Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪರಮಗೀತೆ 1 - ಕನ್ನಡ ಸತ್ಯವೇದವು C.L. Bible (BSI)


ಮೊದಲನೇ ಗೀತೆ

1 ಸೊಲೊಮೋನನ ಪರಮಗೀತೆ : ನಲ್ಲೆ :

2 ಚುಂಬಿಸೆನ್ನನು ನಿನ್ನ ತುಟಿಗಳಿಂದ ನಿನ್ನ ಪ್ರೀತಿ ಅತಿ ಮಧುರ ಮಧುಪಾನಕ್ಕಿಂತ.

3 ನೀನು ಹಚ್ಚಿಕೊಂಡಿರುವ ತೈಲ ಎನಿತು ಸುವಾಸನೀಯ ಸುರಿದ ಪರಿಮಳದಂತೆ ವ್ಯಾಪ್ತ ನಿನ್ನ ನಾಮಾಂಕಿತ ಕನ್ಯೆಯರೆಲ್ಲರು ನಿನ್ನನು ಪ್ರೀತಿಸದಿರಲು ಅಸಾಧ್ಯ.

4 ನನ್ನನ್ನು ತುಸು ಎಳೆ, ಓಡೋಣ ನಾವು ಮುಂದಕ್ಕೆ; ಅರಸನಾಗಿರು ನನಗೆ ಕರೆದೊಯ್ಯಿ ನನ್ನನ್ನು ಅಂತಃಪುರಕ್ಕೆ. ಹರ್ಷಿಸೋಣ, ಒಂದಿಗೆ ಆನಂದಿಸೋಣ ಮಧುಪಾನಕ್ಕಿಂತ ನಿನ್ನ ಪ್ರೀತಿ ಸ್ತುತ್ಯಾರ್ಹ ನಿನ್ನನ್ನು ಪ್ರೀತಿಸುವುದು ಎನಿತು ಸಹಜ!

5 ಓ ಜೆರುಸಲೇಮಿನ ಮಹಿಳೆಯರೇ, ನಾನು ಕಪ್ಪಾಗಿರುವೆ ಕೇದಾರಿನ ಗುಡಾರಗಳಂತೆ ಆದರೂ ಚೆಲುವೆ ಸೊಲೊಮೋನನಾ ಪರದೆಗಳಂತೆ.

6 ದಿಟ್ಟಿಸಿ ನೋಡಬೇಡಿ ನನ್ನ ರೂಪವನ್ನೆ ನಾ ಕಪ್ಪಾಗಿರುವುದು ಸೂರ್ಯನ ತಾಪದಿಂದಲೆ. ಸಿಟ್ಟುಗೊಂಡರು ಸಹೋದರರು ನನ್ನ ಮೇಲೆ ಅಟ್ಟಿದರು ನನ್ನನು ತೋಟಕಾಯುವುದಕ್ಕೆ ಗಮನ ಕೊಡಲಾಗಲಿಲ್ಲ ನನ್ನ ತನು ತೋಟಕ್ಕೆ.

7 ನನ್ನ ಪ್ರಾಣಪ್ರಿಯನೇ ಹೇಳು: ನಿನ್ನ ಮಂದೆಯನ್ನು ನೀನು ಮೇಯಿಸುವುದೆಲ್ಲಿ? ನಡುಹಗಲಲ್ಲಿ ಅದು ವಿಶ್ರಮಿಸುವುದೆಲ್ಲಿ? ನಾನೇಕೆ ಅಲೆಯಬೇಕು ಮುಸುಕು ಹಾಕಿದವಳಂತೆ ನಿನ್ನ ಗೆಳೆಯರ ಮಂದೆಗಳ ಹಿಂದೆ? ನಲ್ಲ :

8 ಸ್ತ್ರೀಯರಲ್ಲಿ ಅತಿ ಸುಂದರಿಯೇ, ನಿನಗಿದು ಗೊತ್ತಿಲ್ಲವಾದರೆ ಹೋಗು ಕುರಿಹಿಂಡಿನ ಜಾಡಿನಲ್ಲೆ ಮೇಯಿಸು ನಿನ್ನ ಮೇಕೆಮರಿಗಳನೆ ಕುರುಬರ ಗುಡಾರಗಳ ಸಮೀಪದಲ್ಲೆ.

9 ಫರೋಹನ ರಥವನ್ನೆಳೆವ ಹೆಣ್ಣುಕುದುರೆಗೆ ಹೋಲಿಸಿರುವೆ ನಾ ನಿನ್ನನು ಪ್ರಿಯಳೇ.

10 ಎಷ್ಟು ಅಂದವಾಗಿವೆ ನಿನ್ನ ಕೆನ್ನೆಗಳು ಕಿವಿಯೋಲೆಗಳಿಂದ! ನಿನ್ನ ಕೊರಳು ಕಂಠಹಾರಗಳಿಂದ!

11 ಮಾಡಿಸುವೆ ನಿನಗೆ ಬಂಗಾರದ ಅಂಚು, ಬೆಳ್ಳಿಯ ಕುಚ್ಚು. ನಲ್ಲೆ :

12 ಅತ್ತ ರಾಜನು ಮಂಚದ ಮೇಲೆ ಮಲಗಿಕೊಂಡಿರಲು ಇತ್ತ ಬೀರುತ್ತಿತ್ತು ನನ್ನ ಪರಿಮಳ ತೈಲ ಸುವಾಸನೆಯನು.

13 ನನ್ನ ಭಾಗ್ಯಕ್ಕೆ ನನ್ನ ನಲ್ಲ ಸ್ತನಗಳ ಮಧ್ಯೆಯಿರುವ ಪರಿಮಳ ಚೀಲ.

14 ನನ್ನ ಪಾಲಿಗೆ ನನ್ನ ಪ್ರಿಯನು ಏನ್ಗೆದಿಯ ತೋಟದ ಹೂಗೊಂಚಲು. ನಲ್ಲ :

15 ಆಹಾ, ನನ್ನ ಪ್ರಿಯಳೇ, ನೀನೆಷ್ಟು ಚೆಲುವೆ ಆಹಾ, ನೀನೆಷ್ಟು ಕೋಮಲೆ ನಿನ್ನ ನೇತ್ರಗಳು ಪಾರಿವಾಳಗಳಂತೆ! ನಲ್ಲೆ :

16 ಆಹಾ, ಎನ್ನಿನಿಯಾ, ನೀನೆಷ್ಟು ಸುಂದರ ನೀನೆಷ್ಟು ಮನೋಹರ!

17 ನಮ್ಮ ಹಾಸಿಗೆ ಪಚ್ಚೆಪಸರೇ, ನಮ್ಮ ಮೇಲ್ಛಾವಣಿ ತುರಾಯಿ ಮರಗಳೇ ಅದರ ತೊಲೆಗಳು ದೇವದಾರು ವೃಕ್ಷಗಳೇ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು