ನಹೂಮ 2 - ಕನ್ನಡ ಸತ್ಯವೇದವು C.L. Bible (BSI)ನಿನೆವೆಯ ಪತನ 1 ನಿನೆವೆಯೇ, ನಿನಗೆದುರಾಗಿ ನಿಂತಿಹನು, ನಿನ್ನನ್ನು ಚದುರಿಸುವವನು! ಕಾವಲಿಡು ಕೋಟೆಯ ಸುತ್ತಲು ಪಹರೆಯಿಡು ದಾರಿ ಕಾಯಲು; ಅಣಿಯಾಗಲಿ ನಿನ್ನ ಸೈನ್ಯವಿಡೀ, ನಡುಕಟ್ಟಿ ನಿಲ್ಲು. 2 (ಸರ್ವೇಶ್ವರ, ಕೊಳ್ಳೆಗಾರರು ಸುಲಿಗೆಮಾಡಿದ್ದನ್ನೂ ಮುರಿದುಹಾಕಿದ ದ್ರಾಕ್ಷಿಯ ತೋಟಗಳನ್ನೂ ಸರಿಪಡಿಸಲಿದ್ದಾರೆ. ಯಕೋಬಿನ ಮಹತ್ವವನ್ನು ಹಾಗೂ ಇಸ್ರಯೇಲಿನ ಮಹಿಮೆಯನ್ನು ಈಗ ಮತ್ತೆ ಸ್ಥಾಪಿಸಲಿದ್ದಾರೆ). 3 ಶತ್ರುವಿನ ಶೂರರ ಗುರಾಣಿ ರಕ್ತಗೆಂಪು, ಪರಾಕ್ರಮಿಗಳ ಉಡುಪು ಕಡುಗೆಂಪು. ರಣರಂಗದೊಳು ಥಳಥಳಿಸುತ್ತವೆ ರಥಗಳು ಝಳಪಿಸುತ್ತವೆ ಈಟಿಗಳು. ಕಾಳಗಕ್ಕೆ ಕಾತರದಿಂದಿವೆ ಕುದುರೆಗಳು. 4 ಹಾದಿಬೀದಿಗಳಲಿ ಓಡಾಡುತ್ತಿವೆ ರಥಗಳು ರಭಸದಿಂದ ನಗರ ಚೌಕಗಳಲ್ಲಿ ಅವು ಅಡ್ಡಾಡುತ್ತವೆ ವೇಗದಿಂದ ಅವು ಬೆಳಗುತ್ತಿವೆ ಪಂಜುಗಳಂತೆ, ಹೊಳೆಯುತ್ತಿವೆ ಮಿಂಚಿನಂತೆ. 5 ಹಾಜರಾಗಲು ಕರೆಬಂದಿದೆ ಅರಸನಿಂದ ಸೇನಾಪತಿಗಳಿಗೆ; ಎದ್ದುಬಿದ್ದು ಓಡಾಡುತ್ತಿರೆ ಅವರು ಪೌಳಿಗೋಡೆ ಕಡೆಗೆ ಅಡ್ಡ ಗುರಾಣಿಗಳನ್ನೊಡ್ಡುತ್ತಿರೆ ಟಗರು ದಿಮ್ಮಿಗಳಿಗೆ. 6 ತೆರೆಯಲಾಗಿವೆ ನದಿಯ ದ್ವಾರಗಳು ಕುಸಿದುಬಿದ್ದಿವೆ ಅರಮನೆಯ ಗೋಡೆಗಳು. 7 ಸೆರೆಹಿಡಿದಿರುವರು ರಾಣಿಯನು; ತಂದಿಹರು ಆಕೆಯನು ಬೈಲಿಗೆ. ದಾಸಿಯರು ಬಡಿದುಕೊಳ್ಳುತಿಹರು ಎದೆ; ರೋದಿಸುತಿಹರು ಪಾರಿವಾಳಗಳಂತೆ. 8 ನಿನೆವೆ ಕಟ್ಟೆಯೊಡೆದ ಕೆರೆಯಂತಿದೆ; “ನಿಲ್ಲಿರಿ! ನಿಲ್ಲಿರಿ!” ಎಂಬ ಕೂಗು ಕೇಳುತ್ತಿದೆ; ಆದರೂ ಓಡುತಿಹರು ಜನರೆಲ್ಲರು ಹಿಂದೆ ನೋಡದೆ. 9 ಸೂರೆ ಮಾಡಿರಿ ಅದರ ಬೆಳ್ಳಿಯನು, ಕೊಳ್ಳೆಹೊಡೆಯಿರಿ ಬಂಗಾರವನು. ಮಿತಿಯಿಲ್ಲ ಅದರ ಧನಕನಕಕೆ, ಎಲ್ಲೆಯಿಲ್ಲ ಅದರ ಅಮೂಲ್ಯ ಆಸ್ತಿಪಾಸ್ತಿಗೆ. 10 ನಿನೆವೆ ಬರಿದಾಗಿದೆ; ಬಟ್ಟಬರಿದಾಗಿ ಪಾಳುಬಿದ್ದಿದೆ; ಎದೆಕರಗಿದೆ, ಮೊಣಕಾಲುಗಳು ಅದರುತ್ತಿವೆ. ಎಲ್ಲರ ಸೊಂಟಗಳು ಮುರಿದಂತಾಗಿವೆ, ಅವರ ಮುಖಗಳು ಬಾಡಿಹೋಗಿವೆ. 11 ಮೃಗರಾಜನ ಗವಿಯೆಲ್ಲಿ? ಯುವಸಿಂಹಗಳ ಹಕ್ಕೆಯೆಲ್ಲಿ? ಸಿಂಹ ಸಿಂಹಿಣಿಗಳು, ಅವುಗಳ ಮರಿಗಳು ಹೆದರದೆ ತಿರುಗಾಡುತ್ತಿದ್ದ ಎಡೆಯೆಲ್ಲಿ? 12 ಅಲ್ಲಿ ಸಿಂಹಬೇಟೆಯನ್ನು ಸೀಳಿಹಾಕುತ್ತಿತ್ತು ತನ್ನ ಮರಿಗಳಿಗಾಗಿ; ಕೊರಳುಹಿಡಿದು ಪ್ರಾಣಿಗಳನ್ನು ಹೊಸಕುತ್ತಿತ್ತು ಸಿಂಹಿಣಿಗಳಿಗಾಗಿ; ಗವಿಗಳನ್ನು ಬೇಟೆಯಿಂದ, ಹಕ್ಕೆಗಳನ್ನು ಮಾಂಸದಿಂದ ತುಂಬಿಸುತ್ತಿತ್ತು ಅವುಗಳಿಗಾಗಿ. 13 ಇಂತೆನ್ನುತ್ತಾರೆ ಸರ್ವಶಕ್ತ ಸರ್ವೇಶ್ವರ: “ನಿನಗೆ ವಿರುದ್ಧವಾಗಿದ್ದೇನೆ ನಾನು; ಸುಟ್ಟು ಭಸ್ಮಮಾಡುವೆ ನಿನ್ನ ರಥಗಳನು; ಸಂಹರಿಸಿಬಿಡುವೆನು ನಿನ್ನ ಯುವಸಿಂಹಗಳನು; ನಿನಗೆ ಜಗದಲ್ಲೆಲ್ಲ ಬೇಟೆ ಸಿಗದಂತೆ ಮಾಡುವೆನು; ಯಾರೂ ಕೇಳರು ನಿನ್ನ ರಾಯಭಾರಿಗಳ ಮಾತನು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India