ಧರ್ಮೋಪದೇಶಕಾಂಡ 18 - ಕನ್ನಡ ಸತ್ಯವೇದವು C.L. Bible (BSI)ಯಾಜಕರಿಗೆ ಸಲ್ಲಬೇಕಾದ ಪಾಲು 1 “ಯಾಜಕಸೇವೆ ಮಾಡುವ ಲೇವಿಯರಿಗೆ ಹಾಗು ಲೇವಿಯಕುಲದ ಸರ್ವರಿಗೆ ಇತರ ಇಸ್ರಯೇಲರಂತೆ ಸ್ವಂತಕ್ಕಾಗಿ ಭೂಸ್ವತ್ತು ದೊರೆಯುವುದಿಲ್ಲ. ಸರ್ವೇಶ್ವರನಿಗೆ ಸಮರ್ಪಿತವಾದ ಬಲಿದ್ರವ್ಯಗಳು ಹಾಗು ಎಲ್ಲ ಮೀಸಲಾಗಿಟ್ಟವುಗಳೇ ಅವರಿಗೆ ಜೀವನಾಧಾರ. 2 ಸ್ವದೇಶದವರಿಗೆ ದೊರಕುವಂತೆ ಅವರಿಗೆ ಸೊತ್ತು ದೊರಕುವುದಿಲ್ಲ. ಸರ್ವೇಶ್ವರ ಸ್ವಾಮಿಯೇ ಲೇವಿಯರ ಸೊತ್ತು. ಇದನ್ನು ಸ್ವಾಮಿಯೇ ಅವರಿಗೆ ಹೇಳಿದ್ದಾರೆ. 3 “ಜನರಿಂದ ಯಾಜಕರು ಹೊಂದಬೇಕಾದವುಗಳು ಯಾವುವೆಂದರೆ : ದನಕರುಗಳನ್ನು ಹಾಗು ಆಡುಕುರಿಗಳನ್ನು ಕೊಯ್ದು ಬಲಿದಾನ ಮಾಡುವವರೆಲ್ಲರು ಆ ಪಶುಗಳ ಮುಂದೊಡೆಯನ್ನೂ ಎರಡು ದವಡೆಗಳನ್ನೂ ಕೋಷ್ಠವನ್ನೂ ಯಾಜಕರಿಗೆ ಕೊಡಬೇಕು. 4 ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳ ಪ್ರಥಮಫಲಗಳನ್ನು ಹಾಗು ಮೊದಲನೆಯ ಸಾರಿ ಕತ್ತರಿಸುವ ಕುರಿಗಳ ಉಣ್ಣೆಯನ್ನು ಅವರಿಗೆ ಕೊಡಬೇಕು. 5 ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಕುಲಗಳಲ್ಲಿ ಲೇವಿಯನನ್ನು, ಇವನ ತರುವಾಯ ಇವನ ಸಂತತಿಯವರನ್ನು, ತಮ್ಮ ಸನ್ನಿಧಿಯಲ್ಲಿ ಶಾಶ್ವತವಾಗಿ ಸೇವೆಮಾಡುವುದಕ್ಕೆ ತಾವೇ ನೇಮಿಸಿಕೊಂಡು ಇದ್ದಾರಲ್ಲವೆ? 6 “ಇಸ್ರಯೇಲರ ಯಾವುದಾದರೊಂದು ಊರಲ್ಲಿ ಇಳಿದುಕೊಂಡಿದ್ದ ಒಬ್ಬ ಲೇವಿಯನು ಸ್ವಂತ ಮನಸ್ಸಿನಿಂದ ಆ ಊರನ್ನು ಬಿಟ್ಟು ಸರ್ವೇಶ್ವರ ಆರಿಸಿಕೊಂಡ ಸ್ಥಳಕ್ಕೆ ಬರಬಹುದು. 7 ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಸೇವೆಮಾಡುವ ತನ್ನ ಸ್ವಕುಲದವರಂತೆ ತನ್ನ ದೇವರಾದ ಸರ್ವೇಶ್ವರನ ಹೆಸರನ್ನು ಹೇಳಿ ತಾನೂ ಸೇವೆ ನಡೆಸಬಹುದು; 8 ಅಂಥವನ ಕೈಯಲ್ಲಿ ಪಿತ್ರಾರ್ಜಿತ ಸೊತ್ತನ್ನು ಮಾರಿದ ಹಣವಿದ್ದರೂ ಮಿಕ್ಕ ಲೇವಿಯರೊಂದಿಗೆ ಸಮವಾದ ಪಾಲಿಗೆ ಬಾಧ್ಯನಾಗಿರುವನು. ಖಂಡನೀಯ ಆಚಾರವಿಚಾರಗಳು 9 “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ನೀವು ಸೇರಿದಾಗ ಅಲ್ಲಿರುವ ಜನಗಳು ಮಾಡುವ ಖಂಡನೀಯ ಆಚಾರಗಳನ್ನು ಅನುಸರಿಸಲೇಬಾರದು. 10 ಮಕ್ಕಳನ್ನು ಆಹುತಿಕೊಡುವವರು, ಕಣಿಹೇಳುವವರು, ಶಕುನ ನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, 11 ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಿಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. 