ಪ್ರಕಟನೆ 12 - ಕನ್ನಡ ಸತ್ಯವೇದವು C.L. Bible (BSI)ಸರ್ಪಕ್ಕೆ ಸೋಲು 1 ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು. 2 ಆಕೆ ತುಂಬು ಗರ್ಭಿಣಿ, ಪ್ರಸವ ವೇದನೆಯಿಂದ ನರಳುತ್ತಿದ್ದಳು. 3 ಆಕಾಶದಲ್ಲಿ ಮತ್ತೊಂದು ಚಿಹ್ನೆ ಕಾಣಿಸಿಕೊಂಡಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳಿದ್ದವು, ಹತ್ತು ಕೊಂಬುಗಳಿದ್ದವು; ಅದರ ಏಳು ತಲೆಗಳ ಮೇಲೆ ಏಳು ಮುಕುಟಗಳಿದ್ದವು. 4 ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ ಅದನ್ನು ನುಂಗಿಬಿಡಬೇಕೆಂದು ಘಟಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲಿಯೇ ಕಾಯ್ದುಕೊಂಡಿತ್ತು. 5 ಸರ್ವಜನಾಂಗಗಳನ್ನು ಕಬ್ಬಿಣದ ದಂಡದಿಂದ ಆಳಬಲ್ಲಂಥ ಒಂದು ಗಂಡುಮಗುವಿಗೆ ಆಕೆ ಜನ್ಮವಿತ್ತಳು. ಆದರೆ, ಆ ಮಗುವನ್ನು ಸಿಂಹಾಸನದಲ್ಲಿದ್ದ ದೇವರ ಬಳಿಗೆ ಕೊಂಡೊಯ್ಯಲಾಯಿತು. 6 ಆ ಮಹಿಳೆ ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು. 7 ಸ್ವರ್ಗದಲ್ಲಿ ಒಂದು ಯುದ್ಧ ಪ್ರಾರಂಭವಾಯಿತು. ಮಿಕಾಯೇಲನು ತನ್ನ ಸಹದೂತರ ಸಹಿತ ಘಟಸರ್ಪದ ವಿರುದ್ಧ ಯುದ್ಧಮಾಡಿದನು. ಘಟಸರ್ಪವೂ ತನ್ನ ದೂತರ ಸಮೇತ ಯುದ್ಧದಲ್ಲಿ ಕಾದಾಡಿತು. 8 ಆದರೆ ಜಯಗಳಿಸುವಷ್ಟು ಸಾಮರ್ಥ್ಯ ಘಟಸರ್ಪಕ್ಕಿರದೆ ಅದು ಸೋಲನ್ನಪ್ಪಿತು. ಹೀಗೆ ಸ್ವರ್ಗದಲ್ಲಿ ಅದಕ್ಕೂ ಅದರ ದೂತರಿಗೂ ಸ್ಥಳವಿಲ್ಲದಂತಾಯಿತು. 9 ಸಮಸ್ತ ಜಗತ್ತನ್ನೂ ವಂಚಿಸುತ್ತಿದ್ದ ಆ ಮಹಾಘಟಸರ್ಪವನ್ನು ಭೂಮಿಗೆ ತಳ್ಳಲಾಯಿತು. ಈ ಪುರಾತನ ಸರ್ಪಕ್ಕೆ ‘ಪಿಶಾಚಿ’ ಎಂತಲೂ ‘ಸೈತಾನ’ ಎಂತಲೂ ಹೆಸರು. ಅದರ ದೂತರನ್ನು ಅದರೊಡನೆ ತಳ್ಳಲಾಯಿತು. 10 ಸ್ವರ್ಗದಿಂದ ಬಂದ ಮಹಾಶಬ್ದವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು : “ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾಧಿಪತ್ಯ ಸ್ಥಾಪಿತವಾಗಿದೆ. ನಮ್ಮ ಸೋದರರನು ದೂರಿದವನನ್ನು ದಬ್ಬಲಾಗಿದೆ. ಹಗಲಿರುಳು ನಮ್ಮ ದೇವರೆದುರು ದೂರಿತ್ತಿದ್ದವನನ್ನು ತಳ್ಳಲಾಗಿದೆ. 11 ಜಯಿಸಿದರು ಸೋದರರು ಆ ನಿಂದಕನನ್ನು ಯಜ್ಞದ ಕುರಿಮರಿಯ ರಕ್ತದಿಂದ ಸತ್ಯಕ್ಕೆ ಸಾಕ್ಷಿಯನ್ನಿತ್ತುದರಿಂದ ಜೀವದಾಶೆಯನು ತೊರೆದುದರಿಂದ ಮರಣದ ಭಯವನು ಬಿಸುಟುದರಿಂದ. 12 ಎಂದೇ ಸ್ವರ್ಗಲೋಕ, ಸ್ವರ್ಗನಿವಾಸಿಗಳೆಲ್ಲ ನಲಿಯಲಿ ! ಕ್ಷಿತಿಸಾಗರಗಳಿಗೆ ಒದಗಿದೆ ದುರ್ಗತಿ. ಬಂದಿಹನು ಪಿಶಾಚಿ ಕಡುರೋಷದಿಂದ ತನಗಿರುವ ಕಾಲ ತುಸುವೆಂಬ ತವಕದಿಂದ.” 13 ಘಟಸರ್ಪವು ತನ್ನನ್ನು ಭೂಮಿಗೆ ತಳ್ಳಲಾಗಿರುವುದನ್ನು ಅರಿತು, ಗಂಡುಮಗುವಿಗೆ ಜನ್ಮವಿತ್ತ ಆ ಮಹಿಳೆಯನ್ನು ಅಟ್ಟಿಸಿಕೊಂಡು ಓಡಿತು. 14 ಆಗ ಆ ಮಹಿಳೆ ಅರಣ್ಯದಲ್ಲಿರುವ ತನ್ನ ಸ್ಥಳಕ್ಕೆ ಹಾರಿಹೋಗುವಂತೆ ದೊಡ್ಡ ಗರುಡಪಕ್ಷಿಗಿರುವಂಥ ಎರಡು ರೆಕ್ಕೆಗಳನ್ನು ಆಕೆಗೆ ಕೊಡಲಾಯಿತು. ಅಲ್ಲಿ ಘಟಸರ್ಪದ ಕಣ್ಣಿಗೆ ಬೀಳದೆ ಮೂರುವರೆ ವರ್ಷಗಳ ಕಾಲ ಪೋಷಣೆ ಹೊಂದುವಂತಾಯಿತು. 15 ಆ ಘಟಸರ್ಪ ತನ್ನ ಬಾಯಿಂದ ನೀರನ್ನು ನದಿಯಂತೆ ಸುರಿಸುತ್ತಾ ಅದರಲ್ಲಿ ಆ ಮಹಿಳೆಯನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಲು ಯತ್ನಿಸಿತು. 16 ಆದರೆ ಭೂಮಿ ಆಕೆಯ ನೆರವಿಗೆ ಬಂದಿತು. ಅದು ತನ್ನ ಬಾಯನ್ನು ತೆರೆದು ಘಟಸರ್ಪದ ಬಾಯಿಂದ ಹೊರಬಂದ ನದಿಯನ್ನು ಕುಡಿದುಬಿಟ್ಟಿತು. 17 ಇದರಿಂದಾಗಿ ಘಟಸರ್ಪಕ್ಕೆ ಆ ಮಹಿಳೆಯ ಮೇಲೆ ತೀವ್ರತರ ರೋಷವುಂಟಾಯಿತು. ಆಕೆಯ ಇನ್ನುಳಿದ ಸಂತತಿಯವರ ಮೇಲೆ, ಅಂದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವವರ ಮೇಲೆ ಹಾಗೂ ಯೇಸುಸ್ವಾಮಿಯ ಪರವಾಗಿ ಸಾಕ್ಷಿನೀಡುವವರ ಮೇಲೆ, ಯುದ್ಧಮಾಡಲು ಹೊರಟುಹೋಯಿತು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India