Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನ್ಯಾಯಸ್ಥಾಪಕರು 15 - ಕನ್ನಡ ಸತ್ಯವೇದವು C.L. Bible (BSI)


ಸಂಸೋನನಿಂದ ಫಿಲಿಷ್ಟಿಯರ ಬೆಳೆ ಹಾಳು

1 ಕೆಲವು ದಿನಗಳಾದ ಮೇಲೆ ಗೋದಿಯ ಸುಗ್ಗಿಯಲ್ಲಿ ಸಂಸೋನನು ಒಂದು ಹೋತಮರಿಯನ್ನು ತೆಗೆದುಕೊಂಡು ತನ್ನ ಹೆಂಡತಿಯನ್ನು ನೋಡುವುದಕ್ಕೆ ಹೋದನು. ಆಕೆಯ ತಂದೆ ಬಳಿಗೆ ಬಂದನು; “ನನ್ನ ಹೆಂಡತಿಯ ಒಳಗಿನ ಕೋಣೆಗೆ ಹೋಗಬಿಡು,” ಎಂದನು. ಅವನು, “ಹೋಗಕೂಡದು.

2 ನೀನು ನಿಜವಾಗಿ ಆಕೆಯನ್ನು ದ್ವೇಷಮಾಡುತ್ತೀಯೆಂದು ನಿನ್ನ ಆಪ್ತರೊಬ್ಬನಿಗೆ ಮದುವೆಮಾಡಿಕೊಟ್ಟೆ. ಆಕೆಯ ತಂಗಿ ಆಕೆಗಿಂತ ಸುಂದರಿಯಾಗಿದ್ದಾಳೆ; ಈಕೆ ನಿನಗೆ ಇರಲಿ,” ಎಂದನು.

3 ಆಗ ಸಂಸೋನನು, “ಈ ಸಾರಿ ಫಿಲಿಷ್ಟಿಯರಿಗೆ ನಷ್ಟ ಉಂಟುಮಾಡಿದರೆ ತಪ್ಪು ನನ್ನದಲ್ಲ,” ಎಂದುಕೊಂಡು ಹೋಗಿ

4 ಮುನ್ನೂರು ನರಿಗಳನ್ನು ಹಿಡಿದನು. ಒಂದರ ಬಾಲಕ್ಕೆ ಇನ್ನೊಂದು ಬಾಲವನ್ನು ಸೇರಿಸಿ ಕಟ್ಟಿದನು. ಹೀಗೆ ಎರಡೆರಡು ಬಾಲಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ ಪಂಜುಗಳಿಗೆ ಬೆಂಕಿಹೊತ್ತಿಸಿ

5 ಆ ನರಿಗಳನ್ನು ‘ಫಿಲಿಷ್ಟಿಯರ ಬೆಳೆ ತುಂಬಿದ ಹೊಲಗಳಿಗೆ ಬಿಟ್ಟು ಅವರ ತೆನೆಗೂಡುಗಳನ್ನೂ ಇನ್ನೂ ಕೊಯ್ಯದೆ ಇದ್ದ ಪೈರುಗಳನ್ನೂ ಸುಟ್ಟುಬಿಟ್ಟನು. ಎಣ್ಣೆಯ ಮರಗಳ ತೋಟಗಳು ಸಹ ಸುಟ್ಟುಹೋದವು.

6 ಫಿಲಿಷ್ಟಿಯರು ಇದನ್ನು ಮಾಡಿದವರಾರೆಂದು ವಿಚಾರಿಸುವಲ್ಲಿ ತಿಮ್ನಾ ಊರಿನವನ ಅಳಿಯನಾದ ಸಂಸೋನನೆಂದು ಗೊತ್ತಾಯಿತು. ಅವನ ಮಾವ ಅವನ ಹೆಂಡತಿಯನ್ನು ಬೇರೊಬ್ಬನಿಗೆ ಕೊಟ್ಟುಬಿಟ್ಟದ್ದೇ ಇದಕ್ಕೆ ಕಾರಣವೆಂದು ಅವರು ತಿಳಿದು, ಅಲ್ಲಿಗೆ ಬಂದು ಆಕೆಯನ್ನೂ ಆಕೆಯ ತಂದೆಯನ್ನೂ ಸುಟ್ಟುಬಿಟ್ಟರು.

7 ಸಂಸೋನನು ಅವರಿಗೆ, “ನೀವು ಹೀಗೆ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿ ತೀರಿಸದೆ ಬಿಡುವುದಿಲ್ಲ,” ಎಂದು ಹೇಳಿ

8 ಅವರ ತೊಡೆ ಸೊಂಟಗಳನ್ನು ಮುರಿದು, ಅವರನ್ನು ಸಂಹರಿಸಿಬಿಟ್ಟನು. ಅನಂತರ ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.


ಫಿಲಿಷ್ಟಿಯರ ಸೋಲು

9 ಆಗ ಫಿಲಿಷ್ಟಿಯರು ಹೊರಟು ಯೆಹೂದಾ ಪ್ರಾಂತ್ಯದ ಲೆಹೀ ಎಂಬಲ್ಲಿಗೆ ಹೋಗಿ ಪಾಳೆಯ ಮಾಡಿಕೊಂಡು ಯುದ್ಧಕ್ಕೆ ನಿಂತರು.

10 “ನೀವು ನಮಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದೇಕೆ?” ಎಂದು ಯೆಹೂದ್ಯರು ಅವರನ್ನು ಕೇಳಿದರು. ಅವರು, “ಸಂಸೋನನನ್ನು ಹಿಡಿದು, ಬಂಧಿಸಿ, ಅವನು ನಮಗೆ ಮಾಡಿದಂತೆಯೇ ಅವನಿಗೂ ಮಾಡಬೇಕೆಂದು ಬಂದೆವು,” ಎಂದು ಉತ್ತರಕೊಟ್ಟರು.

11 ಮೂರು ಸಾವಿರ ಮಂದಿ ಯೆಹೂದ್ಯರು ಏಟಾಮ್ ಗಿರಿಗೆ ಹೋಗಿ ಸಂಸೋನನಿಗೆ, “ಫಿಲಿಷ್ಟಿಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದಾರೆಂಬುದು ನಿನಗೆ ಗೊತ್ತಿಲ್ಲವೇ? ಹೀಗೆ ಏಕೆ ಮಾಡಿದೆ,” ಎಂದು ಕೇಳಲು ಅವನು, “ಅವರು ನನಗೆ ಮಾಡಿದಂತೆಯೇ ನಾನು ಅವರಿಗೆ ಮಾಡಿದ್ದೇನೆ,” ಎಂದನು.

12 ಅವರು, “ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಬೇಕೆಂದು ಬಂದಿದ್ದೇವೆ,” ಎನ್ನಲು ಸಂಸೋನನು, “ಹಾಗಾದರೆ ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡಿ” ಎಂದನು.

13 ಅದಕ್ಕೆ ಅವರು, “ನಾವು ಸತ್ಯವಾಗಿ ನಿನ್ನನ್ನು ಕೊಲ್ಲುವುದಿಲ್ಲ; ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸುತ್ತೇವೆ,” ಎಂದು ಹೇಳಿ ಅವನನ್ನು ಎರಡು ಹೊಸ ಹಗ್ಗಗಳಿಂದ ಕಟ್ಟಿ ಗಿರಿಯಿಂದ ತಂದರು.

14 ಸಂಸೋನನು ಲೆಹೀಯ ಸಮೀಪಕ್ಕೆ ಬರಲು ಫಿಲಿಷ್ಟಿಯರು ಅವನನ್ನು ಕಂಡು ಆರ್ಭಟಿಸಿದರು. ಸರ್ವೇಶ್ವರನ ಆತ್ಮ ಅವನ ಮೇಲೆ ಬಂದುದರಿಂದ ಅವನ ರಟ್ಟೆಗಳಿಗೆ ಸುತ್ತಲೂ ಕಟ್ಟಿದ್ದ ಹಗ್ಗಗಳು ಸುಟ್ಟ ಸೆಣಬಿನ ಹಾಗಾದವು; ಕೈಗೆ ಹಾಕಿದ ಬೇಡಿಗಳು ಕಳಚಿ ಬಿದ್ದವು.

15 ಅಲ್ಲೇ ಒಂದು ಕತ್ತೆಯ ದವಡೆ ಎಲುಬು ಬಿದ್ದಿತ್ತು. ಅದು ಇನ್ನೂ ಹಸಿ ಇತ್ತು. ಅವನು ಅದನ್ನು ತೆಗೆದುಕೊಂಡು ಅದರಿಂದ ಸಾವಿರ ಜನರನ್ನು ಹತಿಸಿಬಿಟ್ಟು,

16 “ಕತ್ತೆಯ ದವಡೆ ಎಲುಬಿನಿಂದ ಸಾವಿರ ಜನರನ್ನು ವಧಿಸಿದೆ; ಕತ್ತೆಯ ದವಡೆ ಎಲುಬಿನಿಂದ ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆ” ಎಂದು ಹೇಳಿ

17 ತನ್ನ ಕೈಯಲ್ಲಿದ್ದ ಎಲುಬನ್ನು ಬಿಸಾಡಿದನು. ಆ ಸ್ಥಳಕ್ಕೆ ‘ರಾಮತ್ ಲೆಹೀ" ಎಂದು ಹೆಸರಾಯಿತು.

18 ಇದರಿಂದಾಗಿ ಸಂಸೋನನಿಗೆ ಬಹಳ ದಾಹವಾಯಿತು. ಅವನು ಸರ್ವೇಶ್ವರನಿಗೆ, “ನೀವು ನಿಮ್ಮ ದಾಸನ ಮುಖಾಂತರ ಇಂಥ ಮಹಾ ಜಯವನ್ನು ದಯಪಾಲಿಸಿದಿರಿ. ಆದರೆ ಈಗ ನಾನು ದಾಹದಿಂದ ಸತ್ತು ಸುನ್ನತಿಯಿಲ್ಲದವರ ಕೈಯಲ್ಲಿ ಬೀಳಬೇಕೇ?’ ಎಂದು ಮೊರೆಯಿಟ್ಟನು.

19 ದೇವರು ಲೆಹೀಯಲ್ಲಿ ಒರಳಬಂಡೆಯನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಿದರು. ಅವನು ಕುಡಿದು ಪುನಃ ಚೇತನಗೊಂಡನು. ಆದುದರಿಂದ ಅದಕ್ಕೆ ‘ಏನ್ ಹಕ್ಕೋರೇ’ ಎಂದು ಹೆಸರಾಯಿತು; ಅದು ಇಂದಿನವರೆಗೂ ಲೆಹೀಯಲ್ಲಿದೆ.

20 ಫಿಲಿಷ್ಟಿಯರ ಕಾಲದಲ್ಲಿ ಸಂಸೋನನು ಇಸ್ರಯೇಲರನ್ನು ಇಪ್ಪತ್ತು ವರ್ಷಗಳವರೆಗೆ ಪಾಲಿಸಿದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು