Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ನಹೂಮ 1 - ಕನ್ನಡ ಸತ್ಯವೇದವು C.L. Bible (BSI)


ನಿನೆವೆಯ ಮೇಲೆ ಪ್ರಭುವಿನ ಶಾಪ

1 ನಿನೆವೆಯನ್ನು ಕುರಿತ ದೈವೋಕ್ತಿ. ಎಲ್ಕೋಷ್ ಊರಿನ ನಹೂಮ ಪ್ರವಾದಿಗೆ ಆದ ದೈವದರ್ಶನವಿದು:

2 ಸರ್ವೇಶ್ವರ ಸ್ವಗೌರವವನು ಕಾಪಾಡಿಕೊಳ್ಳುವ ದೇವರು ಮುಯ್ಯಿತೀರಿಸುವ, ಹೌದು, ಕಡುಕೋಪದಿಂದ ಮುಯ್ಯಿತೀರಿಸುವ ದೇವರು. ಸರ್ವೇಶ್ವರ ಮುಯ್ಯಿತೀರಿಸುತ್ತಾರೆ ತನ್ನ ವಿರೋಧಿಗಳಿಗೆ ದೀರ್ಘರೋಷವಿಡುತ್ತಾರೆ, ತಮ್ಮ ಶತ್ರುಗಳ ಮೇಲೆ.

3 ಸರ್ವೇಶ್ವರ ಶಾಂತಿಸ್ವರೂಪಿ; ಆದರೆ ಆತನ ಶಕ್ತಿ ಅಪಾರ, ಅಪರಾಧಿಗಳನ್ನು ಆತ ಶಿಕ್ಷಿಸದೆ ಬಿಡ; ಗಾಳಿಬಿರುಗಾಳಿಗಳ ನಡುವೆ ಆತನ ಹಾದಿ; ಮೋಡಗಳು ಆತನ ನಡೆಯಿಂದೇಳುವ ಧೂಳಿ.

4 ಆತನ ಗದರಿಕೆಯೊಂದಕೆ ಬತ್ತಿಹೋಗುತ್ತದೆ ಸಮುದ್ರ; ನಂದಿಹೋಗುತ್ತವೆ ನದಿಸರೋವರ. ಕಂದುತ್ತವೆ ಕಾರ್ಮೆಲ್ ಗುಡ್ಡಗಳು ಬಾಡುತ್ತವೆ ಬಾಷಾನಿನ ಹೊಲಗಳು ಮುದುಡುತ್ತವೆ ಲೆಬನೋನಿನ ಚಿಗುರುಗಳು.

5 ಆತನೆದುರು ಅದರುತ್ತವೆ ಬೆಟ್ಟಗಳು ಕರಗುತ್ತವೆ ಗುಡ್ಡಗಳು. ಆತನ ದರ್ಶನಕೆ ಕಂಪಿಸುತ್ತದೆ ಭೂಗೋಳವು ತಲ್ಲಣಿಸುತ್ತದೆ ಲೋಕ ಲೋಕನಿವಾಸಿಗಳೆಲ್ಲವು.

6 ಯಾರು ತಡೆದಾರು ಆತನ ಸಿಟ್ಟಿಗೆ? ಯಾರು ನಿಂತಾರು ಆತನ ರೋಷಾಗ್ನಿಗೆ? ಆತನ ರೌದ್ರ ಜ್ವಾಲಾಪ್ರವಾಹದಂತೆ ಬಂಡೆಗಳು ಪುಡಿಪುಡಿ ಆತನ ಮುಂದೆ.

7 ಒಳ್ಳೆಯವನು ಸರ್ವೇಶ್ವರ ಸಂಕಟದಲಿ ಆಶ್ರಯದುರ್ಗ ಮೊರೆಹೊಕ್ಕವರನು ಚೆನ್ನಾಗಿ ಬಲ್ಲನಾತ.

8 ನಾಶಗೊಳಿಸುವನು ನಿನೆವೆಯನು ಮಹಾಜಲಪ್ರಳಯದಲ್ಲೋ ಎಂಬಂತೆ ಹಿಂದಟ್ಟಿ ತಳ್ಳುವನು ವಿರೋಧಿಗಳನು ಗಾಢಾಂಧಕಾರಕ್ಕೋ ಎಂಬಂತೆ.

9 ಸರ್ವೇಶ್ವರನ ವಿರುದ್ಧ ಮಾಡಬಲ್ಲಿರಾ ನೀವು ಕುಯುಕ್ತಿ? ಮರಳಿ ತಲೆಯೆತ್ತದಂತೆ ನಾಶಮಾಡುವನು ನಿಮ್ಮನು ಪೂರ್ತಿಯಾಗಿ.

10 ಆತನ ವೈರಿಗಳು ಹೆಣೆದುಕೊಂಡಿದ್ದರೂ ಮುಳ್ಳುಗಳಂತೆ ಕುಡಿದು ಮತ್ತರಾಗಿ ಮುಳುಗಿದ್ದರೂ ಮದ್ಯದಲ್ಲೆ ತುತ್ತಾಗುವರು ಬೆಂಕಿಗೆ ತೀರ ಒಣಗಿದ ಕೂಳೆಯಂತೆ.

11 ನಿನೆವೆಯೇ, ಸರ್ವೇಶ್ವರಸ್ವಾಮಿಗೆ ವಿರುದ್ಧವಾಗಿ ಕುಯುಕ್ತಿಯನ್ನು ಕಲ್ಪಿಸುವವನು ನಿನ್ನಿಂದಲೆ ಹೊರಟಿದ್ದಾನೆ.

12 ಆ ಸ್ವಾಮಿ ಇಂತೆನ್ನುತ್ತಾನೆ: “ನಿನ್ನ ಶತ್ರುಗಳು ಎಷ್ಟು ಬಲಾಢ್ಯರಾಗಿದ್ದರೂ ಎಷ್ಟು ಅಧಿಕ ಸಂಖ್ಯೆಯಲ್ಲಿದ್ದರೂ ಅವರು ನಾಶಕ್ಕೊಳಗಾಗುವರು; ಆ ದುರಾಲೋಚಕನು ಇಲ್ಲವಾಗುವನು. ನನ್ನ ಜನರೇ, ನಾನು ನಿಮ್ಮನ್ನು ಬಾಧಿಸಿದ್ದುಂಟು, ಆದರೆ ಇನ್ನು ಮುಂದೆ ಬಾಧಿಸುವುದಿಲ್ಲ.

13 ಆ ಶತ್ರು ನಿಮ್ಮ ಮೇಲೆ ಹೇರಿದ ನೊಗವನ್ನು ಈಗ ನಿಮ್ಮಿಂದ ತೆಗೆದು ಮುರಿದುಬಿಡುವೆನು. ನಿಮ್ಮ ಸಂಕೋಲೆಗಳನ್ನು ಕಿತ್ತುಹಾಕುವೆನು.”

14 ಅಸ್ಸೀರಿಯವೇ, ಸರ್ವೇಶ್ವರನಾದ ನಾನು ನಿನ್ನ ಬಗ್ಗೆ ಹೊರಡಿಸಿದ ಆಜ್ಞೆ ಏನೆಂದರೆ: ಹೆಸರೆತ್ತಲು ನಿನಗೆ ಸಂತಾನವೇ ಇಲ್ಲದಂತಾಗುವುದು. ನಿನ್ನ ದೇವರುಗಳ ಗುಡಿಗಳಲ್ಲಿರುವ ಕೆತ್ತನೆಯ ವಿಗ್ರಹವನ್ನೂ ಎರಕದ ಬೊಂಬೆಯನ್ನೂ ಒಡೆದುಹಾಕುವೆನು. ನಿನಗೆ ಸಮಾಧಿಯೊಂದನ್ನು ಸಿದ್ಧಗೊಳಿಸುವೆನು; ಏಕೆಂದರೆ ನೀನು ಕೆಡುಕ.”

15 ಇಗೋ, ಶುಭಸಂದೇಶವನ್ನು ಸಾರಲು ದೂತನೊಬ್ಬನು ಪರ್ವತದಿಂದ ಇಳಿದು ಬರುತ್ತಿದ್ದಾನೆ! ಶಾಂತಿ ಸಮಾಧಾನವನ್ನು ಘೋಷಿಸಲು ತ್ವರೆಪಡುತ್ತಿದ್ದಾನೆ! ಜುದೇಯ ನಾಡೇ, ನಿನ್ನ ಹಬ್ಬಗಳನ್ನು ಆಚರಿಸು. ನಿನ್ನ ಹರಕೆಗಳನ್ನು ಸಲ್ಲಿಸು. ಆ ದುಷ್ಟ ಶತ್ರು ಇನ್ನೆಂದಿಗೂ ನಿನಗೆ ಮುತ್ತಿಗೆಹಾಕಲಾರನು. ಅವನು ಸಂಪೂರ್ಣವಾಗಿ ನಾಶವಾಗಿದ್ದಾನೆ!

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು