ಪರಮಗೀತೆ 7 - ಕನ್ನಡ ಸತ್ಯವೇದವು C.L. Bible (BSI)1 ಅರಸಕುವರಿಯೇ, ಕೆರಗಳನ್ನು ಮೆಟ್ಟಿ ನಿಂತಿರುವ ನಿನ್ನ ಪಾದಗಳೆಷ್ಟು ಚೆಂದ ! ದುಂಡಾದ ನಿನ್ನ ತೊಡೆಗಳು ಕುಶಲ ಶಿಲ್ಪಿಮಾಡಿದ ಸ್ತಂಭ ! 2 ನಿನ್ನ ಹೊಕ್ಕಳು ಮಿಶ್ರಪಾನಕ ತುಂಬಿದ ಗುಂಡುಬಟ್ಟಲು ನಿನ್ನ ಹೊಟ್ಟೆ ನೆಲದಾವರೆಗಳಿಂದ ಅಲಂಕೃತವಾದ ಗೋದಿರಾಶಿಯ ಬಟ್ಟಲು 3 ನಿನ್ನ ಸ್ತನಗಳೆರಡೂ ಹುಲ್ಲೆಯ ಅವಳಿಮರಿಗಳು. 4 ದಂತದ ಗೋಪುರ ನಿನ್ನ ಕೊರಳು ನಿನ್ನ ಕಣ್ಣುಗಳು ಹೋಷ್ಬೋನಿನಲ್ಲಿನ ಬತ್‍ರಬ್ಬೀಮ್ ಬಾಗಿಲ ಬಳಿ ಇರುವ ಕೊಳಗಳು ನಿನ್ನ ಮೂಗು ದಮಸ್ಕದ ಕಡೆ ಇರುವ ಲೆಬನೋನಿನ ಬುರುಜು. 5 ನಿನ್ನ ಶಿರ ಎತ್ತರವಾದ ಕಾರ್ಮೆಲ್ ಶಿಖರದಂತೆ ಗಂಭೀರ ನಿನ್ನ ತಲೆಗೂದಲಿಗಿದೆ ಥಳಥಳಿಸುವ ನುಣುಪು ಹೊಳಪಿನ ಬಣ್ಣ ತನ್ನ ತೆಕ್ಕೆಯಲ್ಲಿ ಅರಸನನೇ ಸೆರೆಹಿಡಿಯುವಂಥ ಆಕರ್ಷಣ. 6 ಪ್ರೇಮವೇ, ಸಕಲ ಸೌಭಾಗ್ಯಗಳಿಂದ ನೀನೆಷ್ಟು ಸುಂದರ? ನೀನೆಷ್ಟು ಮನೋಹರ ! 7 ನೀಳವಾದ ನಿನ್ನ ಆಕಾರವು ಖರ್ಜೂರದ ಮರವು ನಿನ್ನ ಸ್ತನಗಳು ಅದರ ಗೊಂಚಲುಗಳು. 8 ಆ ಮರವನು ಹತ್ತಿ ಹಿಡಿಯುವೆ ರೆಂಬೆಗಳನು ನಿನ್ನ ಸ್ತನಗಳು ನನಗೆ ದ್ರಾಕ್ಷಿಯ ಗೊಂಚಲುಗಳು ಸೇಬುಹಣ್ಣಿನ ಪರಿಮಳದಂತೆ ನಿನ್ನ ಉಸಿರು ! ನಲ್ಲೆ : 9 ನಿನ್ನ ಚುಂಬನ ಶ್ರೇಷ್ಠವಾದ ಮಧುಪಾನ ನನ್ನ ಇನಿಯನ ಬಾಯಲ್ಲಿಳಿಯಲಿ ಆ ರಸಪಾನ ನಿದ್ರಿಸುವವನಾ ತುಟಿಗಳಲಿ ಹರಿಯಲಿ ಆ ಪಾನ ! 10 ನಾನು ನನ್ನ ನಲ್ಲನ ನಲ್ಲೆ ಆತನ ಆಸೆ ನನ್ನ ಮೇಲೆ ! 11 ಎನ್ನಿನಿಯನೇ, ಬಾ ಹೋಗೋಣ ವನಕೆ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವುದಕೆ. 12 ಬೆಳಗ್ಗೆ ಹೊರಟು ತೋಟಗಳಿಗೆ ಹೋಗೋಣ ಬಾ ದ್ರಾಕ್ಷಿ ಚಿಗುರಿದೆಯೋ, ಅದರ ಹೂ ಅರಳಿದೆಯೋ ದಾಳಿಂಬೆ ಹೂ ಬಿಟ್ಟಿದೆಯೋ ನೋಡೋಣ ಬಾ ಅಲ್ಲೆ ನಿನಗೆ ನನ್ನ ಪ್ರೀತಿಯನರ್ಪಿಸುವೆ ಬಾ. 13 ಕಾಮಜನಕ ವೃಕ್ಷಗಳು ಹೀರುತ್ತಿವೆ ಪರಿಮಳ ಒಳ್ಳೊಳ್ಳೆಯ ಬಗೆಬಗೆಯ, ಹಳೆಹೊಸ ಹಣ್ಣುಗಳ ನಾನಿಟ್ಟುಕೊಂಡಿರುವೆ, ಪ್ರಿಯನೇ, ಬಾಗಿಲ ಹತ್ತಿರ ನಿನಗೋಸ್ಕರ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India