ದಾನಿಯೇಲ 2 - ಕನ್ನಡ ಸತ್ಯವೇದವು C.L. Bible (BSI)ನೆಬೂಕದ್ನೆಚ್ಚರನ ಕನಸು 1 ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಒಂದು ಕನಸು ಕಂಡು ತತ್ತರಗೊಂಡನು. ಅವನಿಗೆ ನಿದ್ರೆ ತಪ್ಪಿತು. 2 ಆಗ ಆ ರಾಜನು ತನ್ನ ಕನಸಿನ ಅರ್ಥ ತಿಳಿಸಬೇಕೆಂದು ಜೋಯಿಸರನ್ನೂ ಮಂತ್ರವಾದಿಗಳನ್ನೂ ಮಾಟಗಾರರನ್ನೂ ಪಂಡಿತರನ್ನೂ ಕರೆಯಿಸಿದನು. ಅವರು ಆಸ್ಥಾನಕ್ಕೆ ಬಂದು ರಾಜನ ಮುಂದೆ ನಿಂತುಕೊಂಡರು. 3 ರಾಜನು ಅವರಿಗೆ, “ನಾನು ಒಂದು ಕನಸು ಕಂಡೆ. ಅದರ ಅರ್ಥವೇನೋ ಎಂದು ನನ್ನ ಮನಸ್ಸು ತತ್ತರಗೊಂಡಿದೆ,” ಎಂದನು. 4 ಆ ಪಂಡಿತರು ಅರಮೀಯ ಭಾಷೆಯಲ್ಲಿ ರಾಜನಿಗೆ, “ಅರಸರೇ, ಚಿರಂಜೀವಿಯಾಗಿರಿ! ಆ ಕನಸನ್ನು ನಿಮ್ಮ ದಾಸರಾದ ನಮಗೆ ಹೇಳಿ. ಅದರ ತಾತ್ಪರ್ಯವನ್ನು ತಿಳಿಸುತ್ತೇವೆ,” ಎಂದು ಅರಿಕೆಮಾಡಿದರು. 5 ಆಗ ರಾಜನು ಆ ಪಂಡಿತರಿಗೆ, “ನನ್ನ ಈ ಮಾತು ಖಂಡಿತ; ನೀವು ಈ ಕನಸನ್ನೂ ಅದರ ಉದ್ದೇಶವನ್ನೂ ನನಗೆ ತಿಳಿಸದಿದ್ದರೆ ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುವೆನು; ನಿಮ್ಮ ಮನೆಗಳನ್ನು ತಿಪ್ಪೆಗುಂಡಿಯನ್ನಾಗಿಸುವೆನು. 6 ನೀವು ಆ ಕನಸನ್ನೂ ಅದರ ಉದ್ದೇಶವನ್ನೂ ತಿಳಿಸಿದ್ದೇ ಆದರೆ ನನ್ನಿಂದ ನಿಮಗೆ ದಾನ ಬಹುಮಾನಗಳೂ ವಿಶೇಷ ಸನ್ಮಾನಗಳೂ ದೊರಕುವುವು. ಆದಕಾರಣ ಆ ಕನಸನ್ನೂ ಅದರ ಉದ್ದೇಶವನ್ನೂ ನನಗೆ ತಿಳಿಸಿ,” ಎಂದನು. 7 ಪಂಡಿತರು, “ರಾಜರು ತಮ್ಮ ದಾಸರಿಗೆ ಕನಸನ್ನು ತಿಳಿಸೋಣವಾಗಲಿ, ನಾವು ಅದರ ತಾತ್ಪರ್ಯವನ್ನು ವಿವರಿಸುವೆವು,” ಎಂದು ಮತ್ತೊಮ್ಮೆ ಉತ್ತರಕೊಟ್ಟರು. 8 ಅದಕ್ಕೆ ರಾಜನು, “ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ ನಿಮಗೆ ಮರಣದಂಡನೆಯಾಗುವುದು ಖಚಿತವೆಂದು ತಿಳಿದೇ ಕಾಲಹರಣ ಮಾಡುತ್ತಿದ್ದೀರಿ. ಇದು ನನಗೆ ಚೆನ್ನಾಗಿ ಗೊತ್ತು. 9 ಕಾಲ ಬದಲಾಗುತ್ತಿರುತ್ತದೆ ಎಂದುಕೊಂಡೇ ನನ್ನ ಮುಂದೆ ಇಲ್ಲಸಲ್ಲದ್ದನ್ನು ಆಡಲು ಒಪ್ಪಂದ ಮಾಡಿಕೊಂಡಿದ್ದೀರಿ. ಅಂತು ಆ ಕನಸನ್ನು ನೀವು ನನಗೆ ತಿಳಿಸಲೇಬೇಕು. ಆಗ ಅದರ ಉದ್ದೇಶವನ್ನು ವಿವರಿಸಬಲ್ಲಿರೆಂದು ನಾನು ತಿಳಿದುಕೊಳ್ಳುವೆನು,” ಎಂದು ಹೇಳಿದನು. 10 ಆಗ ಆ ಪಂಡಿತರು ಸನ್ನಿಧಿಯ ಮುಂದೆ, “ರಾಜರು ಕೇಳುವ ಸಂಗತಿಯನ್ನು ತಿಳಿಸಬಲ್ಲವನು ಈ ಲೋಕದಲ್ಲಿ ಯಾವನೂ ಇಲ್ಲ. ಎಷ್ಟೆಷ್ಟೋ ಬಲಿಷ್ಠರಾದ , ಪ್ರಬಲರಾದ ಯಾವ ಅರಸರೂ ಜೋಯಿಸನನ್ನಾಗಲಿ, ಮಾಟಗಾರನನ್ನಾಗಲಿ, ಪಂಡಿತನನ್ನಾಗಲಿ, ಇಂಥ ಸಂಗತಿಯನ್ನು ಎಂದೂ ಕೇಳಿದ್ದಿಲ್ಲ. 11 ರಾಜರು ಕೇಳುತ್ತಿರುವ ಸಂಗತಿ ಅತಿಕಷ್ಟವಾದುದು. ನರಮಾನವರ ನಡುವೆ ವಾಸಮಾಡದ ದೇವರುಗಳೇ ಹೊರತು ಇನ್ನಾರೂ ರಾಜರ ಸಮ್ಮುಖದಲ್ಲಿ ಇದನ್ನು ತಿಳಿಸಲಾರರು,” ಎಂದು ಉತ್ತರಕೊಟ್ಟರು. 12 ಇದನ್ನು ಕೇಳಿ ರಾಜನು ಉಗ್ರಕೋಪಗೊಂಡನು. ಬಾಬಿಲೋನಿನ ಸಕಲ ವಿದ್ವಾಂಸರನ್ನು ಕೊಲ್ಲಬೇಕೆಂದು ಆಜ್ಞಾಪಿಸಿದನು. 13 ಕೂಡಲೆ ಆ ಆಜ್ಞೆ ಹೊರಪಟ್ಟಿತು. ವಿದ್ವಾಂಸರು ಪ್ರಾಣಾಪಾಯಕ್ಕೆ ಗುರಿಯಾದರು. ಅಂತೆಯೇ ದಾನಿಯೇಲನನ್ನೂ ಅವನ ಗೆಳೆಯರೆಲ್ಲರನ್ನೂ ಕೊಲ್ಲಲಿಕ್ಕೆ ಹುಡುಕಿದರು. ಕನಸಿನ ವಿವರ ದಾನಿಯೇಲನಿಗೆ ವಿಶದ 14 ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬಿಲೋನಿನ ವಿದ್ವಾಂಸರ ಸಂಹಾರಕ್ಕಾಗಿ ಹೊರಟಾಗ ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತಾಡಿದನು. 