Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 17 - ಕನ್ನಡ ಸತ್ಯವೇದವು C.L. Bible (BSI)

1 “ಯಾವುದಾದರೊಂದು ಕುಂದುಕೊರತೆಯಾಗಲಿ, ದುರ್ಲಕ್ಷಣವಾಗಲಿ ಇರುವ ದನಕುರಿಗಳನ್ನು ನಿಮ್ಮ ದೇವರಾದ ಸರ್ವೇಶ್ವರನಿಗೆ ಸಮರ್ಪಿಸಬಾರದು. ಅಂಥವುಗಳನ್ನು ಅವರು ಸಹಿಸರು.

2 “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ಊರುಗಳೊಂದರಲ್ಲಿ ಒಬ್ಬ ಪುರುಷ ಅಥವಾ ಸ್ತ್ರೀ ನಿಮ್ಮ ದೇವರಾದ ಸರ್ವೇಶ್ವರನ ನಿಬಂಧನೆಯನ್ನು ಮೀರಿದ್ದಾರೆ ಎಂದೂ,

3 ಅನ್ಯ ದೇವರುಗಳನ್ನಾಗಲಿ, ಪೂಜಿಸಬಾರದೆಂದು ನಿಷೇಧಿಸಿರುವ ಸೂರ್ಯಚಂದ್ರ ನಕ್ಷತ್ರಗಳನ್ನಾಗಲಿ, ಪೂಜಿಸಿ, ಆರಾಧಿಸಿ ಸರ್ವೇಶ್ವರನ ದೃಷ್ಟಿಯಲ್ಲಿ ದುಷ್ಟವಾದುದನ್ನು ನಡೆಸಿದ್ದಾರೆ ಎಂದೂ

4 ನಿಮಗೆ ತಿಳಿದರೆ ಅದನ್ನು ನೀವು ಸೂಕ್ಷ್ಮವಾಗಿ ವಿಚಾರಣೆ ಮಾಡಬೇಕು. ಆಗ ಇಸ್ರಯೇಲರಲ್ಲಿ ಯಾರಿಂದಲಾದರೂ ಆ ನಿಷಿದ್ಧಕಾರ್ಯ ನಡೆದದ್ದು ನಿಜವೆಂದು ತಿಳಿದುಬಂದರೆ,

5 ಆ ಪುರುಷನನ್ನು ಅಥವಾ ಆ ಸ್ತ್ರೀಯನ್ನು ಹಿಡಿದು, ಊರ ಹೊರಗೆ ತಂದು, ಕಲ್ಲುಬೀರಿ ಕೊಲ್ಲಬೇಕು.

6 ಒಬ್ಬನೇ ಒಬ್ಬ ಸಾಕ್ಷಿಯ ಮಾತಿನ ಮೇಲೆ ಯಾರಿಗೂ ಮರಣಶಿಕ್ಷೆಯಾಗಬಾರದು; ಮರಣಶಿಕ್ಷೆಯನ್ನು ವಿಧಿಸುವುದಕ್ಕೆ ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳು ಬೇಕು.

7 ಅಪರಾಧಿಯನ್ನು ಕೊಲ್ಲುವುದಕ್ಕೆ ಸಾಕ್ಷಿಗಳೇ ಮೊದಲು ಕಲ್ಲನ್ನು ಎಸೆಯಬೇಕು. ತರುವಾಯ ಜನರೆಲ್ಲರೂ ಹಾಕಲಿ. ಹೀಗೆಮಾಡಿ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕಬೇಕು.


ನ್ಯಾಯವಿಚಾರಣೆಯ ವ್ಯವಸ್ಥೆ - ಉಚ್ಚನ್ಯಾಯಾಲಯ

8 “ವಿಧವಿಧವಾದ ಜೀವಹತ್ಯ, ಹಕ್ಕುಬಾಧ್ಯತೆ, ಹೊಡೆದಾಟ ಇವುಗಳ ವಿಷಯದಲ್ಲಿ ಅನುಮಾನ, ಚರ್ಚೆಗಳು ನಿಮ್ಮ ಊರಲ್ಲಿ ಉಂಟಾಗಬಹುದು. ಆಗ ಸರಿಯಾಗಿ ವಿವೇಚಿಸುವುದು ನಿಮ್ಮ ಶಕ್ತಿಗೆ ಮೀರಿದ ಪಕ್ಷಕ್ಕೆ ನೀವು ಊರಿನಿಂದ ಹೊರಟು ನಿಮ್ಮ ದೇವರಾದ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲಿ

9 ಯಾಜಕಸೇವೆಮಾಡುವ ಲೇವಿಯರ ಮತ್ತು ಆ ಕಾಲದ ನ್ಯಾಯಾಧಿಪತಿಯ ಬಳಿಗೆ ಹೋಗಿ ವಿಚಾರಿಸಬೇಕು. ನೀವು ಕೊಡಬೇಕಾದ ತೀರ್ಪನ್ನು ಅವರು ತಿಳಿಸುವರು.

10 ಸರ್ವೇಶ್ವರ ಆರಿಸಿಕೊಂಡ ಆ ಸ್ಥಳದಲ್ಲಿ ಅವರು ನಿಮಗೆ ತಿಳಿಸುವ ಮಾತಿನ ಪ್ರಕಾರ ನೀವು ಮಾಡಬೇಕು. ಅವರು ಬೋಧಿಸುವುದನ್ನೇ ನೀವು ಅನುಸರಿಸಬೇಕು.

11 ಅವರು ಕೊಡುವ ಆದೇಶದ ಪ್ರಕಾರ ಹಾಗು ಅವರು ಹೇಳಿಕೊಡುವ ತೀರ್ಪಿನಂತೆ ನೀವು ಮಾಡಬೇಕು; ಅವರು ತಿಳಿಸುವ ಮಾತನ್ನು ಬಿಟ್ಟು ಎಡಬಲಕ್ಕೆ ತಿರುಗಬಾರದು.

12 ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸೇವೆಮಾಡುವ ಯಾಜಕರ ಅಥವಾ ನ್ಯಾಯಾಧಿಪತಿಯ ಮಾತನ್ನು ಯಾವನು ಅಹಂಕಾರದಿಂದ ನಿರಾಕರಿಸುತ್ತಾನೋ ಅವನಿಗೆ ಮರಣಶಿಕ್ಷೆ ಆಗಬೇಕು. ಹೀಗೆ ಮಾಡಿ ನೀವು ಆ ದುಷ್ಟತ್ವವನ್ನು ಇಸ್ರಯೇಲರ ಮಧ್ಯದಿಂದ ತೆಗೆದುಹಾಕಬೇಕು.

13 ಜನರೆಲ್ಲರು ಇದನ್ನು ಕೇಳಿ, ಭಯಪಟ್ಟು, ಇನ್ನು ಅಹಂಕಾರದಿಂದ ನಡೆಯರು.


ರಾಜರ ನೇಮಕ ಹಾಗು ನಡವಳಿಕೆ

14 “ನಿಮ್ಮ ದೇವರಾದ ಸರ್ವೇಶ್ವರ, ನಿಮಗೆ ಕೊಡುವ ನಾಡನ್ನು ನೀವು ಸೇರಿ ಸ್ವಾಧೀನಮಾಡಿಕೊಂಡು, ಅದರಲ್ಲಿ ವಾಸವಾಗಿರುವಾಗ ‘ಸುತ್ತಲಿರುವ ಎಲ್ಲ ಜನಾಂಗಗಳಂತೆ ನಾವೂ ಒಬ್ಬ ಅರಸನನ್ನು ನೇಮಿಸಿಕೊಳ್ಳೋಣ’ ಎಂದು ಹೇಳಿಕೊಳ್ಳಬಹುದು.

15 ಆಗ ನೀವು ಅಗತ್ಯವಾಗಿ ನಿಮ್ಮ ದೇವರಾದ ಸರ್ವೇಶ್ವರ ಆರಿಸಿಕೊಂಡವನನ್ನೇ ನೇಮಿಸಿಕೊಳ್ಳಬೇಕು. ನಿಮ್ಮ ಬಂಧುಗಳಾದ ಸ್ವಜನರಲ್ಲೇ ಒಬ್ಬನನ್ನು ಅರಸನನ್ನಾಗಿ ನೇಮಿಸಿಕೊಳ್ಳಬೇಕೆ ಹೊರತು ಅನ್ಯದೇಶದವನನ್ನು ನೇಮಿಸಬಾರದು.

16 “ಅವನು ಕುದುರೆಯ ದಂಡನ್ನು ಹೆಚ್ಚಿಸಿಕೊಳ್ಳಬಾರದು. ಕುದುರೆಗಳನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ತನ್ನ ಪ್ರಜೆಗಳನ್ನು ಈಜಿಪ್ಟ್ ದೇಶಕ್ಕೆ ಹೋಗಗೊಡಿಸಬಾರದು. ನೀವು ಇನ್ನು ಆ ದೇಶಕ್ಕೆ ಹೋಗಲೇಕೂಡದೆಂದು ಸರ್ವೇಶ್ವರ ಆಜ್ಞಾಪಿಸಿದ್ದಾರೆ.

17 ಅವನು ಅನೇಕ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಸರ್ವೇಶ್ವರನಿಗೆ ವಿಮುಖವಾಗಲು ಅವಕಾಶವಾಗುವುದು. ಅವನು ಬೆಳ್ಳಿಬಂಗಾರವನ್ನು ವಿಶೇಷವಾಗಿ ಗಳಿಸಿಕೊಳ್ಳಬಾರದು.

18 “ಅವನು ರಾಜ್ಯಾಧಿಕಾರಕ್ಕೆ ಬಂದಾಗ ಯಾಜಕ ಸೇವೆಮಾಡುವ ಲೇವಿಯರ ವಶದಲ್ಲಿ ಇರುವ ಈ ಧರ್ಮಶಾಸ್ತ್ರಗ್ರಂಥದ ಒಂದು ಪ್ರತಿಯನ್ನು ತನಗಾಗಿ ಪುಸ್ತಕರೂಪವಾಗಿ ಬರೆಯಿಸಿಕೊಳ್ಳಬೇಕು.

19 ಅವನು ಗರ್ವದಿಂದ ತನ್ನ ಸ್ವದೇಶದವರನ್ನು ಹೀಯಾಳಿಸಬಾರದು; ಸರ್ವೇಶ್ವರನ ಆಜ್ಞೆಯನ್ನು ಮೀರಿ ಎಡಬಲಕ್ಕೆ ತಿರುಗಿಕೊಳ್ಳಬಾರದು; ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಾಗಿರಬೇಕು; ಈ ಧರ್ಮಶಾಸ್ತ್ರದ ಎಲ್ಲ ವಾಕ್ಯಗಳನ್ನೂ ವಿಧಿಗಳನ್ನೂ ಅನುಸರಿಸಲು ಅಭ್ಯಾಸಮಾಡಿಕೊಳ್ಳಬೇಕು; ಈ ಕಾರಣ ಈ ಗ್ರಂಥ ಅವನ ಬಳಿಯಲ್ಲೇ ಇರಬೇಕು. ಅವನು ತನ್ನ ಜೀವಮಾನವೆಲ್ಲಾ ಇದನ್ನು ಓದಿಕೊಳ್ಳುತ್ತಾ ಇರಬೇಕು.

20 ಹೀಗೆ ಮಾಡಿದರೆ ಅವನೂ ಅವನ ಸಂತತಿಯವರೂ ದೀರ್ಘಕಾಲ ಇಸ್ರಯೇಲರ ಮೇಲೆ ರಾಜ್ಯಾಧಿಕಾರ ನಡೆಸುವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು