Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನ್ಯಾಯಸ್ಥಾಪಕರು 21 - ಕನ್ನಡ ಸತ್ಯವೇದವು C.L. Bible (BSI)


ಹತರಾಗದೆ ಉಳಿದ ಬೆನ್ಯಾಮೀನ್ಯರಿಗೆ ಹೆಂಡತಿಯರನ್ನು ದೊರಕಿಸಿದ್ದು

1 ಇಸ್ರಯೇಲರೆಲ್ಲರೂ ಮಿಚ್ಫೆಯಲ್ಲಿ ಇದ್ದಾಗ ತಾವು ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವುದಿಲ್ಲವೆಂದು ಆಣೆಯಿಟ್ಟಿದ್ದರು.

2 ಅವರು ಬೇತೇಲಿಗೆ ಬಂದು ಸಾಯಂಕಾಲದವರೆಗೆ ದೇವರ ಮುಂದೆ ಕುಳಿತು ಗಟ್ಟಿಯಾಗಿ ಅಳುತ್ತಾ

3 “ಸರ್ವೇಶ್ವರಾ, ಇಸ್ರಯೇಲರ ದೇವರೇ, ನಮ್ಮಲ್ಲಿ ಹೀಗೆ ಏಕಾಯಿತು? ಇಸ್ರಯೇಲರ ಒಂದು ಕುಲ ಹಾಳಾಗಿ ಹೋಯಿತಲ್ಲಾ!” ಎಂದು ಕೂಗಿಕೊಂಡರು.

4 ಮರುದಿವಸ ಅವರು ಬೆಳಿಗ್ಗೆ ಎದ್ದು ಬಲಿಪೀಠವನ್ನು ಕಟ್ಟಿ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಸಮರ್ಪಿಸಿದರು.

5 ಮತ್ತು ಸರ್ವೇಶ್ವರನ ಮುಂದೆ ಸಭೆ ನೆರೆದಾಗ ಅದಕ್ಕೆ ಬಾರದೆ ಇದ್ದಂಥ ಇಸ್ರಯೇಲರು ಯಾರಾರೆಂದು ವಿಚಾರಮಾಡಿದರು. ಏಕೆಂದರೆ ಮಿಚ್ಫೆಯಲ್ಲಿ, “ಸರ್ವೇಶ್ವರನ ಸನ್ನಿಧಿಗೆ ಬಾರದವರನ್ನು ಕೊಂದುಹಾಕುವೆವೆಂದು ಆಣೆಯಿಟ್ಟು ಅವರು ದೃಢಪ್ರಮಾಣ ಮಾಡಿದ್ದರು.

6 ಇಸ್ರಯೇಲರು ತಮ್ಮ ಬಂಧುಗಳಾದ ಬೆನ್ಯಾಮೀನ್ಯರ ಅವಸ್ಥೆಯನ್ನು ನೆನೆಸಿ ದುಃಖದಿಂದ, “ಅಯ್ಯೋ, ಇಸ್ರಯೇಲರಾದ ನಮ್ಮಲ್ಲಿ ಒಂದು ಕುಲ ಕಡಿಮೆಯಾಯಿತಲ್ಲಾ;

7 ಜೀವದಿಂದುಳಿದವರಿಗೆ ಹೆಂಡತಿಯರನ್ನು ದೊರಕಿಸಿಕೊಡುವುದು ಹೇಗೆ? ನಮ್ಮ ಹೆಣ್ಣುಗಳನ್ನು ಅವರಿಗೆ ಕೊಡುವುದಿಲ್ಲವೆಂದು ಸರ್ವೇಶ್ವರನ ಹೆಸರಿನಲ್ಲಿ ಆಣೆಯಿಟ್ಟೆವಲ್ಲಾ,” ಎಂದು ಗೋಳಾಡಿದರು.

8 ಮಿಚ್ಫೆಯಲ್ಲಿ ಸರ್ವೇಶ್ವರನ ಮುಂದೆ ಸಭೆ ಸೇರಿದ್ದಾಗ ಅದಕ್ಕೆ ಬಾರದಿದ್ದ ಇಸ್ರಯೇಲರು ಯಾರಾದರೂ ಇದ್ದಾರೋ ಎಂದು ವಿಚಾರಿಸುವಲ್ಲಿ, ಯಾಬೇಷ್ ಗಿಲ್ಯಾದಿನಿಂದ ಒಬ್ಬನೂ ಬರಲಿಲ್ಲವೆಂದು ಗೊತ್ತಾಯಿತು.

9 ಜನರನ್ನು ಲೆಕ್ಕಿಸಿದಾಗ ಯಾಬೇಷ್ ಗಿಲ್ಯಾದಿನಿಂದ ಯಾರೂ ಬರಲಿಲ್ಲವೆಂಬುದು ದೃಢವಾಯಿತು.

