Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 11 - ಕನ್ನಡ ಸತ್ಯವೇದವು C.L. Bible (BSI)


ಸಾಕ್ಷಿಗಳ ಸಾವು - ಭೂನಿವಾಸಿಗಳ ನೋವು

1 ಇದಾದ ನಂತರ ಅಳತೆಗೋಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು : “ನೀನೆದ್ದು ದೇವರ ಆಲಯವನ್ನೂ ಬಲಿಪೀಠವನ್ನೂ ಅಳತೆಮಾಡು. ಆಲಯದಲ್ಲಿ ಆರಾಧಿಸುತ್ತಿರುವವರನ್ನು ಲೆಕ್ಕಮಾಡು.

2 ಆಲಯದ ಹೊರ ಅಂಗಳವನ್ನು ಅಳತೆಮಾಡಬೇಡ; ಅದನ್ನು ಬಿಟ್ಟುಬಿಡು. ಅದನ್ನು ಜನರಿಗೆ ಬಿಟ್ಟುಕೊಡಲಾಗಿದೆ. ಅವರು ಪವಿತ್ರನಗರವನ್ನು ನಲವತ್ತೆರಡು ತಿಂಗಳವರೆಗೆ ತುಳಿದಾಡುವರು.

3 ನಾನು ನನ್ನ ಇಬ್ಬರು ಸಾಕ್ಷಿಗಳನ್ನು ಕಳುಹಿಸುವೆನು. ಅವರು ಗೋಣಿತಟ್ಟನ್ನು ಉಟ್ಟುಕೊಂಡು ಒಂದು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪ್ರವಾದಿಸುವರು.”

4 ಲೋಕಾಧಿಪತಿಯಾದ ದೇವರ ಸಾನ್ನಿಧ್ಯದಲ್ಲಿರುವ ಎರಡು ಓಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳು ಇವರೇ.

5 ಯಾವನಾದರು ಇವರಿಗೆ ಕೇಡು ಬಗೆದರೆ ಇವರ ಬಾಯಿಯಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುತ್ತದೆ. ಇವರಿಗೆ ಕೇಡು ಬಗೆಯಬೇಕೆಂದಿರುವವನು ಹೀಗೆಯೇ ಹತನಾಗುತ್ತಾನೆ.

6 ತಾವು ಪ್ರವಾದನೆ ಮಾಡುವ ದಿನಗಳಲ್ಲಿ ಮಳೆ ಬಾರದಂತೆ ಆಕಾಶವನ್ನು ಮುಚ್ಚಿಬಿಡುವ ಸಾಮರ್ಥ್ಯ ಇವರಿಗಿದೆ. ಇದಲ್ಲದೆ, ಇವರಿಗೆ ಇಷ್ಟಬಂದಾಗಲೆಲ್ಲಾ ನೀರನ್ನು ರಕ್ತವನ್ನಾಗಿ ಪರಿವರ್ತಿಸುವ ಹಾಗು ಸಕಲ ವಿಧವಾದ ಉಪದ್ರವಗಳಿಂದ ಜಗತ್ತನ್ನು ಪೀಡಿಸುವ ಅಧಿಕಾರ ಇವರಿಗೆ ಇರುತ್ತದೆ.

7 ಇವರ ಸಾಕ್ಷ್ಯನೀಡಿಕೆ ಮುಗಿದ ನಂತರ ಪಾತಾಳಕೂಪದಿಂದ ಮೃಗವೊಂದು ಮೇಲೇರಿಬರುತ್ತದೆ; ಅದು ಇವರೊಡನೆ ಯುದ್ಧಮಾಡಿ, ಜಯಗಳಿಸಿ ಇವರನ್ನು ಕೊಂದುಹಾಕುತ್ತದೆ.

8 ಈ ಸಾಕ್ಷಿಗಳ ಶವಗಳು ಆ ಮಹಾನಗರದ ಬೀದಿಪಾಲಾಗುವುವು. ಆ ನಗರವನ್ನು ಸೊದೋಮ್ ಇಲ್ಲವೆ ಈಜಿಪ್ಟ್ ಎಂದು ಸೂಚ್ಯವಾಗಿ ಕರೆಯಲಾಗಿದೆ. ಈ ಸಾಕ್ಷಿಗಳ ಪ್ರಭುವನ್ನು ಸಹ ಇಲ್ಲಿಯೇ ಶಿಲುಬೆಗೇರಿಸಲಾಯಿತು.

9 ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಜನರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳ ತನಕ ದಿಟ್ಟಿಸಿ ನೋಡುವರು; ಅವುಗಳನ್ನು ಸಮಾಧಿಮಾಡಲು ಬಿಡಲೊಲ್ಲರು.

10 ಭೂನಿವಾಸಿಗಳನ್ನು ಪೀಡಿಸಿದ್ದ ಆ ಇಬ್ಬರು ಪ್ರವಾದಿಗಳು ಸತ್ತದ್ದಕ್ಕಾಗಿ ಲೋಕದ ಜನರು ಸಂತೋಷದಿಂದ ಸಂಭ್ರಮಿಸುವರು. ಒಬ್ಬರಿಗೊಬ್ಬರು ಬಹುಮಾನಗಳನ್ನು ಹಂಚಿಕೊಳ್ಳುವರು.

11 ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವದಾಯಕ ಉಸಿರು ಬಂದು ಆ ಶವಗಳನ್ನು ಹೊಕ್ಕಾಗ ಅವರು ಎದ್ದುನಿಂತರು. ಇದನ್ನು ಕಂಡವರೆಲ್ಲರೂ ಭಯದಿಂದ ನಡುಗಿದರು.

12 ಅನಂತರ ಆ ಪ್ರವಾದಿಗಳಿಗೆ, “ಮೇಲೇರಿ ಬನ್ನಿ,” ಎಂದು ಸ್ವರ್ಗದಿಂದ ಒಂದು ಮಹಾವಾಣಿ ತಿಳಿಸಿತು. ಶತ್ರುಗಳು ಅವರನ್ನು ನೋಡುತ್ತಿದ್ದಂತೆಯೇ ಅವರು ಮೇಘಾರೂಢರಾಗಿ ಸ್ವರ್ಗಕ್ಕೇರಿದರು.

13 ಅದೇ ಗಳಿಗೆಯಲ್ಲಿ ಒಂದು ಭೀಕರ ಭೂಕಂಪವಾಯಿತು. ನಗರದ ಹತ್ತನೆಯ ಒಂದು ಭಾಗ ನಾಶವಾಯಿತು. ಏಳು ಸಾವಿರ ಜನರು ಆ ಭೂಕಂಪದಲ್ಲಿ ಹತರಾದರು. ಉಳಿದವರು ಭಯಭೀತರಾಗಿ ಸ್ವರ್ಗದಲ್ಲಿರುವ ದೇವರ ಮಹಿಮೆಯನ್ನು ಸ್ತುತಿಸಿದರು.

14 ಹೀಗೆ ಎರಡನೆಯ ವಿಪತ್ತು ಮುಗಿಯಿತು. ಇಗೋ ಮೂರನೆಯ ವಿಪತ್ತು ಕೂಡಲೇ ಬಂದೆರಗುವುದು.


ವಿಶ್ವದ ಆಡಳಿತ ಸರ್ವೇಶನದು

15 ಏಳನೆಯ ದೂತನು ತನ್ನ ತುತೂರಿಯನ್ನು ಊದಿದನು. ಆಗ ಸ್ವರ್ಗದಲ್ಲಿ ಮಹಾಶಬ್ದಗಳು ಉಂಟಾಗಿ ಹೀಗೆ ಮೊಳಗಿದವು : “ವಿಶ್ವವನ್ನಾಳುವ ಅಧಿಕಾರವು ನಮ್ಮ ಸರ್ವೇಶನದು ಹಾಗು ಅವರಿಂದ ಅಭಿಷಿಕ್ತನಾದ ಲೋಕೋದ್ಧಾರಕನದು. ಇನ್ನಾತನು ಆಳುವನು ಎಂದೆಂದಿಗೂ".

16 ತರುವಾಯ ದೇವರ ಸಾನ್ನಿಧ್ಯದಲ್ಲಿ ತಮ್ಮ ತಮ್ಮ ಪೀಠಗಳಲ್ಲಿ ಕುಳಿತಿದ್ದ ಇಪ್ಪತ್ನಾಲ್ಕು ಸಭಾಪ್ರಮುಖರು ದೇವರಿಗೆ ಸಾಷ್ಟಾಂಗವೆರಗಿ ಆರಾಧಿಸಿದರು. ಅಲ್ಲದೆ,

17 “ಪ್ರಭುವೇ, ದೇವನೇ, ಸರ್ವಶಕ್ತನೇ, ಇರುವಾತನೂ ಇದ್ದಾತನೂ ನೀನೇ ಘನಾಧಿಕಾರವನ್ನು ತೋರಿ ನೀ ಆಳುತ್ತಿರುವೆ ಧನ್ಯವಾದಗಳನ್ನು ನಿನಗೆ ಸಲ್ಲಿಸುವೆ.

18 ಕೆರಳಿದವು ವಿಶ್ವ ರಾಷ್ಟ್ರಗಳು ಎರಗಿತು ನಿನ್ನ ಪ್ರಕೋಪವು ಸಮೀಪಿಸಿತು ಮೃತರ ನ್ಯಾಯತೀರ್ಪಿನ ದಿನವು ಬಂದಿದೆ ಸಮಯ ಸನ್ಮಾನಿಸಲು ನಿನ್ನ ದಾಸರನು, ಪ್ರವಾದಿಗಳನು, ದೇವಪ್ರಜೆಗಳನು ನಿನ್ನಲ್ಲಿ ಭಯಭಕುತಿಯುಳ್ಳ ಹಿರಿಯ ಕಿರಿಯರನು. ಇದಿಗೋ ಬಂದಿದೆ ಗಳಿಗೆಯು ಲೋಕನಾಶಕರನ್ನು ವಿನಾಶಗೊಳಿಸಲು", ಎಂದು ಹಾಡಿದರು.

19 ಆಗ ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿರುವುದು ಕಾಣಿಸಿತು; ಇದಲ್ಲದೆ ಮಿಂಚುಗಳು, ಗುಡುಗು, ಗರ್ಜನೆಗಳು ಉಂಟಾದವು. ಭೂಕಂಪವೂ ಆಯಿತು. ಜೋರಾದ ಆಲಿಕಲ್ಲಿನ ಮಳೆ ಸುರಿಯಿತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು