ಮುನ್ನುಡಿ
“ದಾನಿಯೇಲನು” ಎಂಬ ಈ ಗ್ರಂಥವು ಅನ್ಯದೇಶದ ಅರಸರು ಯೆಹೂದ್ಯರನ್ನು ದಬ್ಬಾಳಿಕೆಗೆ ಈಡುಪಡಿಸಿದಾಗ ಬರೆದದ್ದು. ದೇವರು ಕ್ರೂರಿಗಳಾದ ಆ ಅರಸರನ್ನು ಕೆಳಗಿಳಿಸಿ ದೇವಜನರನ್ನು ಉದ್ಧರಿಸಿ, ಗತವೈಭವವನ್ನು ಮರಳಿ ಸ್ಥಾಪಿಸುವರು ಎಂಬ ಆಶಾದಾಯಕ ವಿಷಯವನ್ನು ಕತೆಗಳ ಹಾಗೂ ದಿವ್ಯದರ್ಶನಗಳ ಮೂಲಕ ತನ್ನ ಕಾಲದ ಜನರಿಗೆ ಅರ್ಥವಾಗುವಂತೆ ಕಲಿಸುತ್ತಾನೆ ಈ ಗ್ರಂಥಕಾರ.
ಈ ಪುಸ್ತಕವನ್ನು ಎರಡು ಮುಖ್ಯ ಭಾಗಗಳನ್ನಾಗಿ ವಿಂಗಡಿಸಬಹುದು:
1. ದಾನಿಯೇಲನು ಮತ್ತು ಅವನ ಸಂಗಡಿಗರು ದೇವರ ಮೇಲೆ ಅಚಲವಾದ ನಂಬಿಕೆಯಿಟ್ಟು ಅದರಂತೆ ನಡೆದುಕೊಂಡದ್ದರಿಂದ ಶತ್ರುಗಳನ್ನು ಜಯಿಸಲು ಸಾಧ್ಯವಾಗುತ್ತದೆ. ಬಾಬಿಲೋನಿನ ಹಾಗು ಪರ್ಷಿಯದ ಚಕ್ರವರ್ತಿಗಳ ಆಳ್ವಿಕೆಯ ಹಿನ್ನೆಲೆಯಲ್ಲಿ ಬರೆದ ಕತೆಗಳಿವು.
2. ಬಾಬಿಲೋನಿನ ಚಕ್ರವರ್ತಿ ಮೊದಲ್ಗೊಂಡು ಹಲವಾರು ರಾಜರು ಬಂದುಹೋದದ್ದು, ಅನೇಕ ರಾಷ್ಟ್ರಗಳು ಅಳಿದುಹೋದದ್ದು, ಅನ್ಯದೇಶೀಯರ ದಬ್ಬಾಳಿಕೆ ಕಣ್ಮರೆಯಾದದ್ದು, ದೇಶೀಯರು ವಿಜೇತರಾದದ್ದು, ಇವುಗಳನ್ನು ದಾನಿಯೇಲನು ಕಂಡ ದಿವ್ಯದರ್ಶನಗಳ ಮೂಲಕ ಸಾಂಕೇತಿಕವಾಗಿ ಎತ್ತಿತೋರಿಸುತ್ತಾನೆ ಲೇಖಕ.
ಈ ಗ್ರಂಥದ ಒಂದು ಭಾಗವನ್ನು ಅಂದರೆ, ಅಧ್ಯಾಯ 1:1-2; 3; 8:1-12; ಇವುಗಳನ್ನು ಹಿಬ್ರುಭಾಷೆಯಲ್ಲೂ ಇನ್ನೊಂದು ಭಾಗವನ್ನು ಅಂದರೆ, 2:3-7:28 ಇವುಗಳನ್ನು ಅರಮೀಯ ಭಾಷೆಯಲ್ಲೂ ಬರೆಯಲಾಗಿದೆ.
ಪರಿವಿಡಿ
1. ದಾನಿಯೇಲನು ಮತ್ತು ಅವನ ಗೆಳೆಯರು 1:1—6:28
2. ದಾನಿಯೇಲನು ಕಂಡ ದರ್ಶನಗಳು 7:1—11:45
- ನಾಲ್ಕು ಮೃಗಗಳು 7:1-28
- ಟಗರು ಮತ್ತು ಹೋತ 8:1—9:27
- ದೇವದೂತ 10:1—11:45
- ಕೊನೆಯ ಕಾಲ 12:1-13