Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 20 - ಕನ್ನಡ ಸತ್ಯವೇದವು C.L. Bible (BSI)


ಯುದ್ಧ ಕುರಿತ ನಿಯಮಗಳು

1 “ನೀವು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೊರಟಾಗ ಅವರ ಕಡೆ ಕುದುರೆಗಳು, ರಥಗಳು ಹಾಗು ನಿಮಗಿಂತ ಹೆಚ್ಚಾದ ಕಾಲ್ಬಲವು ಇರುವುದನ್ನು ಕಂಡರೆ, ಹೆದರಬೇಡಿ. ಏಕೆಂದರೆ ಈಜಿಪ್ಟ್ ದೇಶದಿಂದ ನಿಮ್ಮನ್ನು ಬಿಡಿಸಿದ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮೊಂದಿಗೆ ಇದ್ದಾರೆ.

2-3 “ಕಾಳಗ ಸಮೀಪಿಸಿದಾಗ ಯಾಜಕನು ಮುಂದೆ ಬಂದು ಯೋಧರಿಗೆ, ‘ಇಸ್ರಯೇಲರೇ, ಕೇಳಿ; ನೀವು ಈಗ ಶತ್ರುಗಳೊಡನೆ ಯುದ್ಧಮಾಡುವ ಕಾಲ ಸಮೀಪಿಸಿದೆ; ನೀವು ಎದೆಗೆಡಬಾರದು, ದಿಗಿಲುಪಡಬಾರದು, ನಡುಗಬಾರದು, ಶತ್ರುಗಳಿಗೆ ಭಯಪಡಬಾರದು.

4 ನಿಮ್ಮ ದೇವರಾದ ಸರ್ವೇಶ್ವರನೇ ನಿಮ್ಮ ಸಂಗಡ ಇದ್ದು ಶತ್ರುಗಳೊಡನೆ ನಿಮ್ಮ ಪರವಾಗಿ ಯುದ್ಧಮಾಡಿ, ನಿಮಗೆ ಜಯವನ್ನುಂಟುಮಾಡುವರು’ ಎಂದು ಹೇಳಬೇಕು

5 “ಮತ್ತು ಸೇನಾಧಿಪತಿಗಳು ಅವರಿಗೆ, ‘ನಿಮ್ಮಲ್ಲಿ ಯಾವನಾದರು ಹೊಸ ಮನೆಯನ್ನು ಕಟ್ಟಿಸಿಕೊಂಡು ಇನ್ನು ಗೃಹಪ್ರವೇಶಮಾಡದಿದ್ದರೆ, ಅವನು ಮನೆಗೆ ಹೋಗಲಿ; ಅವನು ಕಾಳಗದಲ್ಲಿ ಸತ್ತರೆ ಮತ್ತೊಬ್ಬನು ಆ ಮನೆಯಲ್ಲಿ ಗೃಹಪ್ರವೇಶ ಮಾಡಿಕೊಂಡಾನು.

6 ಯಾವನಾದರು ದ್ರಾಕ್ಷೀತೋಟವನ್ನು ಮಾಡಿ ಅದರ ಹಣ್ಣುಗಳನ್ನು ಇನ್ನೂ ಅನುಭೋಗಿಸದಿದ್ದರೆ, ಅವನು ಮನೆಗೆ ಹೋಗಲಿ; ಅವನು ಕಾಳಗದಲ್ಲಿ ಸತ್ತರೆ ಮತ್ತೊಬ್ಬನು ಆ ತೋಟದ ಹಣ್ಣುಗಳನ್ನು ಅನುಭೋಗಿಸಾನು.

7 ಯಾವನಾದರೂ ತಾನು ಮದುವೆಮಾಡಿಕೊಂಡ ಹೆಣ್ಣನ್ನು ಇನ್ನು ಸೇರಿಸಿಕೊಳ್ಳದಿದ್ದರೆ, ಅವನು ಮನೆಗೆ ಹೋಗಲಿ; ಅವನು ಕಾಳಗದಲ್ಲಿ ಸತ್ತರೆ ಮತ್ತೊಬ್ಬನು ಅವಳನ್ನು ಸೇರಿಸಿಕೊಂಡಾನು,’ ಎಂದು ಹೇಳಬೇಕು.

8 ಮತ್ತು ‘ಯಾವನಾದರೂ ಧೈರ್ಯ ಕಡಿಮೆಯಾಗಿ ಅಂಜಿಕೊಂಡರೆ ಅವನೂ ಮನೆಗೆ ಹೋಗಲಿ; ಅವನು ದಿಗಿಲುಪಡುವುದರಿಂದ ಅವನ ಜೊತೆಗಾರರೂ ದಿಗಿಲುಪಟ್ಟಾರು’, ಎಂದು ಹೇಳಬೇಕು.

9 ಸೇನಾಪತಿಗಳು ಯೋಧರಿಗೆ ಈ ರೀತಿ ಹೇಳಿದ ನಂತರ ದಂಡಿನವರ ಮೇಲೆ ನಾಯಕರನ್ನು ನೇಮಿಸಬೇಕು.

10 “ನೀವು ಒಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳಲು ಅದರ ಹತ್ತಿರಕ್ಕೆ ಬಂದಾಗ, ಮೊದಲು ಅದು ಯುದ್ಧವಿಲ್ಲದೆ ಸಮಾಧಾನದಿಂದಲೇ ಶರಣಾಗಬಹುದೆಂದು ಪ್ರಕಟಿಸಬೇಕು.

11 ಅದರಲ್ಲಿರುವವರು ಒಪ್ಪಿ ಬಾಗಿಲನ್ನು ನಿಮಗೆ ತೆರೆದುಕೊಟ್ಟರೆ ಅವರೆಲ್ಲರೂ ನಿಮಗೆ ಬಿಟ್ಟೀ ಕೆಲಸವನ್ನು ಮಾಡುವ ಗುಲಾಮರಾಗಬೇಕು.

12 ಅವರು ನಿಮ್ಮ ಮಾತಿಗೆ ಸಮ್ಮತಿಸದೆ, ಪ್ರತಿಭಟಿಸಿದರೆ ಆಗ ನೀವು ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು.

13 ನಿಮ್ಮ ದೇವರಾದ ಸರ್ವೇಶ್ವರ ಆ ಪಟ್ಟಣವನ್ನು ನಿಮಗೆ ವಶಪಡಿಸಿದಾಗ ಅದರಲ್ಲಿರುವ ಗಂಡಸರೆಲ್ಲರನ್ನೂ ಕನಿಕರಿಸದೆ ಸಂಹಾರ ಮಾಡಬೇಕು.

14 ಹೆಂಗಸರನ್ನೂ ಮಕ್ಕಳನ್ನೂ ದನಗಳನ್ನೂ ಊರಲ್ಲಿರುವ ಆಸ್ತಿಯನ್ನೂ ನೀವು ಸ್ವಂತಕ್ಕೆ ತೆಗೆದುಕೊಳ್ಳಬಹುದು. ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ವಶಪಡಿಸಿದ ಶತ್ರುಗಳ ಆಸ್ತಿಯನ್ನು ನೀವೇ ಅನುಭೋಗಿಸಬಹುದು.

15 ಈ ನಾಡಿನ ಜನಾಂಗಗಳಿಗೆ ಸೇರದ ಹಾಗು ದೂರದ ಜನಾಂಗಗಳ ಪಟ್ಟಣಗಳ ವಿಷಯದಲ್ಲಿ ನೀವು ಹಾಗೆಯೆ ನಡೆದುಕೊಳ್ಳಬೇಕು.

16 ಆದರೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವಂತಕ್ಕಾಗಿ ಕೊಡುವ ಈ ಜನಾಂಗಗಳ ಪಟ್ಟಣಗಳ ವಿಷಯದಲ್ಲಿ ಹಾಗೆ ಮಾಡದೆ ಉಸಿರಾಡುವ ಒಬ್ಬರನ್ನಾದರೂ ಉಳಿಸಬಾರದು.

17 ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಅಪ್ಪಣೆಕೊಟ್ಟಂತೆ ಇವರನ್ನು ಅಂದರೆ, ಹಿತ್ತಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು, ಯೆಬೂಸಿಯರು ಇವರೆಲ್ಲರನ್ನೂ ವಿನಾಶ ಶಾಪಗ್ರಸ್ತರನ್ನಾಗಿ ಮಾಡಿಬಿಡಬೇಕು.

18 ಇಲ್ಲವಾದರೆ ಅವರು ತಮ್ಮ ದೇವರುಗಳಿಗಾಗಿ ಆಚರಿಸುವ ನಿಷಿದ್ಧಾಚಾರಗಳನ್ನು ನಿಮಗೆ ಕಲಿಸಿಕೊಡಬಹುದು; ಮತ್ತು ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ದ್ರೋಹಿಗಳಾಗಬಹುದು.

19 “ನೀವು ಒಂದು ಪಟ್ಟಣವನ್ನು ಸ್ವಾಧೀನ ಮಾಡಿಕೊಳ್ಳಲು ಅದಕ್ಕೆ ಬಹುದಿವಸ ಮುತ್ತಿಗೆ ಹಾಕಬೇಕಾಗಬಹುದು; ಅದಕ್ಕೆ ಸೇರಿದ ಮರಗಳನ್ನು ಹಾಳುಮಾಡಬಾರದು; ಅವುಗಳಿಗೆ ಕೊಡಲಿಯನ್ನು ಹಾಕಲೇಬಾರದು. ಅವುಗಳ ಹಣ್ಣನ್ನು ತಿನ್ನಬಹುದೇ ಹೊರತು ಮರಗಳನ್ನು ಕಡಿಯಬಾರದು. ಅಡವಿಯ ಮರಗಳು ಶತ್ರುಗಳೇನು? ಅವುಗಳೊಡನೆ ಯುದ್ಧಮಾಡಬಹುದೇ?

20 ತಿನ್ನತಕ್ಕ ಹಣ್ಣು ಕೊಡುವುದಿಲ್ಲ ಎಂದು ನೀವು ತಿಳಿದ ಮರಗಳನ್ನು ಮಾತ್ರ ಕಡಿದು ಹಾಳುಮಾಡಬಹುದು. ಅವುಗಳಿಂದ ಯುದ್ಧ ಯಂತ್ರಗಳನ್ನು ಮಾಡಿಕೊಂಡು ನಿಮಗೆ ವಿರುದ್ಧ ಆಗಿರುವ ಆ ಪಟ್ಟಣ ಬೀಳುವ ತನಕ ಅದಕ್ಕೆ ಮುತ್ತಿಗೆ ಹಾಕಬೇಕು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು