Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ತೀತನಿಗೆ 1 - ಕನ್ನಡ ಸತ್ಯವೇದವು C.L. Bible (BSI)


ಪೀಠಿಕೆ

1-4 ಕ್ರಿಸ್ತವಿಶ್ವಾಸದಲ್ಲಿ ಪುತ್ರನಾಗಿರುವ ತೀತನಿಗೆ - ದೇವರ ದಾಸನೂ ಯೇಸುಕ್ರಿಸ್ತರ ಪ್ರೇಷಿತನೂ ಆದ ಪೌಲನು ಬರೆಯುವ ಪತ್ರ.ತಂದೆಯಾದ ದೇವರೂ ನಮ್ಮ ಉದ್ಧಾರಕರಾದ ಯೇಸುಕ್ರಿಸ್ತರೂ ನಿನಗೆ ಕೃಪಾಶೀರ್ವಾದವನ್ನೂ‍ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ! ದೇವರು, ತಾವು ಆರಿಸಿಕೊಂಡಿರುವ ಜನರ ವಿಶ್ವಾಸವನ್ನು ದೃಢಪಡಿಸಲು ಮತ್ತು ಭಕ್ತಿಯನ್ನು ವೃದ್ಧಿಗೊಳಿಸಿ ಅಮರಜೀವದತ್ತ ಕರೆದೊಯ್ಯುವ ಸತ್ಯಗಳನ್ನು ಅವರಿಗೆ ಬೋಧಿಸಲು ನನ್ನನ್ನು ನೇಮಿಸಿದ್ದಾರೆ. ಈ ಅಮರ ಜೀವವನ್ನು ಕೊಡುವುದಾಗಿ ಸತ್ಯಪರರಾದ ದೇವರು ಆದಿಯಿಂದಲೂ ನಮಗೆ ವಾಗ್ದಾನಮಾಡಿದ್ದರು. ಸೂಕ್ತಕಾಲವು ಬಂದಾಗ ಈ ವಾಗ್ದಾನವನ್ನು ಈಡೇರಿಸಿ ತಮ್ಮ ಸಂದೇಶವನ್ನು ಪ್ರಕಟಿಸಿದರು. ನನಗೊಪ್ಪಿಸಿರುವ ಈ ಸಂದೇಶವನ್ನು ಜಗದ್ರಕ್ಷಕರಾದ ದೇವರ ಆಜ್ಞಾನುಸಾರ ನಾನು ಸಾರುತ್ತಿದ್ದೇನೆ.


ಕ್ರೇಟ್ ದ್ವೀಪದಲ್ಲಿ ತೀತನ ಸೇವೆ

5 ನೀನು ಕ್ರೇಟ್ ದ್ವೀಪದಲ್ಲಿ ಇನ್ನೂ ಸರಿಪಡಿಸಬೇಕಾದ ಕೆಲಸಗಳನ್ನು ಕ್ರಮಪಡಿಸಿ, ಅಲ್ಲಿಯ ಪ್ರತಿಯೊಂದು ಪಟ್ಟಣಕ್ಕೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆ.

6 ನಾನು ಕೊಟ್ಟ ಸಲಹೆಗಳನ್ನು ಜ್ಞಾಪಿಸಿಕೋ; ಸಭಾಹಿರಿಯನು ನಿಂದಾರಹಿತನೂ ಏಕಪತ್ನಿ ವ್ರತಸ್ಥನೂ ಆಗಿರಬೇಕು. ಆತನ ಮಕ್ಕಳು ವಿಶ್ವಾಸಿಗಳಾಗಿರಬೇಕು. ಅವರು ಸ್ವೇಚ್ಛಾಚಾರಿಗಳಾಗಿರಬಾರದು, ಅವಿಧೇಯರಾಗಿರಬಾರದು.

7 ಏಕೆಂದರೆ, ಸಭಾಧ್ಯಕ್ಷನು ದೇವರ ಸೇವೆಯಲ್ಲಿ ಮೇಲ್ವಿಚಾರಕನಾಗಿರುವುದರಿಂದ ನಿಂದಾರಹಿತನಾಗಿರಬೇಕು. ಆತನು ಗರ್ವಿ ಅಥವಾ ಮುಂಗೋಪಿಯಾಗಿರಬಾರದು. ಕುಡಿತವಾಗಲಿ, ಹಿಂಸಾಚಾರವಾಗಲಿ, ಹಿಂಸಾಪ್ರವೃತ್ತಿಯಾಗಲಿ ಅವನಲ್ಲಿರಬಾರದು. ಅವನು ಲಾಭಕೋರನಾಗಿರಬಾರದು.

