ಧರ್ಮೋಪದೇಶಕಾಂಡ 34 - ಕನ್ನಡ ಸತ್ಯವೇದವು C.L. Bible (BSI)ಮೋಶೆಯ ಮರಣ 1 ಮೋಶೆ ಮೋವಾಬ್ಯರ ಬಯಲು ನಾಡಿನಿಂದ ಜೆರಿಕೋ ಪಟ್ಟಣಕ್ಕೆ ಎದುರಾಗಿ ಇರುವ ನೆಬೋ ಪರ್ವತಕ್ಕೆ ಹೋಗಿ, ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಸರ್ವೆಶ್ವರ ಕಾನಾನ್ ನಾಡೆಲ್ಲವನ್ನು ಅಂದರೆ, ದಾನ್ ಪಟ್ಟಣದವರೆಗಿದ್ದ ಗಿಲ್ಯಾದ್ ಪ್ರಾಂತ್ಯ, 2 ನಫ್ತಾಲಿ ಪ್ರದೇಶ, ಎಫ್ರಯಿಮ್ ಮನಸ್ಸೆ ಕುಲಗಳವರ ಪ್ರಾಂತ್ಯ, ಪಶ್ಚಿಮ ಸಮುದ್ರದವರೆಗಿದ್ದ ಜುದೇಯನಾಡು, 3 ದಕ್ಷಿಣ ಪ್ರದೇಶ, ಚೋಗರೂರಿನ ತನಕ ಇದ್ದ ಜೆರಿಕೋ ಖರ್ಜೂರಗಳ ಪಟ್ಟಣದ ಸುತ್ತಲಿನ ಬಯಲು, ಇದನ್ನೆಲ್ಲಾ ಅವನಿಗೆ ತೋರಿಸಿದರು. 4 ಅನಂತರ, “ನಾನು ಅಬ್ರಹಾಮ್, ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಅವರ ಸಂತತಿಯವರಿಗೆ ಕೊಡುವೆನೆಂದು ವಾಗ್ದಾನ ಮಾಡಿದ ನಾಡು ಇದೇ; ಇದನ್ನು ನಿನಗೆ ಪ್ರತ್ಯಕ್ಷವಾಗಿ ತೋರಿಸಿದ್ದೇನೆ. ಆದರೆ ನೀನು ನದಿದಾಟಿ ಅಲ್ಲಿಗೆ ಹೋಗಕೂಡದು,” ಎಂದು ಹೇಳಿದರು. 5 ಸರ್ವೇಶ್ವರನ ಮಾತಿನಂತೆ ಅವರ ದಾಸ ಮೋಶೆ ಅಲ್ಲೇ ಮೋವಾಬ್ಯರ ದೇಶದಲ್ಲಿ ಮೃತನಾದನು. 6 ಮೋವಾಬ್ಯರ ದೇಶದಲ್ಲಿ ಬೇತ್ಪೆಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಅವನ ದೇಹವನ್ನು ಸಮಾಧಿಮಾಡಿದರು. ಅವನ ಸಮಾಧಿ ಎಲ್ಲಿದೆಯೆಂದು ಇಂದಿನವರೆಗೆ ಯಾರಿಗೂ ತಿಳಿಯದು. 7 ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ. 8 ಮೋವಾಬ್ಯರ ಬಯಲಿನಲ್ಲಿ ಇಸ್ರಯೇಲರು ಮೋಶೆಗಾಗಿ ಮೂವತ್ತು ದಿನ ದುಃಖಿಸಿದರು. ಅಲ್ಲಿಗೆ ಮೋಶೆಯ ಸಂತಾಪದ ದಿನಗಳು ಮುಗಿದವು. 9 ಮೋಶೆ ನೂನನ ಮಗನಾದ ಯೆಹೋಶುವನ ಮೇಲೆ ಹಸ್ತಕ್ಷೇಪಮಾಡಿದ್ದರಿಂದ ಅವನು ಜ್ಞಾನವರಸಂಪನ್ನನಾದನು. ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆಗೆ ಅನುಸಾರ ಇಸ್ರಯೇಲರು ಯೆಹೋಶುವನ ಮಾತಿನ ಪ್ರಕಾರ ನಡೆದರು. 10 ಸರ್ವೇಶ್ವರ ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡಿದರು. 11 ಈಜಿಪ್ಟ್ ದೇಶದಲ್ಲಿ ಫರೋಹನ ಮುಂದೆ ಹಾಗು ಅವನ ಪ್ರಜಾಪರಿವಾರದವರ ಮುಂದೆ ಅವನು ವಿಧವಿಧವಾದ ಪವಾಡಗಳನ್ನೂ ಮಹತ್ಕಾರ್ಯಗಳನ್ನೂ ನಡೆಸಿದನು; ಸರ್ವೇಶ್ವರ ಅವನನ್ನು ಅದಕ್ಕಾಗಿಯೇ ಕಳುಹಿಸಿದ್ದರು. 12 ಇಸ್ರಯೇಲರ ಕಣ್ಮುಂದೆ ವಿಶೇಷ ಭುಜಪರಾಕ್ರಮವನ್ನೂ ಆಶ್ಚರ್ಯಕರವಾದ ಕಾರ್ಯಗಳನ್ನೂ ನಡೆಸಿದನು. ಇಂಥವನಿಗೆ ಸಮಾನನಾದ ಮತ್ತೊಬ್ಬ ಪ್ರವಾದಿ ಈಚೆಗೆ ಇಸ್ರಯೇಲರಲ್ಲಿ ಹುಟ್ಟಲೇ ಇಲ್ಲ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India