ಜ್ಞಾನೋಕ್ತಿಗಳು 3 - ಕನ್ನಡ ಸತ್ಯವೇದವು C.L. Bible (BSI)ಜ್ಞಾನದ ಮತ್ತಿತರ ಮೌಲ್ಯಗಳು 1 ಮಗನೇ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ನಿನ್ನ ಹೃದಯದಲ್ಲಿಡು. 2 ಅವು ನಿನ್ನ ದಿನಗಳನ್ನು ಹೆಚ್ಚಿಸುತ್ತವೆ; ನಿನಗೆ ದೀರ್ಘಾಯುಸ್ಸನ್ನು ತರುತ್ತವೆ, ನಿನಗೆ ಸುಕ್ಷೇಮವನ್ನು ಉಂಟುಮಾಡುತ್ತವೆ. 3 ಪ್ರೀತಿ ಸತ್ಯತೆಗಳು ನಿನ್ನನ್ನು ಬಿಡದಿರಲಿ; ಅವು ನಿನ್ನ ಕೊರಳಿನ ಪಟ್ಟಿಯಾಗಿರಲಿ, ಹೃದಯದಹಲಗೆಯಲ್ಲಿ ಲಿಖಿತವಾಗಿರಲಿ. 4 ಆಗ ದೇವರಿಗೂ ಮಾನವರಿಗೂ ಪ್ರಿಯನಾಗುವೆ, ದಯೆ ದಾಕ್ಷಿಣ್ಯವನ್ನು ಪಡೆಯುವೆ. 5 ನಿನ್ನ ಸ್ವಂತ ಬುದ್ಧಿಯನ್ನೇ ನೆಚ್ಚಿಕೊಂಡಿರದಿರು; ಪೂರ್ಣ ಮನಸ್ಸಿನಿಂದ ಸರ್ವೇಶ್ವರನಲ್ಲಿ ನಂಬಿಕೆಯಿಡು. 6 ನಿನ್ನ ನಡತೆಯಲ್ಲೆಲ್ಲಾ ನಿವೇದಿಸು ಆತನನ್ನು, ಆಗ ಸರಾಗಮಾಡುವನು ನಿನ್ನ ಮಾರ್ಗವನ್ನು. 7 ನೀನೇ ಬುದ್ಧಿವಂತನೆಂದು ಎಣಿಸದಿರು. ಸರ್ವೇಶ್ವರನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು. 8 ಆಗ ನಿನಗೆ ದೇಹಾರೋಗ್ಯ ದೊರಕುವುದು, ನಿನ್ನ ಎಲುಬುಗಳಿಗೆ ಶಕ್ತಿಸಾರತ್ವ ಸಿಗುವುದು. 9 ನಿನ್ನ ಆಸ್ತಿಯನ್ನರ್ಪಿಸಿ ಸರ್ವೇಶ್ವರನನ್ನು ಸನ್ಮಾನಿಸು, ನಿನ್ನ ಬೆಳೆಯ ಪ್ರಥಮ ಫಲವನ್ನು ಕಾಣಿಕೆಯಾಗಿಕೊಡು. 10 ಆಗ ನಿನ್ನ ಕಣಜಗಳು ದವಸಧಾನ್ಯದಿಂದ ಭರ್ತಿಯಾಗುವುವು, ನಿನ್ನ ತೊಟ್ಟಿಗಳು ದ್ರಾಕ್ಷಾರಸದಿಂದ ತುಂಬಿ ತುಳುಕುವುವು. 11 ಮಗನೇ, ಸರ್ವೇಶ್ವರನ ಶಿಕ್ಷೆಯನ್ನು ತಾತ್ಸಾರಮಾಡಬೇಡ, ಆತನು ನೀಡುವ ಎಚ್ಚರಿಕೆಗೆ ಬೇಸರಗೊಳ್ಳಬೇಡ. 12 ತನ್ನ ಮುದ್ದು ಮಗನನ್ನು ತಂದೆ ಗದರಿಸುವಂತೆ, ಸರ್ವೇಶ್ವರ ತಾನು ಪ್ರೀತಿಸುವವರನ್ನು ಗದರಿಸುತ್ತಾನೆ. 13 ಜ್ಞಾನವನ್ನು ಕಂಡು ಹಿಡಿಯುವವನು ಧನ್ಯನು, ವಿವೇಕವನ್ನು ಗಳಿಸುವವನು ಭಾಗ್ಯವಂತನು. 14 ಬೆಳ್ಳಿಗಿಂತ ಜ್ಞಾನ ಗಳಿಕೆ ಶ್ರೇಷ್ಠ, ಬಂಗಾರಕ್ಕಿಂತ ಜ್ಞಾನ ಸಂಪಾದನೆ ಉತ್ಕೃಷ್ಟ. 15 ಮಾಣಿಕ್ಯಕ್ಕಿಂತ ಜ್ಞಾನದ ಬೆಲೆ ಅಮೂಲ್ಯ. ನಿನಗಿಷ್ಟವಾದುದಾವುದೂ ಅದಕ್ಕೆ ಸಾಟಿಯಿಲ್ಲ. 16 ದೀರ್ಘಾಯುಷ್ಯ, ಜ್ಞಾನವೆಂಬ ಆಕೆಯ ಬಲಗೈಯಲ್ಲಿದೆ; ಘನತೆ, ಶ್ರೀಮಂತಿಕೆಯೂ ಆಕೆಯ ಎಡಗೈಯಲ್ಲಿವೆ. 17 ಆಕೆಯ ದಾರಿ ಸುಖಕರ, ಆಕೆಯ ಮಾರ್ಗ ಕ್ಷೇಮಕರ. 18 ತನ್ನನ್ನು ಅಪ್ಪಿಕೊಂಡವರಿಗೆ ಜ್ಞಾನವು ಜೀವವೃಕ್ಷ; ಅದನ್ನು ಅವಲಂಬಿಸುವ ಪ್ರತಿಯೊಬ್ಬನಿಗೆ ಸೌಭಾಗ್ಯ. 19 ಸರ್ವೇಶ್ವರಸ್ವಾಮಿ ಜ್ಞಾನದ ಮೂಲಕ ಜಗವನ್ನು ಸ್ಥಾಪಿಸಿದ ವಿವೇಕದ ಮುಖಾಂತರ ಗಗನವನ್ನು ಸ್ಥಿರಗೊಳಿಸಿದ. 20 ಆತನ ಜ್ಞಾನದಿಂದಲೆ ಅಡಿಸಾಗರ ಒಡೆಯುತ್ತದೆ ಆಕಾಶಮಂಡಲ ಇಬ್ಬನಿಯನ್ನು ಸುರಿಸುತ್ತದೆ. 21 ಮಗನೇ, ಸುಜ್ಞಾನ, ಸದ್ಬುದ್ಧಿಗಳು ನಿನ್ನಲ್ಲಿ ಸ್ಥಿರವಾಗಿರಲಿ; ನಿನ್ನ ಕಣ್ಣುಗಳಿಂದ ಅವು ಮರೆಯಾಗದಿರಲಿ. 22 ಅವು ನಿನ್ನಾತ್ಮಕ್ಕೆ ಜೀವಪ್ರದಾನವಾಗಿವೆ, ನಿನ್ನ ಕೊರಳಿಗೆ ಭೂಷಣವಾಗಿವೆ. 23 ಹೀಗೆ ನೀನು ಎಡವದೆ ನಡೆಯುವೆ, ನಿನ್ನ ಮಾರ್ಗದೊಳು ಭಯವಿಲ್ಲದೆ ಸಾಗುವೆ. 24 ಮಲಗುವಾಗ ನಿನಗೆ ಹೆದರಿಕೆಯಿರದು, ಮಲಗಿದ ಮೇಲೆ ಸುಖನಿದ್ರೆ ಬರುವುದು. 25 ಆಕಸ್ಮಿಕ ಅಪಾಯಕ್ಕೆ ನೀನು ಅಂಜಲಾರೆ, ದುರುಳರಿಗೆ ಬಂದೊದಗುವ ನಾಶಕ್ಕೆ ಹೆದರಲಾರೆ. 26 ಸರ್ವೇಶ್ವರನೇ ನಿನಗೆ ಆಧಾರವಾಗಿರುವನು, ನಿನ್ನ ಕಾಲು ಉರುಲಿಗೆ ಸಿಕ್ಕದಂತೆ ಕಾಪಾಡುವನು. 27 ನಿನ್ನ ಕೈಲಾದಾಗ ಉಪಕಾರಮಾಡು, ಕೇಳುವವರಿಗೆ ಅದನ್ನು ನಿರಾಕರಿಸಬೇಡ. 28 ನೆರೆಯವನಿಗೆ ನೀಡಲು ಇದೀಗಲೇ ನಿನ್ನಲ್ಲಿರುವಾಗ, “ಹೋಗಿ ಬಾ, ನಾಳೆ ಕೊಡುತ್ತೇನೆ” ಎನ್ನಬೇಡ. 29 ಕೇಡನ್ನು ಬಗೆಯಬೇಡ ನೆರೆಯವನಿಗೆ, ಪಕ್ಕದಲ್ಲೆ ನಂಬಿಕೆಯಿಂದ ವಾಸಿಸುವವನಿಗೆ. 30 ನಿನಗೆ ಕೇಡು ಮಾಡದವನ ಸಂಗಡ, ಕಾರಣವಿಲ್ಲದೆ ಜಗಳವಾಡಬೇಡ. 31 ಹಿಂಸಾತ್ಮಕನನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡ, ಅವನ ನಡತೆಯನ್ನು ಎಷ್ಟುಮಾತ್ರಕ್ಕೂ ಅನುಸರಿಸಬೇಡ. 32 ವಕ್ರಬುದ್ಧಿಯವನು ಸರ್ವೇಶ್ವರನಿಗೆ ಅಸಹ್ಯನು, ಸತ್ಯಸಂಧರು ಆತನಿಗೆ ಪ್ರೀತಿಪಾತ್ರರು. 33 ದುರುಳರ ಮನೆಯನ್ನು ಸರ್ವೇಶ್ವರ ಶಪಿಸುವನು; ನೀತಿವಂತರ ನಿವಾಸವನ್ನು ಆತ ಆಶೀರ್ವದಿಸುವನು. 34 ಅಪಹಾಸ್ಯಮಾಡುವವರನ್ನು ಆತ ಅಪಹಾಸ್ಯ ಮಾಡುವನು; ನಮ್ರರಿಗಾದರೋ ಕೃಪಾಶೀರ್ವಾದವನ್ನು ಅನುಗ್ರಹಿಸುವನು. 35 ಜ್ಞಾನಿಗಳಿಗೆ ಲಭಿಸುವುದು ಸನ್ಮಾನ; ಜ್ಞಾನಹೀನರಿಗೆ ಸಿಗುವ ಸಂಭಾವನೆ ಅವಮಾನ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India