ಜ್ಞಾನೋಕ್ತಿಗಳು 5 - ಕನ್ನಡ ಸತ್ಯವೇದವು C.L. Bible (BSI)ವ್ಯಭಿಚಾರದಿಂದ ದೂರವಿರು 1 ಮಗನೇ, ನನ್ನ ಜ್ಞಾನೋಪದೇಶವನ್ನು ಆಲಿಸು; ವಿವೇಕದಿಂದ ಕೂಡಿ ನನ್ನ ಬೋಧೆಗೆ ಕಿವಿಗೊಡು. 2 ಆಗ ನೀನು ವಿವೇಕಶೀಲನಾಗುವೆ; ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಯ್ದುಕೊಳ್ಳುವುವು. 3 ವ್ಯಭಿಚಾರಿಣಿಯ ತುಟಿಗಳು ಜೇನುಗರೆಯುತ್ತವೆ; ಎಣ್ಣೆಗಿಂತ ಮೃದು ಅವಳ ವಾಣಿ. 4 ಕಡೆಗೆ ಅವಳು ಕಹಿ ಮಾಚಿಪತ್ರೆಯಂತೆ, ಹರಿತವಾದ ಇಬ್ಬಾಯಿ ಕತ್ತಿಯಂತೆ. 5 ಅವಳ ಕಾಲುಗಳು ಮರಣದತ್ತ ಇಳಿಯುತ್ತವೆ, ಹೆಜ್ಜೆಗಳು ಪಾತಾಳದತ್ತ ಕೊಂಡೊಯ್ಯುತ್ತವೆ. 6 ಜೀವಮಾರ್ಗದ ವಿವೇಚನೆ ಅವಳಿಗಿಲ್ಲ. ಅದರ ಅರಿವೂ ಅವಳಿಗಿರುವುದಿಲ್ಲ. ಅವಳ ನಡತೆಯು ಅಷ್ಟು ಚಂಚಲ. 7 ಇಂತಿರಲು ಮಗನೇ, ನನಗೆ ಕಿವಿಗೊಡು, ನನ್ನ ಮಾತುಗಳನ್ನು ಬಿಟ್ಟು ಅಗಲದಿರು. 8 ಅವಳಿಂದ ದೂರವಿರಲಿ ನಿನ್ನ ಮಾರ್ಗ, ಸುಳಿಯದಿರು ಅವಳ ಮನೆಬಾಗಿಲ ಹತ್ತಿರ. 9 ನಿನ್ನ ಪುರುಷತ್ವ ಪರಾಧೀನವಾದೀತು, ಎಚ್ಚರಿಕೆ! ನಿನ್ನ ಆಯುಷ್ಯ ಕ್ರೂರಿಗಳ ವಶವಾದೀತು, ಜೋಕೆ! 10 ನಿನ್ನ ಸಿರಿಸಂಪತ್ತು ಪರರ ಮನೆ ತುಂಬೀತು, ನಿನ್ನ ದುಡಿಮೆಯ ಫಲ ಅನ್ಯನ ಮನೆ ಸೇರೀತು! 11 ಕಟ್ಟಕಡೆಗೆ ನಿನ್ನ ದೇಹವೆಲ್ಲ ಕರಗಿಹೋದೀತು; ಅಂಗಲಾಚಿ ನೀ ಕೊರಗಬೇಕಾದೀತು ಇಂತೆಂದು: 12 “ಅಕಟಕಟಾ ಶಿಸ್ತನ್ನೇ ನಾನು ದ್ವೇಷಿಸಿದೆನಲ್ಲಾ! ನನಗೆ ಕೊಡಲಾದ ತಿದ್ದುಪಾಟನ್ನು ತಾತ್ಸಾರಮಾಡಿದೆನಲ್ಲಾ! 13 ಗುರುಗಳ ಮಾತನ್ನು ಗಮನಿಸದೆ ಹೋದೆನಲ್ಲಾ! ಬೋಧಕರಿಗೆ ಕಿವಿಗೊಡದೆ ಹೋದೆನಲ್ಲಾ! 14 ದೇವಜನರ ಸಭೆಕೂಟಗಳಲ್ಲಿ ಎಲ್ಲಾ ತರದ ನಿಂದೆ ಆಪಾದನೆಗಳಿಗೆ ಗುರಿಯಾದೆನಲ್ಲಾ!” 15 ನಿನ್ನ ಸ್ವಂತ ಕೊಳದ ನೀರನ್ನೇ ಸೇವಿಸು, ನಿನ್ನ ಬಾವಿಯಿಂದ ಉಕ್ಕಿಬರುವ ಜಲವನ್ನೇ ಕುಡಿ. 16 ನಿನ್ನ ಬುಗ್ಗೆ ಹೊರಗೆ ಹೋಗುವುದು ಸರಿಯೇ? ನಿನ್ನ ಕಾಲುವೆ ಬೀದಿಚೌಕಗಳಲ್ಲಿ ಹರಡಿಕೊಳ್ಳುವುದು ಹಿತವೇ? 17 ಅವು ನಿನಗೊಬ್ಬನಿಗೇ ಮೀಸಲಾಗಿರಲಿ; ನಿನ್ನೊಡನೆ ಬೇರೊಬ್ಬನ ಪಾಲಾಗದಿರಲಿ. 18 ನಿನ್ನ ಬುಗ್ಗೆ ದೇವರಿಂದ ಆಶೀರ್ವಾದಹೊಂದಲಿ, ನಿನ್ನ ಆನಂದ ನಿನ್ನ ಯೌವನಕಾಲದ ಹೆಂಡತಿಯಲ್ಲಿರಲಿ. 19 ಆಕೆ ಮನೋಹರವಾದ ಹರಿಣಿ, ಸುಂದರವಾದ ಜಿಂಕೆಮರಿ, ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಒಲವಿನಲ್ಲೇ ಸದಾ ತಲ್ಲೀನನಾಗಿರು. 20 ಮಗನೇ, ಪರಸ್ತ್ರೀಯಲ್ಲಿ ಭ್ರಮೆ ಏಕೆ? ಅನ್ಯಳ ಎದೆ ತಬ್ಬಿಕೊಳ್ಳುವುದೇಕೆ? 21 ನರನ ಮಾರ್ಗ ಸರ್ವೇಶ್ವರನ ಕಣ್ಣಿಗೆ ಮರೆಯಲ್ಲ; ಆತ ವೀಕ್ಷಿಸುತ್ತಾನೆ ಮನುಷ್ಯನ ನಡತೆಯನ್ನೆಲ್ಲಾ. 22 ದುರುಳನನ್ನು ಅವನ ದ್ರೋಹಗಳೆ ಆಕ್ರಮಿಸುತ್ತವೆ; ಅವನ ಪಾಪಪಾಶಗಳೇ ಅವನನ್ನು ಬಂಧಿಸುತ್ತವೆ. 23 ಅವನು ಶಿಸ್ತುಪಾಲನೆಯಿಲ್ಲದೆ ನಾಶವಾಗುತ್ತಾನೆ; ಅತಿ ಮೂರ್ಖತನದಿಂದಲೇ ಮೋಸಹೋಗುತ್ತಾನೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India