ನೆಹೆಮೀಯ 6 - ಕನ್ನಡ ಸತ್ಯವೇದವು C.L. Bible (BSI)ವಿರೋಧಿಗಳ ಕುಯುಕ್ತಿ 1 ನಾನು ಗೋಡೆಯನ್ನು ಕಟ್ಟಿ ಮುಗಿಸಿ ಬಾಗಿಲುಗಳಿಗೆ ಕದಗಳನ್ನು ಇನ್ನೂ ಹಚ್ಚಿಸಿರಲಿಲ್ಲ. ಗೋಡೆಯ ಸಂದುಗೊಂದುಗಳನ್ನು ಕೂಡಿಸಿದ ಸಂಗತಿ ಸನ್ಬಲ್ಲಟ್, ಟೋಬೀಯ ಹಾಗು ಅರೇಬಿಯನಾದ ಗೆಷಮ್ ಇವರಿಗೂ 2 ನಮ್ಮ ಬೇರೆ ವಿರೋಧಿಗಳಿಗೂ ಗೊತ್ತಾಯಿತು. ಅವರಲ್ಲಿ ಸನ್ಬಲ್ಲಟ್ ಮತ್ತು ಗೆಷನರು ನನಗೆ, “ಓನೋ ಕಣಿವೆಯ ಹಕ್ಕೆಫಿರೀಮಿನಲ್ಲಿ ಒಬ್ಬರನೊಬ್ಬರು ಎದುರುಗೊಳ್ಳೋಣ ಬಾ,” ಎಂದು ಹೇಳಿ ಕಳುಹಿಸಿದರು. ಅವರು ನನಗೆ ಕೇಡು ಬಗೆಯುವವರು ಎಂದು ತಿಳಿಯಿತು. 3 ನಾನು ದೂತರ ಮುಖಾಂತರ ಅವರಿಗೆ, “ನನಗೆ ಮುಖ್ಯವಾದ ಕಾರ್ಯವಿದೆ; ಅದನ್ನು ಬಿಟ್ಟು ಬಂದರೆ ಕೆಲಸ ನಿಂತುಹೋಗುತ್ತದೆ; ನಾನು ಬರಲಾಗದು,” ಎಂದು ಹೇಳಿಸಿದೆ. 4 ಅವರು ನಾಲ್ಕುಸಾರಿ ಅದೇ ರೀತಿ ಹೇಳಿ ಕಳುಹಿಸಿದರೂ ನಾನು ಅದೇ ಉತ್ತರಕೊಟ್ಟೆ. 5 ಐದನೆಯ ಸಾರಿ ಸನ್ಬಲ್ಲಟನು ಅದೇ ಉದ್ದೇಶದಿಂದ ತನ್ನ ಸ್ವಂತ ಸೇವಕನ ಮುಖಾಂತರ ಮುಚ್ಚದಿದ್ದ ಒಂದು ಪತ್ರವನ್ನು ಕಳುಹಿಸಿದನು. 6 ಅದರಲ್ಲಿ, “ಗೆಷೆಮ್ ಎಂಬವನು ನನಗೆ ತಿಳಿಸಿದ ಪ್ರಕಾರ ನೀನೂ ಯೆಹೂದ್ಯರೂ ನನ್ನ ಮೇಲೆ ದಾಳಿಮಾಡಬೇಕೆಂದಿದ್ದೀರಿ; ಆದುದರಿಂದಲೇ, ನೀನು ಆ ಗೋಡೆಯನ್ನು ಕಟ್ಟಿಸುತ್ತಿರುವೆ. ನೀನು ಅವರ ಅರಸನಾಗುವೆ ಎಂಬ ಸುದ್ದಿ ಜನರಲ್ಲಿ ಹಬ್ಬಿದೆ. 7 ಇದಲ್ಲದೆ, ಜುದೇಯದಲ್ಲಿ ಒಬ್ಬ ಅರಸನಿದ್ದಾನೆಂದು ನಿನ್ನನ್ನು ಕುರಿತು ಜೆರುಸಲೇಮಿನಲ್ಲಿ ಪ್ರಕಟಿಸುವುದಕ್ಕಾಗಿ ಪ್ರವಾದಿಗಳನ್ನು ನೇಮಿಸಿರುವೆ ಎಂಬುದಾಗಿ ಹೇಳುತ್ತಾರೆ. ಈ ಸುದ್ದಿ ರಾಜನಿಗೂ ಮುಟ್ಟಲಿದೆ; ಆದುದರಿಂದ ಕೂಡಿ ಮಾತಾಡೋಣ ಬಾ,” ಎಂದು ಬರೆದಿತ್ತು. 8 ಅದಕ್ಕೆ ನಾನು, “ನೀನು ಬರೆದಂಥದ್ದು ಏನೂ ನಡೆದಿಲ್ಲ; ಅದನ್ನು ನೀನೆ ನಿನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುವೆ,” ಎಂದು ಹೇಳಿಕಳುಹಿಸಿದೆ. 9 ಹೀಗೆ ಎಲ್ಲರೂ, ನಮ್ಮ ಕೈಗಳು ಜೋಲುಬಿದ್ದು ಕೆಲಸ ಮುಗಿಯದೆ ನಿಂತುಹೋಗಲಿ ಎಂದುಕೊಂಡು ನಮ್ಮನ್ನು ಹೆದರಿಸುವುದಕ್ಕೆ ಪ್ರಯತ್ನಿಸಿದರು. ನಾನೋ, “ನನ್ನ ದೇವರೇ, ನನ್ನ ಕೈಗಳನ್ನು ಬಲಪಡಿಸಿ,” ಎಂದು ಪ್ರಾರ್ಥಿಸಿದೆ. 10 ಒಂದು ದಿನ ನಾನು ಮೆಹೇಟಬೇಲನ ಮೊಮ್ಮಗನೂ ದೆಲಾಯನ ಮಗನೂ ಆದ ಶೆಮಾಯನ ಮನೆಗೆ ಹೋದೆ. ಅವನು ಅಲ್ಲಿ ಅವಿತುಕೊಂಡಿದ್ದನು. ಅವನು ನನಗೆ, “ನಿನ್ನನ್ನು ಕೊಲ್ಲುವುದಕ್ಕೆ ಬರುತ್ತಾರೆ; ಈ ರಾತ್ರಿಯೇ ಬರುತ್ತಾರೆ! ಆದುದರಿಂದ ನಾವಿಬ್ಬರೂ ದೇವಾಲಯಕ್ಕೆ ಹೋಗಿ ಗರ್ಭಗುಡಿಯನ್ನು ಸೇರಿ ಅದರ ಕದಗಳನ್ನು ಮುಚ್ಚಿಕೊಳ್ಳೋಣ ಬಾ,” ಎಂದು ಹೇಳಿದನು. 11 ಅದಕ್ಕೆ ನಾನು, “ನನ್ನಂಥ ಗಂಡು ಓಡಿಹೋಗಿ ಅವಿತುಕೊಳ್ಳುವುದು ಸರಿಯೇ? ಇದಲ್ಲದೆ ಪ್ರಾಣರಕ್ಷಣೆಗಾಗಿ ಗರ್ಭಗುಡಿಯನ್ನು ನಾನು ಪ್ರವೇಶಿಸಬಹುದೇ? ಇಲ್ಲ, ನಾನು ಬರುವುದಿಲ್ಲ,” ಎಂದು ಉತ್ತರಕೊಟ್ಟೆ. 12 ನಾನು ಸೂಕ್ಷ್ಮವಾಗಿ ವಿಚಾರಮಾಡಿದಾಗ, ನನ್ನ ಬಗ್ಗೆ ಆ ಕಾಲಜ್ಞಾನ ವಚನವನ್ನು ಉಚ್ಚರಿಸುವುದಕ್ಕೆ ಇವನನ್ನು ಪ್ರೇರಿಸಿದವನು ದೇವರಲ್ಲ; ಟೋಬೀಯನೂ ಸನ್ಬಲ್ಲಟನೂ ಇವನಿಗೆ ಲಂಚಕೊಟ್ಟು ಹಾಗೆ ಹೇಳಿಸಿದರೆಂದು ನನಗೆ ಗೊತ್ತು ಆಯಿತು. 13 ನಾನು ಅಂಜಿಕೊಂಡು, ಇವನ ಮಾತಿನಂತೆ ನಡೆದು ದೋಷಿಯಾಗಿ, ತಮ್ಮ ನಿಂದೆಗೂ ಕೆಟ್ಟ ಹೆಸರಿಗೂ ಗುರಿಯಾಗಲಿ ಎಂದು ಅವರು ಈ ಶೆಮಾಯನಿಗೆ ಲಂಚಕೊಟ್ಟಿದ್ದರು. 14 “ಓ ದೇವರೇ, ಟೋಬೀಯ-ಸನ್ಬಲ್ಲಟರು ಮಾಡಿದ ಈ ದುಷ್ಕೃತ್ಯಗಳು ನಿಮ್ಮ ನೆನಪಿನಲ್ಲಿರಲಿ; ನನ್ನನ್ನು ಹೆದರಿಸುವುದಕ್ಕೆ ಪ್ರಯತ್ನಿಸಿದ ಪ್ರವಾದಿನಿಯಾದ ನೋವದ್ಯ ಮುಂತಾದ ಪ್ರವಾದಿಗಳನ್ನು ಮರೆಯಬೇಡಿ,” ಎಂದು ನಾನು ಪ್ರಾರ್ಥಿಸಿದೆ. ಗೋಡೆಕಟ್ಟಡ ಕೆಲಸದ ಮುಕ್ತಾಯ 15 ಗೋಡೆಯು ಭಾದ್ರಪದ ಮಾಸದ ಇಪ್ಪತ್ತೈದನೆಯ ದಿನದಲ್ಲಿ ಮುಗಿಯಿತು. ಅದನ್ನು ಕಟ್ಟುವುದಕ್ಕೆ ಒಟ್ಟು ಐವತ್ತೆರಡು ದಿನಗಳು ಹಿಡಿದವು. 16 ಈ ಸುದ್ದಿ ಸುತ್ತ-ಮುತ್ತಲಿನ ನಮ್ಮ ವಿರೋಧಿಗಳಾದ ಜನಾಂಗಗಳಿಗೆ ಮುಟ್ಟಿತು. ಅವರು ಭಯಭೀತರಾದರು. ಸೊಕ್ಕು ಮುರಿದವರಾಗಿ ಹಾಗೇ ಕುಗ್ಗಿಹೋದರು. ಈ ಕಾರ್ಯ ನಮ್ಮ ದೇವರಿಂದಲೇ ಪೂರ್ಣಗೊಂಡಿತು ಎಂದು ಅವರಿಗೆ ಮನದಟ್ಟಾಯಿತು. 17 ಅದೇ ಸಮಯದಲ್ಲಿ, ಯೆಹೂದ್ಯ ಶ್ರೀಮಂತರಿಗೂ ಟೋಬೀಯನಿಗೂ ಬಹಳ ಪತ್ರ ವ್ಯವಹಾರ ನಡೆಯುತ್ತಿತ್ತು. 18 ಏಕೆಂದರೆ ಅವನು ಆರಹನ ಮಗ ಶೆಕನ್ಯನ ಅಳಿಯನಾಗಿದ್ದ ಹಾಗು ಯೆಹೋಹಾನಾನನೆಂಬ ಅವನ ಮಗ ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳನ್ನು ಮದುವೆಮಾಡಿಕೊಂಡಿದ್ದ. ಆದ್ದರಿಂದ ಯೆಹೂದ್ಯರಲ್ಲಿ ಅನೇಕರು ಅವನಿಗೆ ಪ್ರಮಾಣಮಾಡಿ ಅವನ ಪಕ್ಷದವರಾಗಿದ್ದರು. 19 ಅವರು ಅವನ ಒಳ್ಳೆತನವನ್ನೇ ನನ್ನ ಮುಂದೆ ವರ್ಣಿಸುತ್ತಾ ನನ್ನ ಮಾತುಗಳನ್ನು ಅವನಿಗೆ ತಿಳಿಸುತ್ತಾ ಇದ್ದರು. ಟೋಬೀಯನೂ ನನ್ನಲ್ಲಿ ಭಯಹುಟ್ಟಿಸುವುದಕ್ಕಾಗಿ ನನಗೆ ಪತ್ರಗಳನ್ನು ಕಳುಹಿಸುತ್ತಿದ್ದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India