Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪರಮಗೀತೆ 3 - ಕನ್ನಡ ಸತ್ಯವೇದವು C.L. Bible (BSI)

1 ನಲ್ಲೆ : ನನ್ನ ಪ್ರಾಣಕಾಂತನನ್ನು ರಾತ್ರಿಯೆಲ್ಲಾ ಹುಡುಕಿದೆ ಹಾಸಿಗೆಯ ಮೇಲೆ ಹಾತೊರೆದೆ ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ.

2 ಎದ್ದು ಊರೆಲ್ಲಾ ಅಲೆದಾಡಿದೆ ಬೀದಿಗಳಲ್ಲಿ, ಚೌಕಗಳಲ್ಲಿ ಹುಡುಕಾಡಿದೆ. ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ.

3 ಊರಲ್ಲಿ ತಿರುಗುವ ಪಹರೆಯವರ ಕೈಗೆ ಸಿಕ್ಕಿಬಿದ್ದೆ “ನನ್ನ ಪ್ರಾಣಕಾಂತನನ್ನು ಕಂಡಿರಾ?’ ಎಂದು ವಿಚಾರಿಸಿದೆ.

4 ಅವರನ್ನು ಬಿಟ್ಟ ತುಸು ಹೊತ್ತಿನಲ್ಲೆ ನನ್ನ ಪ್ರಾಣಕಾಂತನನ್ನು ಕಂಡುಕೊಂಡೆ. ತಾಯ ಮನೆಗೆ, ನನ್ನ ಹೆತ್ತವಳ ಮನೆಗೆ ಕರೆದೊಯ್ದೆ ಕೈಯ ಬಿಡದೆಯೆ ಕರೆದುಕೊಂಡು ಹೋದೆ.

5 ಜೆರುಸಲೇಮಿನ ಮಹಿಳೆಯರೇ, “ತಾನೇ ಏಳುವುದಕ್ಕೆ ಮುಂಚೆ ನನ್ನ ಪ್ರಿಯನನ್ನು ಎಚ್ಚರಿಸದಿರಿ ಆತನ ವಿಶ್ರಾಂತಿಗೆ ಭಂಗ ತರದಿರಿ” ಎಂದು ನಿಮಗೆ ವಿಧಿಸಿರುವೆನು ವನದ ಹುಲ್ಲೆ ಹರಿಣಿಗಳ ಮೇಲೆ ಆಣೆಯಿಟ್ಟು.


ಮೂರನೇ ಗೀತೆ

6 ವರ್ತಕರು ಮಾರುವ ಸಕಲ ಸುಗಂಧ ತೈಲಗಳಿಂದ ರಸಗಂಧ ಸಾಂಬ್ರಾಣಿ ಮುಂತಾದ ದ್ರವ್ಯಗಳಿಂದ ಧೂಮಸ್ತಂಭಗಳೋಪಾದಿ ಹೊರಹೊಮ್ಮುತ್ತಿರುವ ಅರಣ್ಯದ ಮಾರ್ಗವಾಗಿ ಬರುತ್ತಿರುವ ಆ ಮೆರವಣಿಗೆ ಯಾರದು?

7-8 ಇದೋ, ನೋಡು ಸೊಲೊಮೋನನ ಪಲ್ಲಕ್ಕಿ ಅದರ ಸುತ್ತ ಇಸ್ರಯೇಲಿನ ಶೂರರು ಅರವತ್ತು ಮಂದಿ ಯುದ್ಧಪ್ರವೀಣರಾದ ಅವರಾಗಿಹರು ಶಸ್ತ್ರಧಾರಿ ಕತ್ತಿಯ ಕಟ್ಟಿಹರು ಪ್ರತಿಯೊಬ್ಬರು ಸೊಂಟಕ್ಕೆ ಕತ್ತಲ ದುರಂತಗಳನ್ನು ಎದುರಿಸಲಿಕ್ಕೆ.

9 ಅರಸ ಸೊಲೊಮೋನನು ಮಾಡಿಸಿಕೊಂಡನು ಲೆಬನೋನಿನ ಮರದಿಂದ ಆ ಪಲ್ಲಕ್ಕಿಯನು.

10 ಸ್ತಂಭಗಳನ್ನು ಬೆಳ್ಳಿಯಿಂದ ಒರಗನ್ನು ಬಂಗಾರದಿಂದ ಅದರ ಮೆತ್ತೆಯನ್ನು ಸಕಲಾತಿಯಿಂದ ಅಲಂಕರಿಸಿಹರು ಜೆರುಸಲೇಮಿನ ಮಹಿಳೆಯರು ಪ್ರೀತಿಯಿಂದ.

11 ಸಿಯೋನಿನ ಮಹಿಳೆಯರೇ, ಹೊರಟುಬನ್ನಿ ಅರಸ ಸೊಲೊಮೋನನನ್ನು ನೋಡಬನ್ನಿ ಆತನ ವಿವಾಹಮಹೋತ್ಸವ ದಿನದಂದು ಆತನ ತಾಯಿ ತೊಡಿಸಿದ ಮುಕುಟವನ್ನು ಆತ ಧರಿಸಿರುವುದನ್ನು ನೋಡಬನ್ನಿ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು