ನ್ಯಾಯಸ್ಥಾಪಕರು 10 - ಕನ್ನಡ ಸತ್ಯವೇದವು C.L. Bible (BSI)ತೋಲಾ ಮತ್ತು ಯಾಯೀರ್ 1 ಅಬೀಮೆಲೆಕನ ತರುವಾಯ ಇಸ್ಸಾಕಾರ್ ಕುಲದ ಪೂವನ ಮಗನೂ ದೋದೋವಿನ ಮೊಮ್ಮಗನೂ ಆಗಿದ್ದ ತೋಲನು ಎದ್ದು ಇಸ್ರಯೇಲರನ್ನು ಕಾಪಾಡಿದನು. ಅವನು ಎಫ್ರಯಿಮ್ ಮಲೆನಾಡಿನ ಶಾಮೀರವೆಂಬ ಊರಲ್ಲಿ ವಾಸವಾಗಿದ್ದನು. 2 ಇಪ್ಪತ್ತಮೂರು ವರ್ಷಗಳವರೆಗೆ ಇಸ್ರಯೇಲರನ್ನು ಪಾಲಿಸಿದ ನಂತರ ಸತ್ತು ಸಮಾಧಿಯಾದನು. 3 ಅವನ ತರುವಾಯ ಗಿಲ್ಯಾದ್ಯನಾದ ಯಾಯೀರನು ಎದ್ದು ಇಸ್ರಯೇಲರನ್ನು ಇಪ್ಪತ್ತೆರಡು ವರ್ಷ ಪಾಲಿಸಿದನು. 4 ಇವನಿಗೆ ಮೂವತ್ತು ಮಂದಿ ಮಕ್ಕಳಿದ್ದರು. ಇವರಿಗೆ ಮೂವತ್ತು ಸವಾರಿ ಕತ್ತೆಗಳೂ ಗಿಲ್ಯಾದ್ ದೇಶದಲ್ಲಿ ಮೂವತ್ತು ಊರುಗಳೂ ಇದ್ದವು. ಅವುಗಳಿಗೆ ಇಂದಿನವರೆಗೂ ಯಾಯೀರನ ಗ್ರಾಮಗಳೆಂದು ಹೆಸರಿದೆ. 5 ಯಾಯೀರನು ಸತ್ತು ಕಾಮೋನಿನಲ್ಲಿ ಸಮಾಧಿಯಾದನು. ಅಮ್ಮೋನಿಯರ ಕಾಟ 6 ಇಸ್ರಯೇಲರು ಇನ್ನೊಮ್ಮೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು; ಅವರು ಸರ್ವೇಶ್ವರನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಮತ್ತು ಅರಾಮ್ಯರು, ಚೀದೋನ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಇವರ ದೇವತೆಗಳನ್ನೂ ಪೂಜಿಸತೊಡಗಿದರು. ಸರ್ವೇಶ್ವರನನ್ನಾದರೋ ಬಿಟ್ಟೇಬಿಟ್ಟರು. 7 ಆದುದರಿಂದ ಸರ್ವೇಶ್ವರ ಇಸ್ರಯೇಲರ ಮೇಲೆ ಕೋಪಗೊಂಡು ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಒಪ್ಪಿಸಿದರು. 8 ಇವರು ಆ ವರ್ಷದಿಂದ ಹದಿನೆಂಟು ವರ್ಷಗಳವರೆಗೆ ಜೋರ್ಡನಿನ ಆಚೆ ಗಿಲ್ಯಾದಿನಲ್ಲಿದ್ದ ಇಸ್ರಯೇಲರನ್ನು ಬಹಳವಾಗಿ ಪೀಡಿಸುತ್ತಾ ಅವರ ಮೇಲೆ ದಬ್ಬಾಳಿಕೆ ನಡೆಸಿದರು. ಈ ನಾಡು ಮೊದಲು ಅಮೋರಿಯರದಾಗಿತ್ತು. 9 ಇದಲ್ಲದೆ ಅಮ್ಮೋನಿಯರು ಜೋರ್ಡನ್ ನದಿಯನ್ನು ದಾಟಿ ಯೆಹೂದ, ಬೆನ್ಯಾಮೀನ್, ಎಫ್ರಯಿಮ್ ಕುಲಗಳೊಡನೆ ಯುದ್ಧಮಾಡಿದ್ದರಿಂದ ಇಸ್ರಯೇಲರು ಬಹಳ ಕಷ್ಟಕ್ಕೀಡಾದರು. 10 ಆಗ ಅವರು ಸರ್ವೇಶ್ವರನಿಗೆ, “ನಾವು ನಮ್ಮ ದೇವರಾದ ನಿಮ್ಮನ್ನು ಬಿಟ್ಟು ಬಾಳನ ಪ್ರತಿಮೆಗಳನ್ನು ಪೂಜಿಸಿ ನಿಮಗೆ ವಿರುದ್ಧವಾಗಿ ಪಾಪಮಾಡಿದ್ದೇವೆ,” ಎಂದು ಮೊರೆಯಿಟ್ಟರು. 11 ಸರ್ವೇಶ್ವರ ಅವರಿಗೆ, “ಈಜಿಪ್ಟ್, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ, ಚೀದೋನ್ಯ, ಅಮಾಲೇಕ್ಯ, ಮಾವೋನ್ಯ 12 ಇವೇ ಮೊದಲಾದ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವುಗಳಿಂದ ನಿಮ್ಮನ್ನು ಬಿಡಿಸಿದೆ. 13 ಆದರೂ ನೀವು ಮತ್ತೆ ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಪೂಜಿಸುತ್ತಾ ಬಂದಿರಿ; ಆದುದರಿಂದ ನಾನು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವುದೇ ಇಲ್ಲ. 14 ಹೋಗಿ, ನೀವು ಆರಿಸಿಕೊಂಡ ದೇವತೆಗಳಿಗೆ ಮೊರೆಯಿಡಿ; ಅವು ನಿಮ್ಮ ಈ ಇಕ್ಕಟ್ಟಿನಲ್ಲಿ ಸಹಾಯಮಾಡಲಿ,” ಎಂದರು. 15 ಇಸ್ರಯೇಲರು ಮರಳಿ ಸರ್ವೇಶ್ವರನಿಗೆ, “ಪಾಪ ಮಾಡಿದ್ದೇವೆ; ನಿಮಗೆ ಸರಿ ತೋರಿದಂತೆ ನಮಗೆ ಮಾಡಿ; ಆದರೆ ಈ ಸಾರಿ ಹೇಗೂ ನಮ್ಮನ್ನು ರಕ್ಷಿಸಬೇಕು,” ಎಂದು ಮೊರೆಯಿಟ್ಟರು. ಅನ್ಯದೇವತೆಗಳನ್ನು ಹೊರಗೆ ಹಾಕಿ ಸರ್ವೇಶ್ವರನನ್ನು ಪೂಜಿಸತೊಡಗಿದರು. 16 ಆಗ ಇಸ್ರಯೇಲರ ಸಂಕಟದ ನಿಮಿತ್ತ ಸರ್ವೇಶ್ವರ ಬಹಳವಾಗಿ ನೊಂದುಕೊಂಡರು. 17 ಅಮ್ಮೋನಿಯರು ದಂಡೆತ್ತಿ ಬಂದು ಗಿಲ್ಯಾದಿನಲ್ಲಿ ಇಳಿದುಕೊಂಡರು. ಇಸ್ರಯೇಲರು ಕೂಡಿ ಮಿಚ್ಫೆಯಲ್ಲಿ ಪಾಳೆಯಮಾಡಿಕೊಂಡರು. 18 ಗಿಲ್ಯಾದಿನ ಜನರು ಹಾಗು ಅಧಿಪತಿಗಳು, “ನಮ್ಮಲ್ಲಿ ಅಮ್ಮೋನಿಯರೊಡನೆ ಯುದ್ಧಕ್ಕೆ ಕೈಹಾಕಬಲ್ಲವನಾರು? ಅಂಥವನನ್ನು ಗಿಲ್ಯಾದಿನವರೆಲ್ಲರ ಮೇಲೆ ನಾಯಕನನ್ನಾಗಿ ಮಾಡಬಹುದಲ್ಲಾ,” ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಂಡರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India