Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 9 - ಕನ್ನಡ ಸತ್ಯವೇದವು C.L. Bible (BSI)


ಜ್ಞಾನ ಅಜ್ಞಾನಗಳ ತಾರತಮ್ಯ

1 ಜ್ಞಾನವೆಂಬಾಕೆ ಮನೆಯನ್ನು ಕಟ್ಟಿಕೊಂಡಿದ್ದಾಳೆ; ಅದಕ್ಕೆ ಏಳು ಸ್ತಂಭಗಳನ್ನು ಕೆತ್ತಿಸಿದ್ದಾಳೆ.

2 ಪಶುಗಳನ್ನು ಕೊಯ್ಯಿಸಿ ದ್ರಾಕ್ಷಾರಸವನ್ನು ಬೆರೆಸಿ ಔತಣವನ್ನು ಆಕೆ ಸಿದ್ಧಪಡಿಸುತ್ತಿದ್ದಾಳೆ.

3 ನಗರದ ರಾಜಬೀದಿಗಳಿಗೆ ತನ್ನ ದಾಸಿಯರನ್ನು ಕಳುಹಿಸುತ್ತಾಳೆ.

4 “ಮುಗ್ಧಮನಸ್ಕರು ಯಾರಾದರೂ ಇದ್ದರೆ ಇತ್ತ ಬರಲಿ” ಎಂದು ಪ್ರಕಟಿಸುತ್ತಾಳೆ.

5 “ಬನ್ನಿ, ನಾ ಬಡಿಸುವ ಆಹಾರವನ್ನು ಉಣಬನ್ನಿ; ನಾ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯಬನ್ನಿ.

6 ಮೂಢರೇ, ನಿಮ್ಮ ಮೂಢತ್ವವನ್ನು ಬಿಟ್ಟುಬಾಳಿರಿ, ವಿವೇಕ ಮಾರ್ಗದಲ್ಲಿ ನೆಟ್ಟಗೆ ನಡೆಯಿರಿ,” ಎಂದು ಪ್ರಬೋಧಿಸುತ್ತಾಳೆ.

7 ಕುಚೋದ್ಯಗಾರರನ್ನು ಶಿಕ್ಷಿಸುವವನು ತನ್ನನ್ನೆ ಅಪಮಾನಕ್ಕೆ ಗುರಿಮಾಡಿಕೊಳ್ಳುತ್ತಾನೆ. ದುಷ್ಟನನ್ನು ಗದರಿಸುವವನು ತನಗೇ ಕಳಂಕ ತಂದುಕೊಳ್ಳುತ್ತಾನೆ.

8 ಕುಚೋದ್ಯಗಾರನನ್ನು ಗದರಿಸಬೇಡ, ಅವನು ನಿನ್ನನ್ನು ದ್ವೇಷಿಸುವನು. ಜ್ಞಾನವಂತನನ್ನು ಗದರಿಸು, ಅವನು ನಿನ್ನನ್ನು ಪ್ರೀತಿಸುವನು.

9 ಜ್ಞಾನಿಗೆ ಉಪದೇಶಿಸಿದರೆ ಅವನು ಹೆಚ್ಚು ಜ್ಞಾನಿಯಾಗುತ್ತಾನೆ; ಸತ್ಪುರುಷನಿಗೆ ಬೋಧಿಸಿದರೆ ಅವನು ಹೆಚ್ಚು ತಿಳುವಳಿಕೆ ಪಡೆಯುತ್ತಾನೆ.

10 ಸರ್ವೇಶ್ವರನಲ್ಲಿನ ಭಯಭಕ್ತಿ ಜ್ಞಾನಕ್ಕೆ ಮೂಲ; ಪರಮಪಾವನನನ್ನು ಅರಿಯುವುದು ವಿವೇಕ.

11 ನನ್ನಿಂದ ನಿನಗೆ ಸಿಗುವುದು ದೀರ್ಘಾಯುಸ್ಸು; ವೃದ್ಧಿಯಾಗುವುದು ನಿನ್ನ ಜೀವದ ಅವಧಿ.

12 ನೀನು ಜ್ಞಾನವಂತನಾದರೆ ನಿನ್ನ ಜ್ಞಾನ ನಿನಗೇ ಲಾಭಕರ; ಕುಚೋದ್ಯಗಾರನು ಆದರೆ ಸವಿಯುವೆ ಅದರ ಪ್ರತೀಕಾರ.

13 ಅಜ್ಞಾನವೆಂಬುವಳಾದರೊ ಕೂಗಾಟಗಾರ್ತಿ, ಏನೂ ತಿಳಿಯದ ಮೂಢ ಸ್ತ್ರೀ.

14 ಅವಳು ತನ್ನ ಮನೆಯ ಬಾಗಿಲಲ್ಲಿ ಕುಳಿತು, ನಗರದ ಹೆದ್ದಾರಿಯ ದಿಣ್ಣೆಯ ಮೇಲೆ ನಿಂತು,

15 ತಮ್ಮ ತಮ್ಮ ಹಾದಿಹಿಡಿದು ಹೋಗಿ ಬರುವವರನ್ನು ಕಂಡು,

16 “ಮುಗ್ಧಜೀವಿಗಳು ಯಾರಾದರೂ ಇದ್ದರೆ ಬರಲಿ ಇತ್ತ” ಎಂದು ಕರೆವಳು.

17 “ಕದ್ದ ನೀರು ಸಿಹಿ, ಗುಟ್ಟಾಗಿ ತಿನ್ನುವ ರೊಟ್ಟಿ ರುಚಿ” ಎಂದು ಬುದ್ಧಿಹೀನನಿಗೆ ಹೇಳುವಳು.

18 ಅವನಿಗೆ ತಿಳಿಯದು ಅವಳ ಮನೆ ಪ್ರೇತನಿವಾಸವೆಂದು, ಅವಳ ಅತಿಥಿಗಳು ಬಿದ್ದಿರುವುದು ಅಗಾಧ ಪಾತಾಳದಲ್ಲೆಂದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು