ದಾನಿಯೇಲ 5 - ಕನ್ನಡ ಸತ್ಯವೇದವು C.L. Bible (BSI)ಗೋಡೆಯ ಮೇಲೆ ಒಗಟಿನ ಬರಹ 1 ಬೇಲ್ಶಚ್ಚರ ಎಂಬ ಅರಸನು ತನ್ನ ರಾಜ್ಯದ ಪ್ರಮುಖರಲ್ಲಿ ಸಾವಿರ ಮಂದಿಯನ್ನು ಸೇರಿಸಿ ಒಂದು ಔತಣವನ್ನು ಏರ್ಪಡಿಸಿದ. ಆ ಸಾವಿರ ಜನರ ಮುಂದೆ ಅವನೂ ದ್ರಾಕ್ಷಾರಸವನ್ನು ಕುಡಿದ. 2 ಹಾಗೆ ಕುಡಿದುಕೊಂಡಿರುವಾಗ ತಾನೂ ತನ್ನ ಪ್ರಮುಖರೂ ಪತ್ನಿಯರೂ ಉಪಪತ್ನಿಯರೂ ಕುಡಿಯುವುದಕ್ಕಾಗಿ ತನ್ನ ತಂದೆ ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದ ಗರ್ಭಗುಡಿಯಿಂದ ಸೂರೆಯಾಗಿ ತಂದ 3 ಬಂಗಾರದ ಪೂಜಾ ಪಾತ್ರೆಗಳನ್ನು ತರಿಸಿದ. ರಾಜನೂ ಅವನ ಪ್ರಮುಖರೂ ಪತ್ನಿ - ಉಪಪತ್ನಿಯರೂ ಅವುಗಳಲ್ಲಿ ಕುಡಿದರು. 4 ಕುಡಿದುಕೊಂಡೇ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ತಮ್ಮ ದೇವರುಗಳನ್ನು ಆರಾಧಿಸಿದರು. 5 ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಕೈಬೆರಳುಗಳು ಕಾಣಿಸಿಕೊಂಡು ದೀಪಸ್ತಂಭದ ಎದುರಿಗೆ ಅರಮನೆಯ ಸುಣ್ಣದ ಗೋಡೆಯ ಮೇಲೆ ಬರೆಯಲು ತೊಡಗಿದವು. ಬರೆಯುತ್ತಿದ್ದ ಆ ಕೈಯನ್ನು ರಾಜನು ನೋಡಿದನು. 6 ಅದನ್ನು ಕಂಡದ್ದೆ ಅವನ ಮುಖ ಕಳೆಗುಂದಿತು, ಮನಸ್ಸು ಕಳವಳಗೊಂಡಿತು, ಸೊಂಟದ ಕೀಲು ಸಡಿಲಗೊಂಡಿತು, ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು. 7 ಕೂಡಲೆ ರಾಜನು ಗಟ್ಟಿಯಾಗಿ ಕೂಗಿ ಮಂತ್ರವಾದಿ, ಪಂಡಿತ ಹಾಗು ಶಾಕುನಿಕರನ್ನು ಕರೆಯಿಸಿದನು. ಬಾಬಿಲೋನಿನ ಆ ವಿದ್ವಾಂಸರಿಗೆ, “ಯಾವನು ಈ ಬರಹವನ್ನು ಓದಿ ಇದರ ಅರ್ಥವನ್ನು ನನಗೆ ತಿಳಿಸುತ್ತಾನೋ ಅವನಿಗೆ ಕೆನ್ನೀಲಿ ರಾಜವಸ್ತ್ರವನ್ನು ತೊಡಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು,” ಎಂದು ಹೇಳಿದನು. 8 ಆಸ್ಥಾನದ ವಿದ್ವಾಂಸರೆಲ್ಲರು ಬಂದು ಸೇರಿದರು. ಆದರೆ ಆ ಬರಹವನ್ನು ಓದುವುದಕ್ಕಾಗಲಿ, ಅದರ ಅರ್ಥವನ್ನು ರಾಜನಿಗೆ ತಿಳಿಸುವುದಕ್ಕಾಗಲಿ ಅವರಿಂದ ಆಗಲಿಲ್ಲ. 9 ಆಗ ರಾಜ ಬೇಲ್ಶಚ್ಚರನು ಬಹಳ ಕಳವಳಗೊಂಡನು. ಅವನ ಮುಖ ಕಳೆಗುಂದಿತು. ಅವನ ಸಾಮಂತರು ದಿಕ್ಕುತೋಚದವರಾದರು. 10 ರಾಜನೂ ಅವನ ಸಾಮಂತರೂ ಆಡಿದ ಮಾತು ರಾಣಿಗೆ ಮುಟ್ಟಿತು. ಆಕೆ ಔತಣ ಶಾಲೆಗೆ ಬಂದು, “ರಾಜರೇ, ಚಿರಂಜೀವಿಯಾಗಿರಿ! ನಿಮ್ಮ ಮನಸ್ಸು ಕಳವಳಗೊಳ್ಳದಿರಲಿ, ನಿಮ್ಮ ಮುಖ ಕಳೆಗುಂದದಿರಲಿ! ಪರಿಶುದ್ಧ ದೇವರ ಆತ್ಮ ನೆಲೆಸಿರುವ ಒಬ್ಬ ವ್ಯಕ್ತಿ ನಿಮ್ಮ ರಾಜ್ಯದಲ್ಲಿದ್ದಾನೆ. 11 ನಿಮ್ಮ ತಂದೆಯ ಕಾಲದಲ್ಲಿ ಬುದ್ಧಿವಂತಿಕೆ, ತಿಳುವಳಿಕೆ, ದೇವರುಗಳಿಗೆ ಸಮಾನವಾದ ಜ್ಞಾನ ಅವನಲ್ಲಿ ಕಂಡುಬಂದುವು. ನಿಮ್ಮ ತಂದೆ ರಾಜ ನೆಬೂಕದ್ನೆಚ್ಚರನು, ಅವನನ್ನು ಜೋಯಿಸರಿಗೂ ಮಂತ್ರವಾದಿಗಳಿಗೂ ಪಂಡಿತರಿಗೂ ಶಾಕುನಿಕರಿಗೂ ಅಧ್ಯಕ್ಷನನ್ನಾಗಿ ನೇಮಿಸಿದ್ದರು. 12 ಹೌದು, ‘ಬೇಲ್ತೆಶಚ್ಚರ’ನೆಂಬ ಹೆಸರನ್ನು ರಾಜನಿಂದ ಹೊಂದಿದ ಆ ದಾನಿಯೇಲನು ಪರಮ ಬುದ್ಧಿವಂತ, ಜ್ಞಾನಿ, ವಿವೇಕಿ, ಕನಸುಗಳ ಅರ್ಥವನ್ನು ತಿಳಿಸುವ ಜಾಣತನ, ಒಗಟು ಬಿಡಿಸುವ ಚಮತ್ಕಾರ, ಗುಂಜುಗಂಟು ಬಿಚ್ಚುವ ಚಾತುರ್ಯ ಅವನಲ್ಲಿ ತೋರಿಬಂದವು. ಆದ್ದರಿಂದಲೇ ಅವನನ್ನು ಅಧ್ಯಕ್ಷನನ್ನಾಗಿ ನೇಮಿಸಲಾಯಿತು. ದಾನಿಯೇಲನನ್ನು ಈಗಲೇ ಕರೆಯಿಸಿರಿ. ಆತ ಬರಹದ ಅರ್ಥವನ್ನು ವಿವರಿಸುವನು,” ಎಂದಳು. ದಾನಿಯೇಲನು ಕೊಟ್ಟ ವಿವರ 13 ಅಂತೆಯೇ, ದಾನಿಯೇಲನನ್ನು ರಾಜ ಸನ್ನಿಧಿಗೆ ಬರಮಾಡಲಾಯಿತು. ರಾಜನು ಅವನಿಗೆ: “ರಾಜನಾದ ನನ್ನ ತಂದೆ ಜುದೇಯದಿಂದ ಖೈದಿಯಾಗಿ ತಂದು ಸೆರೆಮಾಡಿದ ಯೆಹೂದ್ಯರಲ್ಲಿ ದಾನಿಯೇಲ್ ಎಂಬುವನು ನೀನೋ? 14 ದೇವರ ಆತ್ಮ ನಿನ್ನಲ್ಲಿ ನೆಲೆಸಿದೆಯೆಂದು ನಾನು ಕೇಳಿದ್ದೇನೆ. ನಿನಗೆ ಪರಮಜ್ಞಾನ, ವಿವೇಕ, ಬುದ್ಧಿ, ತೇಜಸ್ಸು ಇದೆಯೆಂದು ನನಗೆ ತಿಳಿದುಬಂದಿದೆ. 15 ಈಗ ಈ ಬರಹವನ್ನು ಓದಿ ಇದರ ಅರ್ಥವನ್ನು ನನಗೆ ತಿಳಿಸುವುದಕ್ಕಾಗಿ ವಿದ್ವಾಂಸರನ್ನೂ ಮಂತ್ರವಾದಿಗಳನ್ನೂ ಸಮ್ಮುಖಕ್ಕೆ ಬರಮಾಡಿದೆ. ಅವರು ಇದರ ಅರ್ಥವನ್ನು ವಿವರಿಸಲಾರದೆಹೋದರು. 16 ನೀನು ಗೂಡಾರ್ಥಗಳನ್ನು ವಿವರಿಸಬಲ್ಲವನೂ ಗುಂಜುಗಂಟುಗಳನ್ನು ಬಿಚ್ಚಬಲ್ಲವನೂ ಎಂಬ ಸಮಾಚಾರ ನನಗೆ ಮುಟ್ಟಿದೆ. ಈ ಬರಹವನ್ನು ಓದಿ, ಇದರ ಅಭಿಪ್ರಾಯವನ್ನು ನನಗೆ ತಿಳಿಸಿದೆಯಾದರೆ ನಿನಗೆ ಕೆನ್ನೀಲಿ ರಾಜವಸ್ತ್ರವನ್ನು ಹೊದಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ನಿನ್ನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು,” ಎಂದು ಹೇಳಿದನು. 17 ಆಗ ದಾನಿಯೇಲನು ರಾಜನಿಗೆ, “ಅರಸರೇ, ನಿಮ್ಮ ದಾನಗಳು ನಿಮಗೇ ಇರಲಿ. ನಿಮ್ಮ ಬಹುಮಾನಗಳು ಮತ್ತೊಬ್ಬನಿಗೆ ದೊರಕಲಿ. ಆದರೆ ನಾನು ಈ ಬರಹವನ್ನು ಓದಿ ಅದರ ಅರ್ಥವನ್ನು ತಮಗೆ ತಿಳಿಸುವೆನು. 18 ಪರಾತ್ಪರ ದೇವರು ನಿಮ್ಮ ತಂದೆಯಾದ ನೆಬೂಕದ್ನೆಚ್ಚರ್ ಅವರಿಗೆ ರಾಜ್ಯ ಮಹತ್ವವನ್ನು ಹಾಗೂ ಮಾನ ಸನ್ಮಾನಗಳನ್ನು ದಯಪಾಲಿಸಿದ್ದರು. 19 ಇಂಥ ಮಹತ್ವ ವರದ ನಿಮಿತ್ತ ಸಕಲ ದೇಶ-ಕುಲ-ಭಾಷೆಗಳವರು ಅವರ ಮುಂದೆ ಭಯದಿಂದ ನಡುಗುತ್ತಿದ್ದರು. ತಮಗೆ ಇಷ್ಟಬಂದ ಹಾಗೆ ಒಬ್ಬನನ್ನು ಬದುಕಿಸಿದರು, ಇನ್ನೊಬ್ಬನನ್ನು ಕೊಲ್ಲಿಸಿದರು. ಮನಸ್ಸಿಗೆ ಬಂದಹಾಗೆ ಒಬ್ಬನನ್ನು ಮೇಲೇರಿಸಿದರು, ಇನ್ನೊಬ್ಬನನ್ನು ಕೆಳಕ್ಕಿಳಿಸಿದರು. 20 ಹಾಗೆ ಅವರ ಎದೆ ಗರ್ವದಿಂದ ಉಬ್ಬಿಹೋಯಿತು. ಮನಸ್ಸಿಗೆ ಸೊಕ್ಕೇರಿಹೋಯಿತು. ಅವರನ್ನೂ ರಾಜಾಸ್ಥಾನದಿಂದ ತಳ್ಳಲಾಯಿತು. ಮಾನ ಕಳೆದುಹೋಯಿತು. 21 ಸಮಾಜದಿಂದ ಬಹಿಷ್ಕೃತರಾಗಿ, ಮೃಗಬುದ್ಧಿಯುಳ್ಳವರಾಗಿ, ಕಾಡುಕತ್ತೆಗಳ ನಡುವೆ ವಾಸಮಾಡಬೇಕಾಯಿತು. ಪರಾತ್ಪರ ದೇವರಿಗೆ ನರಮಾನವರ ರಾಜ್ಯದ ಮೇಲೆ ಅಧಿಕಾರವಿದೆ. ಅದನ್ನು ತಮಗೆ ಇಷ್ಟಬಂದವರಿಗೆ ಒಪ್ಪಿಸುತ್ತಾರೆ ಎಂಬುದನ್ನು ಅವರು ಗ್ರಹಿಸುವ ತನಕ ದನಗಳಂತೆ ಹುಲ್ಲುಮೇಯುವ ಗತಿ ಅವರದಾಯಿತು. ಆಕಾಶದ ಇಬ್ಬನಿ ಅವರ ಮೈಯನ್ನು ತೋಯಿಸುತ್ತಿತ್ತು.” 22 “ಬೇಲ್ಶಚ್ಚರರೇ, ಅವರ ಕುಮಾರರಾದ ತಾವು ಇದನ್ನೆಲ್ಲ ತಿಳಿದುಕೊಂಡಿದ್ದರೂ ದೀನ ಮನಸ್ಕರಾಗದೆ ಇದ್ದೀರಿ. 23 ಪರಲೋಕದ ಒಡೆಯನಿಗೆ ವಿರುದ್ಧವಾಗಿ ನಿಮ್ಮನ್ನೆ ಹೆಚ್ಚಿಸಿಕೊಂಡಿದ್ದೀರಿ. ದೇವಾಲಯದಿಂದ ಪವಿತ್ರ ಪೂಜಾಪಾತ್ರೆಗಳನ್ನು ಇಲ್ಲಿಗೆ ತಂದಿದ್ದೀರಿ. ನೀವೂ ನಿಮ್ಮ ರಾಜ್ಯದ ಪ್ರಮುಖರೂ ಪತ್ನಿ-ಉಪಪತ್ನಿಯರೂ ಅವುಗಳಲ್ಲಿ ದ್ರಾಕ್ಷಾರಸವನ್ನೂ ಕುಡಿದಿದ್ದೀರಿ. ಬುದ್ಧಿ, ಕಣ್ಣು, ಕಿವಿ ಇಲ್ಲದೆ ಬೆಳ್ಳಿಬಂಗಾರಗಳ, ಕಂಚುಕಬ್ಬಿಣಗಳ, ಮರ ಕಲ್ಲುಗಳ ದೇವರುಗಳನ್ನೂ ಆರಾಧಿಸಿದ್ದೀರಿ. ನಿಮ್ಮ ಪ್ರಾಣ ಯಾರ ಕೈಯಲ್ಲಿದೆಯೋ ನಿಮ್ಮ ಸ್ಥಿತಿಗತಿಗಳು ಯಾರ ಅಧೀನದಲ್ಲಿದೆಯೋ ಆ ದೇವರನ್ನು ಮಾತ್ರ ಗೌರವಿಸದೆ ಇದ್ದೀರಿ. 24 ಹೀಗಿರಲು, ಆ ಕೈಬೆರಳು ದೇವರ ಸನ್ನಿಧಿಯಿಂದ ಬಂದು ಬರೆದಿದೆ.” 25 “ಬರೆದಿರುವ ಮಾತುಗಳು ಇವು: ಮೆನೇ, ಮೆನೇ, ತೆಕೇಲ್, ಉಫರ್ಸಿನ್.” 26 ಇದರ ಅರ್ಥ ಹೀಗಿದೆ : “ಮೆನೇ” ಎಂದರೆ, ದೇವರು ನಿನ್ನ ಆಳ್ವಿಕೆಯ ಕಾಲಾವಧಿಯನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾರೆ. 27 'ತೆಕೇಲ್’ ಎಂದರೆ ನಿನ್ನನ್ನು ತಕ್ಕಡಿಯಲ್ಲಿ ಹಾಕಿ ನೋಡಲು ನಿನ್ನ ತೂಕ ಕಡಿಮೆಯಾಗಿ ಕಂಡುಬಂದಿದೆ. 28 ‘ಫರ್ಸಿನ್’ ಎಂದರೆ ನಿನ್ನ ರಾಜ್ಯವನ್ನು ವಿಭಾಗಮಾಡಿ ಮೇದ್ಯರಿಗೂ ಪರ್ಷಿಯದವರಿಗೂ ಕೊಡಲಾಗಿದೆ,” ಎಂದು ಅರಿಕೆಮಾಡಿದನು. 29 ತಕ್ಷಣವೇ ಬೇಲ್ಶಚ್ಚರನ ಆಜ್ಞೆಯ ಮೇರೆಗೆ ದಾನಿಯೇಲನಿಗೆ ಕೆನ್ನೀಲಿ ರಾಜವಸ್ತ್ರವನ್ನು ಹೊದಿಸಿದರು. ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿದರು. ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ದಾನಿಯೇಲನು ಒಬ್ಬನಾದನು ಎಂದು ಪ್ರಕಟಿಸಿದರು. 30 ಅದೇ ರಾತ್ರಿ ಬಾಬಿಲೋನಿನ ರಾಜ ಬೇಲ್ಶಚ್ಚರನು ಕೊಲ್ಲಲ್ಪಟ್ಟನು. 31 ಸುಮಾರು 62 ವಯಸ್ಸಿನ ಮೇದ್ಯನಾದ ದಾರ್ಯಾವೆಷನು ರಾಜ್ಯವನ್ನು ವಹಿಸಿಕೊಂಡನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India