10 ಆಗ ಅವರು ತಮ್ಮಲ್ಲಿಂದ ಹನ್ನೆರಡು ಸಾವಿರಮಂದಿ ಪರಾಕ್ರಮಶಾಲಿಗಳನ್ನು ಆರಿಸಿಕೊಂಡು ಅವರಿಗೆ, “ನೀವು ಯಾಬೇಷ್ ಗಿಲ್ಯಾದಿಗೆ ಹೋಗಿ ಎಲ್ಲ ನಿವಾಸಿಗಳನ್ನೂ ಸ್ತ್ರೀಯರನ್ನೂ ಚಿಕ್ಕಮಕ್ಕಳನ್ನೂ ಬಿಡದೆ ಸಂಹರಿಸಬೇಕು;

11 ಹೇಗೂ ಪುರುಷರೆಲ್ಲರನ್ನೂ ಮದುವೆಯಾದ ಸ್ತ್ರೀಯರನ್ನೂ ನಿರ್ಮೂಲಮಾಡುವುದು ನಿಮ್ಮ ಕೆಲಸ,” ಎಂದು ಆಜ್ಞಾಪಿಸಿ ಕಳುಹಿಸಿದರು.

12 ಯಾಬೇಷ್ ಗಿಲ್ಯಾದಿನಲ್ಲಿ ಇನ್ನೂ ಮದುವೆಯಾಗದಿದ್ದ ನಾನೂರು ಮಂದಿ ಯುವತಿಯರು ಇದ್ದರು. ಪಟ್ಟಣವನ್ನು ನಾಶಪಡಿಸುವುದಕ್ಕೆ ಹೋದವರು ಇವರನ್ನು ಉಳಿಸಿ ಕಾನಾನ್ ನಾಡಿನ ಶಿಲೋವಿನಲ್ಲಿದ್ದ ಪಾಳೆಯಕ್ಕೆ ತೆಗೆದುಕೊಂಡು ಬಂದರು.

13 ಅನಂತರ ಸರ್ವಸಭೆಯವರು ರಿಮ್ಮೋನ್ ಗಿರಿಯಲ್ಲಿದ್ದ ಬೆನ್ಯಾಮೀನ್ಯರ ಬಳಿಗೆ ದೂತರನ್ನು ಕಳುಹಿಸಿ ಅವರಲ್ಲಿ ಸಮಾಧಾನ ವಾಕ್ಯವನ್ನು ಪ್ರಕಟಿಸಲು ಅವರು ತಿರುಗಿಬಂದರು.

14 ಇಸ್ರಯೇಲರು ತಾವು ಯಾಬೇಷ್ ಗಿಲ್ಯಾದಿನಿಂದ ಉಳಿಸಿತಂದ ಕನ್ಯೆಯರನ್ನು ಅವರಿಗೆ ಮದುವೆ ಮಾಡಿಕೊಟ್ಟರು; ಅವರು ಸಾಯಲಿಲ್ಲ.

15 ಸರ್ವೇಶ್ವರ ನಮ್ಮಲ್ಲಿ ಒಂದು ಲೋಪವನ್ನುಂಟುಮಾಡಿದ್ದಾರೆಂದು ಇಸ್ರಯೇಲರು ಬೆನ್ಯಾಮೀನ್ಯರ ವಿಷಯದಲ್ಲಿ ದುಃಖಪಟ್ಟರು.

16 ಸಭೆಯ ಹಿರಿಯರು, “ಉಳಿದಿರುವ ಬೆನ್ಯಾಮೀನ್ಯರಿಗೆ ಹೆಂಡತಿಯರನ್ನು ದೊರಕಿಸುವುದು ಹೇಗೆ? ಅವರ ಸ್ತ್ರೀಯರೆಲ್ಲ ಸಂಹೃತರಾದರಲ್ಲಾ.

17 ಇಸ್ರಯೇಲರ ಒಂದು ಕುಲ ಸಂಪೂರ್ಣವಾಗಿ ಅಳಿದು ಹೋಗಬಾರದು. ತಪ್ಪಿಸಿಕೊಂಡು ಉಳಿದಿರುವ ಬೆನ್ಯಾಮೀನ್ಯರಿಗೆ ಬಾಧ್ಯಸ್ಥರು ಹುಟ್ಟಬೇಕಲ್ಲವೆ?

