ಪರಮಗೀತೆ 2 - ಕನ್ನಡ ಸತ್ಯವೇದವು C.L. Bible (BSI)1 ನಾನು ಶಾರೋನಿನ ನೆಲಸಂಪಿಗೆ ತಗ್ಗಿನ ತಾವರೆ. ನಲ್ಲ : 2 ನನ್ನ ಪ್ರಿಯಳು ಸ್ತ್ರೀಯರಲ್ಲಿ ಶ್ರೇಷ್ಠಳು ಮುಳ್ಳುಪೊದರಿನ ನಡುವೆ ತಾವರೆಯಂತಿಹಳು. ನಲ್ಲೆ : 3 ನನ್ನ ಪ್ರಿಯನು ಪುರುಷೋತ್ತಮನು ವನವೃಕ್ಷಗಳ ಮಧ್ಯೆ ಸೇಬಿನಂತಿಹನು. ಕುಳಿತು ಸಂತೋಷಗೊಂಡೆ ನಾನದರ ನೆರಳಿನೊಳು ಸಿಹಿ ನನ್ನ ನಾಲಿಗೆಗೆ ಅದರ ಫಲವು. 4 ಬರಮಾಡಿಕೊಂಡನು ನನ್ನನು ಔತಣದ ಮನೆಗೆ ನನ್ನ ಮೇಲೆತ್ತಿದನು ‘ಪ್ರೀತಿ’ ಎಂಬ ತನ್ನ ಪತಾಕೆ. 5 ಅಸ್ವಸ್ಥಳಾಗಿರುವೆನು ಅನುರಾಗದಿಂದ ಉಪಚರಿಸಿ ನನ್ನನು ಸೇಬುಹಣ್ಣುಗಳಿಂದ ಚೇತನಗೊಳಿಸಿರಿ ದೀಪದ್ರಾಕ್ಷೆಯಿಂದ. 6 ಆತನ ಎಡಗೈ ನನಗೆ ತಲೆದಿಂಬಾಗಿದ್ದರೆ ಆತನ ಬಲಗೈ ನನ್ನನ್ನು ಆಲಂಗಿಸಿದರೆ ಎಷ್ಟು ಚೆನ್ನಾಗಿರುತ್ತಿತ್ತು! 7 ಜೆರುಸಲೇಮಿನ ಮಹಿಳೆಯರೇ, “ತಾನೇ ಏಳುವುದಕ್ಕೆ ಮುಂಚೆ ನನ್ನ ಪ್ರಿಯನನ್ನು ಎಚ್ಚರಿಸದಿರಿ ಆತನ ವಿಶ್ರಾಂತಿಗೆ ಭಂಗ ತರದಿರಿ” ಎಂದು ನಿಮಗೆ ವಿಧಿಸಿರುವೆ ಆಣೆಯಿಟ್ಟು ವನದ ಹುಲ್ಲೆ ಹರಿಣಿಗಳ ಮೇಲೆ. ನಲ್ಲೆ : ಎರಡನೇ ಗೀತೆ 8 ಅಗೋ, ನನ್ನ ಕಾಂತನ ಸಪ್ಪಳ! ಹಾರಿ ಬರುತಿಹನು ಬೆಟ್ಟಗಳ ಮೇಲೆ ಜಿಗಿದು ಬರುತಿಹನು ಗುಡ್ಡಗಳ ಮೇಲೆ. 9 ನನ್ನ ಪ್ರಿಯನು ಇಹನು ಜಿಂಕೆಯಂತೆ, ಎಳೆಯ ಹುಲ್ಲೆಯಂತೆ ಇಗೋ, ನಿಂತಿಹನು ಗೋಡೆಯ ಹಿಂಭಾಗದಲೆ, ದೃಷ್ಟಿಸಿ ನೋಡುತಿಹನು ಕಿಟಕಿಗಳಲಿ ಇಣುಕು ಹಾಕುತಿಹನು ಜಾಲಾಂತರಗಳಲಿ. 10 ನನ್ನ ನಲ್ಲನು ನನ್ನೊಡನೆ ಮಾತಾಡಿ ಹೀಗೆಂದನು : ನಲ್ಲ : ‘ಎದ್ದು ಬಾ, ಪ್ರಿಯತಮೆ, ಬಾ ನನ್ನೊಂದಿಗೆ, ಸುಂದರಿಯೇ. 11 ಇಗೋ, ಚಳಿಗಾಲ ಕಳೆಯಿತು ಮಳೆಗಾಲ ಮುಗಿಯಿತು. 12 ಧರೆಯಲ್ಲೆಲ್ಲ ಹೂಗಳು ಅರಳಿವೆ ನಲಿದು ಹಾಡುವ ಕಾಲ ಬಂದಿದೆ ಬೆಳವಕ್ಕಿಯ ಕೂಗು ನಾಡಿನಲ್ಲಿ ಕೇಳಿಸುತ್ತಿದೆ. 13 ಅಂಜೂರದ ಕಾಯಿಗಳು ಹಣ್ಣಾಗಿವೆ ದ್ರಾಕ್ಷಾಬಳ್ಳಿಗಳು ಹೂಬಿಟ್ಟಿವೆ. ಅದರ ಪರಿಮಳ ಹರಡುತ್ತಿದೆ.’ ನಲ್ಲ : ಎದ್ದು ಬಾ, ನನ್ನ ಪ್ರೇಯಸಿಯೇ ಬಾ ನನ್ನೊಂದಿಗೆ, ಸುಂದರಿಯೇ. 14 ಬಂಡೆಯ ಬಿರುಕುಗಳಲ್ಲಿ ಸಂದುಗಳ ಮರೆಯಲ್ಲಿ ತಂಗಿರುವ ಪಾರಿವಾಳವೇ ಬಾ. ನಿನ್ನ ರೂಪವನು ನನಗೆ ಕಾಣಿಸು ನಿನ್ನ ದನಿಯನು ನನಗೆ ಕೇಳಿಸು. ನಿನ್ನ ದನಿ ಎನಿತೋ ಇಂಪು! ನಿನ್ನ ರೂಪ ಎನಿತೋ ತಂಪು! 15 ತೋಟಗಳನು ಹಾಳುಮಾಡುವಾ ನರಿಗಳನ್ನೂ ಮರಿಗಳನ್ನೂ ಹಿಡಿದು ತನ್ನಿ ಹೂಗಳು ಅರಳಿವೆ ನಮ್ಮ ತೋಟಗಳಲಿ. ನಲ್ಲೆ : 16 ನನ್ನ ಇನಿಯನು ನನ್ನವನೇ, ನಾನು ಅವನವಳೇ ಮೇಯುತಿದೆ ಅವನ ಮಂದೆ ನೆಲದಾವರೆಗಳ ನಡುವೆ. 17 ಕತ್ತಲು ಕಳೆಯುವ ಮುನ್ನ ಹೊತ್ತು ಮೂಡುವ ಮುನ್ನ ಹೊರಟು ಬಾ, ನನ್ನ ಕಾಂತ ಜಿಂಕೆಯಂತಿರು ಪ್ರಾಯದ ಹುಲ್ಲೆಯಂತಿರು ಬೇತೆರ್ ಪರ್ವತದ ಮೇಲಿರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India