ಪ್ರಕಟನೆ 10 - ಕನ್ನಡ ಸತ್ಯವೇದವು C.L. Bible (BSI)ಸುರುಳಿಯ ಸಿಹಿಕಹಿ 1 ನಾನು ಮತ್ತೊಂದು ದೃಶ್ಯವನ್ನು ಕಂಡೆ. ಒಬ್ಬ ಬಲಿಷ್ಠ ದೇವದೂತನು ಸ್ವರ್ಗದಿಂದ ಇಳಿದುಬಂದನು. ಅವನು ಮೇಘಾಂಬರನಾಗಿದ್ದನು. ಅವನ ತಲೆಯ ಮೇಲೆ ಮುಗಿಲು ಬಿಲ್ಲೊಂದು ಇತ್ತು. ಮುಖವು ಸೂರ್ಯನಂತೆ ಇತ್ತು. ಕಾಲುಗಳು ಅಗ್ನಿಸ್ತಂಭಗಳಂತಿದ್ದವು. 2 ಅವನ ಕೈಯಲ್ಲಿ ತೆರೆದಿದ್ದ ಚಿಕ್ಕ ಸುರುಳಿ ಒಂದಿತ್ತು. ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು ನಿಂತಿದ್ದನು. 3 ಅವನು ಗಟ್ಟಿಯಾದ ಸ್ವರದಿಂದ ಕೂಗಿದನು. ಅದು ಸಿಂಹದ ಗರ್ಜನೆಯಂತಿತ್ತು. ಅವನು ಕೂಗಿದಾಗ ಏಳು ಗುಡುಗುಗಳು ಒಂದೊಂದಾಗಿ ಮಾರ್ದನಿಸಿದವು. 4 ಏಳು ಗುಡುಗುಗಳು ನುಡಿದುದನ್ನು ಕೂಡಲೇ ನಾನು ಬರೆಯಬೇಕೆಂದಿದ್ದೆ. ಆಗ ಸ್ವರ್ಗದಿಂದ ಬಂದ ಒಂದು ಧ್ವನಿ, “ಆ ಏಳು ಗುಡುಗುಗಳು ನುಡಿದುದನ್ನು ರಹಸ್ಯವಾಗಿ ಇಡು. ಅವುಗಳನ್ನು ಬರೆಯಬೇಡ,” ಎಂದು ನನಗೆ ಆಜ್ಞಾಪಿಸಿತು. 5 ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ಕಾಲುಗಳನ್ನಿಟ್ಟು ನಿಂತಿದ್ದ ದೇವದೂತನು ತನ್ನ ಬಲಗೈಯನ್ನು ಸ್ವರ್ಗದ ಕಡೆಗೆ ಎತ್ತಿದನು. 6 ಅನಂತರ ಸ್ವರ್ಗ, ಭೂಮಿ, ಸಮುದ್ರ ಇವುಗಳನ್ನೂ ಇವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ಹಾಗು ಯುಗಯುಗಾಂತರಕ್ಕೂ ಜೀವಿಸುವ ದೇವರ ಹೆಸರಿನಲ್ಲಿ ಶಪಥಮಾಡಿ ಹೀಗೆ ಹೇಳಿದನು : “ಇನ್ನು ನಿಧಾನಿಸುವಂತಿಲ್ಲ; 7 ಏಳನೆಯ ದೇವದೂತನು ತುತೂರಿಯನ್ನು ಊದುವನು. ಆಗ ದೇವರು ಇದುವರೆಗೆ ನಿಗೂಢವಾಗಿಟ್ಟಿದ್ದ ತಮ್ಮ ಯೋಜನೆಯನ್ನು ತಮ್ಮ ದಾಸರಾದ ಪ್ರವಾದಿಗಳಿಗೆ ಮುಂತಿಳಿಸಿದ್ದ ಪ್ರಕಾರ ಈಡೇರಿಸುವರು.” 8 ಸ್ವರ್ಗದಿಂದ ನನಗೆ ಕೇಳಿಸಿದ ಧ್ವನಿ ಮತ್ತೊಮ್ಮೆ ನನ್ನೊಡನೆ ಮಾತನಾಡಿ, “ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ಕಾಲಿಟ್ಟು ನಿಂತಿರುವ ದೇವದೂತನ ಬಳಿಗೆ ಹೋಗು. ಆತನ ಕೈಯಲ್ಲಿರುವ ತೆರೆದ ಸುರುಳಿಯನ್ನು ತೆಗೆದುಕೋ,” ಎಂದು ತಿಳಿಸಿತು. 9 ನಾನು ಆ ದೇವದೂತನ ಬಳಿಗೆ ಹೋಗಿ, “ಆ ಚಿಕ್ಕ ಸುರುಳಿಯನ್ನು ನನಗೆ ಕೊಡು,” ಎಂದು ಕೇಳಿದೆ. ಅವನು “ತೆಗೆದುಕೋ, ಇದನ್ನು ತಿನ್ನು. ಇದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿಯೂ ನಿನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿಯೂ ಇರುತ್ತದೆ,” ಎಂದನು. 10 ಅಂತೆಯೇ, ನಾನು ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ತೆಗೆದುಕೊಂಡು ತಿಂದೆ. ಅದು ನನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿತ್ತು. ಆದರೆ ಅದನ್ನು ತಿಂದಮೇಲೆ ನನ್ನ ಹೊಟ್ಟೆಯೆಲ್ಲಾ ಕಹಿಯಾಯಿತು. 11 ಅನಂತರ, ದೇವದೂತನು ನನಗೆ, “ನೀನು ಇನ್ನೂ ಅನೇಕ ಜನರ, ಜನಾಂಗಗಳ, ಭಾಷೆಗಳನ್ನಾಡುವವರ ಹಾಗು ಅರಸರಾದವರ ವಿರುದ್ಧ ಪ್ರವಾದನೆಯನ್ನು ಸಾರಬೇಕು,” ಎಂದು ಆಜ್ಞಾಪಿಸಿದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India