18 ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವ ಇಸ್ರಯೇಲರು ಶಾಪಗ್ರಸ್ತರಾಗಲಿ! ಎಂದು ಆಣೆಯಿಟ್ಟುಕೊಂಡಿದ್ದೇವೆ. ಇದರಿಂದ ನಾವು ಅವರಿಗೆ ನಮ್ಮ ಹೆಣ್ಣುಗಳನ್ನು ಕೊಡುವುದಕ್ಕಾಗುವುದಿಲ್ಲ,”

19 ಎಂದು ಮಾತನಾಡಿಕೊಳ್ಳುತ್ತಿರುವಾಗ ಶಿಲೋವಿನಲ್ಲಿ ವರ್ಷ ವರ್ಷ ಸರ್ವೇಶ್ವರನ ಉತ್ಸವ ನಡೆಯುತ್ತದೆಂಬುದು ಅವರಿಗೆ ನೆನಪಿಗೆ ಬಂದಿತು. (ಶಿಲೋ ಎಂಬುದು ಬೇತೇಲಿನ ಉತ್ತರಕ್ಕೂ ಬೇತೇಲಿನಿಂದ ಶೆಕೆಮಿಗೆ ಹೋಗುವ ರಾಜಮಾರ್ಗದ ಪೂರ್ವಕ್ಕೂ ಲೇಬೋನದ ದಕ್ಷಿಣಕ್ಕೂ ಇರುತ್ತದೆ.)

20 ಆಗ ಅವರು ಬೆನ್ಯಾಮೀನ್ಯರನ್ನು ಕರೆದು ಅವರಿಗೆ, “ಇಗೋ, ನೀವು ದ್ರಾಕ್ಷೀತೋಟಗಳಲ್ಲಿ ಅಡಗಿಕೊಳ್ಳಿರಿ;

21 ಶಿಲೋವಿನ ಕನ್ಯೆಯರು ಹೊರಗೆ ಬಂದು ನಾಟ್ಯವಾಡುವಾಗ ನೀವು ತೋಟಗಳಿಂದ ಹೊರಗೆ ಬಂದು ಪ್ರತಿಯೊಬ್ಬನು ತನತನಗೆ ಶಿಲೋವಿನ ಕನ್ನಿಕೆಗಳಿಂದ ಒಬ್ಬಳನ್ನು ಹೆಂಡತಿಯಾಗಿ ತೆಗೆದುಕೊಂಡು ನಿಮ್ಮ ಪ್ರಾಂತ್ಯಕ್ಕೆ ಓಡಿಹೋಗಿರಿ.

22 ಅವರ ತಂದೆಗಳೂ ಅಣ್ಣತಮ್ಮಂದಿರೂ ನಮ್ಮ ಹತ್ತಿರ ದೂರುತಂದರೆ ನಾವು ಅವರಿಗೆ, ‘ನಮ್ಮನ್ನು ನೋಡಿ ಅವರಿಗೆ ಕೃಪೆತೋರಿಸಿ; ಯುದ್ಧ ನಿಮಿತ್ತ ಪ್ರತಿಯೊಬ್ಬನಿಗೆ ಹೆಣ್ಣನ್ನು ದೊರಕಿಸುವುದು ನಮ್ಮಿಂದಾಗಲಿಲ್ಲ; ಮತ್ತು ನಿಮ್ಮ ಹೆಣ್ಣುಮಕ್ಕಳನ್ನು ನೀವೇ ಕೊಡಲಿಲ್ಲವಾದ್ದರಿಂದ ನೀವು ನಿರಪರಾಧಿಗಳು’ ಎಂದು ಹೇಳಿ ಸಮಾಧಾನಪಡಿಸುವೆವು” ಎಂದರು.

23 ಅದರಂತೆಯೇ ಬೆನ್ಯಾಮೀನ್ಯರು ನಾಟ್ಯವಾಡುವುದಕ್ಕಾಗಿ ಹೊರಗೆ ಬಂದಿದ್ದ ಕನ್ಯೆಯರಲ್ಲಿ ತಮ್ಮ ಸಂಖ್ಯೆಗೆ ಸರಿದೂಗುವಷ್ಟು ಮಂದಿಯನ್ನು ಹೆಂಡತಿಯರನ್ನಾಗಿ ಹಿಡಿದುಕೊಂಡು ತಮ್ಮ ಸ್ವಾಸ್ತ್ಯಭೂಮಿಗೆ ಹೋಗಿ ಅಲ್ಲಿ ಪಟ್ಟಣಗಳನ್ನು ಕಟ್ಟಿ ವಾಸಮಾಡಿದರು.

24 ಅನಂತರ ಇಸ್ರಯೇಲರು ತಮ್ಮ ತಮ್ಮ ಕುಲಗೋತ್ರಗಳಿಗೆ ಸೊತ್ತಾಗಿ ಸಿಕ್ಕಿದ ಪ್ರದೇಶಗಳಿಗೆ ಹಿಂದಿರುಗಿ ಹೋದರು.

25 ಆ ಕಾಲದಲ್ಲಿ ಇಸ್ರಯೇಲರಲ್ಲಿ ಅರಸನಿರಲಿಲ್ಲ; ಪ್ರತಿಯೊಬ್ಬನು ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು