ಪರಮಗೀತೆ 4 - ಕನ್ನಡ ಸತ್ಯವೇದವು C.L. Bible (BSI)1 ನಲ್ಲ : ಆಹಾ! ನನ್ನ ಪ್ರಿಯಳೇ, ನೀನೆಷ್ಟು ರೂಪವತಿ! ಆಹಾ! ಎಷ್ಟು ಸುಂದರಿ! ಮುಸುಕಿನೊಳಗಿನ ಕಣ್ಣುಗಳು ಪಾರಿವಾಳಗಳು ನಿನ್ನ ತಲೆಗೂದಲಿನ ನರ್ತನವು ಗಿಲ್ಯಾದ್ ಗುಡ್ಡದಿಂದ ಇಳಿದುಬರುವ ಆಡುಮಂದೆಗೆ ಸಮಾನವು. 2 ನಿನ್ನ ಹಲ್ಲುಗಳ ಹೊಳಪು ಉಣ್ಣೆಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಯ ಬಿಳುಪು. ಮೇಲೇರುತ್ತಿವೆ ಅವು ಜೋಡಿ ಜೋಡಿಯಾಗಿ ಒಂಟಿಯಾದುದೊಂದು ಇಲ್ಲ ಅವುಗಳಲಿ. 3 ನಿನ್ನ ತುಟಿ ನಯವಾದ ಕೆಂಪುಪಟ್ಟಿ ಬಿಚ್ಚಿದಾಗ ನೀನೆಷ್ಟು ಸುರೂಪಿಣಿ! ಮಸುಕಿನಲ್ಲಿನ ನಿನ್ನ ಕೆನ್ನೆ, ಹೋಳಾಗಿಸಿದ ದಾಳಿಂಬೆ! 4 ನಿನ್ನ ಕೊರಳು ದಾವೀದನ ನುಣುಪಾದ ಗೋಪುರ ನಿನ್ನ ಕತ್ತಿನ ಹಾರ ಸಾವಿರ ಶೂರರ ಗುರಾಣಿಗಳ ಸರ. 5 ಹುಲ್ಲೆಯ ಅವಳಿಮರಿಗಳು ನಿನ್ನ ಸ್ತನಗಳೆರಡು ನೆಲದಾವರೆಯ ನಡುವೆ ಮೇಯುತ್ತಿರುವವು! 6 ಕತ್ತಲು ಕಳೆಯುವ ಮುನ್ನ ಹೊತ್ತು ಮೂಡುವ ಮುನ್ನ ಪರಿಮಳದ ಬೆಟ್ಟಕೆ ತೆರಳುವೆ ಧೂಪದ ಗುಡ್ಡದೊಳು ಅಡ್ಡಾಡುವೆ. 7 ನನ್ನ ಪ್ರಿಯಳೇ, ಸರ್ವಾಂಗಸುಂದರಿಯೇ, ನಿನ್ನೊಳು ಯಾವ ಕಳಂಕವು ಇಲ್ಲದಿರುವೆ. 8 ಬಾ, ವಧುವೆ, ಲೆಬನೋನಿನಿಂದ ಬಾ, ನನ್ನೊಡನೆ ಲೆಬನೋನಿನಿಂದ ಇಳಿದು ಬಾ ಅಮಾನದ ತುದಿಯಿಂದ ಶೆನೀರ್ ಮತ್ತು ಹೆರ್ಮೋನ್ ಶಿಖರಗಳಿಂದ. ಹೊರಟು ಬಾ ಸಿಂಹಗಳ ಗುಹೆಗಳಿಂದ ಚಿರತೆಗಳ ಗುಡ್ಡಗಳಿಂದ. 9 ನನ್ನ ಪ್ರಿಯಳೇ, ನನ್ನ ವಧುವೇ, ನನ್ನ ಹೃದಯವನ್ನು ನೀನು ಅಪಹರಿಸಿರುವೆ ಒಂದೇ ಕಿರುನೋಟದಿಂದ, ನನ್ನ ಹೃದಯವನ್ನು ವಶಪಡಿಸಿಕೊಂಡಿರುವೆ ನಿನ್ನ ಕಂಠಹಾರದ ಒಂದೇ ರತ್ನದಿಂದ. 10 ನನ್ನ ಪ್ರಿಯಳೇ, ನನ್ನ ವಧುವೇ, ನಿನ್ನ ಪ್ರೀತಿ ಎಷ್ಟೋ ರಮ್ಯ ! ನಿನ್ನ ಪ್ರೇಮ ಮಧುಪಾನಕ್ಕಿಂತ ಎಷ್ಟೋ ಮಧುರ ! ನಿನ್ನ ತೈಲದ ಪರಿಮಳ ಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ ! 11 ನನ್ನ ವಧುವೇ, ಜೇನು ಸುರಿಯುತ್ತಿದೆ ನಿನ್ನ ತುಟಿಗಳಿಂದ ಹಾಲುಜೇನು ಬರುತ್ತಿದೆ ನಿನ್ನ ನಾಲಗೆಯಡಿಯಿಂದ ಲೆಬನೋನಿನ ಸುಗಂಧ ಸೂಸುತ್ತಿದೆ ನಿನ್ನ ಉಡುಪಿನಿಂದ. 12 ನನ್ನ ಪ್ರಿಯಳು, ನನ್ನ ಮದಲಗಿತ್ತಿ ಸುಭದ್ರವಾದ ಉದ್ಯಾನವನ ಬೇಲಿಯೊಳಗಿನ ಬುಗ್ಗೆ ಮುಚ್ಚಿ ಮುದ್ರಿಸಿದ ಚಿಲುಮೆ. 13 ನಿನ್ನ ಉದ್ಯಾನದಲ್ಲಿ ಬೆಳೆದಿವೆ ದಾಳಿಂಬೆಯಂಥ ಉತ್ತಮ ಫಲವೃಕ್ಷಗಳು ಜಟಮಾಂಸಿ, ಕರ್ಪೂರ, ಜಟಮಾಂಸಿ, ಕುಂಕುಮ ಕೇಸರಿಗಳು. 14 ಬೆಳೆದಿವೆ ಪಟ್ಟೆಲವಂಗ ವಿವಿಧ ಸಾಂಬ್ರಾಣಿ ಗಿಡಗಳು ರಸಗಂಧ, ಅಗರುಗಳು ಸಕಲವಿಧ ಶ್ರೇಷ್ಠ ಸುಗಂಧ ಗಿಡಮೂಲಿಕೆಗಳು. 15 ನಿನ್ನ ತೋಟಗಳಿಗೆ ಬೇಕಾದ ಬುಗ್ಗೆ, ಉಕ್ಕಿಬರುವ ಒರತೆ, ಲೆಬನೋನಿನಿಂದ ಹರಿಯುವ ಕಾಲುವೆ ನಿನ್ನಲ್ಲಿವೆ ನಲ್ಲೆ : 16 ಉತ್ತರದ ಗಾಳಿಯೇ ಏಳು ದಕ್ಷಿಣದ ಗಾಳಿಯೇ ಬೀಸು ನನ್ನ ತೋಟದ ಮೇಲೆ ಬಿರುಸಾಗಿ ಬೀಸು ಸುವಾಸನೆಯನ್ನು ದೂರದೂರ ಪಸರಿಸು. ಬರಲಿ ಎನ್ನಿನಿಯನು ನನ್ನ ತೋಟಕೆ ಅತ್ಯುತ್ತಮ ಫಲಗಳನು ತಾನೇ ಭುಜಿಸಲಿಕೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India