8 ಅತಿಥಿ ಸತ್ಕಾರ ಮಾಡುವವನೂ ಒಳ್ಳೆಯದನ್ನು ಪ್ರೀತಿಸುವವನೂ ಆಗಿರಬೇಕು. ಇಂಥವನು ಸ್ವಸ್ಥಚಿತ್ತನೂ ನೀತಿವಂತನೂ ಸದ್ಭಕ್ತನೂ ಆತ್ಮಸಂಯಮವುಳ್ಳವನೂ ಆಗಿರಬೇಕು.

9 ವಿಶ್ವಾಸಿಸಲು ಯೋಗ್ಯವಾದ ಹಾಗೂ ಕ್ರೈಸ್ತತತ್ವಗಳಿಗೆ ಅನುಗುಣವಾದ ಸಿದ್ಧಾಂತಗಳನ್ನು ಅವನು ಭದ್ರವಾಗಿ ಹಿಡಿದವನಾಗಿರಬೇಕು. ಆಗ ಸದ್ಬೋಧನೆಯಿಂದ ಇತರರನ್ನು ಪ್ರೋತ್ಸಾಹಿಸುವುದಕ್ಕೂ ಅದಕ್ಕೆ ವ್ಯತಿರಿಕ್ತವಾಗಿ ನಡೆಯುವವರ ತಪ್ಪುಗಳನ್ನು ಎತ್ತಿತೋರಿಸುವುದಕ್ಕೂ ಆತನು ಸಮರ್ಥನಾಗುತ್ತಾನೆ.

10 ಇತ್ತೀಚೆಗೆ ಅವಿಧೇಯರು, ಜೊಳ್ಳು ಮಾತಿನವರು ಹಾಗೂ ವಂಚಕಬೋಧಕರು ತಲೆ ಎತ್ತಿದ್ದಾರೆ. ಅವರಲ್ಲಿ ಕ್ರೈಸ್ತರಾಗಿರುವ ಯೆಹೂದ್ಯರು ಸಾಕಷ್ಟು ಮಂದಿ ಇದ್ದಾರೆ.

11 ಇವರ ಬಾಯಿ ಮುಚ್ಚಿಸಬೇಕಾಗಿದೆ. ಏಕೆಂದರೆ, ಇವರು ಹಣಸಂಪಾದನೆಯ ದುರುದ್ದೇಶದಿಂದ ಮಾಡಬಾರದ ಬೋಧನೆಯನ್ನು ಮಾಡಿ ಅನೇಕ ಕುಟುಂಬಗಳನ್ನು ಹಾಳುಮಾಡುತ್ತಿದ್ದಾರೆ.

12-13 ಕ್ರೇಟ್‍ನವನೇ ಆದ ಅವರ ಪ್ರವಾದಿಯೊಬ್ಬನು ಸ್ವಜನರ ವಿಷಯವಾಗಿ ಹೀಗೆಂದಿದ್ದಾನೆ: ‘ಕ್ರೇಟ್ ನಿವಾಸಿಗಳು ಸದಾ ಸುಳ್ಳುಗಾರರು, ದುಷ್ಟಮೃಗಗಳು, ಸೋಮಾರಿಗಳು ಮತ್ತು ಹೊಟ್ಟೆಬಾಕರು’ - ಈ ಮಾತು ನಿಜವಾದುದು.

14 ಆದ್ದರಿಂದ ಯೆಹೂದ್ಯರ ಕಟ್ಟುಕತೆಗಳಿಗೂ ಸತ್ಯಭ್ರಷ್ಟರಾದವರ ವಿಧಿಗಳಿಗೂ ಕಿವಿಗೊಡದಂತೆ ತೀವ್ರವಾಗಿ ಖಂಡಿಸಿ, ವಿಶ್ವಾಸದಲ್ಲಿ ದೃಢವಾಗಿರುವಂತೆ ಭಕ್ತಾದಿಗಳಿಗೆ ಬೋಧಿಸು.

15 ಮನಃಶುದ್ಧಿಯುಳ್ಳವರಿಗೆ ಎಲ್ಲವೂ ಶುದ್ಧವಾಗಿಯೇ ಇದೆ. ಭ್ರಷ್ಟರಿಗೆ ಮತ್ತು ಅವಿಶ್ವಾಸಿಗಳಿಗೆ ಯಾವುದೂ ಶುದ್ಧವಲ್ಲ. ಏಕೆಂದರೆ, ಅವರ ಮನಸ್ಸೂ ಮನಸ್ಸಾಕ್ಷಿಯೂ ಮಲಿನವಾಗಿದೆ.

16 ತಾವು ದೇವರನ್ನು ಬಲ್ಲವರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಇಂಥವರು ಅವಿಧೇಯರೂ ಅಸಹ್ಯರೂ ಆಗಿರುವುದರಿಂದ ಯಾವುದೇ ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು