ಧರ್ಮೋಪದೇಶಕಾಂಡ 33 - ಕನ್ನಡ ಸತ್ಯವೇದವು C.L. Bible (BSI)ಹನ್ನೆರಡು ಕುಲಗಳಿಗೆ ಮೋಶೆಯ ಆಶೀರ್ವಚನ 1 ದೇವಪುರುಷನದ ಮೋಶೆ ದೇಹವನ್ನು ಬಿಡುವುದಕ್ಕಿಂತ ಮುಂಚೆ ಇಸ್ರಯೇಲರನ್ನು ಕುರಿತು ಹೇಳಿದ ಆಶೀರ್ವಚನಗಳಿವು: 2 ಸರ್ವೇಶ್ವರ ಸೀನಾಯ್ ಬೆಟ್ಟದಿಂದ ಬಂದರು, ಸೇಯೀರ್ ಎಂಬ ಸೀಮೆಯೊಳಗಿಂದ ಉದಯಿಸಿದರು, ಪಾರಾನ್ ಎಂಬ ಪರ್ವತದಿಂದ ಪ್ರಜ್ವಲಿಸಿದರು, ಲಕ್ಷಾಂತರ ಸಂತರ ಮಧ್ಯೆಯಿಂದ ದಯಮಾಡಿದರು. ಅಗ್ನಿಸದೃಶವಾದ ಧರ್ಮಶಾಸ್ತ್ರ ಅವರ ಬಲಪಾರ್ಶ್ವದಲ್ಲಿತ್ತು. 3 ಹೌದು, ಆತ ಪ್ರೀತಿಸುತ್ತಾನೆ ತನ್ನ ಪ್ರಜೆಯನ್ನು, ಆಶ್ರಯ ನೀಡುತ್ತಾನೆ ತನ್ನ ಭಕ್ತರೆಲ್ಲರಿಗು. ಎಂದೇ ಆತನ ಆಜ್ಞೆಗಳಿಗೆ ತಲೆಬಾಗುವೆವು, ಆತನ ಪಾದಚರಣದಲೆ ಕುಳಿತಿರುವೆವು. 4 ಯಕೋಬ ಸಂತತಿಯಾದ ನಮಗೆ ಇತ್ತನು ಮೋಶೆ ಧರ್ಮಶಾಸ್ತ್ರವನ್ನು ಸೊತ್ತಾಗಿ 5 ಇಸ್ರಯೇಲರ ಕುಲಗಳು ಒಂದಾದಾಗ ಜನನಾಯಕರು ಒಟ್ಟಾಗಿ ಕೂಡಿದಾಗ ಯೆಶುರೂನಿನಲಿ ಸರ್ವೇಶ್ವರನೇ ಅರಸನಾದ. 6 ರೂಬೇನ್ ಕುಲ ಕುರಿತು ಮೋಶೆ ನುಡಿದದ್ದು: “ರೂಬೇನ್ ಅಳಿಯದೆ ಉಳಿಯಲಿ ಅವನ ಮಕ್ಕಳು ಅಸಂಖ್ಯಾತರಾಗದಿರಲಿ.” 7 ಯೆಹೂದ ಕುಲ ಕುರಿತು ಮೋಶೆ ಹೇಳಿದ್ದು: “ಸರ್ವೇಶ್ವರಾ, ಯೆಹೂದನ ಮೊರೆಯನ್ನಾಲಿಸು ಬಂಧುಗಳೊಡನೆ ಅವನನ್ನು ಮರಳಿ ಸೇರಿಸು ತನ್ನ ಹಕ್ಕುಬಾಧ್ಯತೆಗಳನ್ನು ಕಾದಿರಿಸಿಕೊಳ್ಳಲು ಶತ್ರುಗಳ ಕೈಯಿಂದ ಅವನನ್ನು ತಪ್ಪಿಸು.” 8 ಲೇವಿಯ ಕುಲ ಕುರಿತು ಮೋಶೆ ನುಡಿದದ್ದು: “ಸರ್ವೇಶ್ವರಾ, ನೀಡಿವನಿಗೆ ನಿನ್ನ ವಿಧಿ ತಿಳಿಸುವ ಊರಿಮ್, ನಿನ್ನ ಭಕ್ತನಾದ ಇವನ ವಶದಲ್ಲಿರಲಿ ಆ ತುಮ್ಮೀಮ್. ನೀನಿವನನ್ನು ಪರೀಕ್ಷಿಸಿದೆ ಮಸ್ಸದಲ್ಲಿ ವಿವಾದಿಸಿದೆ ಜಲ ಹೊರಹೊಮ್ಮಿದ ಮೆರೀಬದಲ್ಲಿ. 9 ನಿನ್ನ ಆಜ್ಞೆಗಳನ್ನು ಕೈಗೊಳ್ಳಲೆಂದು ನಿನ್ನ ಒಡಂಬಡಿಕೆಯನು ಕಾದಿರಿಸಲೆಂದು ‘ತಂದೆತಾಯಿಗಳ ಪರಿಚಯವಿಲ್ಲ ಅಣ್ಣತಮ್ಮಂದಿರ ಅರಿವಿಲ್ಲ ಸ್ವಂತ ಮಕ್ಕಳ ಗುರುತಿಲ್ಲ’ ಎಂದನಿವನು. 10 ತಿಳಿಸುವನಿವನು ನಿನ್ನ ನಿರ್ಣಯವನು ಯಕೋಬನಿಗೆ ಕಲಿಸುವನು ನಿನ್ನ ಧರ್ಮಶಾಸ್ತ್ರವನು ಇಸ್ರಯೇಲನಿಗೆ. ಧೂಪಾರತಿ ಎತ್ತುವನು ನಿನ್ನ ಸನ್ನಿಧಿಯಲಿ ದಹನಬಲಿ ಸಮರ್ಪಿಸುವನು ನಿನ್ನ ಬಲಿಪೀಠದಲಿ. 11 ಸರ್ವೇಶ್ವರಾ, ವೃದ್ಧಿಪಡಿಸು ಇವನ ಆಸ್ತಿಯನು ಸಮರ್ಪಕವಾಗಿರಲಿ ನಿನಗೆ ಇವನ ಸೇವೆಯು ಇವನ ಶತ್ರುಗಳ ನಡುವನ್ನು ಮುರಿ ಮರಲಿ ಏಳದಂತೆ ಮಾಡು ಇವನ ವೈರಿ.” 12 ಬೆನ್ಯಾಮೀನ್ ಕುಲ ಕುರಿತು ಮೋಶೆ ನುಡಿದದ್ದು : “ಸರ್ವೇಶ್ವರನಿಗೆ ಪ್ರಿಯನಾದ ಇವನು ನಿರ್ಭಯವಾಗಿ ವಾಸಮಾಡುವನು. ಇವನನ್ನಾತ ತಬ್ಬಿರುವನು ದಿನವಿಡೀ ತನ್ನ ತೋಳತೆಕ್ಕೆಯಲಿ.” 13 ಜೋಸೆಫ್ ಕುಲ ಕುರಿತು ಮೋಶೆ ನುಡಿದದ್ದು : “ಇವನ ಪ್ರಾಂತ್ಯ ಆಶೀರ್ವದಿತವಾಗಲಿ ಸರ್ವೇಶ್ವರನಿಂದ ಮೇಲಣ ಆಕಾಶದ ಮಂಜಿನಿಂದ ಕೆಳಗಿನ ಸಾಗರದ ಒರತೆಗಳಿಂದ; 14 ಸೂರ್ಯನಿಂದ ಫಲಿಸುವ ಪಸಲುಗಳಿಂದ ತಿಂಗಳು ತಿಂಗಳು ಆಗುವ ಬೆಳೆಗಳಿಂದ; 15 ಪುರಾತನ ಬೆಟ್ಟಗಳಿಂದ ಒದಗುವ ಉತ್ಪನ್ನಗಳಿಂದ ಶಾಶ್ವತ ಪರ್ವತಗಳಿಂದ ಸಿಗುವ ಒಳಿತುಗಳಿಂದ. 16 ಸೋದರರಿಗೆ ಸಾಮ್ರಾಟನಾದ ಜೋಸೆಫನ ಪಾಲಿಗೆ ಬರಲಿ ಇವನ ಕುಲದ ಮೇಲೆ ನೆಲಸಲಿ ನೆಲಬೆಳೆಸುವ ಫಲಗಳಲಿ ಶ್ರೇಷ್ಠವಾದುದೆಲ್ಲವು ಮುಳ್ಳುಪೊದೆಯಲಿ ಕಾಣಿಸಿಕೊಂಡಾತನ ದಯೆಯು! 17 ಜೋಸೆಫನದು ಜೇಷ್ಠಸಂತತಿಯು ಗೂಳಿಯ ಗಾಂಭೀರ್ಯವೂ ಅವನ ಕೊಂಬುಗಳು, ಕಾಡುಕೋಣದ ಕೊಂಬುಗಳು ಅವುಗಳಿಂದ ಇರಿದು ಓಡಿಸಬಲ್ಲನು ಜಗದ ಜನಾಂಗಗಳನು! ಇವನಂಥವರು ಎಫ್ರಯಿಮ್ ಕುಲದ ಕೋಟ್ಯಾಂತರ ಜನರು ಇವನಂಥವರು ಮನಸ್ಸೆಕುಲದ ಲಕ್ಷಾಂತರ ಮಂದಿಗಳು.” 18 ಜೆಬುಲೂನ್ ಮತ್ತು ಇಸ್ಸಾಕಾರ ಕುಲ ಕುರಿತು ಮೋಶೆ ನುಡಿದದ್ದು: “ಜೆಬುಲೂನೇ, ಸಂತೋಷವಾಗಿರು ನಿನ್ನ ಪಯಣಗಳಲ್ಲಿ. ಇಸ್ಸಾಕಾರನೇ, ಆನಂದವಾಗಿರು ನಿನ್ನ ಪಾಳೆಯಗಳಲ್ಲಿ. 19 ಇವರು ಕರೆದುತರುವರು ಅನ್ಯಜನಗಳನು ಮಲೆನಾಡಿಗೆ ಅರ್ಪಿಸತರುವರು ನ್ಯಾಯಯುತವಾದ ಬಲಿಗಳನು ಅಲ್ಲಿಗೆ. ಸವಿವರು ಕಡಲ ಸಿರಿಯನು ನೆಲದಲ್ಲಡಗಿರುವ ಸಂಪದವನು.” 20 ಗಾದ್ ಕುಲ ಕುರಿತು ಮೋಶೆ ನುಡಿದದ್ದು: “ಗಾದ್ಯರ ಪ್ರಾಂತ್ಯವನು ವಿಸ್ತರಿಸಿದ ಸರ್ವೇಶ್ವರನಿಗೆ ಸ್ತೋತ್ರವು! ಸಿಂಹದಂತೆ ಹೊಂಚುಹಾಕಿ ಮುರಿವನು ಗಾದನು ಶತ್ರುಗಳ ಭುಜವನು, ಶಿರವನು. 21 ತನಗೆಂದು ತೆಗೆದುಕೊಂಡನು ನಾಡಿನ ಮೊದಲಭಾಗವನು ದೊರಕಿತಲ್ಲಿ ಅವನಿಗೆ ಮುಖ್ಯಸ್ಥನಿಗಾಗುವ ಸ್ವಾಸ್ತ್ಯವು. ಜನಾಧಿಪತಿಗಳ ಜೊತೆಬಂದು ನೆರವೇರಿಸಿದನು ಸರ್ವೇಶ್ವರನ ಆಣತಿಯನು; ಇಸ್ರಯೇಲನೊಡನೆ ಸ್ಥಾಪಿಸಿದನು ಸರ್ವೇಶ್ವರನ ನ್ಯಾಯನೀತಿಯನು.” 22 ದಾನ್ ಕುಲ ಕುರಿತು ಮೋಶೆ ನುಡಿದದ್ದು: “ದಾನನು ಬಾಷಾನ್ ದೇಶದಿಂದ ಧಾವಿಸಿಬಂದ ಯುವಸಿಂಹನು!” 23 ನಫ್ತಾಲಿ ಕುಲ ಕುರಿತು ಮೋಶೆ ನುಡಿದದ್ದು: “ಎಲೈ ನಫ್ತಾಲಿ, ಸರ್ವೇಶ್ವರನ ದಯೆಹೊಂದಿ ನೀ ತೃಪ್ತನಾದೆ ಆತನ ಆಶೀರ್ವಾದದಿಂದ ಸಮೃದ್ಧಿಯುಂಟು ನಿನಗೆ ಸಮುದ್ರದ ದಕ್ಷಿಣಪ್ರದೇಶ ಸೊತ್ತಾಗಲಿ ನಿನಗೆ.” 24 ಆಶೇರ್ ಕುಲ ಕುರಿತು ಮೋಶೆ ನುಡಿದದ್ದು: “ಕುಲೋತ್ತಮನಾದ ಆಶೇರನು ಭಾಗ್ಯಹೊಂದಲಿ ಎಲ್ಲದರಲಿ ಸೋದರರಲ್ಲಿ ಶ್ರೇಷ್ಠತೆಯನು ಪಡೆಯಲಿ ಎಣ್ಣೆಯಲಿ ಪಾದಸ್ನಾನ ಮಾಡುವಂತಾಗಲಿ. 25 ನಿನ್ನ ಕೋಟೆಯ ಬಾಗಿಲು ಕಬ್ಬಿಣದವು ಅವುಗಳ ಅಗುಳಿಗಳು ಕಂಚಿನವು ನೀನಿರುವಷ್ಟು ಕಾಲ ನಿನಗಿರುವುದು ಬಲವು.” 26 ಇಸ್ರಯೇಲಿನ ಜನರೇ, ನಿಮ್ಮ ದೇವರಿಗೆ ಸಮಾನನಾರೂ ಇಲ್ಲ, ಆತ ಬರುವನು ಆಕಾಶವನ್ನೇರಿ, ಮೇಘಾರೂಢನಾಗಿ ಮಹಾಗಾಂಭೀರ್ಯದಿಂದ ಬರುವನು ನಿಮ್ಮ ನೆರವಿಗಾಗಿ. 27 ಆದಿಯಿಂದ ದೇವರೇ ನಿಮಗೆ ಶ್ರೀನಿವಾಸ ಆತನ ಹಸ್ತವೇ ನಿಮಗೆ ನಿತ್ಯಾಧಾರ! ಶತ್ರುಗಳನು ಹೊರಡಿಸುವನು ನಿಮ್ಮ ಬಳಿಯಿಂದ ಅವರನು ಸಂಹರಿಸಲು ಆಜ್ಞಾಪಿಸಿಹನು ಆತ. 28 ವಾಸಿಸಿರಿ ಇಸ್ರಯೇಲರೇ, ನಿರ್ಭಯರಾಗಿ ಯಕೋಬನ ಸಂತತಿಯೇ, ಸುರಕ್ಷಿತವಾಗಿ ಆಗಸದಿಂದ ಮಳೆಸುರಿಯುವ ನಾಡಿನಲ್ಲಿ ಧಾನ್ಯ, ದ್ರಾಕ್ಷಾರಸ ಸಮೃದ್ಧಿಯಾಗಿರುವಲ್ಲಿ! 29 ಇಸ್ರಯೇಲ್, ನೀನು ಎಷ್ಟೋ ಧನ್ಯ! ಯಾರಿಗಿದೆ ನಿನಗಿರುವಂತೆ ಭಾಗ್ಯ! ಜಯಗಳಿಸಿರುವೆ ಸರ್ವೇಶ್ವರನ ಅನುಗ್ರಹದಿಂದ. ಆತನೇ ನಿನ್ನ ಕಾಪಾಡುವ ಗುರಾಣಿ ನಿನ್ನ ಗೌರವವನ್ನು ಕಾಯುವ ಕತ್ತಿ. ಎಂದೇ ಮುದುರಿಕೊಳ್ಳುವರು ಶತ್ರುಗಳು ನಿನ್ನ ಮುಂದೆ ಜಯಶೀಲನಾಗಿ ನೀ ಮೆರೆವೆ ಅವರ ಮಲೆನಾಡಿನಲ್ಲೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India