ತೀತನಿಗೆ 3 - ಕನ್ನಡ ಸತ್ಯವೇದವು C.L. Bible (BSI)ಕ್ರೈಸ್ತವಿಶ್ವಾಸಿಗಳ ನಡತೆ 1 ಆಳುವವರಿಗೂ ಅಧಿಕಾರಿಗಳಿಗೂ ಕ್ರೈಸ್ತವಿಶ್ವಾಸಿಗಳು ವಿಧೇಯರಾಗಿ ನಡೆದುಕೊಳ್ಳಬೇಕೆಂದು ಜ್ಞಾಪಕಪಡಿಸು. ಎಲ್ಲಾ ಸತ್ಕಾರ್ಯಗಳನ್ನು ಕೈಗೊಳ್ಳಲು ಅವರು ಸಿದ್ಧರಿರಬೇಕು. 2 ಅವರು ಯಾರನ್ನೂ ದೂಷಿಸದೆ, ಯಾರೊಡನೆಯೂ ಜಗಳವಾಡದೆ, ಸಾಧುಗುಣದಿಂದ ಎಲ್ಲರೊಡನೆ ಸೌಜನ್ಯದಿಂದ ನಡೆದುಕೊಳ್ಳಲಿ. 3 ಹಿಂದೆ ನಾವು ಅವಿವೇಕಿಗಳೂ ಅವಿಧೇಯರೂ ಆಗಿ ದಾರಿ ತಪ್ಪಿಹೋಗಿದ್ದೆವು. ಅನೇಕ ಪ್ರಲೋಭನೆಗಳಿಗೂ ದುರಿಚ್ಛೆಗಳಿಗೂ ಗುಲಾಮರಾಗಿದ್ದೆವು. ದುಷ್ಟತನ ಹಾಗೂ ಮತ್ಸರಗಳಲ್ಲಿ ಕಾಲ ಕಳೆಯುತ್ತಾ ಅಸಹ್ಯರೂ ಪರಸ್ಪರ ದ್ವೇಷಿಗಳೂ ಆಗಿದ್ದೆವು. 4 ಹೀಗಿರುವಾಗ, ಜಗದ್ರಕ್ಷಕರಾದ ದೇವರ ದಯೆಯೂ ಅವರ ಜನಪ್ರೇಮವೂ ಪ್ರಕಟವಾದವು. 5 ಆಗ ಅವರೇ ನಮ್ಮನ್ನು ಉದ್ಧರಿಸಿದರು. ನಮ್ಮ ಸ್ವಂತ ಪುಣ್ಯಕಾರ್ಯಗಳು ನಮಗೆ ಈ ಉದ್ಧಾರವನ್ನು ತರಲಿಲ್ಲ. ಪುನರ್ಜನ್ಮವನ್ನು ಸೂಚಿಸುವ ಸ್ನಾನ ಹಾಗೂ ನೂತನ ಜೀವವನ್ನೀಯುವ ಪವಿತ್ರಾತ್ಮ ಈ ಮೂಲಕ ಅವರೇ ನಮ್ಮನ್ನು ಕರುಣೆಯಿಂದ ಉದ್ಧಾರಮಾಡಿದರು. 6 ಪವಿತ್ರಾತ್ಮರನ್ನು ನಮ್ಮ ಉದ್ಧಾರಕ ಯೇಸುಕ್ರಿಸ್ತರ ಮುಖಾಂತರ ದೇವರು ನಮಗೆ ಧಾರಾಳವಾಗಿ ಅನುಗ್ರಹಿಸಿದ್ದಾರೆ. 7 ಹೀಗೆ ದೈವಾನುಗ್ರಹದಿಂದ ನಾವು ದೇವರೊಡನೆ ಸತ್ಸಂಬಂಧವನ್ನು ಹೊಂದಿದೆವು. ನಿತ್ಯಜೀವದ ಭರವಸೆಯನ್ನು ಪಡೆದು ಆ ಜೀವಕ್ಕೆ ಬಾಧ್ಯಸ್ಥರಾದೆವು. ಇದು ಸತ್ಯವಾದ ಮಾತು. 8 ದೇವರಲ್ಲಿ ವಿಶ್ವಾಸವಿಟ್ಟವರು ಸತ್ಕಾರ್ಯಗಳಲ್ಲಿ ನಿರತರಾಗುವಂತೆ ನೀನು ಇವೆಲ್ಲವನ್ನೂ ದೃಢವಾಗಿ ಬೋಧಿಸಬೇಕೆಂಬುದೇ ನನ್ನ ಅಪೇಕ್ಷೆ. ಇವು ಎಲ್ಲರಿಗೂ ಹಿತಕರವಾಗಿವೆ ಹಾಗೂ ಪ್ರಯೋಜನಕರವಾಗಿವೆ. 9 ಹುರುಳಿಲ್ಲದ ತರ್ಕಗಳಿಂದಲೂ ಉದ್ದುದ್ದ ವಂಶಾವಳಿಗಳಿಂದಲೂ ಕಲಹ ಕಚ್ಚಾಟಗಳಿಂದಲೂ ಧರ್ಮಶಾಸ್ತ್ರವನ್ನು ಕುರಿತಾದ ವಾಗ್ವಾದಗಳಿಂದಲೂ ನೀನು ದೂರವಿರು. ಅವು ನಿಷ್ಪ್ರಯೋಜಕ ಹಾಗೂ ವ್ಯರ್ಥವಾದುವು. 10 ಕ್ರೈಸ್ತಸಭೆಯಲ್ಲಿ ಭೇದಭಾವ ಹುಟ್ಟಿಸುವವನಿಗೆ ಒಂದೆರಡು ಸಾರಿ ಬುದ್ಧಿಹೇಳು. ಅನಂತರ ಅವನಷ್ಟಕ್ಕೇ ಬಿಟ್ಟುಬಿಡು. 11 ಅಂಥವನು ಪತಿತ ಹಾಗೂ ಪಾಪಿಯೆಂದು ತಿಳಿ. ಅವನ ದುಷ್ಕೃತ್ಯಗಳೇ ಅವನ ಮೇಲೆ ತೀರ್ಪಿಡುತ್ತವೆ. ಅಂತಿಮ ಸಲಹೆಗಳು 12 ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದಿರುವುದರಿಂದ ಅರ್ತೆಮನನ್ನಾಗಲೀ ತುಖಿಕನನ್ನಾಗಲೀ ನಿನ್ನ ಬಳಿಗೆ ಕಳಿಸುತ್ತೇನೆ. ಅವರಲ್ಲೊಬ್ಬನು ನಿನ್ನ ಬಳಿಗೆ ಬಂದಾಗ ನೀನು ಕೂಡಲೇ ನಿಕೊಪೊಲಿಗೆ ಬಂದುಬಿಡು. 13 ಧರ್ಮಶಾಸ್ತ್ರಜ್ಞನಾದ ಜೇನನಿಗೂ ಅಪೊಲೋಸನಿಗೂ ಅವರ ಪ್ರಯಾಣಕ್ಕೆ ಬೇಕಾದ ಸಹಾಯಮಾಡು. ಅವರಿಗೆ ಏನು ಕೊರತೆಯಾಗದಂತೆ ನೋಡಿಕೋ. 14 ನಮ್ಮ ಜನರು ಸತ್ಕ್ರಿಯೆಗಳಲ್ಲಿ ನಿರತರಾಗಿರಲಿ. ಕುಂದುಕೊರತೆಯಲ್ಲಿರುವವರಿಗೆ ನೆರವಾಗಲಿ. ಪರೋಪಕಾರವನ್ನು ಕಲಿತುಕೊಳ್ಳಲಿ. ವ್ಯರ್ಥಜೀವನವನ್ನು ನಡೆಸದಿರಲಿ. 15 ನನ್ನ ಜೊತೆ ಇರುವವರೆಲ್ಲ ನಿನಗೆ ಶುಭಾಶಯಗಳನ್ನು ಕಳಿಸಿದ್ದಾರೆ. ಅಲ್ಲಿ ನಿನ್ನೊಂದಿಗಿರುವ ಕ್ರೈಸ್ತಬಾಂಧವರಿಗೂ ನನ್ನ ವಂದನೆಗಳನ್ನು ಸಲ್ಲಿಸು. ದೇವರ ಅನುಗ್ರಹ ನಿಮ್ಮೆಲ್ಲರಲ್ಲಿ ಇರಲಿ! |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India