ಪರಮಗೀತೆ 6 - ಕನ್ನಡ ಸತ್ಯವೇದವು C.L. Bible (BSI)1 ಮಹಿಳಾಮಣಿಯೇ, ನಿನ್ನಿನಿಯನು ಹೋದುದೆಲ್ಲಿಗೆ? ಅವನನ್ನು ಹುಡುಕೋಣವೇ ನಾವು ನಿನ್ನೊಂದಿಗೆ? ಹೇಳು, ನಿನ್ನಿನಿಯನು ಹೋದುದೆಲ್ಲಿಗೆ? ನಲ್ಲೆ : 2 ನನ್ನ ಕಾಂತನು ತೆರಳಿಹನು ಸುಗಂಧ ಸಸ್ಯಗಳಿರುವ ತೋಟಕೆ ಉದ್ಯಾನಗಳಲ್ಲಿ ಮಂದೆಯನು ಮೇಯಿಸುವುದಕೆ ಅಲ್ಲಿನ ನೆಲದಾವರೆಗಳನ್ನು ಕೊಯ್ದು ತರುವುದಕೆ. 3 ಎನ್ನಿನಿಯನು ನನ್ನವನೇ, ನಾನು ಅವನವಳೇ ತನ್ನ ಮಂದೆಯ ಮೇಯಿಸುತ್ತಿಹನು ನೆಲದಾವರೆಗಳ ನಡುವೆ. ನಲ್ಲ : ಐದನೇ ಗೀತೆ 4 ನನ್ನ ಪ್ರಿಯಳೇ, ನೀನು ಸುಂದರಿ, ತಿರ್ಚನಗರದಂತೆ ಮನೋಹರಿ, ಜೆರುಸಲೇಮಿನಂತೆ ಭಯಂಕರಿ, ಪತಾಕಿನಿಯಂತೆ. 5 ತಿರುಗಿಸು ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ನನ್ನ ಸೆರೆಹಿಡಿದು ಬಿಡುವವು ತಮ್ಮ ನೋಟದಿಂದ. ನಿನ್ನ ಕೇಶರಾಶಿಯ ನರ್ತನ ಗಿಲ್ಯಾದ್ ಗುಡ್ಡದಿಂದ ಇಳಿಯುವ ಆಡುಮಂದೆಗೆ ಸಮಾನ. 6 ನಿನ್ನ ಹಲ್ಲುಗಳ ಹೊಳಪು ತೊಳೆದ ಕುರಿಮಂದೆಯ ಬಿಳುಪು ಮೇಲೇರುತ್ತವೆ ಅವು ಜೋಡಿಜೋಡಿಯಾಗಿ ಒಂಟಿಯಾದುದೊಂದು ಇಲ್ಲ ಅವುಗಳಲಿ. 7 ಮುಸುಕಿನಲಿ ನಿನ್ನ ಕೆನ್ನೆ ಮಾಗಿ ಒಡೆದಿರುವ ದಾಳಿಂಬೆ. 8 ಅರಸನಿಗೆ ರಾಣಿಯರು ಅರವತ್ತು ಮಂದಿ ಉಪಪತ್ನಿಯರು ಎಂಬತ್ತು ಮಂದಿ ಯುವತಿಯರು ಲೆಕ್ಕವಿಲ್ಲದಷ್ಟು ಮಂದಿ. 9 ನನ್ನ ಪಾರಿವಾಳ, ನನ್ನ ನಿರ್ಮಲೆ ಇವಳೇ ಏಕಮಾತ್ರ ಪುತ್ರಿ ತಾಯಿಗೆ ಮುದ್ದುಮಗಳು ಹೆತ್ತವಳಿಗೆ. ಈಕೆ ಧನ್ಯಳೆಂದು ಹೊಗಳಿದರು ಯುವತಿಯರು ನೋಡಿ ರಾಣಿಯರು, ಉಪಪತ್ನಿಯರು ಕೊಂಡಾಡಿದರು ಈ ಪರಿ : 10 “ಉದಯಿಸುತ್ತಿರುವಳಿವಳು ಅರುಣೋದಯದಂತೆ ಸುಂದರಿಯಾಗಿಹಳು ಚಂದ್ರನಂತೆ ಶುಭ್ರಳಾಗಿಹಳು ಸೂರ್ಯನಂತೆ ಭಯಂಕರಳು ಪತಾಕಿನಿಯಂತೆ ಎಂಥವಳಿರಬಹುದು ಇವಳು ಪೇಳೈ? 11 ದ್ರಾಕ್ಷಾಬಳ್ಳಿ ಚಿಗುರಿದೆಯೋ ದಾಳಿಂಬೆಗಿಡ ಹೂಬಿಟ್ಟಿದೆಯೋ ಎಂದು ನೋಡಲಿಕೆ ಕಣಿವೆಯಲ್ಲಿರುವ ಕುಸುಮಗಳನು ಕಾಣಲಿಕೆ ನಾ ನಡೆದೆ ಬಾದಾಮಿಯ ತೋಟಕೆ. 12 ಇದ್ದಕ್ಕಿದ್ದ ಹಾಗೆಯೇ ನಾಯಕನಾಗಿ ನನ್ನ ನಾಡಿಗೆ ನಾ ಕುಳಿತಿದ್ದೆ ರಥದ ಮೇಲೆ. 13 ಶೂಲಮ್ ಊರಿನ ನಾರಿಯೇ ತಿರುಗು ಇತ್ತ, ತಿರುಗು ಅತ್ತ ನಾವು ನಿನ್ನನ್ನು ನೋಡುವಂತೆ ತಿರುಗು ಇತ್ತ, ತಿರುಗು ಅತ್ತ ! ನಲ್ಲೆ : ಎರಡು ಸಾಲಿನ ನರ್ತಕಿಯರ ನಡುವೆ ಕುಣಿಯುವವಳನ್ನು ನೋಡುವಂತೆ ಶೂಲಮ್ ಊರಿನವಳಾದ ನನ್ನನು ನೀನು ನೋಡುವುದೇಕೆ? |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India