Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನಹೂಮ 3 - ಕನ್ನಡ ಸತ್ಯವೇದವು C.L. Bible (BSI)


ನಿನೆವೆಗೆ ಕೇಡು

1 ಧಿಕ್ಕಾರ ರಕ್ತಮಯವಾದ ನಗರಕೆ! ತುಂಬಿದೆ ಅದರಲಿ ಸುಳ್ಳು ಮತ್ತು ಸುಲಿಗೆ ನಿಲ್ಲದೆ ನಡೆಯುತ್ತಿದೆ ಅದರಲಿ ಕೊಳ್ಳೆ.

2 ಕೇಳಿ, ಚಕ್ರಗಳ‍ ಚೀತ್ಕಾರ, ಚಾಟಿಗಳ ಚಟಪಟ; ಕುದುರೆಗಳ ಭರದೌಡು, ರಥಗಳ ಹಾರಾಟ.

3 ರಾಹುತರ ರಭಸ, ಕತ್ತಿಯ ಥಳಥಳಿಪು, ಈಟಿಯ ಝಳಿಪು; ಹತರಾದವರು ಅಗಣಿತ, ಸತ್ತವರು ಅಸಂಖ್ಯಾತ, ಶವಗಳ ರಾಶಿ ವಿಪರೀತ; ನುಗ್ಗುವವರು ಎಡವುತಿಹರು ಹೆಣಗಳನು ದಾಟಿಹೋಗುತ.

4 ಇದೆಲ್ಲ ಆಗುವುದು ಅಮಿತ ಹಾದರದ ನಿಮಿತ್ತ ರಾಷ್ಟ್ರಗಳನು ತನ್ನ ಬೆಡಗು ಬಿನ್ನಾಣಗಳಿಂದ ಜಾರತನಕ್ಕೂ ಗುಲಾಮತನಕ್ಕೂ ಆಕೆ ತಂದುದರಿಂದ.

5 ಇಂತೆನ್ನುತ್ತಾರೆ ಸರ್ವಶಕ್ತ ಸರ್ವೇಶ್ವರ: “ನಿನೆವೆ, ನಿನಗೆ ನಾ ವಿರೋಧಿಯಾಗಿರುವೆನು ಬಿಚ್ಚಿ ಮುಖದ ಮೇಲೆತ್ತುವೆನು ನಿನ್ನ ನೆರಿಗೆಗಳನು ಜನಾಂಗಗಳಿಗೆ ತೋರಿಸುವೆನು ನಿನ್ನ ಬೆತ್ತಲೆತನವನು ರಾಜ್ಯಗಳಿಗೆ ಕಾಣಿಸುವೆನು ನಿನ್ನ ಅವಮಾನವನು.

6 ಎಸೆಯುವೆನು ನಿನ್ನ ಮೇಲೆ ಹೊಲಸನು ಕಳೆಯುವೆನು ನಿನ್ನ ಮಾನವನು ಪರಿಹಾಸ್ಯಕ್ಕೀಡುಮಾಡುವೆನು ನಿನ್ನನು.

7 ನಿನ್ನ ನೋಡುವವರು ನಿನ್ನಿಂದ ದೂರ ಓಡುವರು “ನಿನೆವೆ ಹಾಳುಬಿದ್ದಿದೆ, ಅದಕ್ಕೆ ಗೋಳಿಡುವರಾರು? ಅದನ್ನು ಸಂತೈಸುವವರು ನಮಗೆಲ್ಲಿ ಸಿಕ್ಕಿಯಾರು?, ಎಂದುಕೊಳ್ಳುವರು.”

8 “ನೀನು ತೇಬೆಸ್ಸಿಗಿಂತ ಸುಭದ್ರಳೋ? ಅದು ನೈಲಿನ ಪ್ರವಾಹಗಳಲ್ಲಿ ನೆಲೆಯಾಗಿತ್ತು. ನೀರು ಅದನ್ನು ಸುತ್ತಿಕೊಂಡಿತ್ತು. ಮಹಾನದಿ ಅದಕ್ಕೆ ಕೋಟೆಯಾಗಿತ್ತು. ಜಲಾಶಯವು ಅದರ ದುರ್ಗವಾಗಿತ್ತು.

9 ಸುಡಾನ್ ಮತ್ತು ಈಜಿಪ್ಟ್ ಅದಕ್ಕೆ ಬೆಂಬಲವಾಗಿದ್ದವು. ಪೂಟ್ ಮತ್ತು ಲಿಬ್ನ ಅದಕ್ಕೆ ಮಿತ್ರನಾಡುಗಳಾಗಿದ್ದವು

10 ಆದರೂ ತೇಬೆಸ್ ನಗರವು ಗಡೀಪಾರಾಗಿ ಸೆರೆಹೋಯಿತು. ಅದರ ಮಕ್ಕಳನ್ನು ಬೀದಿಬೀದಿಯ ಮೂಲೆಗಳಲ್ಲಿ ಬಂಡೆಗಳಿಗೆ ಅಪ್ಪಳಿಸಲಾಯಿತು. ಅದರ ಪ್ರಮುಖರನ್ನು ಬಂಧಿಸಿ ಕೊಂಡೊಯ್ದು, ಚೀಟುಹಾಕಿ ಹಂಚಿಕೊಳ್ಳಲಾಯಿತು.

11 “ನಿನೆವೆಯೇ, ನೀನು ಸಹ ಮತ್ತಳಾಗಿ ತತ್ತರಿಸುವೆ. ಶತ್ರುಗಳಿಂದ ಆಶ್ರಯ ಕೋರುವೆ.

12 ನಿನ್ನ ಕೋಟೆಗಳೆಲ್ಲ ಮೊತ್ತಮೊದಲು ಮಾಗಿದ ಹಣ್ಣುಗಳುಳ್ಳ ಅಂಜೂರದ ಮರಗಳಂತಿವೆ. ಆ ಮರಗಳನ್ನು ಅಲ್ಲಾಡಿಸಿದ್ದೇ ಆದರೆ ಹಣ್ಣುಗಳು ಬೀಳುವುವು. ತಿನ್ನುವವರ ಬಾಯಿಗೆ,

13 ನಿನ್ನ ಯೋಧರನ್ನು ನೋಡು; ಅವರೆಲ್ಲ ಹೆಣ್ಣಿಗರು. ನಿನ್ನ ದೇಶದ ದ್ವಾರಗಳು ಶತ್ರುಗಳಿಗೆ ತೆರೆದ ಬಾಗಿಲುಗಳು. ಅದರ ಕಬ್ಬಿಣದ ಅಗುಳಿಗಳು ಬೆಂಕಿಯಿಂದ ಭಸ್ಮವಾದವು.

14 ಮುತ್ತಿಗೆಯ ಕಾಲಕ್ಕೆ ನೀರನ್ನು ಸೇದಿ ಶೇಖರಿಸಿಡು. ನಿನ್ನ ಕೋಟೆಯನ್ನು ಭದ್ರಪಡಿಸು. ಮಣ್ಣಿಗೆ ಇಳಿ; ಜೇಡಿಯನ್ನು ತುಳಿ; ಇಟ್ಟಿಗೆಯ ಅಚ್ಚನ್ನು ಹಿಡಿ.

15 ನೀನು ಇದ್ದಲ್ಲಿಯೇ ಬೆಂಕಿ ನಿನ್ನನ್ನು ಕಬಳಿಸುವುದು. ಕತ್ತಿಯು ನಿನ್ನನ್ನು ಕಡಿದುಬಿಡುವುದು. ಮಿಡತೆಗಳು ಬೆಳೆಯನ್ನು ನುಂಗುವಂತೆ ಶತ್ರುಗಳು ನಿನ್ನನ್ನು ನುಂಗಿಬಿಡುವರು. “ನಿನ್ನ ಜನರು ಮಿಡತೆಗಳಂತೆ ಅಸಂಖ್ಯಾತರಾಗಲಿ! ಗುಂಪುಮಿಡತೆಗಳಂತೆ ಅಪರಿಮಿತರಾಗಲಿ!

16 ನಿನ್ನ ವರ್ತಕರು ಆಕಾಶದ ನಕ್ಷತ್ರಗಳಿಗಿಂತ ಅಧಿಕವಾಗಲಿ! ಆದರೆ ಈಗ ಮಿಡತೆ ತನ್ನ ಪರೆಯನ್ನು ಬಿಟ್ಟು ಹಾರಿಹೋಗುವಂತೆ ಎಲ್ಲರು ಪಲಾಯನವಾಗಲಿ!

17 ನಿನ್ನ ಪಹರೆಯವರು ಮಿಡತೆಗಳಂತೆ, ನಿನ್ನ ಸೇನಾಧಿಪತಿಗಳು ಗುಂಪು ಮಿಡತೆಗಳಂತೆ ಇದ್ದಾರೆ. ಚಳಿಗಾಲದಲ್ಲಿ ಅವು ಬೇಲಿಯ ಮರೆಯಲ್ಲಿರುತ್ತವೆ. ಹೊತ್ತು ಹುಟ್ಟಿದಾಗ ಯಾರಿಗೂ ತಿಳಿಯದ ಸ್ಥಳಕ್ಕೆ ಹಾರಿಹೋಗುತ್ತವೆ.

18 “ಅಸ್ಸೀರಿಯಾದ ಅರಸನೇ, ನಿನ್ನ ರಾಜ್ಯಪಾಲರು ದೀರ್ಘನಿದ್ರೆಯಲ್ಲಿದ್ದಾರೆ. ನಿನ್ನ ಪ್ರಮುಖರು ಜಡವಾಗಿ ಬಿದ್ದಿದ್ದಾರೆ. ನಿನ್ನ ಪ್ರಜೆಗಳು ಬೆಟ್ಟಗುಡ್ಡಗಳಲ್ಲಿ ಚದರಿಹೋಗಿದ್ದಾರೆ. ಅವರನ್ನು ಒಟ್ಟುಗೂಡಿಸತಕ್ಕವರು ಯಾರೂ ಇಲ್ಲದಿದ್ದಾರೆ.

19 ನಿನ್ನ ಗಾಯಕ್ಕೆ ಮದ್ದಿಲ್ಲ. ನಿನಗೆ ಬಿದ್ದಿರುವ ಪೆಟ್ಟು ಪ್ರಾಣನಾಶಕ. ನಿನ್ನ ವಿನಾಶದ ಸಮಾಚಾರವನ್ನು ಕೇಳುವವರೆಲ್ಲ ಚಪ್ಪಾಳೆ ಹಾಕುತ್ತಾರೆ. ಏಕೆಂದರೆ ನೀನು ಮಾಡಿರುವ ಕೇಡಿಗೆ ಕೊನೆಯಿಲ್ಲ. ಅದರಿಂದ ತಪ್ಪಿಸಿಕೊಂಡವರು ಯಾರೂ ಇಲ್ಲ.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು