Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನ್ಯಾಯಸ್ಥಾಪಕರು 13 - ಕನ್ನಡ ಸತ್ಯವೇದವು C.L. Bible (BSI)


ಸಂಸೋನನ ಜನನ

1 ಇಸ್ರಯೇಲರು ಮತ್ತೊಮ್ಮೆ ಸರ್ವೇಶ್ವರಸ್ವಾಮಿಯ ದೃಷ್ಟಿಯಲ್ಲಿ ದ್ರೋಹಿಗಳಾದರು. ಆದುದರಿಂದ ಅವರನ್ನು ನಾಲ್ವತ್ತು ವರ್ಷಗಳ ತನಕ ಫಿಲಿಷ್ಟಿಯರ ಕೈಗೆ ಒಪ್ಪಿಸಲಾಯಿತು.

2 ಚೊರ್ಗಾ ಎಂಬ ಊರಲ್ಲಿ ದಾನ್ ಕುಲದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿ ಬಂಜೆಯಾಗಿದ್ದುದರಿಂದ ಅವನಿಗೆ ಮಕ್ಕಳಿರಲಿಲ್ಲ.

3 ಒಂದಾನೊಂದು ದಿನ ಸರ್ವೇಶ್ವರನ ದೂತ ಆಕೆಗೆ ಪ್ರತ್ಯಕ್ಷನಾಗಿ, “ಇಗೋ, ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ.

4 ಈ ಕಾರಣ ಜಾಗರೂಕತೆಯಿಂದಿರು; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು; ಯಾವ ನಿಷಿದ್ಧ ಪದಾರ್ಥವನ್ನೂ ಊಟಮಾಡದಿರು.

5 ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇ ಬಾರದು. ಅವನು ಹುಟ್ಟಿನಿಂದ ದೇವರಿಗೆ ಪ್ರತಿಷ್ಠಿತನಾಗುವನು. ಅವನು ಇಸ್ರಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವುದಕ್ಕೆ ಪ್ರಾರಂಭಿಸುವನು,” ಎಂದನು.

6 ತರುವಾಯ ಆ ಸ್ತ್ರೀ ತನ್ನ ಗಂಡನ ಬಳಿಗೆ ಹೋಗಿ, “ಒಬ್ಬ ದೇವಪುರುಷ ನನ್ನ ಹತ್ತಿರ ಬಂದಿದ್ದನು. ಅವನ ರೂಪ ದೇವದೂತನ ರೂಪದಂತೆ ಘನಗಂಭೀರವಾಗಿತ್ತು. ‘ಎಲ್ಲಿಂದ ಬಂದಿರಿ?’ ಎಂದು ನಾನು ಅವನನ್ನು ಕೇಳಲಿಲ್ಲ; ಅವನೂ ತನ್ನ ಹೆಸರನ್ನು ತಿಳಿಸಲಿಲ್ಲ.

7 ಆದರೆ ಆತ ನನಗೆ, ‘ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಆದ್ದರಿಂದ ನೀನು ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು. ಯಾವ ನಿಷಿದ್ಧಾಹಾರವನ್ನೂ ಮುಟ್ಟಬೇಡ; ಆ ಮಗು ಹುಟ್ಟಿದಂದಿನಿಂದ ಸಾಯುವವರೆಗೆ ಪ್ರತಿಷ್ಠಿತನಾಗಿರುವನು,’ ಎಂದು ಹೇಳಿದನು,” ಎಂದಳು.

8 ಮಾನೋಹನು ಇದನ್ನು ಕೇಳಿ ಸರ್ವೇಶ್ವರನಿಗೆ, “ಸ್ವಾಮೀ, ದಯವಿರಲಿ; ನೀವು ಕಳುಹಿಸಿದ ದೇವಪುರುಷ ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟಲಿರುವ ಮಗುವಿಗಾಗಿ ಮಾಡಬೇಕಾದುದ್ದನ್ನು ನಮಗೆ ಬೋಧಿಸಲಿ,” ಎಂದು ಬೇಡಿಕೊಳ್ಳಲು ದೇವರು ಅವನ ಮೊರೆಯನ್ನು ಕೇಳಿದರು.

9 ಆ ಮಹಿಳೆ ಹೊಲದಲ್ಲಿ ಕುಳಿತಿರುವಾಗ ದೇವದೂತನು ತಿರುಗಿ ಬಂದನು. ಆಕೆಯ ಗಂಡ ಮಾನೋಹನು ಅಲ್ಲಿರಲಿಲ್ಲ.

10 ಆದುದರಿಂದ ಆಕೆ ಬೇಗನೆ ಗಂಡನ ಬಳಿಗೆ ಹೋಗಿ, “ಮೊನ್ನೆ ನನಗೆ ಪ್ರತ್ಯಕ್ಷನಾದ ಪುರುಷ ತಿರುಗಿ ಬಂದಿದ್ದಾನೆ,” ಎಂದು ತಿಳಿಸಿದಳು.

11 ಅವನೆದ್ದು ಹೆಂಡತಿಯೊಡನೆ ಬಂದು ಆ ಪುರುಷನಿಗೆ, “ಮೊನ್ನೆ ಈಕೆಯೊಡನೆ ಮಾತಾಡಿದವರು ನೀವೋ,” ಎಂದು ಕೇಳಲು ಅವನು,

12 “ಹೌದು, ನಾನೇ,” ಎಂದನು. ಆಗ ಮಾನೋಹನು, “ನೀವು ಹೇಳಿದ್ದು ನೆರವೇರಿದಾಗ ನಾವು ಆ ಮಗುವಿಗಾಗಿ ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು?” ಎಂದು ಕೇಳಿದನು.

13 ಸರ್ವೇಶ್ವರನ ದೂತನು ಮಾನೋಹನಿಗೆ, “ನಾನು ಹೇಳಿದ್ದನ್ನೆಲ್ಲಾ ಈಕೆ ಜಾಗರೂಕತೆಯಿಂದ ಕೈಗೊಳ್ಳಲಿ;

14 ದ್ರಾಕ್ಷಾಫಲವನ್ನು ತಿನ್ನದಿರಲಿ; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರಲಿ; ನಿಷಿದ್ಧಾಹಾರವನ್ನು ಮುಟ್ಟದಿರಲಿ; ಹೀಗೆ ನಾನು ಆಜ್ಞಾಪಿಸಿದ್ದನ್ನೆಲ್ಲಾ ಕೈಗೊಳ್ಳಲಿ,” ಎಂದನು.

15 ಮತ್ತೆ ಮಾನೋಹನು ಸರ್ವೇಶ್ವರನ ದೂತನನ್ನು, “ನಾವು ನಿಮಗಾಗಿ ಒಂದು ಹೋತಮರಿಯನ್ನು ಅಡಿಗೆ ಮಾಡಿ ತರುವವರೆಗೆ ದಯವಿಟ್ಟು ಇಲ್ಲೇ ನಿಲ್ಲಬೇಕು ಎಂದು ಬೇಡಿಕೊಂಡನು. ಅವನು,

16 “ನೀನು ನನ್ನನ್ನು ನಿಲ್ಲಿಸಿಕೊಂಡರೂ ನಾನು ನಿನ್ನ ಆಹಾರವನ್ನು ಊಟಮಾಡುವುದಿಲ್ಲ; ಬಲಿದಾನ ಮಾಡಬೇಕೆಂದು ನಿನಗೆ ಮನಸ್ಸಿದ್ದರೆ ಅದನ್ನು ಸರ್ವೇಶ್ವರನಿಗೆ ಸಮರ್ಪಿಸು,” ಎಂದನು. ಅವನು ಸರ್ವೇಶ್ವರನ ದೂತನೆಂಬುದು ಮಾನೋಹನಿಗೆ ಗೊತ್ತಿರಲಿಲ್ಲ.

17 ಆದುದರಿಂದ ಅವನು ಆ ದೂತನನ್ನು, “ನೀವು ಹೇಳಿದ್ದು ನೆರವೇರಿದಾಗ ನಿಮ್ಮನ್ನು ಸನ್ಮಾನಿಸಬೇಕೆಂದಿರುತ್ತೇವೆ, ನಿಮ್ಮ ಹೆಸರೇನು?” ಎಂದು ಕೇಳಿದನು.

18 ಸರ್ವೇಶ್ವರನ ದೂತನು, “ನನ್ನ ಹೆಸರನ್ನು ಕೇಳುವುದೇಕೆ? ಅದು ಆಶ್ಚರ್ಯಕರವಾದದ್ದು” ಎಂದನು.

19 ಮಾನೋಹನು ಹೋತಮರಿಯನ್ನೂ ಧಾನ್ಯದ್ರವ್ಯವನ್ನೂ ತಂದು ಬಂಡೆಯ ಮೇಲಿಟ್ಟು ಸರ್ವೇಶ್ವರನಿಗೆ ಸಮರ್ಪಿಸಿದನು. ಮಾನೋಹನು ಮತ್ತು ಅವನ ಹೆಂಡತಿ ನೋಡುತ್ತಿರುವಾಗಲೇ ಸರ್ವೇಶ್ವರನ ದೂತನು ಒಂದು ಆಶ್ಚರ್ಯಕಾರ್ಯ ಮಾಡಿದನು.

20 ಅದೇನೆಂದರೆ ಬಲಿಪೀಠದಿಂದ ಆಕಾಶಕ್ಕೆ ಹೋಗುತ್ತಿದ್ದ ಅಗ್ನಿಜ್ವಾಲೆಯೊಳಗೆ ಅವನು ಮೇಲಕ್ಕೇರಿಹೋದನು. ಅವರು ಇದನ್ನು ನೋಡುತ್ತಲೆ ನೆಲದ ಮೇಲೆ ಬೋರಲಾಗಿ ಬಿದ್ದರು.

21 ಸರ್ವೇಶ್ವರನ ದೂತನು ಮಾನೋಹನಿಗೂ ಅವನ ಹೆಂಡತಿಗೂ ಪುನಃ ಕಾಣಿಸಲಿಲ್ಲ.

22 ಆಗ ಮಾನೋಹನು ಆತ ಸರ್ವೇಶ್ವರನ ದೂತನೆಂದು ತಿಳಿದು ತನ್ನ ಹೆಂಡತಿಗೆ, “ನಾವು ಸಾಯಬೇಕು.

23 ದೇವರನ್ನು ಕಣ್ಣಾರೆ ಕಂಡೆವಲ್ಲಾ!” ಎಂದನು. ಆಕೆ ಅವನಿಗೆ, “ಸರ್ವೇಶ್ವರ ನಮ್ಮನ್ನು ಕೊಲ್ಲಬೇಕೆಂದಿದ್ದರೆ ಅವರು ನಮ್ಮ ಕೈಯಿಂದ ಬಲಿಯನ್ನೂ ನೈವೇದ್ಯವನ್ನೂ ಸ್ವೀಕರಿಸುತ್ತಿರಲಿಲ್ಲ. ಈಗ ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ; ಹೇಳುತ್ತಿರಲಿಲ್ಲ,” ಎಂದಳು.

24 ಆ ಮಹಿಳೆ ಒಬ್ಬ ಮಗನನ್ನು ಹೆತ್ತು ಅವನಿಗೆ ‘ಸಂಸೋನ’ ಎಂದು ಹೆಸರಿಟ್ಟಳು. ಹುಡುಗ ಬೆಳೆದು ದೊಡ್ಡವನಾದ. ಸರ್ವೇಶ್ವರನ ಆಶೀರ್ವಾದ ಅವನ ಮೇಲಿತ್ತು.

25 ಇದಲ್ಲದೆ, ಅವನು ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿರುವ ದಾನ್ ಕುಲದ ಪಾಳೆಯದಲ್ಲಿದ್ದಾಗ ಸರ್ವೇಶ್ವರನ ಆತ್ಮ ಅವನನ್ನು ಚೇತನಗೊಳಿಸತೊಡಗಿತು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು