ಧರ್ಮೋಪದೇಶಕಾಂಡ 23 - ಕನ್ನಡ ಸತ್ಯವೇದವು C.L. Bible (BSI)ಸಭೆಗೆ ಸೇರಬಾರದವರು 1 “ಬೀಜಹೊಡಿಸಿಕೊಂಡಾಗಲಿ, ಜನನ ಇಂದ್ರಿಯ ಕತ್ತರಿಸಿಕೊಂಡಾಗಲಿ ನಪುಂಸಕರಾದವರು ಸರ್ವೇಶ್ವರನ ಸಭೆಯಲ್ಲಿ ಸೇರಬಾರದು. 2 ಅಗಮ್ಯಾಗಮನದಿಂದುಂಟಾದ ಸಂತತಿಯವರು ಹತ್ತನೆಯ ತಲೆಯವರಾದರೂ ಸರ್ವೇಶ್ವರನ ಸಭೆಗೆ ಸೇರಬಾರದು. 3 “ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ಸರ್ವೇಶ್ವರನ ಸಭೆಗೆ ಎಂದೆಂದಿಗೂ ಸೇರಬಾರದು. ಅವರ ಸಂತತಿಯವರು ಹತ್ತನೆಯ ತಲೆಯವರಾದರೂ ಸರ್ವೇಶ್ವರನ ಸಭೆಗೆ ಸೇರಬಾರದು. 4 ಏಕೆಂದರೆ ನೀವು ಈಜಿಪ್ಟ್ ದೇಶದಿಂದ ಬಂದಾಗ ಅವರು ಅನ್ನಪಾನಗಳನ್ನು ತಂದು ನಿಮ್ಮನ್ನು ಎದುರುಗೊಳ್ಳಲಿಲ್ಲ; ನಿಮ್ಮನ್ನು ಶಪಿಸುವುದಕ್ಕಾಗಿ ಬೆಯೋರನ ಮಗ ಬಿಳಾಮನಿಗೆ ಹಣಕೊಟ್ಟು ಎರಡು ನದಿಗಳ ಮಧ್ಯದಲ್ಲಿರುವ ಅರಾಮಿನ ಪೆತೋರೂರಿನಿಂದ ಅವನನ್ನು ಕರೆಸಿದರು. 5 ಆದರೂ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಪ್ರೀತಿಸಿದ್ದರಿಂದ ಬಿಳಾಮನ ಮಾತಿಗೆ ಸಮ್ಮತಿಸದೆ, ಅವನಿಂದ ಶಾಪವನ್ನು ನುಡಿಸದೆ, ಆಶೀರ್ವಾದವನ್ನೇ ಹೇಳಿಸಿದರು. 6 ನಿಮ್ಮ ಜೀವಮಾನಕಾಲವನ್ನೆಲ್ಲಾ ಅವರ ಯೋಗಕ್ಷೇಮವನ್ನು ಬಯಸಲೇಬಾರದು. 7 “ಎದೋಮ್ಯರನ್ನು ಸಂಪೂರ್ಣವಾಗಿ ನಿಷೇಧಿಸಬಾರದು; ಅವರು ನಿಮ್ಮ ಬಂಧುಜನಗಳು. ಈಜಿಪ್ಟರನ್ನೂ ಸಂಪೂರ್ಣವಾಗಿ ನಿಷೇಧಿಸಬಾರದು; ಅವರ ದೇಶದಲ್ಲಿ ನೀವು ಪ್ರವಾಸಿಗಳಾಗಿದ್ದಿರಲ್ಲವೆ? 8 ಅವರ ಸಂತತಿಯವರಲ್ಲಿ ಮೂರನೆಯ ತಲೆಯವರು ಸರ್ವೇಶ್ವರನ ಸಭೆಗೆ ಸೇರಬಹುದು. ಯುದ್ಧಕಾಲದಲ್ಲಿ ನಿರ್ಮಲವಾಗಿರಲಿ ನಿಮ್ಮ ಪಾಳೆಯ 9 “ನೀವು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೊರಟು ಪಾಳೆಯದಲ್ಲಿರುವಾಗ ಯಾವ ಅಶುಚಿಯೂ ಆಗದಂತೆ ಎಚ್ಚರಿಕೆಯಿಂದಿರಬೇಕು. 10 ರಾತ್ರಿಕಾಲದಲ್ಲಿ ವೀರ್ಯಸ್ಖಲನದಿಂದ ಯಾವನಾದರು ಅಶುದ್ಧನಾದರೆ ಅವನು ಪಾಳೆಯದೊಳಗೆ ಇರದೆ ಹೊರಗೆ ಇರಬೇಕು. 11 ಅವನು ಸಂಜೆವೇಳೆಯಲ್ಲಿ ಸ್ನಾನಮಾಡಿ ಸೂರ್ಯನು ಮುಳುಗಿದ ಮೇಲೆ ಪಾಳೆಯದೊಳಗೆ ಬರಬಹುದು. 12 “ಪಾಳೆಯದ ಹೊರಗೆ ಪಾಯಖಾನೆಗಾಗಿ ಒಂದು ಸ್ಥಳವನ್ನು ಗೊತ್ತುಮಾಡಬೇಕು. 13 ಯುದ್ಧದ ಸಾಮಾನುಗಳಲ್ಲದೆ ಸಲಕೆ ನಿಮ್ಮ ಬಳಿಯಲ್ಲೇ ಇರಬೇಕು; ನೀವು ಬಹಿರ್ದೆಶೆಗೆ ಹೋದಾಗ ಆ ಸಲಕೆಯಿಂದ ಅಗೆದು ಕಲ್ಮಷವನ್ನು ಮುಚ್ಚಿಬಿಡಬೇಕು. 14 ನಿಮ್ಮ ದೇವರಾದ ಸರ್ವೇಶ್ವರಾ ನಿಮ್ಮನ್ನು ಕಾಪಾಡಲು, ಶತ್ರುಗಳನ್ನು ನಿಮ್ಮ ಕೈವಶಮಾಡಲು ನಿಮ್ಮ ಪಾಳೆಯದೊಳಗೆ ಸಂಚಾರಮಾಡುತ್ತಾರೆ; ನಿಮ್ಮಲ್ಲಿ ಅಶುಚಿಯೇನಾದರೂ ಕಂಡುಬಂದರೆ ಅವರು ನಿಮ್ಮನ್ನು ಬಿಟ್ಟುಹೋಗದಂತೆ ಪಾಳೆಯವು ನಿರ್ಮಲವಾಗಿರಬೇಕು. ದುರ್ಬಲರಿಗೆ ಆಸರೆ ಮತ್ತಿತರ ವಿಧಿಗಳು 15 “ತಪ್ಪಿಸಿಕೊಂಡ ಒಬ್ಬ ಗುಲಾಮನು ನಿಮ್ಮಲ್ಲಿ ಇರುವುದಕ್ಕೆ ಬಂದರೆ ಅವನನ್ನು ಅವನ ದಣಿಗೆ ಮತ್ತೆ ವಶಪಡಿಸಬಾರದು. 16 ನಿಮ್ಮ ಊರುಗಳಲ್ಲಿ ಯಾವ ಸ್ಥಳವು ಅವನಿಗೆ ಇಷ್ಟವಾಗಿದೆಯೋ ಅಲ್ಲೇ ಅವನು ವಾಸವಾಗಿರಬಹುದು; ಅವನನ್ನು ನೀವು ಶೋಷಣೆಗೆ ಗುರಿಪಡಿಸಬಾರದು. 17 “ಇಸ್ರಯೇಲರಲ್ಲಿ ಯಾವ ಸ್ತ್ರೀಯೂ ಗುಡಿವೇಶ್ಯೆಯಾಗಬಾರದು; ಅಂತೆಯೇ ಯಾವ ಪುರುಷನೂ ಅಂಥ ವೇಶ್ಯೆತನಕ್ಕೆ ಇಳಿಯಬಾರದು. 18 ಸೂಳೆತನದಿಂದಾಗಲಿ ಜಾರತ್ವದಿಂದಾಗಲಿ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಸರ್ವೇಶ್ವರನ ಮಂದಿರದೊಳಗೆ ತರಲೇಬಾರದು; ಈ ಎರಡೂ ಅವರಿಗೆ ಅಸಹ್ಯವಾದುವು. 19 “ಹಣವನ್ನಾಗಲಿ, ಆಹಾರಪದಾರ್ಥಗಳನ್ನಾಗಲಿ, ಬೇರೆ ಯಾವುದನ್ನೇ ಆಗಲಿ 20 ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸ್ವದೇಶದವನಿಗೆ ಕೊಡಬಾರದು. ಹೀಗೆ ನಡೆದರೆ ನೀವು ಸ್ವದೇಶವಾಗಿ ಪಡೆಯಲಿರುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಪ್ರಯತ್ನಗಳನ್ನು ಕೈಗೂಡಿಸಿ ಅಭಿವೃದ್ಧಿಪಡಿಸುವರು. 21 “ನಿಮ್ಮ ದೇವರಾದ ಸರ್ವೇಶ್ವರನಿಗೆ ಹರಕೆಮಾಡಿದ ಮೇಲೆ ಅದನ್ನು ತಡಮಾಡದೆ ತೀರಿಸಬೇಕು; ಅವರು ತಪ್ಪದೆ ಅದನ್ನು ವಿಚಾರಿಸುವರು; ತೀರಿಸದೆ ಹೋಗುವುದು ಪಾಪ. 22 ನೀವು ಹರಕೆಮಾಡದಿದ್ದರೆ ದೋಷವೇನೂ ಇಲ್ಲ. 23 ಆದರೆ ಬಾಯಿಂದ ನುಡಿದದ್ದನ್ನು ನೆರವೇರಿಸಲೇಬೇಕು. ನಿಮ್ಮ ದೇವರಾದ ಸರ್ವೇಶ್ವರನಿಗೆ ಬಾಯಿಂದ ಹರಕೆಮಾಡಿಕೊಂಡಂತೆಯೇ ಅದನ್ನು ಒಪ್ಪಿಸಿಬಿಡಬೇಕು. 24 “ಮತ್ತೊಬ್ಬನ ದ್ರಾಕ್ಷಿತೋಟದಲ್ಲಿ ನೀವು ಹಾದುಹೋಗುವಾಗ ಇಷ್ಟಾನುಸಾರ ಹಣ್ಣುಗಳನ್ನು ತಿನ್ನಬಹುದು. ಆದರೆ ಬುಟ್ಟಿಯಲ್ಲಿ ಹಾಕಿಕೊಂಡು ಹೋಗಬಾರದು. 25 ಮತ್ತೊಬ್ಬನ ಬೆಳೆಯ ನಡುವೆ ಹಾದುಹೋಗುವಾಗ ತೆನೆಗಳನ್ನು ಕೈಯಿಂದ ಮುರಿದುಕೊಳ್ಳಬಹುದು; ಆದರೆ ಆ ಬೆಳೆಗೆ ಕುಡುಗೋಲು ಹಾಕಬಾರದು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India