12 ಇಂಥ ಕೆಲಸಗಳನ್ನು ನಡೆಸುವವರು ಸರ್ವೇಶ್ವರನಿಗೆ ಅಸಹ್ಯರಾಗಿದ್ದಾರೆ. ನಿಮ್ಮ ದೇವರಾದ ಸರ್ವೇಶ್ವರ ಇಂಥ ಹೇಯಕೃತ್ಯಗಳನ್ನು ಮಾಡುವ ಆ ಜನಾಂಗಗಳನ್ನು ನಿಮ್ಮಿಂದ ದೂರ ಹೊರದೂಡಿಸಿಬಿಡುತ್ತಾರೆ. 13 ನೀವು ನಿಮ್ಮ ದೇವರಾದ ಸರ್ವೇಶ್ವರನ ಸೇವೆಯ ವಿಷಯದಲ್ಲಿ ಸದಾಚಾರವುಳ್ಳವರು ಆಗಿರಬೇಕು. 14 ನೀವು ಸ್ವಾಧೀನಮಾಡಿಕೊಳ್ಳುವ ಆ ನಾಡಿನ ಜನಾಂಗಗಳು ಶಕುನಗಳನ್ನು ನೋಡುತ್ತಾರೆ, ಯಂತ್ರಮಂತ್ರಗಳನ್ನು ಮಾಡುತ್ತಾರೆ. ನೀವಾದರೋ ಹಾಗೆ ಮಾಡುವುದಕ್ಕೆ ನಿಮ್ಮ ದೇವರಾದ ಸರ್ವೇಶ್ವರನ ಅನುಮತಿ ಇಲ್ಲ. ಪ್ರವಾದಿಯನ್ನು ಕಳುಹಿಸುವುದಾಗಿ ವಾಗ್ದಾನ 15 “ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಸಹೋದರರಲ್ಲಿ, ನನ್ನಂಥ ಒಬ್ಬ ಪ್ರವಾದಿಯನ್ನು ನಿಮಗೆ ಏರ್ಪಡಿಸುವರು. ಅವನಿಗೆ ಮಾತ್ರ ಕಿವಿಗೊಡಬೇಕು. 16 ಹೋರೇಬಿನಲ್ಲಿ ನೀವು ಸಭೆಕೂಡಿದ ದಿನದಂದು ಇದನ್ನೇ ನೀವು ಕೋರಿಕೊಂಡಿರಿ; ‘ನಮ್ಮ ದೇವರಾದ ಸರ್ವೇಶ್ವರನ ಸ್ವರವನ್ನು ಇನ್ನು ಕೇಳಲು ಹಾಗು ಈ ಘೋರವಾದ ಅಗ್ನಿಜ್ವಾಲೆಯನ್ನು ಇನ್ನು ನೋಡಲು ನಮಗೆ ಮನಸ್ಸಿಲ್ಲ; ಹಾಗೇನಾದರು ಕೇಳಿ, ನೋಡಿದರೆ ಸತ್ತೇವು’ ಎಂದು ನೀವು ಹೇಳಿದಿರಿ. 17 ಆಗ ಸರ್ವೇಶ್ವರ ನನಗೆ, ‘ಇವರು ಹೇಳಿದ್ದು ಸರಿಯಾಗಿದೆ; 18 ಇವರ ಸ್ವದೇಶದವರಲ್ಲಿ ನಿನ್ನಂಥ ಪ್ರವಾದಿಯನ್ನು ಅವರಿಗೆ ಏರ್ಪಡಿಸುವೆನು; ಅವನ ಬಾಯಿಂದ ನನ್ನ ಮಾತುಗಳನ್ನು ನುಡಿಸುವೆನು; ನಾನು ಅವನಿಗೆ ಆಜ್ಞಾಪಿಸಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸುವನು. 19 ಅವನು ನನ್ನ ಹೆಸರಿನಲ್ಲಿ ಹೇಳಿದ ಮಾತುಗಳಿಗೆ ಯಾರು ಕಿವಿಕೊಡುವುದಿಲ್ಲವೋ ಅಂಥವರನ್ನು ನಾನು ಶಿಕ್ಷಿಸುವೆನು. 20 ಆದರೆ ಯಾವ ಪ್ರವಾದಿ ನನ್ನಿಂದ ಅಧಿಕಾರ ಹೊಂದದೆ ನಾನು ಪ್ರೇರಣೆಮಾಡದ ಮಾತುಗಳನ್ನು ಸರ್ವೇಶ್ವರನ ಮಾತೆಂದು ಜನರಿಗೆ ತಿಳಿಸುವನೋ, ಇಲ್ಲವೆ ಇತರ ದೇವರುಗಳ ಹೆಸರಿನಲ್ಲಿ ಮಾತಾಡುವನೋ, ಅವನಿಗೆ ಮರಣಶಿಕ್ಷೆಯಾಗಬೇಕು,’ ಎಂದು ಹೇಳಿದರು. 21 “ಪ್ರವಾದಿ ಹೇಳಿದ ಮಾತು ಸರ್ವೇಶ್ವರನ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ ಎಂದುಕೊಳ್ಳುತ್ತೀರೋ? 22 ಪ್ರವಾದಿ ಸರ್ವೇಶ್ವರನ ಮಾತೆಂದು ಹೇಳಿ, ಮುಂತಿಳಿಸಿದ ಸಂಗತಿ ನಡೆಯದೆ ಹೋದರೆ, ಅವನ ಮಾತು ಸರ್ವೇಶ್ವರನದಲ್ಲವೆಂದು ನೀವು ತಿಳಿದುಕೊಳ್ಳಬೇಕು. ಅವನು ಅಧಿಕಾರವಿಲ್ಲದೆ ಮಾತಾಡಿದವನು; ಅವನಿಗೆ ಹೆದರಬಾರದು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India