ಜ್ಞಾನೋಕ್ತಿಗಳು 28 - ಕನ್ನಡ ಸತ್ಯವೇದವು C.L. Bible (BSI)1 ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡುವನು; ಸತ್ಯಸಂಧನು ಸಿಂಹದಂತೆ ಧೈರ್ಯದಿಂದಿರುವನು. 2 ಅರಾಜಕತೆಯಿಂದ ನಾಡಿನಲ್ಲಿ ನಾಯಕರನೇಕರು ತಲೆಯೆತ್ತುವರು; ಜ್ಞಾನ ಹಾಗೂ ವಿವೇಕದಿಂದ ನಾಡು ಸುಸ್ಥಿರವಾಗುವುದು. 3 ದಲಿತರನ್ನೇ ಹಿಂಸಿಸುವ ಬಡವ, ಕಾಳೂ ಉಳಿಯದಂತೆ ಜಡಿಯುವ ಮಳೆಗೆ ಸಮಾನ. 4 ಧರ್ಮಶಾಸ್ತ್ರವನ್ನು ಕೈಗೊಳ್ಳದವರು ದುಷ್ಟರನ್ನು ಹೊಗಳುವರು; ಕೈಗೊಳ್ಳುವವರು ಅವರ ವಿರುದ್ಧ ಹೋರಾಡುವರು. 5 ಕೆಟ್ಟವರು ನ್ಯಾಯ ನೀತಿಯನ್ನು ಗ್ರಹಿಸರು; ಸರ್ವೇಶ್ವರನ ಭಕ್ತರು ಅದನ್ನು ಪೂರ್ತಿಯಾಗಿ ಗ್ರಹಿಸುವರು. 6 ದುರ್ಮಾರ್ಗಿಯಾದ ಧನವಂತನಿಗಿಂತ ನಿರ್ದೋಷಿಯಾಗಿ ನಡೆವ ದರಿದ್ರನೇ ಲೇಸು. 7 ಜ್ಞಾನಿಯಾದ ಮಗ ಧರ್ಮಶಾಸ್ತ್ರವನ್ನು ಕೈಗೊಳ್ಳುವನು; ಹೊಟ್ಟೆಬಾಕರ ಗೆಳೆಯ ತಂದೆಗೆ ಅಪಕೀರ್ತಿ ತರುವನು. 8 ಬಡ್ಡಿಬಾಕಿಗಳಿಂದ ಬೆಳೆದ ಆಸ್ತಿ, ಬಡವರಲ್ಲಿ ಕನಿಕರವುಳ್ಳವನಿಗೆ ನಿಧಿ. 9 ಧರ್ಮಶಾಸ್ತ್ರಕ್ಕೆ ಕಿವಿಮುಚ್ಚಿಕೊಳ್ಳುವವನ ಪ್ರಾರ್ಥನೆ, ದೇವರಿಂದ ತಿರಸ್ಕೃತವಾದ ಪ್ರಾರ್ಥನೆ. 10 ನೆಟ್ಟಗೆ ನಡೆವವರನ್ನು ಕೆಟ್ಟದಾರಿಗೆ ಎಳೆಯುವವನು ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು; ನಿರ್ದೋಷಿಗಳು ಸುಖಸಂತೋಷಕ್ಕೆ ಬಾಧ್ಯಸ್ಥರು. 11 ಹಣವಂತ ತಾನೇ ಜ್ಞಾನಿಯೆಂದು ಎಣಿಸಿಕೊಳ್ಳುವನು; ವಿವೇಕಿಯಾದ ಬಡವ ಅವನೆಂಥವನೆಂದು ಅರ್ಥಮಾಡಿಕೊಳ್ಳುವನು. 12 ಸತ್ಯಸಂಧರಿಗೆ ಜಯವಾದರೆ ಸಂಭ್ರಮ ಸಡಗರ; ದುಷ್ಟರನ್ನು ಉನ್ನತಿಗೇರಿಸಿದರೆ ಬೇರೆಯವರು ಮರೆಯಾಗುವರು. 13 ಪಾಪಗಳನ್ನು ಮುಚ್ಚಿಟ್ಟುಕೊಳ್ಳುವವನಿಗೆ ಮುಕ್ತಿ ದೊರಕದು; ಅವುಗಳನ್ನು ಒಪ್ಪಿಕೊಂಡು ಬಿಟ್ಟರೆ ಕರುಣೆ ದೊರಕುವುದು. 14 ಭಯದಿಂದ ನಡೆದುಕೊಳ್ಳುವವನು ಭಾಗ್ಯವಂತನು; ಕಠಿಣ ಹೃದಯನು ಕೇಡಿಗೆ ತುತ್ತಾಗುವನು. 15 ದಲಿತರನ್ನಾಳುವ ದುರುಳರಾಜ ಗರ್ಜಿಸುವ ಸಿಂಹ, ಹುಡುಕಾಡುವ ಕರಡಿ. 16 ವಿವೇಕಶೂನ್ಯನಾದ ಒಡೆಯ ಮಹಾಹಿಂಸಕ; ದುರ್ಲಾಭವನ್ನು ವಿರೋಧಿಸುವವನಿಗೆ ದೀರ್ಘಾಯುಷ್ಯ. 17 ನರಹತ್ಯಮಾಡಿದ ಪಾಪಾತ್ಮನು ಪಾತಾಳದತ್ತ ಓಡೋಡುತ್ತಿರುವನು; ಅವನನ್ನು ಯಾರೂ ತಡೆಯಬಾರದು. 18 ಸನ್ಮಾರ್ಗಿಗಳಿಗೆ ಸಂರಕ್ಷಣೆ, ದುರ್ಮಾರ್ಗಿಗಳಿಗೆ ಪತನ ತಟ್ಟನೆ. 19 ದುಡಿದು ಹೊಲ ಗೇಯುವವನಿಗೆ ಹೊಟ್ಟೆ ತುಂಬ ಅನ್ನ; ವ್ಯರ್ಥಕಾರ್ಯಗಳಲ್ಲಿ ಆಸಕ್ತನಾದವನಿಗೆ ಬೇಕಾದಷ್ಟು ಬಡತನ. 20 ಪ್ರಾಮಾಣಿಕನಿಗೆ ಪೂರ್ಣಾಶೀರ್ವಾದ; ಹಣವಂತನಾಗಲು ಹಾತೊರೆಯುವವನು ಶಿಕ್ಷಾರ್ಹ. 21 ಪಕ್ಷಪಾತ ತಕ್ಕುದಲ್ಲ; ತುತ್ತನ್ನಕ್ಕಾಗಿ ತಪ್ಪುಮಾಡುವವರುಂಟು. 22 ಆಸ್ತಿ ಗಳಿಸಲು ಲೋಭಿಗೆ ಆತುರ; ತನಗೆ ಕೊರತೆ ಕಾದಿದೆಯೆಂದು ಆತ ಅರಿಯ. 23 ಮುಖಸ್ತುತಿ ಮಾಡುವವನಿಗಿಂತ ಗದರಿಸುವವನೇ ಕೊನೆಗೆ ಹೆಚ್ಚು ದಯಾವಂತ. 24 “ಅದು ತಪ್ಪಲ್ಲ” ಎಂದು ಹೆತ್ತವರ ಆಸ್ತಿಯನ್ನು ಕದಿಯುವವನು ಕೊಳ್ಳೆ ಹೊಡೆಯುವವರ ಸಂಗಡಿಗನು. 25 ಅತ್ಯಾಸೆಪಡುವವನು ಜಗಳವೆಬ್ಬಿಸುವನು; ಸರ್ವೇಶ್ವರನಲ್ಲಿ ಭರವಸೆಯಿಟ್ಟವನು ಬಲಿಷ್ಠನು. 26 ತನ್ನ ಶಕ್ತಿಯಲ್ಲೆ ಭರವಸೆ ಇಡುವವನು ಮೂಢನು; ಜ್ಞಾನಿಗಳ ಮಾರ್ಗದಲ್ಲಿ ನಡೆವವನು ವಿಮುಕ್ತನಾಗುವನು. 27 ಬಡವರಿಗೆ ಕೊಡುವವನು ಕೊರತೆಪಡನು; ಅವರನ್ನು ಕಂಡೂ ಕಾಣದಂತೆ ಇರುವವನು ಬಹುಶಾಪಗ್ರಸ್ಥನು. 28 ದುಷ್ಟರು ಪ್ರಬಲವಾದರೆ ಜನರು ತಲೆಮರೆಸಿಕೊಳ್ಳುವರು; ದುಷ್ಟರು ನಾಶವಾದರೆ ಶಿಷ್ಟರು ವೃದ್ಧಿಯಾಗುವರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India