ದಾನಿಯೇಲ 12 - ಕನ್ನಡ ಸತ್ಯವೇದವು C.L. Bible (BSI)1 “ಆ ಕಾಲದಲ್ಲಿ ನಿನ್ನ ಜನರ ಪಕ್ಷ ವಹಿಸುವ ಮಹಾದೂತನಾದ ಮಿಕಾಯೇಲನು ಕಾಣಿಸಿಕೊಳ್ಳುವನು. ಮೊತ್ತಮೊದಲು, ಮಾನವ ಜನಾಂಗ ಉಂಟಾದಂದಿನಿಂದ ಅಂದಿನವರೆಗೆ ಸಂಭವಿಸದ ಘೋರ ಸಂಕಟ ಉಂಟಾಗುವುದು. ಆಗ ನಿನ್ನ ಜನರಲ್ಲಿ ಯಾರ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಇರುವುದೋ ಅವರೆಲ್ಲರು ಜೀವೋದ್ಧಾರವನ್ನು ಪಡೆಯುವರು. 2 ಸತ್ತು ಧೂಳಿ ಮಣ್ಣಿನಲ್ಲಿ ‘ದೀರ್ಘನಿದ್ರೆ’ಮಾಡುತ್ತಿರುವ ಅನೇಕರು ಏಳುವರು. ಎಚ್ಚೆತ್ತವರಲ್ಲಿ ಕೆಲವರು ನಿತ್ಯಜೀವವನ್ನು ಅನುಭವಿಸುವರು; ಕೆಲವರು ತಿರಸ್ಕೃತರಾಗಿ ನಿತ್ಯ ನಿಂದನೆಗೆ ಗುರಿಯಾಗುವರು. 3 ಬುದ್ಧಿವಂತರು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಕ್ಕೂ ನಕ್ಷತ್ರಗಳಂತೆ ಹೊಳೆಯುವರು. 4 “ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು; ಇವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆಹಾಕು; ಅಂತ್ಯಕಾಲದವರೆಗೆ ಮರೆಯಾಗಿರಲಿ. ಬಹುಜನರು ಅತ್ತಿತ್ತ ಅಲೆದಾಡುವರು (ಸತ್ಯಕ್ಕಾಗಿ). ಅಧರ್ಮ ಹೆಚ್ಚುತ್ತಿರುವುದು.” 5 ಕೂಡಲೆ ದಾನಿಯೇಲನಾದ ನಾನು ಮತ್ತೆ ಇಬ್ಬರು ವ್ಯಕ್ತಿಗಳನ್ನು ಕಂಡೆ. ಅವರಲ್ಲಿ ಒಬ್ಬನು ನದಿಯ ಈ ದಡದಲ್ಲಿ, ಇನ್ನೊಬ್ಬನು ಆ ದಡದಲ್ಲಿ ನಿಂತಿದ್ದರು. 6 ಇವರಲ್ಲಿ ಒಬ್ಬನು, ನದಿಯ ನೀರಿನ ಮೇಲ್ಗಡೆ ನಾರಿನ ಹೊದಿಕೆಯನ್ನು ಹೊದ್ದು ನಿಂತಿದ್ದ ದೂತನನ್ನು ನೋಡಿ, “ಈ ಆಶ್ಚರ್ಯಕಾರ್ಯಗಳು ನೆರವೇರಲು ಎಷ್ಟುಕಾಲ ಹಿಡಿಯುವುದು?” ಎಂದು ಕೇಳಿದನು. 7 ಆ ದೂತ ಎಡಬಲಗೈಗಳನ್ನು ಆಕಾಶದ ಕಡೆಗೆ ಎತ್ತಿಕೊಂಡು, “ಶಾಶ್ವತ ಜೀವಸ್ವರೂಪನಾಣೆ, ಒಂದು ಯುಗ, ಎರಡು ಯುಗ, ಮತ್ತು ಅರ್ಧ ಯುಗ ಕಳೆಯಬೇಕು. ದೇವಜನರಿಗಾಗುವ ಹಿಂಸೆಬಾಧೆಗಳು ಸಂಪೂರ್ಣವಾಗಿ ನಿಂತಮೇಲೆ ಈ ಕಾರ್ಯಗಳೆಲ್ಲ ಮುಕ್ತಾಯವಾಗುವುವು,” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು. 8 ನನಗೆ ಅದು ಕೇಳಿಸಿತ್ತಾದರೂ ಅರ್ಥವಾಗಲಿಲ್ಲ. ಆಗ ನಾನು, “ಎನ್ನೊಡೆಯಾ, ಈ ಕಾರ್ಯಗಳ ಪರಿಣಾಮವೇನು?” ಎಂದು ಪ್ರಶ್ನೆಮಾಡಿದೆ. 9 ಅವನು, “ದಾನಿಯೇಲನೇ ಹೋಗು; ಈ ಮಾತುಗಳು ಅಂತ್ಯಕಾಲದವರೆಗೂ ಮುಚ್ಚಲ್ಪಟ್ಟು ಮುದ್ರಿತವಾಗಿವೆ. 10 ಅನೇಕರು ತಮ್ಮನ್ನು ಶುದ್ಧೀಕರಿಸಿ, ಶುಭ್ರಮಾಡಿಕೊಂಡು ಶೋಧಿತರಾಗುವರು. ದುಷ್ಟರು ದುಷ್ಟರಾಗಿಯೇ ನಡೆಯುವರು. ಅವರಲ್ಲಿ ಯಾರಿಗೂ ವಿವೇಕವಿರದು. ಬುದ್ಧಿವಂತರಿಗೆ ವಿವೇಕವಿರುವುದು. 11 ಅನುದಿನದ ಬಲಿ ನಿಂತುಹೋಗುವುದು. ‘ವಿನಾಶಕರ ವಿಕಟ ಮೂರ್ತಿ’ ಪ್ರತಿಷ್ಠಿತವಾದ ಮೇಲೆ 1290 ದಿನಗಳು ಕಳೆಯಬೇಕು. 12 1335 ದಿನಗಳ ಮಟ್ಟಿಗೆ ವಿಶ್ವಾಸದಿಂದ ಕಾದಿರುವವರು ಧನ್ಯರು! 13 ನೀನು ಹೋಗಿ ಅಂತ್ಯದವರೆಗೆ ವಿಶ್ವಾಸದಿಂದಿರು. ನೀನು ‘ದೀರ್ಘನಿದ್ರೆ’ಯನ್ನು ಹೊಂದಿ, ನಿನಗೆ ನಿರ್ಧರಿಸಲಾದ ಸ್ಥಾನವನ್ನು ಪಡೆಯಲು ಯುಗಸಮಾಪ್ತಿಯಲ್ಲಿ ಎದ್ದುಬರುವೆ,” ಎಂದು ಹೇಳಿದನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India