ಜ್ಞಾನೋಕ್ತಿಗಳು 6 - ಕನ್ನಡ ಸತ್ಯವೇದವು C.L. Bible (BSI)ಮತ್ತೆ ಕೆಲವು ಎಚ್ಚರಿಕೆಗಳು 1 ಮಗನೇ, ನೀನು ನೆರೆಯವನ ಸಾಲಕ್ಕೆ ಹೊಣೆಯಾಗಿದ್ದರೆ, ಪರನಿಗಾಗಿ ಕೈಮೇಲೆ ಕೈಯಿಟ್ಟು ಪ್ರಮಾಣಮಾಡಿದ್ದರೆ, 2 ನಿನ್ನ ಮಾತಿನ ಬಲೆಗೆ ಸಿಕ್ಕಿಹಾಕಿಕೊಂಡಿರುವೆ; ನಿನ್ನ ವಾಗ್ದಾನವು ನಿನ್ನನ್ನು ಸೆರೆಹಿಡಿದಿದೆ. 3 ಮಗನೇ, ನೀನು ನೆರೆಯವನ ಕೈವಶವಾಗಿರುವೆ; ಈ ಪರಿಮಾಡು ತಪ್ಪಿಸಿಕೊಳ್ಳಬೇಕಾದರೆ: 4 ನಿನ್ನ ಕಣ್ಣುಗಳಿಗೆ ನಿದ್ರೆಕೊಡಬೇಡ, ನಿನ್ನಾಕಣ್ಣಿನ ರೆಪ್ಪೆಗಳನ್ನು ಮುಚ್ಚಬೇಡ. 5 ಬೇಡನಿಂದ ಓಡುವ ಜಿಂಕೆಯಂತೆ, ಬೇಟೆಗಾರನ ಕೈಯಿಂದ ಹಾರಿಹೋಗುವ ಹಕ್ಕಿಯಂತೆ, ಆ ಬಲೆಯಿಂದ ತಪ್ಪಿಸಿಕೊ. ಸೋಮಾರಿಯಾಗಿರಬೇಡ 6 ಎಲೈ ಸೋಮಾರಿಯೇ, ಇರುವೆಯ ಬಳಿಗೆ ಹೋಗು; ಅದರ ನಡವಳಿಕೆಯನ್ನು ನೋಡಿ ಜ್ಞಾನಿಯಾಗು. 7 ಅದಕ್ಕಿಲ್ಲ ನೋಡು ನಾಯಕ, ಅರಸ ಅಧಿಪತಿ. 8 ಆದರೂ ಕೂಡಿಸುತ್ತದೆ ತಿಂಡಿ ಬೇಸಿಗೆಯಲ್ಲಿ, ಸಂಗ್ರಹಿಸುತ್ತದೆ ಧಾನ್ಯ ಸುಗ್ಗಿಯಲ್ಲಿ. 9 ಸೋಮಾರಿಯೇ, ಎಷ್ಟು ಹೊತ್ತು ನಿದ್ರಿಸುವೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವೆ? 10 “ಇನ್ನೂ ಸ್ವಲ್ಪ ನಿದ್ರೆ, ತುಸು ತೂಕಡಿಕೆ” ಎನ್ನುವೆಯಾ? “ಕೊಂಚವೇ ನಿದ್ರೆಗಾಗಿ ಕೈ ಮಡಿಚಿಕೊಳ್ಳುವೆ” ಎನ್ನುವೆಯಾ? 11 ಬಡತನ ನಿನ್ನ ಮೇಲೆರಗುವುದು ದಾರಿಗಳ್ಳನಂತೆ; ಅಭಾವ ನಿನ್ನ ಮೇಲೆ ಬೀಳುವುದು ಪಂಜುಗಳ್ಳನಂತೆ. 12 ದುರುಳನೂ ನೀಚನೂ ಆದವನ ನಡತೆಯನ್ನು ನೋಡು: ಅವನ ಬಾಯಿಂದ ಹೊರಡುವುದು ಕುಟಿಲ ಮಾತು. 13 ಅವನು ಕಣ್ಣು ಮಿಟುಕಿಸುತ್ತಾನೆ, ಕಾಲು ಕೆರೆಯುತ್ತಾನೆ, ಬೆರಳ ಸನ್ನೆಯಿಂದಲೆ ಮಾತಾಡುತ್ತಾನೆ. 14 ಅವನ ಮನದಲ್ಲಿರುವುದು ಮೂರ್ಖತನ; ಅವನು ಸತತ ಕಲ್ಪಿಸುವುದು ಕೆಡುಕುತನ. ಅವನು ಬಿತ್ತನೆ ಮಾಡುವುದು ಕಾಳಗ, ಕದನ. 15 ಆದ್ದರಿಂದ ತಟ್ಟನೆ ಒದಗುವುದು ವಿಪತ್ತು ಮತ್ತೆ ಏಳಲಾಗದಂತಹ ಕಠಿಣ ಆಪತ್ತು. 16-19 ಸರ್ವೇಶ್ವರ ಹಗೆಮಾಡುವಂಥಹವು ಆರು: ಆತ ಖಂಡನೆ ಮಾಡುವಂಥಹವು ಏಳು: ಅಹಂಕಾರ ದೃಷ್ಟಿ, ಕಪಟವಾಡುವ ನಾಲಿಗೆ, ನಿರಪರಾಧಿಯನ್ನು ಕೊಲೆಮಾಡುವ ಕೈ, ದುರಾಲೋಚನೆಯನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತವಕಪಡುವ ಕಾಲು, ಅಸತ್ಯವನ್ನು ಉಸುರುವ ಸುಳ್ಳುಸಾಕ್ಷಿ, ಸೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ. ಪರಸ್ತ್ರೀಯರ ಸಹವಾಸ ಸಲ್ಲ 20 ಮಗನೇ, ನಿನ್ನ ತಂದೆಯ ಆಜ್ಞೆಗೆ ಕಿವಿಗೊಡು, ನಿನ್ನ ತಾಯಿಯ ಉಪದೇಶವನ್ನು ತೊರೆಯದೆ ಮಾಡು. 21 ಅವನ್ನು ನಿರಂತರವಾಗಿ ಹೃದಯಕ್ಕೆ ಬಂಧಿಸಿಕೊ; ಕಂಠಾಭರಣವಾಗಿ ಕೊರಳಿಗೆ ಧರಿಸಿಕೊ. 22 ನಡೆಯುವಾಗ ಅವು ನಿನಗೆ ಮುಂದಾಳಾಗಿರುವುವು, ಮಲಗುವಾಗ ಅವು ನಿನ್ನನ್ನು ಕಾಯುವುವು, ಎಚ್ಚರಗೊಂಡಾಗ ಅವು ನಿನ್ನೊಡನೆ ಸಂವಾದಿಸುವುವು. 23 ಏಕೆಂದರೆ ಆಜ್ಞೆಯೇ ಜ್ಯೋತಿ, ಬೋಧನೆಯೇ ಬೆಳಕು, ಶಿಸ್ತಿನಿಂದ ಕೂಡಿದ ಶಿಕ್ಷಣವೇ ಜೀವನಕ್ಕೆ ಮಾರ್ಗ. 24 ಕೆಟ್ಟ ಹೆಂಗಸರ ಸಹವಾಸದಿಂದ, ಪರಸ್ತ್ರೀಯರ ಮಾತಿನ ಮೋಡಿಯಿಂದ, ಅವು ಕಾಪಾಡಬಲ್ಲವು ನಿನ್ನನ್ನು. 25 ನಿನ್ನ ಹೃದಯ ಅವಳ ಬೆಡಗನ್ನು ಮೋಹಿಸದಿರಲಿ; ಕಣ್ಣು ಮಿಟುಕಿಸಿ ಅವಳು ನಿನ್ನನ್ನು ವಶಮಾಡಿಕೊಳ್ಳದಿರಲಿ. 26 ವೇಶ್ಯೆಯನ್ನು ಕೊಂಡುಕೊಳ್ಳಬಹುದು ತುಂಡುರೊಟ್ಟಿಗೆ, ವ್ಯಭಿಚಾರಿಣಿಯೇ ಬೇಟೆಮಾಡುವಳು ನಿನ್ನ ಸಿರಿಪ್ರಾಣಕ್ಕೆ! 27 ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ ಬಟ್ಟೆಯನ್ನು ಸುಡದೆ ಸುಮ್ಮನಿರುವುದೆ? 28 ಧಗಧಗಿಸುವ ಕೆಂಡದ ಮೇಲೆ ನಡೆದರೆ ಅಂಗಾಲು ಸುಟ್ಟುಹೋಗದೆ ಇರುವುದೆ? 29 ಅಂತೆಯೆ ನೆರೆಯವನ ಸತಿಯನ್ನು ಕೂಡುವವನ ಗತಿಯು; ಆಕೆಯನ್ನು ಮುಟ್ಟುವವನು ತಪ್ಪಿಸಿಕೊಳ್ಳನು ದಂಡನೆಯನ್ನು. 30 ಹಸಿವನ್ನು ನೀಗಿಸಿಕೊಳ್ಳಲು ಕಳವು ಮಾಡಿದರೆ, ಅಷ್ಟು ಹೀಯಾಳಿಸರು ಜನರು ಅಂಥ ಬಡವನನ್ನು. 31 ಆದರೂ ಕಳವು ಬಯಲಾದರೆ ತೆರಬೇಕಾಗುವುದು ಏಳರಷ್ಟು; ತೆತ್ತೇ ತೀರಿಸಬೇಕಾಗುವುದು ಮನೆಯ ಆಸ್ತಿಪಾಸ್ತಿಯಷ್ಟು. 32 ವ್ಯಭಿಚಾರಿಯು ಕೇವಲ ಬುದ್ಧಿಶೂನ್ಯನು; ತನ್ನೀ ಕೃತ್ಯದಿಂದ ಸ್ವನಾಶಮಾಡಿಕೊಳ್ಳುವನು. 33 ಪೆಟ್ಟಿಗೂ ಅಪಕೀರ್ತಿಗೂ ಅವನು ಪಾತ್ರನು; ಅವನಿಗಾಗುವ ಅವಮಾನ ತೊಲಗದು ಎಂದಿಗು. 34 ಏಕೆಂದರೆ, ಅವಳ ಪತಿಗಾಗುವ ಮತ್ಸರ ಉದ್ರೇಕಗೊಳ್ಳುವುದು; ಕನಿಕರ ತೋರನು, ಮುಯ್ಯಿ ತೀರಿಸುವ ದಿನದಂದು. 35 ಯಾವ ಪ್ರಾಯಶ್ಚಿತ್ತಕ್ಕೂ ಅವನು ಒಪ್ಪನು; ಎಷ್ಟು ಲಂಚಕೊಟ್ಟರೂ ಒಲಿಯನು, ಮಣಿಯನು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India