ತೀತನಿಗೆ 2 - ಕನ್ನಡ ಸತ್ಯವೇದವು C.L. Bible (BSI)ಯಥಾರ್ಥ ಬೋಧನೆ 1 ನೀನಾದರೋ ಸದ್ಬೋಧನೆಗೆ ತಕ್ಕಂತೆ ಉಪದೇಶಮಾಡು. 2 ಮದ್ಯಾಸಕ್ತಿ ಇಲ್ಲದೆಯೂ ಗೌರವಾಸಕ್ತರಾಗಿಯೂ ಆತ್ಮಸಂಯಮಿಗಳಾಗಿಯೂ ಇರಬೇಕೆಂದು ವೃದ್ಧರಿಗೆ ಬೋಧಿಸು. ವಿಶ್ವಾಸ, ಪ್ರೀತಿ ಮತ್ತು ತಾಳ್ಮೆ ಅವರ ಮುಖ್ಯ ಗುಣಗಳಾಗಿರಬೇಕು. 3 ಅಂತೆಯೇ, ವೃದ್ಧ ಸ್ತ್ರೀಯರು ಸಭ್ಯರಾಗಿ ವರ್ತಿಸಬೇಕು, ಅವರು ಚಾಡಿಹೇಳಬಾರದು; ಮದ್ಯಾಸಕ್ತರಾಗಿರಬಾರದು;ಸದ್ಬೋಧಕಿಯರಾಗಿರಬೇಕೆಂದು ವಿಧಿಸು. 4 ಅವರು ನವಗೃಹಿಣಿಯರಿಗೆ, ತಮ್ಮ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸುವಂತೆ ಬುದ್ಧಿ ಹೇಳಬೇಕು. 5 ಗೃಹಿಣಿಯರು, ವಿವೇಕ ಬುದ್ಧಿಯುಳ್ಳವರು, ಪತಿವ್ರತೆಯರು, ಗೃಹಕೃತ್ಯಗಳನ್ನು ಗಮನಿಸುವವರು, ಸುಶೀಲೆಯರು, ಗಂಡಂದಿರಿಗೆ ವಿಧೇಯರು ಆಗಿ ಬಾಳುವುದನ್ನು ವೃದ್ಧಸ್ತ್ರೀಯರಿಂದ ಕಲಿತುಕೊಳ್ಳಲಿ. ಹೀಗೆ, ದೇವರ ವಾಕ್ಯಕ್ಕೆ ಯಾವ ಅಪವಾದವೂ ಬಾರದಂತೆ ಅವರು ನಡೆದುಕೊಳ್ಳಲಿ. 6 ಹಾಗೆಯೇ, ಯುವಕರು ಎಲ್ಲ ವಿಷಯಗಳಲ್ಲೂ ಜಿತೇಂದ್ರಿಯರಾಗಿರಬೇಕೆಂದು ನೀನು ಎಚ್ಚರಿಸು. 7-8 ಸತ್ಕಾರ್ಯಗಳನ್ನು ಮಾಡುವುದರಲ್ಲಿ ನೀನೇ ಮಾದರಿಯಾಗಿರಬೇಕು ಎಂಬುದನ್ನು ಮರೆಯಬೇಡ. ನಿನ್ನ ಬೋಧನೆ ಯಥಾರ್ಥವೂ ಗಂಭೀರವೂ ಕಳಂಕರಹಿತವೂ ಆಗಿರಲಿ. ಆಗ ನಮ್ಮ ವಿರೋಧಿಗಳು ನಮ್ಮಲ್ಲಿ ತಪ್ಪು ಕಂಡುಹಿಡಿಯಲಾಗದೆ ತಾವೇ ಅಪಮಾನಿತರಾಗುತ್ತಾರೆ. 9 ಮನೆಯಾಳುಗಳು ತಮ್ಮ ಯಜಮಾನರಿಗೆ ವಿಧೇಯರಾಗಿರಲಿ. ಎಲ್ಲಾ ವಿಷಯಗಳಲ್ಲೂ ಅವರನ್ನು ಮೆಚ್ಚಿಸಲು ಪ್ರಯತ್ನಿಸಲಿ. ಯಜಮಾನರಿಗೆ ಎದುರಾಡುವುದು, ಅವರ ವಸ್ತುಗಳನ್ನು ಕದಿಯುವುದು ಸರಿಯಲ್ಲ. 10 ಬದಲಿಗೆ, ತಾವು ಒಳ್ಳೆಯವರು ಮತ್ತು ಸ್ವಾಮಿನಿಷ್ಠೆಯುಳ್ಳವರು ಎಂದು ಹೆಸರು ಪಡೆಯಲಿ. ಜಗದ್ರಕ್ಷಕರಾದ ದೇವರ ಉಪದೇಶಕ್ಕೆ ಎಲ್ಲಾ ವಿಧದಲ್ಲೂ ಗೌರವ ತರುವಂತೆ ವರ್ತಿಸಬೇಕೆಂದು ಅವರಿಗೆ ಬೋಧಿಸು. 11 ಎಲ್ಲಾ ಮಾನವರ ಜೀವೋದ್ಧಾರಕ್ಕಾಗಿಯೇ ದೇವರ ಅನುಗ್ರಹವು ಪ್ರಕಟವಾಗಿದೆ. 12-13 ನಾವು ಭಕ್ತಿಹೀನ ನಡತೆಯನ್ನೂ ಪ್ರಾಪಂಚಿಕ ವ್ಯಾಮೋಹಗಳನ್ನೂ ವಿಸರ್ಜಿಸಿ, ಈ ಲೋಕದಲ್ಲಿ ವಿವೇಕಿಗಳಾಗಿಯೂ ಪ್ರಾಮಾಣಿಕರಾಗಿಯೂ ಭಕ್ತರಾಗಿಯೂ ಜೀವಿಸಬೇಕೆಂದು ಅದು ನಮಗೆ ಬೋಧಿಸುತ್ತದೆ. ಅಲ್ಲದೆ, ಮಹೋನ್ನತ ದೇವರು ಮತ್ತು ನಮ್ಮ ಉದ್ಧಾರಕ ಯೇಸುಕ್ರಿಸ್ತರು ಮಹಿಮಾರೂಪದಲ್ಲಿ ನಮಗೆ ಪ್ರತ್ಯಕ್ಷವಾಗುವ ಸೌಭಾಗ್ಯವನ್ನು ನಾವು ಎದುರುನೋಡಬೇಕೆಂದು ಅದು ಕಲಿಸುತ್ತದೆ. 14 ಯೇಸುಕ್ರಿಸ್ತರು ನಮ್ಮನ್ನು ಸಕಲ ಅಪರಾಧಗಳಿಂದ ವಿಮೋಚಿಸಿ, ಪರಿಶುದ್ಧರನ್ನಾಗಿಸಿ, ಸತ್ಕಾರ್ಯಗಳಲ್ಲಿ ಆಸಕ್ತರಾದ ಒಂದು ಜನಾಂಗವನ್ನಾಗಿ ಮಾಡಿದರು. ನಮ್ಮನ್ನು ತಮ್ಮ ಸ್ವಂತದವರನ್ನಾಗಿಸಿಕೊಳ್ಳಲೆಂದು ತಮ್ಮನ್ನೇ ನಮಗಾಗಿ ಸಮರ್ಪಿಸಿಕೊಟ್ಟನು. 15 ಈ ವಿಷಯಗಳನ್ನು ಅಧಿಕಾರವಾಣಿಯಿಂದ ಬೋಧಿಸು; ಎಚ್ಚರಿಸು. ಅವುಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸು; ಯಾರೂ ನಿನ್ನನ್ನು ತಿರಸ್ಕರಿಸದಂತೆ ಎಚ್ಚರವಹಿಸು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India