Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಧರ್ಮೋಪದೇಶಕಾಂಡ 13 - ಕನ್ನಡ ಸತ್ಯವೇದವು C.L. Bible (BSI)

1 “ನಿಮ್ಮ ಮಧ್ಯೆ ಯಾವ ಪ್ರವಾದಿಯೆ ಆಗಲಿ, ಕನಸುಗಾರನೇ ಆಗಲಿ, ಎದ್ದು ಬಂದು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಸೂಚನೆಮಾಡಿ

2 ‘ಈ ದೇವತೆಗಳನ್ನು ಅವಲಂಬಿಸಿ ಪೂಜಿಸೋಣ’ ಎಂದು ಬೋಧಿಸಬಹುದು; ಆ ಬೋಧನೆಯನ್ನು ರುಜುವಾತು ಪಡಿಸಲು ಒಂದು ಅದ್ಭುತವನ್ನಾಗಲಿ, ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಹೇಳಬಹುದು.

3 ಅವನು ಹೇಳಿದಂತೆಯೇ ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು. ಏಕೆಂದರೆ ನಿಮ್ಮ ದೇವರಾದ ಸರ್ವೇಶ್ವರನನ್ನು ನೀವು ಪೂರ್ಣ ಹೃದಯದಿಂದ, ಪೂರ್ಣ ಮನಸ್ಸಿನಿಂದ ಪ್ರೀತಿಸುತ್ತೀರೊ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾರೆ.

4 ಸರ್ವೇಶ್ವರ ಹೇಳುವ ಮಾರ್ಗದಲ್ಲೇ ನೀವು ನಡೆದು, ಅವರಲ್ಲಿಯೇ ಭಯಭಕ್ತಿ ಯಳ್ಳವರಾಗಿ, ಅವರ ಆಜ್ಞೆಗಳನ್ನೇ ಅನುಸರಿಸಿ, ಅವರಿಗೇ ವಿಧೇಯರಾಗಿ, ಅವರ ಸೇವೇಮಾಡುತ್ತಾ ಅವರನ್ನೇ ಹೊಂದಿಕೊಂಡಿರಬೇಕು.

5 ಆ ಪ್ರವಾದಿಗೆ ಅಥವಾ ಆ ಕನಸುಗಾರನಿಗೆ ಮರಣಶಿಕ್ಷೆಯಾಗಬೇಕು. ಗುಲಾಮಗಿರಿಯಲ್ಲಿ ಇದ್ದ ನಿಮ್ಮನ್ನು ಬಿಡುಗಡೆಮಾಡಿ ಈಜಿಪ್ಟ್ ದೇಶದಿಂದ ಕರೆದುತಂದ ನಿಮ್ಮ ದೇವರಾದ ಸರ್ವೇಶ್ವರನಿಗೆ ವಿರೋಧವಾಗಿ ಅವನು ದ್ರೋಹದ ಮಾತುಗಳನ್ನಾಡಿ ನಿಮ್ಮ ದೇವರಾದ ಸರ್ವೇಶ್ವರ ಹೇಳಿದ ಮಾರ್ಗದಿಂದ ನಿಮ್ಮನ್ನು ತಪ್ಪಿಸಬೇಕು ಎಂದಿದ್ದರೆ, ಅಂಥವನನ್ನು ಕೊಲ್ಲಿಸಿ, ಆ ದುಷ್ಟತ್ವವನ್ನು ನಿಮ್ಮ ಮಧ್ಯೆಯಿಂದ ತೊಡೆದುಹಾಕಬೇಕು.

6 “ಒಡಹುಟ್ಟಿದ ಅಣ್ಣತಮ್ಮಂದಿರಾಗಲಿ, ಮಗನಾಗಲಿ, ಮಗಳಾಗಲಿ, ಪ್ರಾಣಪ್ರಿಯಳಾದ ಹೆಂಡತಿಯಾಗಲಿ, ಆಪ್ತಮಿತ್ರನಾಗಲಿ, ನಿಮಗೆ ಅಥವಾ ನಿಮ್ಮ ಪಿತೃಗಳಿಗೆ ಗೊತ್ತಿಲ್ಲದ ಇತರ ದೇವರುಗಳನ್ನು ಪೂಜಿಸೋಣ ಬನ್ನಿ’ ಎಂದು ಒಳ ಒಳಗೇ ನಿಮಗೆ ಬೋಧಿಸಬಹುದು.

7 ಆ ದೇವರುಗಳು ಹತ್ತಿರವಿರುವ ಜನಾಂಗಗಳ ದೇವರುಗಳಾಗಿದ್ದರೂ ದೂರವಾದವರ ದೇವರುಗಳಾಗಿದ್ದರೂ ಭೂಲೋಕದ ಯಾವ ಭಾಗದವರ ದೇವರುಗಳಾಗಿದ್ದರೂ

8 ನೀವು ಸಮ್ಮತಿಸಲೂ ಬಾರದು; ಕಿವಿಗೊಡಲೂ ಬಾರದು. ಅಂಥವನನ್ನು ಕನಿಕರಿಸಕೂಡದು, ತಪ್ಪಿಸಕೂಡದು, ಬಚ್ಚಿಡಕೂಡದು; ಬದಲಿಗೆ ಕೊಲ್ಲಿಸಲೇಬೇಕು.

9 ಆ ಶಿಕ್ಷೆಯನ್ನು ನಡೆಸುವಾಗ ತಪ್ಪು ಕಂಡವನೇ ಮೊದಲು ಕಲ್ಲೆಸೆಯಬೇಕು; ತರುವಾಯ ಜನರೆಲ್ಲರೂ ಎಸೆಯಲಿ.

10 ಗುಲಾಮಗಿರಿಯಲ್ಲಿದ್ದ ನಿಮ್ಮನ್ನು ಬಿಡುಗಡೆಮಾಡಿ ಈಜಿಪ್ಟ್ ದೇಶದಿಂದ ಕರೆದುತಂದ ನಿಮ್ಮ ದೇವರಾದ ಸರ್ವೇಶ್ವರನ ಆಶ್ರಯದಿಂದ ಅವನು ನಿಮ್ಮನ್ನು ತಪ್ಪಿಸಬೇಕೆಂದು ಇದ್ದುದರಿಂದ ಅಂಥವನನ್ನು ಕಲ್ಲು ಎಸೆದು ಕೊಲ್ಲಬೇಕು.

11 ಇದನ್ನು ಇಸ್ರಯೇಲರೆಲ್ಲರು ಕೇಳಿ, ಭಯಪಟ್ಟು, ಅಂಥ ದುಷ್ಕಾರ್ಯವನ್ನು ಮುಂದೆ ಮಾಡರು.

12 “ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ನಿವಾಸಕ್ಕಾಗಿ ಕೊಡುವ ಯಾವುದಾದರೂ ಒಂದು ಊರಿನ ವಿಷಯವನ್ನು ತೆಗೆದುಕೊಳ್ಳೋಣ.

13 ಅಲ್ಲಿ ವಾಸವಾಗಿರುವ ಇಸ್ರಯೇಲರಲ್ಲಿ ಕೆಲವು ಮಂದಿ ದುಷ್ಟರು, ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ತಮ್ಮ ಊರಿನವರಿಗೆ ಸೂಚಿಸಬಹುದು. ‘ಆ ದೇವರುಗಳನ್ನು ಪೂಜಿಸೋಣ ಬನ್ನಿ’ ಎಂದು ಹೇಳಿ ಅವರನ್ನು ಸನ್ಮಾರ್ಗದಿಂದ ತಪ್ಪಿಸಬಹುದು.

14 ಆ ಸುದ್ದಿಯನ್ನು ನೀವು ಕೇಳಿದರೆ, ಆ ಸಂಗತಿಯನ್ನು ಚೆನ್ನಾಗಿ ವಿಚಾರಿಸಿ ತಿಳಿದುಕೊಳ್ಳಬೇಕು. ಅಂಥ ಅಸಹ್ಯಕಾರ್ಯ ಇಸ್ರಯೇಲರಲ್ಲಿ ನಡೆದದ್ದು ನಿಜವೆಂದು ತಿಳಿದುಬಂದರೆ,

15 ಆ ಊರನ್ನು ಸಂಪೂರ್ಣವಾಗಿ ಹಾಳುಮಾಡಬೇಕು. ಅದರಲ್ಲಿ ಇರುವ ಎಲ್ಲ ಜನರನ್ನೂ ಜಾನುವಾರುಗಳನ್ನೂ ಕತ್ತಿಯಿಂದ ಸಂಹರಿಸಿಬಿಡಬೇಕು.

16 ಅದರಲ್ಲಿ ಇರುವ ಎಲ್ಲ ಸಾಮಗ್ರಿಗಳನ್ನು ಗ್ರಾಮಮಧ್ಯದಲ್ಲಿ ಕೂಡಿಸಿ, ಊರನ್ನೂ, ಅದರಲ್ಲಿರುವ ಎಲ್ಲ ಸಾಮಾನುಗಳನ್ನೂ ನಿಮ್ಮ ದೇವರಾದ ಸರ್ವೇಶ್ವರನಿಗೆ ನಿಶ್ಯೇಷವಾಗಿ ಸುಟ್ಟುಬಿಡಬೇಕು. ಅದು ಪುನಃ ಯಾವಾಗಲೂ ಹಾಳುದಿಬ್ಬವಾಗಿರಬೇಕು. ಅದನ್ನು ಪುನಃ ಕಟ್ಟಬಾರದು.

17 ಆ ಶಾಪಗ್ರಸ್ತ ವಸ್ತುಗಳಲ್ಲಿ ನೀವು ಸ್ವಲ್ಪವನ್ನಾದರೂ ತೆಗೆದುಕೊಳ್ಳಬಾರದು.

18 ನೀವು ಹೀಗೆ ನಡೆದು, ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಟ್ಟು, ನಾನು ಈಗ ನಿಮಗೆ ಬೋಧಿಸುವ ಅವರ ಎಲ್ಲ ಆಜ್ಞೆಗಳನ್ನು ಕೈಗೊಂಡು ಅವರ ದೃಷ್ಟಿಗೆ ಸರಿಯಾದದ್ದನ್ನು ಮಾಡಿದರೆ, ಅವರು ರೋಷಾಗ್ನಿಯನ್ನು ತಡೆದು, ನಿಮಗೆ ದಯೆಯನ್ನು ತೋರಿಸಿ, ನಿಮ್ಮನ್ನು ಕರುಣಿಸುವರು; ತಾವು ನಿಮ್ಮ ಪಿತೃಗಳಿಗೆ ವಾಗ್ದಾನಮಾಡಿದಂತೆ ನಿಮ್ಮ ಸಂತತಿಯನ್ನು ಅಭಿವೃದ್ಧಿಗೊಳಿಸುವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು