಪಿಸಿತು. 17 ಆ ಗುರುತಿನ ಹಚ್ಚೆಯನ್ನು ಯಾರು ಚುಚ್ಚಿಸಿಕೊಳ್ಳಲಿಲ್ಲವೋ ಅವರು ಕೊಳ್ಳುವುದಕ್ಕಾಗಲಿ, ಮಾರುವುದಕ್ಕಾಗಲಿ ಸಾಧ್ಯ ಇರಲಿಲ್ಲ. ಆ ಗುರುತಿನ ಮುದ್ರೆ ಏನೆಂದರೆ ಮೃಗದ ಹೆಸರು ಇಲ್ಲವೆ, ಆ ಹೆಸರನ್ನು ಸೂಚಿಸುವ ಸಂಖ್ಯೆ. 18 ಇದನ್ನು ಅರ್ಥಮಾಡಿಕೊಳ್ಳಲು ಜ್ಞಾನ ಬೇಕು. ಬುದ್ಧಿವಂತನು ಮೃಗದ ಸಂಖ್ಯೆಯನ್ನು ಎಣಿಸಲಿ. ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆ. ಆ ಸಂಖ್ಯೆಯು 666. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India