Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನ್ಯಾಯಸ್ಥಾಪಕರು 2 - ಕನ್ನಡ ಸತ್ಯವೇದವು C.L. Bible (BSI)


ಬೋಕೀಮಿನಲ್ಲಿ ಸರ್ವೇಶ್ವರನ ದೂತ

1 ಸರ್ವೇಶ್ವರಸ್ವಾಮಿಯ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು ಇಸ್ರಯೇಲರಿಗೆ, “ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿ ನಿಮ್ಮ ಪೂರ್ವಜರಿಗೆ ಪ್ರಮಾಣಮಾಡಿದ ನಾಡಿಗೆ ಕರೆದುತಂದೆನು. ನಿಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದೂ ಭಂಗಪಡಿಸುವುದಿಲ್ಲ ಎಂದು ಮಾತುಕೊಟ್ಟೆನು.

2 ಆಗ, ನೀವು ಈ ನಾಡಿನ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು, ಅವರ ಬಲಿಪೀಠಗಳನ್ನು ಕೆಡವಿಬಿಡಬೇಕು ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೇಕೆ ಮಾಡಿದಿರಿ?

3 ನೀವು ಹೀಗೆ ಮಾಡುವುದಾದರೆ ನಾನು ಈ ನಾಡಿನ ನಿವಾಸಿಗಳನ್ನು ನಿಮ್ಮಿಂದ ಓಡಿಸಿಬಿಡುವುದಿಲ್ಲ. ಅವರು ನಿಮ್ಮನ್ನು ಉಪದ್ರವಪಡಿಸುವರು. ಅವರ ದೇವತೆಗಳು ನಿಮ್ಮನ್ನು ತಮ್ಮ ಉರುಳಿನಲ್ಲಿ ಸಿಕ್ಕಿಸಿಕೊಳ್ಳುವುವು ಎಂದು ನಿಮಗೆ ಮೊದಲೇ ಹೇಳಿದ್ದೇನೆ” ಎಂದನು.

4 ಸರ್ವೇಶ್ವರನ ದೂತನು ಹೇಳಿದ ಈ ಮಾತುಗಳನ್ನು ಕೇಳಿ ಇಸ್ರಯೇಲರೆಲ್ಲರು ಗಟ್ಟಿಯಾಗಿ ಅತ್ತರು.

5 ಆದುದರಿಂದಲೇ ಆ ಸ್ಥಳಕ್ಕೆ ‘ಬೋಕೀಮ್’ ಎಂದು ಹೆಸರಿಟ್ಟು ಅಲ್ಲಿಯೇ ಸರ್ವೇಶ್ವರನಿಗೆ ಬಲಿಯನ್ನರ್ಪಿಸಿದರು.


ನ್ಯಾಯಾಧಿಪತಿಗಳ ಇತಿಹಾಸ: ಯೆಹೋಶುವನ ಮರಣ

6 ಯೆಹೋಶುವನು ಇಸ್ರಯೇಲರನ್ನು ಕಳುಹಿಸಿದ ಮೇಲೆ ಅವರು ತಮ್ಮ ತಮ್ಮ ಪಾಲಿಗೆ ಬಂದ ಪ್ರದೇಶಗಳಿಗೆ ಹೋಗಿ ಅವುಗಳನ್ನು ಸ್ವತಂತ್ರಿಸಿಕೊಂಡರು.

7 ಯೆಹೋಶುವನ ದಿನಗಳಲ್ಲೂ ಅವನ ಕಾಲದಿಂದ ಇನ್ನೂ ಜೀವಿಸುತ್ತಿದ್ದ ಹಿರಿಯರ ದಿನಗಳಲ್ಲೂ ಇಸ್ರಯೇಲರು ಸರ್ವೇಶ್ವರನಿಗೆ ಸೇವೆಸಲ್ಲಿಸುತ್ತಾ ಬಂದರು. ಈ ಹಿರಿಯರು ಸರ್ವೇಶ್ವರ ಇಸ್ರಯೇಲರ ಪರವಾಗಿ ಮಾಡಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದರು.

8 ಸರ್ವೇಶ್ವರನ ದಾಸ ನೂನನ ಮಗ ಯೆಹೋಶುವನು ನೂರಹತ್ತು ವರ್ಷದವನಾಗಿ ಮರಣಹೊಂದಿದನು.

9 ಅವನನ್ನು ಅವನ ಸ್ವಾಸ್ತ್ಯಭೂಮಿಯಾದ ತಿಮ್ನತ್ ಹೆರೆಸ್ ಎಂಬಲ್ಲಿ ಸಮಾಧಿಮಾಡಿದರು. ಅದು ಎಫ್ರಯಿಮ್ ಪರ್ವತಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿದೆ.

10 ಅವನ ಕಾಲದವರೆಲ್ಲರೂ ತಮ್ಮ ಪೂರ್ವಜರಂತೆ ದೈವಾಧೀನರಾದ ಮೇಲೆ ಬೇರೊಂದು ಸಂತಾನ ಹುಟ್ಟಿಕೊಂಡಿತು. ಇವರು ಸರ್ವೇಶ್ವರಸ್ವಾಮಿಯನ್ನು ಮರೆತರು; ಇಸ್ರಯೇಲರಿಗೆ ಮಾಡಿದ ಮಹತ್ಕಾರ್ಯಗಳ ನೆನಪು ಇವರಿಗೆ ಇರಲಿಲ್ಲ.


ಸತ್ಯದೇವರ ಮರೆತ, ಅನ್ಯದೇವತೆಗಳಿಗೆ ಶರಣಾಗತ

11 ಈ ಇಸ್ರಯೇಲರು ಬಾಳ್ ದೇವತೆಯ ಪ್ರತಿಮೆಗಳನ್ನು ಪೂಜಿಸಿ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು.

12 ತಮ್ಮ ಪೂರ್ವಜರನ್ನು ಈಜಿಪ್ಟಿನಿಂದ ಕರೆದುತಂದ ದೇವರಾದ ಸರ್ವೇಶ್ವರನನ್ನು ಬಿಟ್ಟು ಅನ್ಯದೇವತೆಗಳನ್ನು ಅಂದರೆ, ತಮ್ಮ ಸುತ್ತಮುತ್ತಲಿನ ಜನಾಂಗಗಳ ದೇವರುಗಳನ್ನು ಅವಲಂಬಿಸಿ ಅವುಗಳಿಗೆ ಅಡ್ಡಬಿದ್ದು ಸರ್ವೇಶ್ವರನನ್ನು ರೇಗಿಸಿದರು.

13 ಅವರು ಸರ್ವೇಶ್ವರನನ್ನು ಬಿಟ್ಟು ‘ಬಾಳ್ ಅಷ್ಟೋರೆತ್’ ಎಂಬ ದೇವತೆಗಳನ್ನು ಪೂಜಿಸತೊಡಗಿದರು.

14 ಆದ್ದರಿಂದ ಸರ್ವೇಶ್ವರನ ಕೋಪ ಅವರ ಮೇಲೆ ಉರಿಯಹತ್ತಿತು; ಅವರನ್ನು ಕೊಳ್ಳೆಹೊಡೆಯುವವರ ಕೈಗೆ ಒಪ್ಪಿಸಿದರು. ಶತ್ರುಗಳು ಅವರನ್ನು ಸುಲಿಗೆ ಮಾಡಿದರು. ಸರ್ವೇಶ್ವರ ಅವರನ್ನು ಅಕ್ಕಪಕ್ಕದ ವೈರಿಗಳಿಗೆ ಮಾರಿಬಿಟ್ಟರು. ಆ ಶತ್ರುಗಳ ಮುಂದೆ ಇಸ್ರಯೇಲರು ನಿಲ್ಲಲಾರದೆ ಹೋದರು.

15 ಮೊದಲೇ ಆಣೆಯಿಟ್ಟು ಹೇಳಿದಂತೆ ಅವರು ಎಲ್ಲಿಗೆ ಹೋದರೂ ಸರ್ವೇಶ್ವರನ ಕೈ ಅವರಿಗೆ ವಿರೋಧವಾಗಿಯೇ ಇತ್ತು. ಅವರಿಗೆ ಬಹಳ ದುಃಖ ಉಂಟಾಯಿತು.

16 ಆಗ ಸರ್ವೇಶ್ವರ ಅವರನ್ನು ಸೂರೆಮಾಡುವವರ ಕೈಯಿಂದ ತಪ್ಪಿಸಲು ನ್ಯಾಯಾಧಿಪತಿಗಳನ್ನು ಕಳುಹಿಸಿದರು.

17 ಇಸ್ರಯೇಲರು ಇವರ ಮಾತನ್ನೂ ಕೇಳದೆ ಅನ್ಯದೇವತೆಗಳನ್ನು ಪೂಜಿಸಿ ಅವುಗಳಿಗೆ ಅಡ್ಡಬಿದ್ದು ದೇವದ್ರೋಹಿಗಳಾದರು. ಸರ್ವೇಶ್ವರನ ಆಜ್ಞೆಗಳನ್ನು ಪಾಲಿಸುತ್ತಿದ್ದ ತಮ್ಮ ಪೂರ್ವಜರ ಮಾರ್ಗವನ್ನು ಬೇಗನೆ ತ್ಯಜಿಸಿಬಿಟ್ಟರು. ಅವರಂತೆ ನಡೆಯಲೇ ಇಲ್ಲ.

18 ವೈರಿಗಳ ಹಿಂಸೆಯನ್ನು ತಾಳಲಾರದೆ ಇಸ್ರಯೇಲರು ಗೋಳು ಇಟ್ಟರು. ಸರ್ವೇಶ್ವರ ಅದನ್ನು ಕೇಳಿ ಕನಿಕರಪಟ್ಟು ನ್ಯಾಯಾಧಿಪತಿಗಳನ್ನು ಕಳುಹಿಸಿಕೊಟ್ಟರು; ಜೀವಮಾನವೆಲ್ಲ ಅವರ ಸಂಗಡವೇ ಇದ್ದು ಅವರ ಮುಖಾಂತರ ಇಸ್ರಯೇಲರನ್ನು ಶತ್ರುಗಳಿಂದ ಬಿಡಿಸಿದರು. ತಮ್ಮನ್ನು ಹಿಂಸಿಸುತ್ತಿದ್ದವರ ಕಾಟವನ್ನು ತಾಳದೆ ಮೊರೆಯಿಡುವುದನ್ನು ಸರ್ವೇಶ್ವರ ಕೇಳಿ ಮನಮರುಗಿದರು.

19 ಅಂಥ ನ್ಯಾಯಾಧಿಪತಿಗಳು ತೀರಿಹೋದ ನಂತರ ಇಸ್ರಯೇಲರು ಮತ್ತೆ ತಮ್ಮ ಹಿಂದಿನವರಿಗಿಂತಲೂ ಭ್ರಷ್ಟರಾಗಿ ಅನ್ಯದೇವತೆಗಳನ್ನು ಅವಲಂಬಿಸಿ, ಅವುಗಳಿಗೆ ಸೇವೆಮಾಡಿ ಅಡ್ಡಬಿದ್ದರು. ಅವರು ತಮ್ಮ ದುರ್ಮಾರ್ಗಗಳನ್ನೂ ಹಠಮಾರಿತನವನ್ನೂ ಬಿಡಲೇ ಇಲ್ಲ.

20 ಆದ್ದರಿಂದ ಸರ್ವೇಶ್ವರನ ಕೋಪ ಇಸ್ರಯೇಲರ ಮೇಲೆ ಉರಿಯುತ್ತಲೇ ಇತ್ತು; “ಈ ಜನರ ಪೂರ್ವಜರಿಗೆ ನಾನು ಕೊಟ್ಟ ನಿಬಂಧನೆಯನ್ನು ಇವರು ಪಾಲಿಸಲಿಲ್ಲ, ನನ್ನ ಮಾತಿಗೆ ಕಿವಿಗೊಡಲಿಲ್ಲ.

21 ಆದ್ದರಿಂದ ಯೆಹೋಶುವನು ಸಾಯುವ ಮೊದಲು ಹೊರಗಟ್ಟದೆ ಬಿಟ್ಟ ಜನಾಂಗಗಳಲ್ಲಿ ಒಂದನ್ನಾದರೂ ನಾನು ಹೊರಡಿಸುವುದಿಲ್ಲ.

22 ಇವರು ತಮ್ಮ ಹಿರಿಯರಂತೆ ಜಾಗರೂಕತೆಯಿಂದ ಸರ್ವೇಶ್ವರನಾದ ನನ್ನ ಮಾರ್ಗದಲ್ಲಿ ನಡೆಯುವರೋ ಇಲ್ಲವೋ ಎಂದು ಈ ಜನಾಂಗಗಳ ಮುಖಾಂತರವೇ ಪರೀಕ್ಷಿಸುವೆನು,” ಎಂದುಕೊಂಡರು.

23 ಈ ಕಾರಣ ಸರ್ವೇಶ್ವರಸ್ವಾಮಿ ಯೆಹೋಶುವನ ಕೈಗೆ ಒಪ್ಪಿಸದೆ ಉಳಿಸಿದ್ದ ಜನಾಂಗಗಳನ್ನು ಬೇಗನೆ ಅಟ್ಟಿಬಿಡಲಿಲ್ಲ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು