ಮುನ್ನುಡಿ
ಈಜಿಪ್ಟಿನಿಂದ ಬಿಡುಗಡೆಹೊಂದಿದ ಇಸ್ರಯೇಲರು ಮೋಶೆಯ ಮುಂದಾಳತ್ವದಲ್ಲಿ, ಸುದೀರ್ಘ ಪ್ರಯಾಣ ಮಾಡಿ, ಮೋವಾಬ್ ನಾಡನ್ನು ಬಂದು ಸೇರುತ್ತಾರೆ. ದೇವರು ಅವರಿಗೆ ಸ್ವದೇಶವಾಗಿ ಕೊಡಲು ವಾಗ್ದಾನ ಮಾಡಿದ್ದು ಕಾನಾನ್ ನಾಡನ್ನು. ಈ ನಾಡನ್ನು ಪ್ರವೇಶಿಸುವುದಕ್ಕೆ ಮುಂಚೆ ಮೋಶೆ ತನ್ನ ಇಸ್ರಯೇಲ್ ಜನರನ್ನು ಸಂಬೋಧಿಸುತ್ತಾನೆ. ಅವನು ಮಾಡಿದ ಉಪದೇಶಗಳನ್ನೂ ಉಪನ್ಯಾಸಗಳನ್ನೂ ಈ ಗ್ರಂಥದಲ್ಲಿ ಸಂಗ್ರಹಿಸಲಾಗಿದೆ.
ಇದರಲ್ಲಿ ನಾಲ್ಕು ಮುಖ್ಯಾಂಶಗಳನ್ನು ಗಮನಿಸಬಹುದು : (1) ದೇವರು ಇಸ್ರಯೇಲರಿಗೆ ಕಳೆದ ನಲವತ್ತು ವರ್ಷಗಳಲ್ಲಿ ಮಾಡಿದ ನಾನಾ ಉಪಕಾರಗಳನ್ನು ಮೋಶೆ ನೆನಪಿಗೆ ತರುತ್ತಾನೆ. ಈ ಕಾರಣ ಅವರು ಕೃತಜ್ಞರಾಗಿ ಬಾಳಬೇಕು; ದೇವರಿಗೆ ಪ್ರಾಮಾಣಿಕರಾಗಿ ನಡೆದುಕೊಳ್ಳಬೇಕು; (2) ದೇವರ ಹತ್ತು ಆಜ್ಞೆಗಳನ್ನು ಮುಖ್ಯವಾಗಿ ಮೊದಲನೆಯ ಆಜ್ಞೆಯನ್ನು ಕುರಿತು ಮೋಶೆ ಒತ್ತಿ ಹೇಳುತ್ತಾನೆ. ಸರ್ವೇಶ್ವರ ಸ್ವಾಮಿಯೊಬ್ಬರನ್ನೇ ಅವರು ಆರಾಧಿಸಬೇಕು; ಅವರೊಬ್ಬರಿಗೇ ಶರಣರಾಗಿ ನಡೆದುಕೊಳ್ಳಬೇಕು; ಆಗ ಅವರ ಬಾಳು ಬೆಳಕಾಗುವುದು, ವಶಪಡಿಸಿಕೊಳ್ಳಲಿರುವ ನಾಡಿನಲ್ಲಿ ಅವರ ಜೀವನ ಸುಗಮವಾಗುವುದು; (3) ದೇವರೊಡನೆ ಒಡಂಬಡಿಕೆ, ಒಪ್ಪಂದ ಇವುಗಳ ಅರ್ಥವನ್ನು ವಿವರಿಸುತ್ತಾ ಅದರ ನಿಬಂಧನೆಗಳನ್ನು ಪ್ರಾಮಾಣಿಕವಾಗಿ ಪರಿಪಾಲಿಸುವುದರ ಅವಶ್ಯಕತೆಯನ್ನು ಮೋಶೆ ಮನನಮಾಡಿಕೊಡುತ್ತಾನೆ; (4) ಇಸ್ರಯೇಲ್ ದೇವಜನರ ಮರುನಾಯಕನಾಗಿ ಯೆಹೋಶುವ ನೇಮಕಗೊಳ್ಳುತ್ತಾನೆ.
ದೇವರು ಇಸ್ರಯೇಲ್ ಜನತೆಯನ್ನು ಬಹಳವಾಗಿ ಪ್ರೀತಿಸಿ, ವಿಮೋಚಿಸಿ, ಆಶೀರ್ವದಿಸುತ್ತಾರೆ. ಆ ಜನರು ಇದನ್ನು ಮನದಟ್ಟುಮಾಡಿಕೊಂಡು ದೇವರಿಗೆ ಪ್ರಾಮಾಣಿಕ ಭಕ್ತಾದಿಗಳಾಗಿ ನಡೆದುಕೊಂಡರೆ ಬದುಕಿಬಾಳುವರು ಎಂಬುದು ಈ ಗ್ರಂಥದ ತಿರುಳೆನ್ನಬಹುದು. ಇದರ ಮೇರು ವಾಕ್ಯವೆಂದರೆ ಇದು : “ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಶಕ್ತಿಯಿಂದ ನಿನ್ನ ದೇವರಾದ ಸರ್ವೇಶ್ವರನನ್ನು ಪ್ರೀತಿಸು.” (6:5)
ಪರಿವಿಡಿ
ಮೋಶೆಯ ಮೊದಲನೆಯ ಉಪದೇಶ 1:1—4:49
ಮೋಶೆಯ ಎರಡನೆಯ ಉಪದೇಶ 5:1—26:19
ಅ) ದೇವರ ಹತ್ತು ಆಜ್ಞೆಗಳು 5:1—10:22
ಆ) ಇತರ ಕಾನೂನು ಕಟ್ಟಳೆಗಳು 11:1—26:19
ಕಾನಾನ್ ನಾಡನ್ನು ಪ್ರವೇಶಿಸುವಾಗ ಗಮನಿಸಬೇಕಾದ ಅಂಶಗಳು 27:1—28:68
ಒಡಂಬಡಿಕೆಯ ನವೀಕರಣ 29:1—30:20
ಮೋಶೆಯಿತ್ತ ಕೊನೆಯ ಬುದ್ಧಿವಾದ 31:1—33:29
ಮೋಶೆಯ ನಿಧನ 34:1-12