15 “ಈ ರಾಜಾಜ್ಞೆಯೇಕೆ ಇಷ್ಟು ತೀಕ್ಷ್ಣ?” ಎಂದು ಕೇಳಿದನು. ಅರ್ಯೋಕನು ನಡೆದ ಸಂಗತಿಯನ್ನು ದಾನಿಯೇಲನಿಗೆ ತಿಳಿಸಿದನು. 16 ಆಮೇಲೆ ದಾನಿಯೇಲನು ಅರಮನೆಗೆ ಹೋಗಿ, “ನನಗೆ ಸಮಯಕೊಟ್ಟರೆ ಆ ಕನಸಿನ ಅರ್ಥವನ್ನು ರಾಜರಿಗೆ ನಾನು ವಿವರಿಸಬಲ್ಲೆ,” ಎಂದು ಅರಿಕೆ ಮಾಡಿದನು. 17 ಬಳಿಕ ದಾನಿಯೇಲನು ತನ್ನ ಮನೆಗೆ ಹಿಂತಿರುಗಿ ಹನನ್ಯ, ಮೀಶಾಯೇಲ ಮತ್ತು ಅಜರ್ಯ ಎಂಬ ತನ್ನ ಗೆಳೆಯರಿಗೆ ಈ ಸಮಾಚಾರ ತಿಳಿಸಿದನು. 18 “ನಾವು ಬಾಬಿಲೋನಿನ ಇತರ ವಿದ್ವಾಂಸರೊಂದಿಗೆ ನಾಶವಾಗದಂತೆ ಪರಲೋಕ ದೇವರು ಈ ರಹಸ್ಯದ ವಿಷಯವಾಗಿ ಕೃಪೆತೋರುವಂತೆ ಬೇಡಿಕೊಳ್ಳೋಣ,” ಎಂದು ಹೇಳಿದನು. 19 ಆ ರಾತ್ರಿಯೇ ಸ್ವಪ್ನದಲ್ಲಿ ಕನಸಿನ ಗುಟ್ಟು ದಾನಿಯೇಲನಿಗೆ ವ್ಯಕ್ತವಾಯಿತು. ಕೂಡಲೆ ಆತನು ಪರಲೋಕ ದೇವರನ್ನು ಹೀಗೆಂದು ಸ್ತುತಿಸಿದನು: 20 ಯುಗಯುಗಾಂತರಕ್ಕೂ ದೇವರ ನಾಮಕ್ಕೆ ಸ್ತುತಿಸ್ತೋತ್ರ! ಏಕೆಂದರೆ ಜ್ಞಾನವೂ ಶಕ್ತಿಯೂ ಆತನಿಗೆ ಸ್ವಂತ. 21 ಕಾಲಗಳು ಋತುಗಳು ಆತನ ಕೈಯಲ್ಲಿವೆ ರಾಜರನ್ನು ಕೆಳಕ್ಕಿಳಿಸುವವನು, ಮೇಲೆ ನಿಲ್ಲಿಸುವವನು ಆತನೆ. ಜ್ಞಾನಿಗಳ ಜ್ಞಾನ, ವಿವೇಕಿಗಳ ವಿವೇಕ ಆತನ ಕೊಡುಗೆ. 22 ಅಗಾಧ ವಿಷಯಗಳನ್ನೂ ನಿಗೂಢ ರಹಸ್ಯಗಳನ್ನೂ ತರುವನಾತ ಬಯಲಿಗೆ. ಕಗ್ಗತ್ತಲೆಯಲ್ಲಿ ಅಡಗಿರುವುದೂ ಆತನಿಗೆ ಗೋಚರ ಏಕೆಂದರೆ ಬೆಳಕು ಆತನಲ್ಲೇ ಸುಸ್ಥಿರ. 23 ನನ್ನ ಪಿತೃಗಳ ದೇವಾ, ಮಾಡುವೆ ನಿನ್ನ ಗುಣಗಾನ, ನಿನಗೆ ನನ್ನ ಧನ್ಯವಾದ. ಏಕೆಂದರೆ ನೀನೇ ನನಗೆ ಜ್ಞಾನಶಕ್ತಿಗಳನ್ನು ದಯಪಾಲಿಸಿದಾತ. ನಾವು ಬೇಡಿದ್ದನ್ನು ನನಗೆ ತೋರ್ಪಡಿಸಿದಾತ ನೀನೇ ಹೌದು, ರಾಜ ಬಯಸಿದ ಗುಟ್ಟನ್ನು ನಮಗೆ ವ್ಯಕ್ತಪಡಿಸಿದಾತ ನೀನೇ. ರಾಜಸ್ವಪ್ನದ ವಿವರ ದಾನಿಯೇಲನಿಂದ 24 ತರುವಾಯ ದಾನಿಯೇಲನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲುವುದಕ್ಕೆ ರಾಜನು ನೇಮಿಸಿದ್ದ ಅರ್ಯೋಕನ ಬಳಿಗೆ ಹೋದನು. ಅವನಿಗೆ, “ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಬೇಡ. ನನ್ನನ್ನು ರಾಜನ ಸನ್ನಿಧಿಗೆ ಸೇರಿಸಿಬಿಡು, ನಾನು ಆ ಕನಸಿನ ಉದ್ದೇಶವನ್ನು ರಾಜನಿಗೆ ತಿಳಿಸುವೆನು,” ಎಂದು ಕೇಳಿಕೊಂಡನು. 25 ಕೂಡಲೆ ಅರ್ಯೋಕನು ದಾನಿಯೇಲನನ್ನು ರಾಜನ ಸನ್ನಿಧಿಗೆ ಬೇಗಬೇಗನೆ ಕರೆದುಕೊಂಡು ಬಂದನು. “ರಾಜರೇ, ಆ ಕನಸಿನ ಉದ್ದೇಶವನ್ನು ನಿಮಗೆ ತಿಳಿಸಬಲ್ಲ ಒಬ್ಬನು ನನಗೆ ಸಿಕ್ಕಿದ್ದಾನೆ. ಅವನು ಜುದೇಯದಿಂದ ಸೆರೆಯಾಳಾಗಿ ತಂದವರಲ್ಲಿ ಒಬ್ಬನಾಗಿದ್ದಾನೆ,” ಎಂದು ಅರಿಕೆಮಾಡಿದನು. 26 ರಾಜನು ಬೇಲ್ತೆಶಚ್ಚರನೆಂದು ಹೆಸರು ಪಡೆದಿದ್ದ ದಾನಿಯೇಲನನ್ನು ನೋಡಿ, “ನಾನು ಕಂಡ ಕನಸನ್ನೂ ಅದರ ಅರ್ಥವನ್ನೂ ತಿಳಿಸಬಲ್ಲೆಯಾ?” ಎಂದು ವಿಚಾರಿಸಿದನು. 27 ಅದಕ್ಕೆ ದಾನಿಯೇಲನು ಸನ್ನಿಧಿಯಲ್ಲಿ, “ರಾಜರು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ, ಮಾಟಗಾರರಾಗಲಿ, ಜೋಯಿಸರಾಗಲಿ, ಶಕುನದವರಾಗಲಿ ಯಾರೂ ತಿಳಿಸಲಾರರು. 28 ಆದರೆ ರಹಸ್ಯಗಳನ್ನು ವ್ಯಕ್ತಪಡಿಸಬಲ್ಲವರು ಒಬ್ಬರಿದ್ದಾರೆ. ಅವರೇ ಪರಲೋಕದಲ್ಲಿರುವ ದೇವರು. ಬರಲಿರುವ ಕಾಲದಲ್ಲಿ ನಡೆಯತಕ್ಕದ್ದನ್ನು ರಾಜ ನೆಬೂಕದ್ನೆಚ್ಚರರಾದ ನಿಮಗೆ ಅವರೇ ತಿಳಿಯಪಡಿಸಿದ್ದಾರೆ. ನೀವು ಕಂಡ ಕನಸು, ಹಾಸಿಗೆಯ ಮೇಲೆ ಮಲಗಿದ್ದಾಗ ನಿಮ್ಮ ಮನಸ್ಸಿಗೆ ತೋಚಿದ ಸ್ವಪ್ನಗಳು ಹೀಗಿವೆ: 29 “ರಾಜರೇ, ನೀವು ಹಾಸಿಗೆಯ ಮೇಲೆ ಮಲಗಿರುವಾಗ ಮುಂದೆ ಏನು ಸಂಭವಿಸುವುದೋ ಎಂಬ ಯೋಚನೆ ನಿಮ್ಮಲ್ಲಿ ಹುಟ್ಟಿತ್ತು. ಗುಟ್ಟುಗಳನ್ನು ಬಟ್ಟಬಯಲಾಗಿಸುವಾತ ಮುಂದೆ ಸಂಭವಿಸುವುದನ್ನು ನಿಮಗೆ ಗೋಚರಪಡಿಸಿದ್ದಾರೆ. 30 ಆ ಗುಟ್ಟನ್ನು ನನಗೂ ವ್ಯಕ್ತಪಡಿಸಿದ್ದಾರೆ. ನಾನು ಎಲ್ಲ ಜೀವಂತರಿಗಿಂತ ಹೆಚ್ಚು ಬುದ್ಧಿಯುಳ್ಳವನು ಎಂದೇನೂ ಅಲ್ಲ. ಆ ಕನಸಿನ ಉದ್ದೇಶ ರಾಜರಾದ ತಮಗೆ ಗೋಚರವಾಗಿ ನಿಮ್ಮ ಮನದಾಲೋಚನೆಗಳು ನಿಮಗೆ ಅರ್ಥವಾಗಲಿ ಎಂದು ನನಗೂ ವ್ಯಕ್ತಪಡಿಸಲಾಗಿದೆ. 31 “ರಾಜರೇ ಕೇಳಿ, ತಾವು ಕಂಡದ್ದು ಒಂದು ಅದ್ಭುತ ಪ್ರತಿಮೆ. ಥಳಥಳನೆ ಹೊಳೆಯುವ ಆ ದೊಡ್ಡ ಪ್ರತಿಮೆ ನಿಮ್ಮೆದುರಿಗೆ ನಿಂತಿತ್ತು. ಭಯಂಕರವಾಗಿ ಕಾಣಿಸುತ್ತಿತ್ತು. 32 ಆ ಪ್ರತಿಮೆಯ ತಲೆ ಅಪ್ಪಟ ಬಂಗಾರದ್ದು. ಎದೆ ತೋಳುಗಳು ಬೆಳ್ಳಿಯವು. ಹೊಟ್ಟೆ ಸೊಂಟಗಳು ಕಂಚಿನವು. 33 ಕಾಲುಗಳು ಕಬ್ಬಿಣದವು. ಪಾದಗಳು ಕಬ್ಬಿಣ ಮತ್ತು ಮಣ್ಣಿನಿಂದ ಮಾಡಿದವು. 34 ನೀವು ನೋಡುತ್ತಿದ್ದ ಹಾಗೆ ಬೆಟ್ಟದಿಂದ ಒಂದು ಗುಂಡು ಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಆ ಪ್ರತಿಮೆಯ ಕಬ್ಬಿಣ ಮಣ್ಣಿನಿಂದಾದ ಆ ಪಾದಗಳಿಗೆ ಬಡಿದು ಚೂರುಚೂರು ಮಾಡಿಬಿಟ್ಟಿತು. 35 ಆಗ ಕಬ್ಬಿಣ-ಮಣ್ಣು-ಕಂಚು-ಬೆಳ್ಳಿ-ಬಂಗಾರ ಇವುಗಳೆಲ್ಲವೂ ಪುಡಿಪುಡಿಯಾದವು; ಸುಗ್ಗಿಯ ಕಣಗಳ ಹೊಟ್ಟಿನಂತಾದವು. ಗಾಳಿ ಅವುಗಳನ್ನು ತೂರಿಕೊಂಡುಹೋಯಿತು. ಅವುಗಳಿಗೆ ನೆಲೆಯೇ ಇಲ್ಲವಾಯಿತು. ಪ್ರತಿಮೆಗೆ ಬಡಿದ ಆ ಬಂಡೆ ಮಹಾ ಪರ್ವತವಾಗಿ ಭೂಲೋಕದಲ್ಲೆಲ್ಲಾ ತುಂಬಿಕೊಂಡಿತು. 36 “ಅರಸರೇ, ಇದೇ ನೀವು ಕಂಡ ಕನಸು. ಇದರ ಅರ್ಥವನ್ನೂ ತಮ್ಮ ಸನ್ನಿಧಿಯಲ್ಲಿ ಅರಿಕೆಮಾಡುತ್ತೇವೆ. 37 ನೀವು ರಾಜಾಧಿರಾಜರು, ಪರಲೋಕ ದೇವರು ನಿಮಗೆ ರಾಜ್ಯಬಲ, ಪರಾಕ್ರಮ ಹಾಗು ವೈಭವಗಳನ್ನು ದಯಪಾಲಿಸಿದ್ದಾರೆ. 38 ನರಮಾನವರು ವಾಸಿಸುವ ಸಕಲ ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನಿಮ್ಮ ಕೈಗೆ ಒಪ್ಪಿಸಿದ್ದಾರೆ. 39 ನಿಮ್ಮ ಕಾಲವಾದ ಮೇಲೆ ನಿಮಗಿಂತ ಬೀಳಾದ ಮತ್ತೊಂದು ರಾಜ್ಯ ತಲೆಯೆತ್ತಿಕೊಳ್ಳುವುದು. ಅನಂತರ ಬೇರೊಂದು ರಾಜ್ಯ ಕಂಚಿನದಾಗಿ ಕಾಣಿಸಿಕೊಂಡು ಭೂಮಂಡಲವನ್ನೆಲ್ಲ ಆಳುವುದು. 40 ನಾಲ್ಕನೆಯ ರಾಜ್ಯ ಕಬ್ಬಿಣದಷ್ಟು ಗಟ್ಟಿಗೆ ಕಬ್ಬಿಣ ಎಲ್ಲ ವಸ್ತುಗಳನ್ನು ಚೂರುಚೂರಾಗಿ ಒಡೆದುಹಾಕುತ್ತದೆ. ಅಂತೆಯೇ ಅದು ಎಲ್ಲವನ್ನು ಚೂರುಚೂರಾಗಿಸಿ ಧ್ವಂಸ ಮಾಡುವುದು. 41 ಪಾದಗಳಲ್ಲಿ ಹಾಗು ಪಾದಬೆರಳುಗಳಲ್ಲಿ ಒಂದು ಅಂಶ ಕಬ್ಬಿಣ ಮತ್ತೊಂದು ಅಂಶ ಮಣ್ಣು ಆಗಿದ್ದನ್ನು ನೀವು ನೋಡಿದಿರಿ. ಅಂತೆಯೇ ಆ ರಾಜ್ಯವು ಭಿನ್ನಭಿನ್ನವಾಗಿರುವುದು. ಜೇಡಿಮಣ್ಣಿನೊಂದಿಗೆ ಕಬ್ಬಿಣ ಮಿಶ್ರವಾಗಿದ್ದನ್ನು ನೀವು ನೋಡಿದಂತೆ ಆ ರಾಜ್ಯದಲ್ಲಿ ಕಬ್ಬಿಣದ ಬಲ ಸೇರಿರುವುದು. 42 ಕಾಲ್ಬೆರಳುಗಳ ಒಂದಂಶ ಮಣ್ಣು ಆಗಿದ್ದ ಹಾಗೆ ಆ ರಾಜ್ಯದ ಒಂದಂಶ ಗಟ್ಟಿ ಇನ್ನೊಂದು ಅಂಶ ಬೆಂಡು. 43 ಕಬ್ಬಿಣ ಜೇಡಿಮಣ್ಣಿನೊಂದಿಗೆ ಬೆರೆತಿರುವುದನ್ನು ನೀವು ನೋಡಿದ ಮೇರೆಗೆ ಆ ರಾಜ್ಯಾಂಶಗಳು ಮದುವೆ ಸಂಬಂಧದಿಂದ ಬೆರೆತುಕೊಳ್ಳುವುವು. ಆದರೆ ಕಬ್ಬಿಣ ಮಣ್ಣಿನೊಂದಿಗೆ ಹೇಗೆ ಕಲೆಯುವುದಿಲ್ಲವೋ ಹಾಗೆ ಅವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. 44 ಆ ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ಸಾಮ್ರಾಜ್ಯವನ್ನು ಸ್ಥಾಪಿಸುವರು. ಅದು ಎಂದಿಗೂ ಅಳಿಯದು. ಅದರ ಪ್ರಾಬಲ್ಯವು ಬೇರೆ ರಾಷ್ಟ್ರಕ್ಕೆ ಜಾರಿಹೋಗದು. ರಾಷ್ಟ್ರಗಳನ್ನೆಲ್ಲಾ ಭಂಗಪಡಿಸಿ, ನಿರ್ನಾಮಮಾಡಿ ಆ ಸಾಮ್ರಾಜ್ಯ ಶಾಶ್ವತವಾಗಿ ನಿಲ್ಲುವುದು. 45 ಬೆಟ್ಟದಿಂದ ಒಂದು ಗುಂಡುಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಕಬ್ಬಿಣ-ಕಂಚು-ಮಣ್ಣು-ಬೆಳ್ಳಿ-ಬಂಗಾರ ಇವುಗಳನ್ನು ಚೂರುಚೂರು ಮಾಡಿದ್ದನ್ನು ನೀವು ನೋಡಿದಿರಿ. ಇದರಿಂದ ಪರಲೋಕ ದೇವರು ಮುಂದೆ ನಡೆಯಲಿರುವ ವಿಷಯಗಳನ್ನು ರಾಜರಾದ ತಮಗೆ ತಿಳಿಯಪಡಿಸಿದ್ದಾರೆ. ಆ ಕನಸು ನಿಜವಾದುದು. ಅದರ ಅರ್ಥವೂ ನಂಬತಕ್ಕದ್ದು,” ಎಂದು ವಿವರಿಸಿದನು. ಅರಸನ ವಿಶ್ವಾಸ 46 ಇದನ್ನು ಆಲಿಸಿದ ರಾಜ ನೆಬೂಕದ್ನೆಚ್ಚರನು ಎದ್ದು ಅಡ್ಡಬಿದ್ದನು. ದಾನಿಯೇಲನನ್ನು ಪೂಜಿಸಿ, ಅವನಿಗೆ ನೈವೇದ್ಯಮಾಡಿ, ಧೂಪಾರತಿ ಎತ್ತಬೇಕೆಂದು ಆಜ್ಞಾಪಿಸಿದನು. 47 ದಾನಿಯೇಲನ ವಿವರಕ್ಕೆ ಉತ್ತರವಾಗಿ, “ನೀನು ಈ ಗುಟ್ಟನ್ನು ಬಯಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿದೇವರು, ರಾಜಾಧಿರಾಜರು, ಗುಟ್ಟನ್ನು ಬಟ್ಟಬಯಲಾಗಿಸುವವರು! ಇದು ಸತ್ಯ,” ಎಂದು ಹೇಳಿದನು. 48 ಬಳಿಕ ರಾಜನು ದಾನಿಯೇಲನನ್ನು ದೊಡ್ಡ ಪದವಿಗೆ ಏರಿಸಿದನು. ಅಮೂಲ್ಯವಾದ ಬಹುಮಾನಗಳನ್ನು ಕೊಟ್ಟನು. ಬಾಬಿಲೋನಿನ ಸಂಸ್ಥಾನವನ್ನೆಲ್ಲ ಅವನಿಗೆ ಅಧೀನಪಡಿಸಿ ಬಾಬಿಲೋನಿನ ಎಲ್ಲಾ ವಿದ್ವಾಂಸರಿಗೂ ಅವನನ್ನು ಅಧ್ಯಕ್ಷನನ್ನಾಗಿ ನೇಮಿಸಿದನು. 49 ದಾನಿಯೇಲನ ಕೋರಿಕೆಯ ಪ್ರಕಾರ ರಾಜನು ಶದ್ರಕ್, ಮೇಶಕ್ ಮತ್ತು ಅಬೇದ್‍ನೆಗೋ ಎಂಬುವರನ್ನು ಬಾಬಿಲೋನಿನ ಪ್ರಾಂತ್ಯಾಧಿಪತಿಗಳನ್ನಾಗಿ ನೇಮಿಸಿದನು. ದಾನಿಯೇಲನು ಮಾತ್ರ ಅರಮನೆಯಲ್ಲೇ ಕಾರ್ಯನಿರತನಾದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India