ಜ್ಞಾನೋಕ್ತಿಗಳು 7 - ಕನ್ನಡ ಸತ್ಯವೇದವು C.L. Bible (BSI)ವ್ಯಭಿಚಾರಿಣಿಗೆ ಬಲಿಯಾಗದಿರು 1 ಮಗನೇ, ನನ್ನ ಮಾತುಗಳನ್ನು ಅನುಸರಿಸು, ನನ್ನ ಆಜ್ಞೆಗಳನ್ನು ಮನಸ್ಸಿನಲ್ಲಿ ಇಡು. 2 ಕನೀನಿಕೆಯಂತೆ ನನ್ನ ಕಟ್ಟಳೆಯನ್ನು ಪಾಲಿಸು, ನನ್ನ ಆಜ್ಞೆಗಳನ್ನು ಕೈಗೊಂಡು ಬಾಳು. 3 ಅವು ನಿನ್ನ ಬೆರಳಿಗೆ ಉಂಗುರವಾಗಿರಲಿ, ನಿನ್ನ ಹೃದಯದ ಹಲಗೆಯಲ್ಲಿ ಬರೆದಿರಲಿ. 4 ಜ್ಞಾನವನ್ನು ‘ಅಕ್ಕಾ’ ಎಂದು ಕರೆ; ವಿವೇಕವನ್ನು ಆಪ್ತಳೆಂದು ಬಗೆ. 5 ಅವು ನಿನ್ನನ್ನು ಕಾಪಾಡುವುವು ವ್ಯಭಿಚಾರಿಣಿಯಿಂದ, ಸವಿಮಾತಾಡುವ ಆ ಪರಸ್ತ್ರೀಯಿಂದ. 6 ಒಮ್ಮೆ ಮನೆಯ ಕಿಟಕಿಯಿಂದ ಇಣಕಿನೋಡುವಾಗ, 7 ಜನಸಾಮಾನ್ಯರ ನಡುವೆ, ಯೌವನಸ್ಥರ ಮಧ್ಯೆ ಮತಿಗೆಟ್ಟ ಯುವಕನೊಬ್ಬ ನಡೆವುದನ್ನು ನಾನು ಕಂಡೆ. 8 ಹೊತ್ತು ಮೀರಿ, ಸಂಜೆಯಾಗಿ, ಕತ್ತಲು ಕವಿದಿದ್ದಾ ರಾತ್ರಿಯಲ್ಲಿ, ಅವನು ಹಾದುಹೋಗುತ್ತಿದ್ದ ಬೀದಿಯ ಮೂಲೆ ಮನೆಯ ಬಳಿ. 9 ಒಬ್ಬಾಕೆಯ ಮನೆಯ ಕಡೆಗೆ ಆತ ತಿರುಗುವುದನ್ನು ನಾ ಕಂಡೆ; 10 ಇಗೋ, ಅವನನ್ನು ಎದುರುಗೊಳ್ಳುತ್ತಾಳೆ ವೇಷಧಾರಿಯಾದ ಕಪಟಸ್ತ್ರೀಯೊಬ್ಬಳು. 11 ಹಟಮಾರಿ, ಕೂಗಾಟದವಳು, ಮನೆಯಲ್ಲಿ ನಿಲ್ಲಲಾರದವಳು. 12 ಹೊಂಚುಹಾಕುತ್ತಾಳೆ ಅವಳು ಮೂಲೆ ಮೂಲೆಗಳಲ್ಲಿ; ಒಮ್ಮೆ ಬೀದಿಯಲ್ಲಿ ಮತ್ತೊಮ್ಮೆ ಚೌಕಗಳಲ್ಲಿ. 13 ಅವನನ್ನು ಬಿಗಿಹಿಡಿದು ಮುದ್ದಾಡುತ್ತಾಳೆ. ಲಜ್ಜೆಗೆಟ್ಟ ಮೋರೆಯುಳ್ಳ ಅವಳು ಹೀಗೆನ್ನುತ್ತಾಳೆ: 14 “ನನ್ನ ಬಯಕೆ ಈಡೇರಲೆಂದು ಬಲಿಯರ್ಪಿಸಿದ್ದೇನೆ; ಇಂದೇ ನನ್ನ ಹರಕೆಯನ್ನು ತೀರಿಸಿದ್ದೇನೆ. 15 ಎಂತಲೇ ನಿನ್ನನ್ನು ಎದುರುಗೊಳ್ಳಲು ಬಂದೆ ಆಕಾಂಕ್ಷೆಯಿಂದ ಹುಡುಕಿ; ಇಗೋ ನಿನ್ನನ್ನು ಕಂಡುಕೊಂಡೆ. 16 ಮೆತ್ತೆ ಸುಪ್ಪತ್ತಿಗೆಯಿಂದ, ಚಿತ್ರವಿಚಿತ್ರ ವಸ್ತುಗಳಿಂದ, ಈಜಿಪ್ಟಿನ ನಾರುಮಡಿಯಿಂದ ಸಿದ್ಧಮಾಡಿರುವೆ ಹಾಸಿಗೆಯನ್ನು. 17 ರಸಗಂಧ, ಅಗರು, ಲವಂಗ ಚಕ್ಕೆಗಳಿಂದ ಅದನ್ನು ಘಮಘಮಗೊಳಿಸಿರುವೆ. 18 ಬೆಳಗಿನ ತನಕ ಬೇಕಾದಷ್ಟು ರಮಿಸೋಣ ಬಾ, ಕಾಮವಿಲಾಸಗಳಿಂದ ಸಂತೃಪ್ತಿ ಪಡೆಯೋಣ ಬಾ. 19 ಯಜಮಾನ ಮನೆಯಲ್ಲಿ ಇಲ್ಲ; ಕೈಗೊಂಡು ಇದ್ದಾನೆ ದೂರ ಪ್ರಯಾಣ. 20 ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ; ಮನೆಗೆ ಬರುವಂತಿಲ್ಲ ಹುಣ್ಣಿಮೆಯ ತನಕ.” 21 ಹೀಗೆ ಮೋಹಕ ಮಾತುಗಳಿಂದ ಒತ್ತಾಯಪಡಿಸುತ್ತಾಳೆ, ಅತಿಯಾದ ಒಲುಮೆಯಿಂದ ಪುಸಲಾಯಿಸುತ್ತಾಳೆ. 22 ವಧ್ಯಸ್ಥಾನಕ್ಕೆ ಹೋಗುವ ಹೋರಿಯಂತೆ, ಬಲೆಗೆ ಸಿಕ್ಕಿಬೀಳುವ ಜಿಂಕೆಯಂತೆ, 23 ಉರುಳಿನತ್ತ ಹಾರುವ ಹಕ್ಕಿಯಂತೆ, ಕರುಳನ್ನು ತಿವಿಯುವ ಬಾಣದಂತೆ, ತನ್ನ ಪ್ರಾಣಕ್ಕಿರುವ ಅಪಾಯವನ್ನು ತಿಳಿಯದೆ, ಅವಳನ್ನು ತಡಮಾಡದೆ ಹಿಂಬಾಲಿಸುತ್ತಾನೆ ಆತ. 24 ಆದ್ದರಿಂದ ಮಕ್ಕಳೇ, ನನಗೆ ಕಿವಿಗೊಡಿರಿ; ನನ್ನ ಮಾತುಗಳನ್ನು ಆಲಿಸಿರಿ. 25 ನಿಮ್ಮ ಹೃದಯ ಅವಳ ದಾರಿಯತ್ತ ತಿರುಗದಿರಲಿ; ಅಪ್ಪಿತಪ್ಪಿ ನಿಮ್ಮ ಕಾಲು ಅವಳ ಹಾದಿಯನ್ನು ತುಳಿಯದಿರಲಿ. 26 ಅವಳಿಗೆ ಬಲಿಯಾಗಿ ಬಿದ್ದವರು ಬಹುಮಂದಿ; ಹತರಾದವರೋ ಲೆಕ್ಕವಿಲ್ಲದಷ್ಟು ಮಂದಿ. 27 ಅವಳ ಮನೆ ಪಾತಾಳಕ್ಕೆ ಹಾದಿ; ಮರಣದ ಗುಡಾರಗಳಿಗೆ ಇಳಿದಾರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India